AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ITC: ವಿಶ್ವದ ಅತಿಹೆಚ್ಚು ಮೌಲ್ಯದ ತಂಬಾಕು ಕಂಪನಿಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದ ಭಾರತದ ಐಟಿಸಿ

ITC 3rd Most Valuable Tobacco Company: ಅತಿಹೆಚ್ಚು ಮಾರುಕಟ್ಟೆ ಬಂಡವಾಳ ಹೊಂದಿರುವ ತಂಬಾಕು ಕಂಪನಿಗಳಲ್ಲಿ ಬ್ರಿಟನ್​ನ ಬಿಎಟಿಯನ್ನು ಹಿಂದಿಕ್ಕಿ ಐಟಿಸಿ 3ನೇ ಸ್ಥಾನಕ್ಕೆ ಏರಿದೆ. ಬ್ರಿಟಿಷ್ ಅಮೆರಿಕನ್ ಟೊಬ್ಯಾಕೋ ಕಂಪನಿ ತನ್ನ ಷೇರುಗಳನ್ನು ಮಾರಿದ್ದರಿಂದ ಅದರ ಮಾರ್ಕೆಟ್ ಕ್ಯಾಪ್ 64 ಬಿಲಿಯನ್ ಡಾಲರ್​ಗೆ ಇಳಿದಿದೆ. ಇದು ಐಟಿಸಿಯದ್ದಕ್ಕಿಂತ ಕಡಿಮೆ. ಜಾಗತಿಕವಾಗಿ ತಂಬಾಕು ಮೇಲೆ ನಿರ್ಬಂಧಗಳು ಹೆಚ್ಚುತ್ತಿರುವುದರಿಂದ, ಹಾಗೂ ಜನರಲ್ಲಿ ಆರೋಗ್ಯ ಕಾಳಜಿ ಹೆಚ್ಚುತ್ತಿರುವುದರಿಂದ ಭವಿಷ್ಯದಲ್ಲಿ ತನ್ನ ವ್ಯವಹಾರ ಕಡಿಮೆ ಆಗುತ್ತದೆ ಎಂಬುದು ಬಿಎಟಿ ಚಿಂತೆ.

ITC: ವಿಶ್ವದ ಅತಿಹೆಚ್ಚು ಮೌಲ್ಯದ ತಂಬಾಕು ಕಂಪನಿಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದ ಭಾರತದ ಐಟಿಸಿ
ಐಟಿಸಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 13, 2023 | 5:18 PM

Share

ನವದೆಹಲಿ, ಡಿಸೆಂಬರ್ 13: ಭಾರತದ ಅತಿದೊಡ್ಡ ತಂಬಾಕು ಉತ್ಪನ್ನಗಳ ಕಂಪನಿ ಐಟಿಸಿ ಲಿ (ITC Ltd) ವಿಶ್ವದ ಮೂರನೆ ಅತಿ ಮೌಲ್ಯಯುತ ತಂಬಾಕು ಸಂಸ್ಥೆ ಎನಿಸಿದೆ. ಬ್ರಿಟನ್​ನ ಬಿಎಟಿಯನ್ನು ಐಟಿಸಿ ಹಿಂದಿಕ್ಕಿದೆ. ಒಂದು ಕಡೆ ಐಟಿಸಿಯ ಷೇರುಗಳ ಮೌಲ್ಯ ಹೆಚ್ಚಿರುವುದು, ಇನ್ನೊಂದೆಡೆ ಬ್ರಿಟಿಷ್ ಅಮೆರಿಕನ್ ಟೊಬಾಕೋ (BAT) ಸಂಸ್ಥೆ ಷೇರುಗಳನ್ನು ಮಾರಿದ್ದು ಈ ಸ್ಥಾನಪಲ್ಲಟಕ್ಕೆ ಕಾರಣವಾಗಿದೆ.

ಲಂಡನ್​ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಬ್ರಿಟಿಷ್ ಅಮೆರಿಕನ್ ಟೊಬಾಕೋ ಸಂಸ್ಥೆ (BAT) ತಂಬಾಕು ಉತ್ಪನ್ನಗಳಿಗೆ ಖ್ಯಾತವಾಗಿದೆ. ವಿಶ್ವಾದ್ಯಂತ ಅದರ ಸಿಗರೇಟು, ತಂಬಾಕು ಮತ್ತು ನಿಕೋಟಿನ್ ಉತ್ಪನ್ನಗಳು ಮಾರಾಟವಾಗುತ್ತವೆ. ಕಳೆದ ವಾರ ಬಿಎಟಿ ಸಂಸ್ಥೆ ತನ್ನ ಕೆಲ ಷೇರುಗಳನ್ನು ಮಾರಾಟ ಮಾಡಿತ್ತು. ಇದರಿಂದ ಅದರ ಮಾರುಕಟ್ಟೆ ಬಂಡವಾಳ ಅಥವಾ ಷೇರುಸಂಪತ್ತು 64 ಬಿಲಿಯನ್ ಡಾಲರ್​ಗೆ ಇಳಿದಿತ್ತು. ಐಟಿಸಿಯ ಮಾರ್ಕೆಟ್ ಕ್ಯಾಪ್​ಗಿಂತ ಕಡಿಮೆ ಆಗಿದೆ.

ಇದನ್ನೂ ಓದಿ: Argentina Crisis: ಅರ್ಧದಷ್ಟು ಕರೆನ್ಸಿ ಮೌಲ್ಯ ಇಳಿಸಿದ ಅರ್ಜೆಂಟೀನಾ; ಈಗ ಒಂದು ಡಾಲರ್​ಗೆ 800 ಪೆಸೋ

ತನ್ನ ತಂಬಾಕು ವ್ಯವಹಾರ ಹೆಚ್ಚು ಕಾಲ ಉಳಿಯುವುದಿಲ್ಲ. ಜಾಗತಿಕವಾಗಿ ವಿವಿಧ ದೇಶಗಳಲ್ಲಿ ತಂಬಾಕು ಉತ್ಪನ್ನಗಳಿಗೆ ಇರುವ ನಿರ್ಬಂಧ, ಜನರಲ್ಲಿ ಇರುವ ಆರೋಗ್ಯದ ಅರಿವು ಇವುಗಳಿಂದಾಗಿ ಭವಿಷ್ಯದಲ್ಲಿ ತನ್ನ ವ್ಯವಹಾರ ಕುಸಿಯಲಿದೆ. ತನ್ನ ಮಾರ್ಕೆಟ್ ಕ್ಯಾಪ್ 31.5 ಬಿಲಿಯನ್ ಡಾಲರ್​ಗೆ ಇಳಿಯಬಹುದು ಎಂದು ಸಂಸ್ಥೆ ಹೇಳಿತು. ಈ ಬೆನ್ನಲ್ಲೇ ಅದರ ಷೇರುಮೌಲ್ಯ ಗಣನೀಯವಾಗಿ ಇಳಿಯತೊಡಗಿದೆ. ಡಿಸೆಂಬರ್ 5ಕ್ಕೆ 2,523 ಪೌಂಡ್ ಇದ್ದ ಅದರ ಷೇರುಬೆಲೆ ಈಗ 2,280 ಪೌಂಡ್​ಗೆ ಇಳಿದಿದೆ.

ಐಟಿಸಿಗೆ ಈಗಲೂ ಸಿಗರೇಟು ಲಾಭದ ಕುದುರೆ

ಐಟಿಸಿ ಭಾರತದ ಅತಿದೊಡ್ಡ ತಂಬಾಕು ಕಂಪನಿ. ತಂಬಾಕು ಮೇಲೆ ಸರ್ಕಾರಗಳು ಯಾವಾಗ ಬೇಕಾದರೂ ನಿಷೇಧ ಹೇರಬಹುದಾದ್ದರಿಂದ ಹಾಗೂ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಐಟಿಸಿ ಸಂಸ್ಥೆ ಕೆಲವಾರು ವರ್ಷಗಳಿಂದ ಬೇರೆ ಬೇರೆ ವ್ಯವಹಾರಗಳಿಗೆ ವಿಸ್ತರಣೆ ಆಗುತ್ತಾ ಬಂದಿದೆ. ಎಫ್​ಎಂಸಿಜಿ ಉತ್ಪನ್ನಗಳು, ಕಾಗದ ಉತ್ಪನ್ನ, ಹೋಟೆಲ್ ಉದ್ಯಮಗಳಲ್ಲಿ ಐಟಿಸಿ ವ್ಯವಹಾರ ಹೊಂದಿದೆ.

ಇದನ್ನೂ ಓದಿ: Deepfake: ‘ಕ್ವಾಂಟಮ್ ಎಐಗೆ ಬನ್ನಿ, ಮೊದಲ ದಿನವೇ 2.5 ಲಕ್ಷ ರೂ ಗಳಿಸಿ’- ಇನ್ಫೋಸಿಸ್ ನಾರಾಯಣಮೂರ್ತಿ ಓಪನ್ ಆಫರ್ ಕೊಟ್ಟಿದ್ದು ನಿಜವಾ?

ಐಟಿಸಿಯ ಒಟ್ಟಾರೆ ಆದಾಯದಲ್ಲಿ ತಂಬಾಕಿನಿಂದ ಸಿಗುತ್ತಿರುವುದು ಶೇ. 37 ಮಾತ್ರ. ಆದರೆ, ಐಟಿಸಿಗೆ ಬರುವ ಲಾಭದಲ್ಲಿ ಶೇ. 70ಕ್ಕಿಂತಲೂ ಹೆಚ್ಚು ಪಾಲು ಕೊಟ್ಟಿರುವುದು ತಂಬಾಕು ಉತ್ಪನ್ನಗಳೇ. ಭಾರತದಲ್ಲಿ ಸಿಗರೇಟ್ ಬೆಲೆ ಎಷ್ಟೇ ಹೆಚ್ಚಾದರೂ ಮಾರಾಟ ಮಾತ್ರ ಇಳಿಮುಖ ಆಗುವುದೇ ಇಲ್ಲ ಎನ್ನುವುದಕ್ಕೆ ಐಟಿಸಿಯ ತಂಬಾಕು ಮಾರಾಟ ವಿವರವೆ ನಿದರ್ಶನ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ