Fact Check: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ದಿನಾಂಕ ವಿಸ್ತರಣೆಯಾಗಿದೆಯೇ? ಇಲ್ಲಿದೆ ಮಾಹಿತಿ
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ದಿನಾಂಕ ವಿಸ್ತರಣೆಯಾಗಿದೆ ಎನ್ನುವ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಕುರಿತು ಪಿಐಬಿ ಫ್ಯಾಕ್ಟ್ಚೆಕ್ ಪರಿಶೀಲನೆ ನಡೆಸಿ ಇದು ಸುಳ್ಳು ಸುದ್ದಿ, ಐಟಿಆರ್ ಸಲ್ಲಿಕೆಗೆ ಈ ಹಿಂದೆ ನೀಡಲಾಗಿದ್ದ ಗಡುವಿನೊಳಗೆಯೇ ಸಲ್ಲಿಸಬೇಕು ಇಲ್ಲವಾದರೆ ದಂಡ ಪಾವತಿಸಬೇಕಾಗುತ್ತದೆ ಎಂದು ಹೇಳಿದೆ.
ಆದಾಯ ತೆರಿಗೆ ರಿಟರ್ನ್ಸ್(ITR) ಸಲ್ಲಿಕೆ ದಿನಾಂಕ ವಿಸ್ತರಣೆಯಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಒಂದೆಡೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಗಡುವನ್ನು ವಿಸ್ತರಿಸಬೇಕು ಎನ್ನುವ ಕೂಗು ಕೇಳಿಬಂದಿತ್ತು ಈಗ ನಿಜವಾಗಿಯೂ ದಿನಾಂಕ ವಿಸ್ತರಣೆಯಾಗಿದೆಯೇ? ಇಲ್ಲವೇ ಎನ್ನುವ ಕುರಿತು ಮಾಹಿತಿ ಇಲ್ಲಿದೆ. ಹಣಕಾಸು ವರ್ಷ 2023-24ರ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದೆ. ದಂಡ ತಪ್ಪಿಸಿಕೊಳ್ಳಲು ತೆರಿಗೆ ಪಾವತಿದಾರರು ಇಂದು ಸಂಜೆಯೊಳಗಾಗಿ ತಮ್ಮ ಐಟಿಆರ್ ಅನ್ನು ಸಲ್ಲಿಸಬೇಕಾಗಿದೆ.
ಕೆಲವು ದಿನಗಳ ಹಿಂದೆ, ಗುಜರಾತ್‌ನ ಪತ್ರಿಕೆಯೊಂದರ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ಐಟಿಆರ್ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸುವ ಬಗ್ಗೆ ಮಾತನಾಡಲಾಗಿತ್ತು. ಈಗ ಅದನ್ನೇ ಇಟ್ಟುಕೊಂಡು ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಹೇಳಲಾಗಿದೆ. ಪಿಐಬಿ ಫ್ಯಾಕ್ಟ್ ಇದನ್ನು ಪರಿಶೀಲಿಸಿ ನಕಲಿ ಎಂದು ಘೋಷಿಸಿತು.
ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳು ಹರಡುತ್ತಲೇ ಇದ್ದರೂ ಆದಾಯ ತೆರಿಗೆ ಇಲಾಖೆ ನೀಡಿದ್ದ ಗಡುವಿನ ದಿನಾಂಕ ವಿಸ್ತರಣೆ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ. ಪಿಐಬಿ ಫ್ಯಾಕ್ಟ್ಚೆಕ್ ಮಾಹಿಯೊಂದನ್ನು ಹಂಚಿಕೊಂಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಪ್ರೆಸ್ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾದ ಕಚೇರಿಯ ಸಲಹೆಯನ್ನು ಐಟಿಆರ್ ಸಲ್ಲಿಸಲು ಅಂತಿಮ ದಿನಾಂಕದ ವಿಸ್ತರಣೆ ಎಂದು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಹೇಳಿದೆ.
ತೆರಿಗೆ ಇಲಾಖೆಯ ಗಡುವು ದೃಢವಾಗಿ ಉಳಿದಿದೆ, ಇದರರ್ಥ ನೀವು ದಂಡ ತಪ್ಪಿಸಿಕೊಳ್ಳಲು ಇಂದೇ ಐಟಿಆರ್ ರಿಟರ್ನ್ಸ್ ಸಲ್ಲಿಸಬೇಕು. ಅನಿವಾರ್ಯವಾದ ತುರ್ತು ಪರಿಸ್ಥಿತಿ ಇಲ್ಲದಿದ್ದರೆ ತೆರಿಗೆ ಇಲಾಖೆಯು ITR ಫೈಲಿಂಗ್ ಗಡುವನ್ನು ವಿಸ್ತರಿಸುವ ಸಾಧ್ಯತೆಯಿಲ್ಲ.
ಮತ್ತಷ್ಟು ಓದಿ: ಆಧಾರ್, ಪ್ಯಾನ್ ಲಿಂಕ್ ಮಾಡದಿರುವವರಿಗೆ ದುಬಾರಿ ತೆರಿಗೆ; ಬರಲಿದೆ ಟ್ಯಾಕ್ಸ್ ಡಿಮ್ಯಾಂಡ್ ನೋಟೀಸ್
ಸಾಮಾನ್ಯವಾಗಿ ಫೈಲಿಂಗ್ ಪ್ರಕ್ರಿಯೆಯಲ್ಲಿ ಎದುರಾಗುವ ತಾಂತ್ರಿಕ ಸಮಸ್ಯೆಗಳಿಂದಾಗಿ ಗಡುವು ವಿಸ್ತರಣೆಗಳ ಬೇಡಿಕೆಗಳು ಸಾಮಾನ್ಯವಾಗಿ ಗಡುವಿನ ದಿನಾಂಕ ಸಮೀಪಿಸುತ್ತಿದ್ದಂತೆ ಉದ್ಭವಿಸುತ್ತವೆ ಎಂದು ಆರ್ಥಿಕ ತಜ್ಞರು ಹೇಳುತ್ತಾರೆ. ಗಡುವನ್ನು ವಿಸ್ತರಿಸುವುದರಿಂದ ತೆರಿಗೆ ರಿಟರ್ನ್ಸ್ ಪ್ರಕ್ರಿಯೆ ಸೇರಿದಂತೆ ಸಂಪೂರ್ಣ ಪ್ರಕ್ರಿಯೆಯ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು.
An advisory of Office of Press Registrar General of India shared on social media is being misconstrued as extension of due date for filing ITR#PIBFactCheck
✔️The advisory is NOT related to extension of date of filing ITR.
✔️The due date for filing ITR is 31 July 2024 pic.twitter.com/F4OHwK2d3Y
— PIB Fact Check (@PIBFactCheck) July 30, 2024
ತಡವಾಗಿ ಸಲ್ಲಿಸುವುದರಿಂದ ಕಟ್ಟಬೇಕಾದ ದಂಡವನ್ನು ತಪ್ಪಿಸಲು ಜುಲೈ 31ರ ಗಡುವಿನೊಳಗೆ ತಮ್ಮ ಐಟಿಆರ್‌ಗಳನ್ನು ಸಲ್ಲಿಸುವುದನ್ನು ಪೂರ್ಣಗೊಳಿಸುವಂತೆ ತೆರಿಗೆ ಇಲಾಖೆಯು ತೆರಿಗೆದಾರರನ್ನು ಒತ್ತಾಯಿಸಿದೆ. 2023-24ರ ಹಣಕಾಸು ವರ್ಷಕ್ಕೆ ಇದುವರೆಗೆ ಸುಮಾರು 6 ಕೋಟಿ ಐಟಿಆರ್‌ಗಳನ್ನು ಸಲ್ಲಿಸಲಾಗಿದೆ. ಇದರಲ್ಲಿ ಕುತೂಹಲಕಾರಿ ಅಂಶವೆಂದರೆ ಪ್ರತಿ 3 ಜನರಲ್ಲಿ 2 ಜನರು ಅಂದರೆ ಸುಮಾರು 70 ಪ್ರತಿಶತದಷ್ಟು ಜನರು ಹೊಸ ತೆರಿಗೆ ಪದ್ಧತಿಯನ್ನು ಆರಿಸಿಕೊಂಡಿದ್ದಾರೆ.
ವಾಣಿಜ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ