ನವದೆಹಲಿ, ಜನವರಿ 19: ಅಯೋಧ್ಯೆಯ ರಾಮ ಮಂದಿರದಲ್ಲಿ ವಿಗ್ರಹ ಪ್ರಾಣ ಪ್ರತಿಷ್ಠಾಪನಾ ಕಾರ್ಯ (Ram Mandir Consecration ceremony) ನಡೆಯಲಿದ್ದು ಅಂದು ಬಹಳಷ್ಟು ಕಡೆ ಪೂರ್ಣ ರಜೆ, ಅರೆ ರಜೆ, ಧಾರ್ಮಿಕ ಆಚರಣೆ ಇತ್ಯಾದಿಗಳಿವೆ. ಉತ್ತರಪ್ರದೇಶ, ಗೋವಾ, ಛತ್ತೀಸ್ಗಡ, ಹರ್ಯಾಣ ರಾಜ್ಯಗಳಲ್ಲಿ ಸಾರ್ವಜನಿಕ ರಜೆ ಘೋಷಿಸಲಾಗಿದೆ. ಎಲ್ಲಾ ರೈಲ್ವೆ ನಿಲ್ದಾಣಗಳಲ್ಲೂ ಕಾರ್ಯಕ್ರಮದ ನೇರ ಪ್ರಸಾರ ಇರುತ್ತದೆ. ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಮಧ್ಯಾಹ್ನ 2:30ರವರೆಗೂ ರಜೆ ಇರುತ್ತದೆ. ಅಂತೆಯೇ ಬ್ಯಾಂಕುಗಳಿಗೂ ಅರ್ಧ ದಿನ ರಜೆ ಇರುತ್ತದೆ. ಹೀಗಾಗಿ, ಅಂದು 2,000 ರೂ ನೋಟುಗಳ ವಿನಿಮಯಕ್ಕೆ ಅವಕಾಶ ಇರುವುದಿಲ್ಲ. ಆರ್ಬಿಐ ಈ ವಿಷಯವನ್ನು ಇಂದು ಶುಕ್ರವಾರ (ಜ. 19) ಸ್ಪಷ್ಟಪಡಿಸಿದೆ.
ಎರಡು ಸಾವಿರ ರೂ ನೋಟು ವಿನಿಮಯದ ಸೌಲಭ್ಯ ಜನವರಿ 22ರಂದು ಇರುವುದಿಲ್ಲ. ಜನವರಿ 23ರಂದು ಈ ಸೌಲಭ್ಯ ಮುಂದುವರಿಯುತ್ತದೆ ಎಂದು ಆರ್ಬಿಐ ಹೇಳಿಕೆಯಲ್ಲಿ ತಿಳಿಸಿದೆ.
‘ಭಾರತ ಸರ್ಕಾರ ಅರ್ಧ ದಿನ ರಜೆ ಘೋಷಿಸಿರುವುದರಿಂದ ಆರ್ಬಿಐನ ಯಾವುದೆ 19 ಇಷ್ಯೂ ಆಫೀಸ್ಗಳಲ್ಲಿ 2,000 ರೂ ನೋಟು ವಿನಿಮಯ ಇರುವುದಿಲ್ಲ,’ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.
ಆರ್ಬಿಐ 2023ರ ಮೇ 19ರಂದು 2,000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಘೋಷಣೆ ಮಾಡಿತು. ಮೊದಲಿಗೆ ಎಲ್ಲಾ ಬ್ಯಾಂಕುಗಳಲ್ಲೂ ನೋಟು ವಿನಿಮಯ ಮಾಡಲು ಅಥವಾ ಠೇವಣಿ ಇಡಲು ಅವಕಾಶ ಕೊಟ್ಟಿತ್ತು. ಇದೀಗ ಆರ್ಬಿಐನ 19 ಇಷ್ಯೂ ಆಫೀಸ್ಗಳಲ್ಲಿ ಮಾತ್ರವೇ ನೋಟು ವಿನಿಮಯಕ್ಕೆ ಅವಕಾಶ ಇದೆ.
ಇದನ್ನೂ ಓದಿ: TCS: ಯೂರೋಪ್ನಲ್ಲಿ ಉದ್ಯೋಗಿಗಳು ಮೆಚ್ಚುವ ಕಂಪನಿಗಳಲ್ಲಿ ಟಿಸಿಎಸ್ಗೆ ಮೊದಲ ಸ್ಥಾನ
ಬೆಂಗಳೂರನ ನೃಪತುಂಗ ರಸ್ತೆಯಲ್ಲಿರುವ ಆರ್ಬಿಐ ಕಚೇರಿಯೂ ಅದರಲ್ಲಿ ಒಂದು. ಈ 19 ಕಚೇರಿಗಳಲ್ಲಿ ಯಾವುದರಲ್ಲಿಯಾದರೂ ನೀವು ಹೋಗಿ ನೋಟು ವಿನಿಮಯ ಮಾಡಿಕೊಳ್ಳಬಹುದು. ಅಥವಾ ಈ ಕಚೇರಿಗಳ ವಿಳಾಸಕ್ಕೆ ಅಂಚೆ ಮೂಲಕ ನೋಟನ್ನು ಕಳುಹಿಸಿ ನಿಮ್ಮ ಬ್ಯಾಂಕ್ ಖಾತೆಗೆ ಡೆಪಾಸಿಟ್ ಮಾಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ