ನವದೆಹಲಿ, ಸೆಪ್ಟೆಂಬರ್ 22: ಮುತ್ತು, ಹವಳ, ಚಿನ್ನ, ಬೆಳ್ಳಿ ಇತ್ಯಾದಿ ಅಮೂಲ್ಯ ವಸ್ತುಗಳ ಟ್ರೇಡಿಂಗ್ನಲ್ಲಿ ಹಣದ ಹರಿವನ್ನು ಟ್ರ್ಯಾಕ್ ಮಾಡುವುದು ಕಷ್ಟ. ಯಾರಿಂದ ಯಾರಿಗೆ ವಸ್ತುಗಳು ಮಾರಾಟ ಆಗುತ್ತದೆ ಎಂಬುದು ಗೊತ್ತಾಗುವುದಿಲ್ಲ. ಹೀಗಾಗಿ, ಈ ಉದ್ದಿಮೆಯನ್ನು ಕಾಳಸಂತೆಕೋರರು ದುರ್ಬಳಕೆ ಮಾಡಿಕೊಳ್ಳುವುದುಂಟು. ಸರ್ಕಾರಕ್ಕೂ ಇದೇ ತಲೆನೋವಾಗಿದೆ. ಹಣಕಾಸು ಕ್ರಿಯಾ ಕಾರ್ಯಪಡೆ (ಎಫ್ಎಟಿಎಫ್) ಪ್ರಕಾರ, ಒಡವೆ ಉದ್ಯಮವನ್ನು ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದನೆ ನೆರವಿಗೆ ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.
ಭಾರತದಲ್ಲಿ ಆಭರಣ ಮತ್ತು ಅಮೂಲ್ಯ ವಸ್ತುಗಳ ಉದ್ದಿಮೆ ಬಹಳ ದೊಡ್ಡದಿದೆ. ಇಲ್ಲಿ ಕಳ್ಳಸಾಗಾಣಿಕೆ ಸಾಧ್ಯತೆ ಹೆಚ್ಚಾಗಿದೆ. ವ್ಯವಹಾರಗಳಲ್ಲೂ ಅಕ್ರಮ ಹಣ ವರ್ಗಾವಣೆ ಸಾಧ್ಯತೆ ಹೆಚ್ಚಿದೆ ಎಂದು ಎಫ್ಎಟಿಎಫ್ ಎಚ್ಚರಿಸಿದೆ. ಇದರ ವರದಿಯಲ್ಲಿ ಕುತೂಹಲಕಾರಿ ಅಂಶವೊಂದನ್ನು ಉಲ್ಲೇಖಿಸಲಾಗಿದೆ. ಭಾರತದಲ್ಲಿ ಈ ಅಮೂಲ್ಯ ವಸ್ತುಗಳ ಉದ್ದಿಮೆಯಲ್ಲಿ ಮುಖ್ಯ ಸಂಘಟನೆಯಾದ ಜಿಜೆಇಪಿಸಿ (ಜೆಮ್ಸ್ ಅಂಡ್ ಜ್ಯುವೆಲರಿ ಎಕ್ಸ್ಪೋರ್ಟ್ ಪ್ರೊಮೋಶನ್ ಕೌನ್ಸಿಲ್) ಅನುಮೋದಿಸಿದ ಟ್ರೇಡರ್ಗಳ ಸಂಖ್ಯೆ 9,500 ಇದೆ. ಅದರೆ, ಒಟ್ಟಾರೆ ಡೀಲರ್ಸ್ ಸಂಖ್ಯೆ 1.75 ಲಕ್ಷ ಇದೆ. ಇಲ್ಲಿ ಜೆಜೆಇಪಿಸಿ ಸದಸ್ಯರಾದವರು ಮಾತ್ರ ಭಾರತದಲ್ಲಿ ಹರಳುಗಳ ರಫ್ತು ಮತ್ತು ಮಾರಾಟ ಮಾಡಬಹುದು. ಆದಾಗ್ಯೂ ಇತರರಿಂದಲೂ ಆಮದು ರಫ್ತು ವ್ಯವಹಾರ ನಡೆಯುತ್ತಿರುವ ಶಂಕೆ ಇದೆ.
ಇದನ್ನೂ ಓದಿ: ಸರ್ಕಾರಿ ಉದ್ಯೋಗಿಗಳಿಗೆ ಶೀಘ್ರದಲ್ಲೇ ಶೇ. 3-4 ಡಿಎ ಹೆಚ್ಚಳ; ಮೂಲವೇತನದ ಜೊತೆ ವಿಲೀನವಾಗುತ್ತಾ ತುಟ್ಟಿಭತ್ಯೆ?
ಈ ಉದ್ದಿಮೆಯಲ್ಲಿ ಆಗುವ ಟ್ರೇಡಿಂಗ್ನಲ್ಲಿ ಮಾರುವವರು ಮತ್ತು ಖರೀದಿಸುವವರ ಜಾಡು ಹಿಡಿಯುವುದು ಕಷ್ಟ. ಹೀಗಾಗಿ, ಅಕ್ರಮ ವ್ಯವಹಾರಗಳು ಹೆಚ್ಚಿರಬಹುದು. ಈ ಬಗ್ಗೆ ಭಾರತ ನಿಗಾ ಇರಿಸಿ ಸೂಕ್ತ ವ್ಯವಸ್ಥೆ ಏರ್ಪಡಿಸಬೇಕು ಎಂದು ಎಫ್ಎಟಿಎಫ್ ಸಲಹೆ ನೀಡಿದೆ.
ಚೀನಾ ಬಿಟ್ಟರೆ ಭಾರತವೇ ಚಿನ್ನಕ್ಕೆ ಅತಿದೊಡ್ಡ ಮಾರುಕಟ್ಟೆಯಾಗಿದೆ. ಭಾರತ ಅತಿಹೆಚ್ಚು ಚಿನ್ನಾಭರಣ ರಫ್ತು ಮಾಡುತ್ತದೆ. ಈ ಉದ್ಯಮವು ದೇಶದ ಜಿಡಿಪಿಯ ಶೇ. 7ರಷ್ಟು ಗಾತ್ರದ್ದಾಗಿ ಎನ್ನುವುದು ಗಮನಾರ್ಹ.
ಇದನ್ನೂ ಓದಿ: ವೈಯಕ್ತಿಕ ಸಾಲಕ್ಕೆ ಯಾಕೆ ಬಡ್ಡಿ ಎಷ್ಟು? ತೀರಾ ಹೆಚ್ಚು ಮೊತ್ತದ ಸಾಲ ಯಾಕೆ ಸಿಗಲ್ಲ?
ಭಾರತ ಇತ್ತೀಚೆಗೆ ಚಿನ್ನ, ಬೆಳ್ಳಿ ಇತ್ಯಾದಿ ಅಮೂಲ್ಯ ವಸ್ತುಗಳ ಮೇಲೆ ಆಮದು ತೆರಿಗೆಯನ್ನು ಇಳಿಸಿತ್ತು. ಇದರಿಂದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗಣನೀಯವಾಗಿ ಇಳಿಕೆ ಆಗಿದ್ದವು. ಈ ಮುಂಚೆ ಬೇರೆ ಪ್ರಮುಖ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಚಿನ್ನ, ಬೆಳ್ಳಿ ಬೆಲೆ ಬಹಳ ಹೆಚ್ಚಿತ್ತು. ಈಗ ಈ ಅಂತರ ಬಹಳ ಕಡಿಮೆ ಆಗಿದೆ. ಇದರಿಂದ ಬೇರೆ ದೇಶಗಳಿಂದ ಭಾರತಕ್ಕೆ ಚಿನ್ನ ಸಾಗಿಸುವ ಕೆಲಸ ಮತ್ತು ಸ್ಮಗ್ಲಿಂಗ್ ಕಡಿಮೆ ಆಗಬಹುದು ಎನ್ನುವ ಆಶಯ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ