Death News: ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಪತಿ ಜಾನ್ ಶಾ ನಿಧನ
ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಪತಿ ಜಾನ್ ಶಾ ಸೋಮವಾರ ಬೆಳಿಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಬೆಂಗಳೂರು: ಬಯೋಕಾನ್ (Biocon) ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ (Kiran Mazumdar Shaw) ಪತಿ ಜಾನ್ ಶಾ (John Shaw) ಸೋಮವಾರ ಬೆಳಿಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು. ಅನಾರೋಗ್ಯಕ್ಕೀಡಾಗಿದ್ದ ಜಾನ್ ಶಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಜಾನ್ ಶಾ ಅವರ ಸಾವಿಗೆ ನಿಖರವಾದ ಕಾರಣ ಏನೆಂಬುದು ತಿಳಿದುಬಂದಿಲ್ಲ. ಕೆಲವು ಮೂಲಗಳ ಪ್ರಕಾರ, ಅವರು ಕ್ಯಾನ್ಸರ್ಪೀಡಿತರಾಗಿದ್ದರು ಎನ್ನಲಾಗಿದೆ. ಆದರೆ, ಕುಟುಂಬದ ಮೂಲಗಳು ಈ ಕುರಿತು ಹೇಳಿಕೆ ನೀಡಿಲ್ಲ. ಅವರು ಬೆಂಗಳೂರು ಮೂಲದ ಬಯೋಕಾನ್ ಲಿಮಿಟೆಡ್ನ ಮಾಜಿ ಉಪಾಧ್ಯಕ್ಷರಾಗಿದ್ದರು. ಮಧುರಾ ಕೋಟ್ಸ್ ಲಿಮಿಟೆಡ್ನ ಅಧ್ಯಕ್ಷ ಹಾಗೂ ಕೋಟ್ಸ್ ವಿಯೆಲ್ಲಾ ಗ್ರೂಪ್ನ ಎಂಡಿ ಆಗಿ ಕಾರ್ಯನಿರ್ವಹಿಸಿದ್ದರು.
ಇದನ್ನೂ ಓದಿ: Never Give Up: 2013ರಲ್ಲಿ ಕೆಲಸದಿಂದ ವಜಾಗೊಂಡಿದ್ದ ಎಂಜಿನಿಯರ್ ಆದಾಯವೀಗ 3.5 ಕೋಟಿ ರೂ!
ಅವರು ಬ್ರಿಟನ್ನ ಗ್ಲಾಸ್ಗೋದಲ್ಲಿ ಉನ್ನತ ಶಿಕ್ಷಣ ಪಡೆದಿದ್ದರು. ಗ್ಲಾಸ್ಗೋ ವಿಶ್ವವಿದ್ಯಾಲಯದಿಂದ ಇತಿಹಾಸ, ರಾಜಕೀಯಶಾಸ್ತ್ರ ಮತ್ತು ಅರ್ಥಶಾಸ್ತ್ರದಲ್ಲಿ ಎಂಎ ಪದವಿ ಪಡೆದಿದ್ದರು.
ಈ ವರ್ಷ ಜೂನ್ನಲ್ಲಿ ಕಿರಣ್ ಮಜುಂದಾರ್ ಶಾ ಅವರ ತಾಯಿ ಯಾಮಿನಿ ಮಜುಂದಾರ್ ಕ್ಯಾನ್ಸರ್ನಿಂದಾಗಿ ಮೃತಪಟ್ಟಿದ್ದರು. ಇದಾದ ಕೆಲವೇ ತಿಂಗಳಲ್ಲಿ ಇದೀಗ ಅವರು ಪತಿಯನ್ನು ಕಳೆದುಕೊಂಡಿದ್ದಾರೆ.
1998ರಲ್ಲಿ ಮದುವೆಯಾಗಿದ್ದರು:
1949ರಲ್ಲಿ ಜನಿಸಿದ್ದ ಜಾನ್ ಶಾ ಅವರನ್ನು 1998ರಲ್ಲಿ ಕಿರಣ್ ಮಜುಂದಾರ್ ಶಾ ಮದುವೆಯಾಗಿದ್ದರು. ಪತಿಯ ನಿಧನಕ್ಕೆ ಕಿರಣ್ ಮಜುಂದಾರ್ ಶಾ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
‘ನನ್ನ ಪತಿ, ಮಾರ್ಗದರ್ಶಕ ಹಾಗೂ ಆತ್ಮ ಸಂಗಾತಿಯನ್ನು ಕಳೆದುಕೊಂಡು ವಿಪರೀತ ದುಃಖಿತಳಾಗಿದ್ದೇನೆ. ನನ್ನ ಉದ್ದೇಶವನ್ನು ಈಡೇರಿಸುವ ಮೊದಲು ಸದಾ ಜಾನ್ನಿಂದ ಅಧ್ಯಾತ್ಮಿಕ ಮಾರ್ಗದರ್ಶನ ಪಡೆಯುತ್ತಿದ್ದೆ. ನಿಮ್ಮ ಆತ್ಮಕ್ಕೆ ಶಾಂತಿ ದೊರೆಯಲಿ. ನನ್ನ ಜೀವನವನ್ನು ಬಹಳ ವಿಶೇಷವಾಗಿಸಿದ್ದಕ್ಕೆ ಧನ್ಯವಾದಗಳು. ನಾನು ನಿಮ್ಮನ್ನು ಗಾಢವಾಗಿ ಸದಾ ನೆನಪಿಸಿಕೊಳ್ಳಲಿದ್ದೇನೆ’ ಎಂದು ಕಿರಣ್ ಮಜುಂದಾರ್ ಶಾ ಟ್ವೀಟ್ ಮಾಡಿದ್ದಾರೆ.
I am devastated to lose my husband, my mentor and soul mate. I will always be spiritually guided by John as I pursue my purpose. Rest in Peace my darling John. Thank you for making my life so very special. I will miss you profoundly pic.twitter.com/b0qv6ZGI2D
— Kiran Mazumdar-Shaw (@kiranshaw) October 25, 2022
ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಪತಿ ಜಾನ್ ಶಾ ಅವರ ನಿಧನಕ್ಕೆ ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್. ಶಂಕರ್ ಮತ್ತು ಕಾರ್ಯದರ್ಶಿ ಎಸ್.ಎನ್. ಶಶಿಧರ್ ಸಂತಾಪ ಸೂಚಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:42 pm, Mon, 24 October 22