ನವದೆಹಲಿ, ಜೂನ್ 9: ಜೂನ್ 3ರವರೆಗೆ ಉಬ್ಬಿ ನಿಂತಿದ್ದ ಷೇರು ಮಾರುಕಟ್ಟೆ, ಜೂನ್ 4ರಂದು ಪ್ರಚಂಡವಾಗಿ ಕುಸಿದಿತ್ತು. ನಂತರದ ದಿನಗಳಲ್ಲಿ ಅಷ್ಟೇ ಪ್ರಚಂಡವಾಗಿ ಮೇಲೇರಿದ್ದು ಗೊತ್ತೇ ಇದೆ. ಜೂನ್ 4ರಂದು ಹೂಡಿಕೆದಾರರಿಗೆ 30 ಲಕ್ಷ ಕೋಟಿ ರೂಗೂ ಹೆಚ್ಚು ನಷ್ಟ ಆದ ಅಂದಾಜಿದೆ. ಜೂನ್ 4ರಂದು ಷೇರು ಮಾರುಕಟ್ಟೆ (stock market) ಮೇಲೇರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಕೆಲ ಬಿಜೆಪಿ ನಾಯಕರು ಹೇಳಿದ್ದರಿಂದ ಸಾಕಷ್ಟು ಹೂಡಿಕೆದಾರರು ಕೈ ಸುಟ್ಟುಕೊಂಡಿದ್ದಾರೆ. ಇದು ಬಹಳ ದೊಡ್ಡ ಷೇರು ಮಾರುಕಟ್ಟೆ ಹಗರಣ ಎಂಬುದು ಕಾಂಗ್ರೆಸ್ನ ಆರೋಪ.
ಜೂನ್ 4ರ ಬಳಿಕ ಷೇರುಬೆಲೆ ಹೆಚ್ಚಲಿದೆ. ಅಷ್ಟರೊಳಗೆ ಹೂಡಿಕೆ ಮಾಡಿ ಎಂದು ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಮೊದಲಾದವರು ತಮ್ಮ ಚುನಾವಣಾ ಭಾಷಣಗಳಲ್ಲಿ ಹೇಳಿದ್ದು ಹೌದು. ಮೇ ಕೊನೆಯ ವಾರದಲ್ಲಿ ಅವರುಗಳ ಹೇಳಿಕೆ ಬಳಿಕ, ಅದರ ಪ್ರಭಾವದಿಂದಾಗಿಯೋ ಅಥವಾ ಕಾಕತಾಳೀಯವಾಗಿಯೋ ಸೆನ್ಸೆಕ್ಸ್, ನಿಫ್ಟಿ ಏರತೊಡಗಿತ್ತು. ಜೂನ್ 1, ಶನಿವಾರದಂದು ಎಕ್ಸಿಟ್ ಪೋಲ್ಗಳು ಬಿಡುಗಡೆಯಾಗಿ ಬಿಜೆಪಿಗೆ ಪ್ರಚಂಡ ಬಹುಮತ ಬರಬಹುದು ಎಂದು ಅಂದಾಜಿಸಿದ್ದವು. ಅದಾದ ಬಳಿಕ ಜೂನ್ 3ರಂದು ಸೆನ್ಸೆಕ್ಸ್, ನಿಫ್ಟಿ ಸೇರಿದಂತೆ ಷೇರು ಮಾರುಕಟ್ಟೆಯ ಬಹುತೇಕ ಸೂಚ್ಯಂಕಗಳು ಸಖತ್ತಾಗಿ ಏರಿದವು.
ಬಿಜೆಪಿ ನಾಯಕರ ಹೇಳಿಕೆ ಮತ್ತು ಎಕ್ಸಿಟ್ ಪೋಲ್ ಫಲಿತಾಂಶದ ಮೂಲಕ ಹೂಡಿಕೆದಾರರನ್ನು ಸೆಳೆಯುವ ಮಸಲತ್ತು ಮಾಡಲಾಗಿದೆ. ಆ ಮೂಲಕ ದೊಡ್ಡ ಲಾಭ ಮಾಡುವ ದೊಡ್ಡ ಚಿತಾವಣೆ ನಡೆದಿತ್ತು ಎಂದು ಕೆಲ ವಿಪಕ್ಷ ನಾಯಕರುಗಳು ಗಂಭೀರವಾಗಿ ಆರೋಪಿಸಿದ್ದಾರೆ. ಟಿಎಂಸಿ ಸಂಸದ ಸಾಕೇತ್ ಗೋಖಲೆ ಅವರು ಎಕ್ಸಿಟ್ ಪೋಲ್ ವಿಚಾರದಲ್ಲಿ ತನಿಖೆ ನಡೆಸುವಂತೆ ಸೆಬಿಗೆ ಮನವಿ ಮಾಡಿದ್ದಾರೆ. ರಾಹುಲ್ ಗಾಂಧಿ ಅವರು ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಜೂನ್ 6ರಂದು ಕೇಂದ್ರ ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ವಿಪಕ್ಷಗಳ ಈ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.
‘ರಾಹುಲ್ ಗಾಂಧಿ ಷೇರು ಮಾರುಕಟ್ಟೆಯಲ್ಲಿ 30 ಲಕ್ಷ ಕೋಟಿ ರೂ ನಷ್ಟದ ಬಗ್ಗೆ ಮಾತನಾಡುತ್ತಾರೆ. ಅವರಿಗೆ ಇದು ಮುಖ್ಯವೇ ಅಲ್ಲ ವ್ಯಾಲ್ಯುಯೇಶನ್ ಎಂಬುದು ಅರ್ಥವಾದಂತಿಲ್ಲ. ಖರೀದಿಸುವುದು ಮತ್ತು ಮಾರುವುದು ಇಲ್ಲಿ ಹೆಚ್ಚು ಮುಖ್ಯ,’ ಎಂದು ಸುದ್ದಿಗೋಷ್ಠಿಯಲ್ಲಿ ಪೀಯುಶ್ ಹೇಳಿದ್ದಾರೆ. ಅವರ ಪ್ರಕಾರ ಈ ಬೆಳವಣಿಗೆಯಲ್ಲಿ ವಿದೇಶೀ ಹೂಡಿಕೆದಾರರು ನಷ್ಟ ಮಾಡಿಕೊಂಡಿದ್ದಾರೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು ಲಾಭ ಮಾಡಿದ್ದಾರೆ.
ಇದನ್ನೂ ಓದಿ: ಮೇ 31ಕ್ಕೆ ಭಾರತದ ಫಾರೆಕ್ಸ್ ರಿಸರ್ವ್ಸ್ 651.5 ಬಿಲಿಯನ್ ಡಾಲರ್; ಇದು ಸಾರ್ವಕಾಲಿಕ ದಾಖಲೆ
‘ಜೂನ್ 3ರಂದು ಎಕ್ಸಿಟ್ ಪೋಲ್ ಬಂದಾ ವಿದೇಶೀ ಹೂಡಿಕೆದಾರರು ಹೆಚ್ಚಿನ ವ್ಯಾಲ್ಯುಯೇಶನ್ನಲ್ಲಿ 6,800 ಕೋಟಿ ರೂ ಮೌಲ್ಯದ ಷೇರುಗಳನ್ನು ಖರೀದಿಸಿದರು. ದೇಶೀಯ ಹೂಡಿಕೆದಾರರು ಹೆಚ್ಚಿನ ಮೌಲ್ಯಕ್ಕೆ ಷೇರುಗಳನ್ನು ಮಾರಿ ಲಾಭ ಮಾಡಿದರು. ಜೂನ್ 4ರಂದು ಷೇರು ಮಾರುಕಟ್ಟೆ ಕುಸಿದಾಗ ವಿದೇಶೀ ಹೂಡಿಕೆದಾರರು ಕಡಿಮೆ ಬೆಲೆಗೆ ಷೇರು ಮಾರಿದರು. ದೇಶೀಯ ಹೂಡಿಕದಾರರು ಮೋದಿ ಸರ್ಕಾರ ಮರಳಿ ಬರುವ ನಿರೀಕ್ಷೆಯಲ್ಲಿ ಷೇರು ಖರೀದಿಸಿದರು. ಇಲ್ಲಿ ಭಾರತೀಯ ಹೂಡಿಕೆದಾರರು ಲಾಭ ಮಾಡಿಕೊಂಡಿದ್ದಾರೆ,’ ಎಂದು ಪೀಯೂಶ್ ಗೋಯಲ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ