ಗ್ಯಾರಂಟಿ ಪೂರೈಕೆಗೆ ಹಣ ಹೊಂದಿಸಲು ಸಿದ್ದರಾಮಯ್ಯ ಸರ್ಕಾರ ಕಸರತ್ತು; ಆದಾಯ ಹೆಚ್ಚಿಸಲು ಸಲಹೆ ನೀಡಲಿರುವ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್

|

Updated on: Jun 20, 2024 | 4:45 PM

Boston Consulting Group works with Karnataka govt to kick up revenue: ಐದು ಗ್ಯಾರಂಟಿ ಯೋಜನೆಗಳನ್ನು ಪೂರ್ಣ ಅವಧಿ ಮುಂದುವರಿಸಲು ಕಟಿಬದ್ಧವಾಗಿರುವ ಸರ್ಕಾರ, ಅದಕ್ಕಾಗಿ ಹಣ ಹೊಂದಿಸಲು ಬಹಳ ಶ್ರಮ ಪಡುತ್ತಿದೆ. ರಾಜ್ಯದಲ್ಲಿ ಹಣ ಸೋರಿಕೆ ತಡೆಯಲು, ಆದಾಯವನ್ನು ಗರಿಷ್ಠವಾಗಿ ಹೆಚ್ಚಿಸಲು ಇರುವ ಮಾರ್ಗೋಪಾಯಗಳನ್ನು ಅವಲೋಕಿಸುತ್ತಿದೆ. ಅದಕ್ಕಾಗಿ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಜೊತೆ ಸರ್ಕಾರ ಕೈ ಜೋಡಿಸಿದೆ.

ಗ್ಯಾರಂಟಿ ಪೂರೈಕೆಗೆ ಹಣ ಹೊಂದಿಸಲು ಸಿದ್ದರಾಮಯ್ಯ ಸರ್ಕಾರ ಕಸರತ್ತು; ಆದಾಯ ಹೆಚ್ಚಿಸಲು ಸಲಹೆ ನೀಡಲಿರುವ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್
ಸಿದ್ದರಾಮಯ್ಯ
Follow us on

ಬೆಂಗಳೂರು, ಜೂನ್ 20: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ (Karnataka government) ಈಗ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುವುದು ಸವಾಲಿನ ಕೆಲಸವಾಗಿದೆ. ಐದು ವರ್ಷ ಶತಾಯಗತಾಯ ಗ್ಯಾರಂಟಿ ಸ್ಕೀಮ್​ಗಳನ್ನು ಮುಂದುವರಿಸಲು ಸಂಕಲ್ಪ ತೊಟ್ಟಿರುವ ಸಿಎಂ ಸಿದ್ದರಾಮಯ್ಯ (Siddaramaiah), ಈ ಯೋಜನೆಗಳಿಗೆ ಹಣ ಹೊಂದಿಸಲು ಸಕಲ ದಾರಿಗಳನ್ನೂ ಅವಲೋಕಿಸುತ್ತಿದ್ದಾರೆ. ಹೆಚ್ಚುವರಿ ಅಬಕಾರಿ ಸುಂಕ, ಗೈಡೆನ್ಸ್ ವ್ಯಾಲ್ಯೂ ಹೆಚ್ಚಳದಿಂದ ಹಿಡಿದು ಪೆಟ್ರೋಲ್ ದರ ಏರಿಕೆವರೆಗೆ ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಂಡಿದೆ. ಆದರೂ 60,000 ಕೋಟಿ ರೂಗೂ ಹೆಚ್ಚು ವೆಚ್ಚ ಬೇಡುವ ಈ ಗ್ಯಾರಂಟಿ ಸ್ಕೀಮ್​ಗಳಿಗೆ ಹಣ ಹೊಂದಿಸಲು ಕಷ್ಟವಾಗುತ್ತಿದೆ. ಸರ್ಕಾರ ವರ್ಷಕ್ಕೆ ಮಾಡುತ್ತಿರುವ ಸಾಲ ಒಂದು ಲಕ್ಷ ರೂ ಗಡಿ ದಾಟಿದೆ. ರಾಜ್ಯದಲ್ಲಿ ಆದಾಯ ಹೆಚ್ಚಿಸಿ ಬೊಕ್ಕಸ ತುಂಬಿಸಬಲ್ಲಂತಹ ಮಾರ್ಗೋಪಾಯಗಳನ್ನು ಸರ್ಕಾರ ಹುಡುಕುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಖಾಸಗಿ ಕನ್ಸಲ್ಟಿಂಗ್ ಸಂಸ್ಥೆಯಾದ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್​ನ (BCG) ನೆರವು ಯಾಚಿಸಿದೆ.

ಮಾರ್ಚ್ ತಿಂಗಳಲ್ಲೇ ಸರ್ಕಾರ ಪ್ರೈವೇಟ್ ಕನ್ಸಲ್ಟೆಂಟ್​ನ ಸಹಾಯ ಪಡೆಯಲು ನಿರ್ಧರಿಸಿತ್ತು. ರಾಜ್ಯದಲ್ಲಿ ತೆರಿಗೆ ಮತ್ತು ತೆರಿಗೆಯೇತರ ಆದಾಯಗಳನ್ನು ಹೆಚ್ಚಿಸುವುದು; ವೆಚ್ಚಗಳನ್ನು ಕಡಿಮೆ ಮಾಡುವುದು; ಸರ್ಕಾರ ಖಾಸಗಿ ಸಹಭಾಗಿತ್ವ ಯೋಜನೆಗಳಿಗೆ ಪುಷ್ಟಿ ಕೊಡುವುದು; ತಂತ್ರಜ್ಞಾನ ಬಳಕೆ ಮೂಲಕ ಹಣ ಸೋರಿಕೆ ತಡೆಯುವುದು, ಆಸ್ತಿಗಳನ್ನು ಮಾನಿಟೈಸ್ ಮಾಡುವುದು ಇವೇ ವಿಚಾರಗಳಲ್ಲಿ ಬಿಸಿಜಿ ಸಲಹೆಗಳನ್ನು ನೀಡಲಿದೆ.

ಬಹಳ ಬಂಡವಾಳ ಬೇಡುವ ಪ್ರಮುಖ ಇಲಾಖೆಗಳಾದ ನೀರಾವರಿ, ವಿದ್ಯುತ್, ಸಾರ್ವಜನಿಕ ಕಾಮಗಾರಿ, ಗ್ರಾಮೀಣ ಅಭಿವೃದ್ಧಿ ಇಲ್ಲಿ ವೆಚ್ಚ ಕಡಿತ, ಆದಾಯ ಹೆಚ್ಚಳ ಇತ್ಯಾದಿಯನ್ನು ಹೇಗೆ ಮಾಡಬಹುದು ಎಂಬುದನ್ನು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ತಿಳಿಸಲಿದೆ.

ಇದನ್ನೂ ಓದಿ: ಸಚಿವ ನಾಗೇಂದ್ರ ರಾಜಿನಾಮೆ ಬಳಿಕ ಕ್ರೀಡಾ, ಪರಿಶಿಷ್ಟ ಪಂಗಡಗಳ ಇಲಾಖೆ ಸಿಎಂ ಕೈಯಲ್ಲಿ, ಅಧಿಕಾರಿಗಳಿಗೆ ಸಿದ್ದರಾಮಯ್ಯ ಕ್ಲಾಸ್​​​

ಬಿಸಿಜಿಗೆ ಹೆಚ್ಚೂಕಡಿಮೆ 10 ಕೋಟಿ ರೂ ಶುಲ್ಕ ಪಾವತಿಸಲಿರುವ ಸರ್ಕಾರ

ಮಾರ್ಚ್ ತಿಂಗಳಲ್ಲಿ ಸರ್ಕಾರ ಇಒಐ (ಎಕ್ಸ್​ಪ್ರೆಸ್ ಆಫ್ ಇಂಟರೆಸ್ಟ್) ಆಹ್ವಾನಿಸಿತ್ತು. ಬಿಸಿಜಿ, ಕೆಪಿಎಂಜಿ ಮತ್ತು ಇ ಅಂಡ್ ವೈ (ಅರ್ನ್ಸ್ಟ್ ಅಂಡ್ ಯಂಗ್) ಸಂಸ್ಥೆಗಳು ಇಒಐ ಸಲ್ಲಿಸಿದ್ದವು. ಈ ಪೈಕಿ ಬಿಸಿಜಿ ಮಾತ್ರವೇ ಅಂತಿಮ ಟೆಂಡರ್ ಸಲ್ಲಿಸಿದ್ದು. ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಸಂಸ್ಥೆ ಆರು ತಿಂಗಳ ಕಾಲ ರಾಜ್ಯ ಹಣಕಾಸು ಇಲಾಖೆ ಜೊತೆ ಕೂತು ಕೆಲಸ ಮಾಡಲಿದೆ. ಇದಕ್ಕೆ ಅದು ಪಡೆಯಲಿರುವ ಶುಲ್ಕ 9.5 ಕೋಟಿ ರೂ ಎನ್ನಲಾಗಿದೆ. ಮೂಲಗಳ ಪ್ರಕಾರ ಮುಂಬರುವ ರಾಜ್ಯ ಬಜೆಟ್​​ನಲ್ಲಿ ಬಿಸಿಜಿಯ ಕೆಲ ಸಲಹೆಗಳನ್ನು ಜಾರಿಗೆ ತರುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ