ಸಚಿವ ನಾಗೇಂದ್ರ ರಾಜಿನಾಮೆ ಬಳಿಕ ಕ್ರೀಡಾ, ಪರಿಶಿಷ್ಟ ಪಂಗಡಗಳ ಇಲಾಖೆ ಸಿಎಂ ಕೈಯಲ್ಲಿ, ಅಧಿಕಾರಿಗಳಿಗೆ ಸಿದ್ದರಾಮಯ್ಯ ಕ್ಲಾಸ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಗತಿ ಪರೀಶಲನಾ ಸಭೆ ನಡೆಸಿದರು. ಸಭೆಯಲ್ಲಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಸಚಿವ ಬಿ. ನಾಗೇಂದ್ರ ರಾಜಿನಾಮೆ ನೀಡುತ್ತಿದ್ದಂತೆ ಇವರು ನೋಡಿಕೊಳ್ಳುತ್ತಿದ್ದ ಈ ಎರಡೂ ಇಲಾಖೆ ಸಿಎಂ ಸಿದ್ದರಾಮಯ್ಯ ಬಳಿ ಇವೆ.
ಬೆಂಗಳೂರು, ಜೂನ್ 19: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ (Valmiki Scheduled Tribes Development) ನಡೆದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರ ತಲೆದಂಡವಾಗಿದೆ. ಸಚಿವ ಬಿ. ನಾಗೇಂದ್ರ (B Nagendra) ರಾಜಿನಾಮೆ ನೀಡುತ್ತಿದ್ದಂತೆ ಇವರು ನೋಡಿಕೊಳ್ಳುತ್ತಿದ್ದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಬಳಿಯೇ ಇವೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡೂ ಇಲಾಖೆ ಪ್ರಗತಿ ಪರೀಶಲನಾ ಸಭೆ ನಡೆಸಿದರು.
ಈ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಆಶ್ರಮ ಶಾಲೆಯ ಮಕ್ಕಳು, ಬಡವರು, ದಲಿತ ಮಕ್ಕಳ ಶಿಕ್ಷಣದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಕ್ಕೆ, ಆಶ್ರಮ ಶಾಲೆಗಳಿಗೆ ರಾತ್ರಿ ವೇಳೆ ಭೇಟಿ ನೀಡಿ ವ್ಯವಸ್ಥೆ ಗಮನಿಸದ್ದಕ್ಕೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡರು.
ದಲಿತ, ಬುಡಕಟ್ಟು, ಬಡವರ ಮಕ್ಕಳ ಶಿಕ್ಷಣಕ್ಕೆ, ಹಾಸ್ಟೆಲ್ಗಳಿಗೆ ಇಷ್ಟೆಲ್ಲ ಹಣ, ಸವಲತ್ತು ಕೊಡುತ್ತಿದ್ದರೂ ಮಕ್ಕಳ ಶೈಕ್ಷಣಿಕ ಮಟ್ಟ ಏಕೆ ಏರಿಕೆ ಆಗುತ್ತಿಲ್ಲ? ಈ ಬಗ್ಗೆ ನಿರಂತರ ನಿಗಾ ಏಕೆ ವಹಿಸುತ್ತಿಲ್ಲ? ಫಲಿತಾಂಶದಲ್ಲಿ ಏರಿಕೆ ಏಕೆ ಆಗುತ್ತಿಲ್ಲ ಎಂದು ಅಧಿಕಾರಿಗಳನ್ನು ತೀವ್ರವಾಗಿ ಪ್ರಶ್ನಿಸಿದರು.
ನಿಯಮಿತವಾಗಿ ಹಾಸ್ಟೆಲ್ಗಳಿಗೆ, ಆಶ್ರಮ ಶಾಲೆಗಳಿಗೆ ಭೇಟಿ ನೀಡಬೇಕು. ನಿರಂತರವಾಗಿ ಗುಣಮಟ್ಟ ಹೆಚ್ಚಿಸಲು ಶ್ರಮಿಸಬೇಕು ಎಂದು ಖಡಕ್ ಸೂಚನೆ ನೀಡಿದರು.
ಇದನ್ನೂ ಓದಿ: ಬಾರ್, ಚಿನ್ನದಂಗಡಿಯ ಖಾತೆಗಳಿಗೆ ವರ್ಗವಾಗಿತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ
ನೀವು ಬಡವರು, ದಲಿತರು, ಆದಿವಾಸಿ, ಬುಡಕಟ್ಟು ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಲು ಆಗದಿದ್ದರೆ ನೀವು ಸೇವೆಯಲ್ಲಿರಲು unfit ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಇನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯುವ ಸಬಲೀಕರಣ, ಕ್ರೀಡಾ ಇಲಾಖೆ ಅಧಿಕಾರಿಗಳ ವಿರುದ್ಧ ಗರಂ ಆದರು. ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು. ಕ್ರೀಡಾಂಗಣಗಳ ನಿರ್ವಹಣೆ ಸೂಕ್ತ ರೀತಿಯಲ್ಲಿ ಆಗಿಲ್ಲ. ಕಾಮಗಾರಿಗಳನ್ನ ಸರಿಯಾಗಿ ವೀಕ್ಷಿಸುತ್ತಿಲ್ಲ ಎಂದು ದೂರು ಬಂದ ಹಿನ್ನೆಲೆಯಲ್ಲಿ ಕ್ರೀಡಾ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ಅವರನ್ನು ಅಮಾನತು ಮಾಡುವಂತೆ ಸೂಚಿಸಿದರು.
ಸಭೆಯಲ್ಲಿ ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ನಿರ್ದೇಶಕ ಕಲ್ಲೇಶ್ ಸೇರಿ ಇತರೆ ಅಧಿಕಾರಿಗಳು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹಮದ್ ಉಪಸ್ಥಿತರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:08 am, Wed, 19 June 24