ಜಪಾನೀ ನಿಕ್ಕೇ ಸೂಚಿಯ ಐತಿಹಾಸಿಕ ಕುಸಿತಕ್ಕೆ ಕಾರಣವಾದ ಕ್ಯಾರಿ ಟ್ರೇಡ್ ಅಂದರೆ ಏನು?
Japan's Carry Trade and its global effects: ಇವತ್ತು ಷೇರು ಮಾರುಕಟ್ಟೆ ಪಾಸಿಟಿವ್ ವೈಬ್ನಲ್ಲಿದೆ. ಆದರೆ, ಅನಿಶ್ಚಿತ ಸ್ಥಿತಿಯಂತೂ ಮುಂದುವರಿದಿದೆ. ಕಳೆದ ಕೆಲ ದಿನಗಳಿಂದ ನಿನ್ನೆಯವರೆಗೂ ಷೇರು ಮಾರುಕಟ್ಟೆಯಲ್ಲಿ ರಕ್ತದೋಕುಳಿಯೇ ಆಗಿಹೋಗಿತ್ತು. ಜಾಗತಿಕ ಷೇರು ಮಾರುಕಟ್ಟೆಗಳು ತಲ್ಲಣಗೊಂಡಿದ್ದವು. ಜಪಾನ್ನ ನಿಕ್ಕೇ ಸೂಚ್ಯಂಕ ಅಧೋಗತಿಗೆ ಇಳಿದಿತ್ತು. ಕ್ಯಾರಿ ಟ್ರೇಡ್ ಮತ್ತು ಯೆನ್ ಕರೆನ್ಸಿಯಲ್ಲಿನ ವ್ಯತ್ಯಯ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ನವದೆಹಲಿ, ಆಗಸ್ಟ್ 6: ಜಾಗತಿಕವಾಗಿ ವಿವಿಧ ದೇಶಗಳ ಷೇರು ಮಾರುಕಟ್ಟೆಗಳು ಕಳೆದ ಕೆಲ ದಿನ ಭಾರೀ ನಷ್ಟ ಕಂಡಿವೆ. ಜಪಾನ್ನ ನಿಕ್ಕೇ, ಭಾರತದ ಸೆನ್ಸೆಕ್ಸ್, ನಿಫ್ಟಿ, ಕೊರಿಯಾ, ಚೀನಾ, ಅಮೆರಿಕದ ಸೂಚ್ಯಂಕಗಳು ಸಾಲು ಸಾಲಾಗಿ ಹಿನ್ನಡೆ ಕಂಡವು. ಭಾರತದ ಹೂಡಿಕೆದಾರರು ಮಾಡಿಕೊಂಡ ನಷ್ಟ ಬರೋಬ್ಬರಿ 10 ಲಕ್ಷ ಕೋಟಿ ರುಪಾಯಿ. ಜಪಾನ್ನ ಟೋಕಿಯೋ ಸ್ಟಾಕ್ ಎಕ್ಸ್ಚೇಂಜ್ನ ನಿಕ್ಕೆ ಸೂಚ್ಯಂಕ ಶೇ. 12ರಷ್ಟು ಕುಸಿತ ಕಂಡಿತು. ನಿಕ್ಕೆ ಇಷ್ಟೊಂದು ಭೀಕರವಾಗಿ ಕುಸಿತ ಕಂಡು ಕೆಲ ದಶಕಗಳೇ ಆಗಿದ್ದವು. ಇವತ್ತು ಜಪಾನ್, ಭಾರತವನ್ನೂ ಒಳಗೊಂಡಂತೆ ಹೆಚ್ಚಿನ ಏಷ್ಯನ್ ಷೇರು ಮಾರುಕಟ್ಟೆಗಳು ಫೀನಿಕ್ಸ್ನಂತೆ ಎದ್ದಿವೆ. ನಿಕ್ಕೇ ಇಂಡೆಕ್ಸ್ ಗರಿಗೆದರಿದೆ. ಭಾರತದ ಷೇರು ಸೂಚ್ಯಂಕಗಳೂ ಇಂದು ಹಸಿರಿನಲ್ಲಿವೆ. ಆದರೆ ಮಾರುಕಟ್ಟೆಯ ಅನಿಶ್ಚಿತತೆ ಮತ್ತು ಸಂದಿಗ್ಧತೆಯ ಸ್ಥಿತಿ ಇನ್ನೂ ಮುಗಿದಿಲ್ಲ ಎನ್ನುತ್ತಾರೆ ತಜ್ಞರು.
ಇದೇನೇ ಇರಲಿ, ಷೇರು ಮಾರುಕಟ್ಟೆ ಕೆಲ ದಿನಗಳ ಕಾಲ ಬಲವಾಗಿ ಅಲುಗಾಡಲು ಕೆಲ ಪ್ರಮುಖ ಕಾರಣಗಳನ್ನು ಗುರುತಿಸಬಹುದು. ಮೊದಲನೆಯದು, ಅಮೆರಿಕದ ಆರ್ಥಿಕ ಆರೋಗ್ಯದ ಬಗ್ಗೆ ಸಂದೇಹ ಮೂಡಿಸುವ ಅಂಕಿ ಅಂಶಗಳು; ಎರಡನೆಯದು ಜಪಾನ್ ದೇಶದ ಕ್ಯಾರಿ ಟ್ರೇಡ್ ಮತ್ತು ಯೆನ್ ಕರೆನ್ಸಿ ವಿಚಾರ.
ಇದನ್ನೂ ಓದಿ: ಭಾರತದಲ್ಲಿ ದಿಢೀರನೆ ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣವೇನು?
ಏನಿದು ಜಪಾನ್ನ ಕ್ಯಾರಿ ಟ್ರೇಡ್?
ಕಡಿಮೆ ಬಡ್ಡಿದರ ಇರುವ ಕರೆನ್ಸಿಯಲ್ಲಿ ಸಾಲ ಪಡೆದು, ಅಧಿಕ ರಿಟರ್ನ್ಸ್ ತರಬಲ್ಲ ಕರೆನ್ಸಿಯೊಂದರಲ್ಲಿ ಹೂಡಿಕೆ ಮಾಡುವುದಕ್ಕೆ ಕ್ಯಾರಿ ಟ್ರೇಡ್ ಎನ್ನಬಹುದು. ಜಪಾನ್ ದೇಶದಲ್ಲಿ ಬರೋಬ್ಬರಿ ಮೂವತ್ತು ವರ್ಷಗಳಿಂದ ಬಡ್ಡಿದರ ಶೂನ್ಯದಲ್ಲೇ ಮುಂದುವರಿಸುತ್ತಾ ಬರಲಾಗಿತ್ತು. ಹೂಡಿಕೆದಾರರು ಈ ಬಡ್ಡಿರಹಿತವಾಗಿ ಜಪಾನ್ನಿಂದ ಸಾಲ ಪಡೆದು ಜಾಗತಿಕ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಿ ಲಾಭ ಪಡೆಯುತ್ತಿದ್ದರು.
ಈಗ ಜಪಾನ್ ಸೆಂಟ್ರಲ್ ಬ್ಯಾಂಕ್ ಆದ ಬಿಒಜೆ ಬಡ್ಡಿದರವನ್ನು ಶೇ. 0.25ಕ್ಕೆ ಹೆಚ್ಚಿಸಿತು. ಬಡ್ಡಿರಹಿತವಾಗಿ ಸಾಲ ಪಡೆದವರಿಗೆ ಈಗ ಕ್ಯಾರಿ ಟ್ರೇಡ್ ಸಾಧ್ಯವಾಗದೇನೋ ಎನ್ನುವ ಆತಂಕ ಎದುರಾಯಿತು. ಜಪಾನ್ನ ಈ ಕ್ಯಾರಿ ಟ್ರೇಡ್ಗೆ ಪುಷ್ಟಿ ಕೊಟ್ಟಿದ್ದು ಈ ಶೂನ್ಯ ಬಡ್ಡಿದರ ಮಾತ್ರವಲ್ಲ, ಅದರ ಯೆನ್ ಕರೆನ್ಸಿ ಕೂಡ ಹೌದು. ಇದು ನಿಜಕ್ಕೂ ಕುತೂಹಲದ ಸಂಯೋಜನೆ.
ಇದನ್ನೂ ಓದಿ: ಫಾಸ್ಟ್ಟ್ಯಾಗ್ ಹೊಸ ನಿಯಮ: ನೀವು ಮಾಡಬೇಕಾದ್ದೇನು, ಅಂತಿಮ ದಿನಾಂಕ ಯಾವಾಗ? ಇಲ್ಲಿದೆ ವಿವರ
ಬಡ್ಡಿದರ ಮತ್ತು ಯೆನ್ ಕರೆನ್ಸಿ ಸಂಯೋಜನೆ ಶಕ್ತಿ ಹೀಗಿದೆ…
ಅಮೆರಿಕದ ಡಾಲರ್ ಎದುರು ಜಪಾನ್ನ ಯೆನ್ ಕರೆನ್ಸಿ ಮೌಲ್ಯ ಸದಾ ಪಾತಾಳದಲ್ಲೇ ಇರುತ್ತದೆ. ಇದು ಕ್ಯಾರಿ ಟ್ರೇಡ್ ಮಾಡುವವರಿಗೆ ಇನ್ನೊಂದು ಪ್ಲಸ್ ಪಾಯಿಂಟ್. ಜಪಾನ್ನ ಬಹಳಷ್ಟು ಕಂಪನಿಗಳು ಮತ್ತು ಹೂಡಿಕೆದಾರರು ತಮ್ಮ ದೇಶದ ಬ್ಯಾಂಕುಗಳಿಂದ ಶೂನ್ಯ ಬಡ್ಡಿದರದಲ್ಲಿ ಸಾಲ ಪಡೆದು ಅಮೆರಿಕ ಮತ್ತಿತರ ಪ್ರಮುಖ ಜಾಗತಿಕ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುತ್ತಾರೆ. ಯೆನ್ ಮೌಲ್ಯ ತಳದಲ್ಲೇ ಇರುವುದರಿಂದ ಹೂಡಿಕೆದಾರರು ಒಳ್ಳೆಯ ಲಾಭವಾಗುತ್ತದೆ.
ಎರಡು ವಾರದ ಹಿಂದೆ ಡಾಲರ್ ಎದುರು ಯೆನ್ ಮೌಲ್ಯ 165 ಇತ್ತು. ಈಗ ಜಪಾನೀ ಬ್ಯಾಂಕು ಬಡ್ಡಿದರ ಹೆಚ್ಚಿಸಿದ ಪರಿಣಾಮಾಗಿ ಯೆನ್ ಮೌಲ್ಯ 145ಕ್ಕೆ ಏರಿದೆ. ಕೇವಲ ಎರಡು ದಿನದಲ್ಲಿ ಇಷ್ಟು ಹೆಚ್ಚಳ ಆಗಿದ್ದು ಗಮನಾರ್ಹ. ಜಪಾನೀ ಹೂಡಿಕೆದಾರರಿಗೆ ಇದು ಆತಂಕದ ಸಂಗತಿ. ಒಂದು ಕಡೆ ಅಮೆರಿಕದ ಮಾರುಕಟ್ಟೆ ಕುಸಿಯುತ್ತಿದೆ, ಮತ್ತೊಂದೆಡೆ ಯೆನ್ ಮೌಲ್ಯ ಹೆಚ್ಚುತ್ತಿದೆ. ಇದು ಅವರಿಗೆ ಡಬಲ್ ಹೊಡೆತ ಕೊಟ್ಟಿತ್ತು. ಇದು ಒಟ್ಟಾರೆ ಕ್ಯಾರಿ ಟ್ರೇಡ್ ಮತ್ತು ಯೆನ್ ಪ್ರಭಾವ ತಂದಿತ್ತ ಫಲ ಎಂಬುದು ಕೆಲ ತಜ್ಞರ ಅನಿಸಿಕೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ