PM-KISAN eKYC: ಪಿಎಂ ಕಿಸಾನ್ ಸಮ್ಮಾನ್ ನಿಧಿ ಇ-ಕೆವೈಸಿ ಕೊನೆ ದಿನ ಯಾವುದು ಎಂಬುದನ್ನು ಗಮನಿಸಿ
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಇಕೆವೈಸಿಗೆ ಕೊನೆ ದಿನ ಯಾವುದು ಎಂಬ ಬಗ್ಗೆ ವಿವರಣೆ ಈ ಲೇಖನದಲ್ಲಿದೆ. ಫಲಾನುಭವಿಗಳು ಈ ಬಗ್ಗೆ ಗಮನ ಹರಿಸಿ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ ಪ್ರಯೋಜನಗಳನ್ನು ಪಡೆಯಲು ರೈತರು ತಮ್ಮ ಇ-ಕೆವೈಸಿಯನ್ನು (eKYC) ಇಂದೇ ಪೂರ್ಣಗೊಳಿಸಬೇಕು. ನೋಯ್ಡಾ ಜಿಲ್ಲಾಡಳಿತವು ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ PM-Kisanನ eKYC ಅನ್ನು ಪೂರ್ಣಗೊಳಿಸಲು ಮಾರ್ಚ್ 25 ಅನ್ನು ಗಡುವು ಎಂದು ನಿಗದಿಪಡಿಸಿದೆ. ಪಿಎಂ-ಕಿಸಾನ್ ಯೋಜನೆಯು ಕೇಂದ್ರೀಯ ವಲಯದ ನೇರ ಲಾಭ ವರ್ಗಾವಣೆ (ಡಿಬಿಟಿ) ಯೋಜನೆಯಾಗಿದ್ದು, ದೇಶಾದ್ಯಂತ ಎಲ್ಲ ಭೂಹಿಡುವಳಿ ರೈತ ಕುಟುಂಬಗಳಿಗೆ ಲಭ್ಯವಿದೆ. ಪಿಎಂ-ಕಿಸಾನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ “PMKISAN ನೋಂದಾಯಿತ ರೈತರಿಗೆ eKYC ಕಡ್ಡಾಯವಾಗಿದೆ” ಎಂಬ ಅಧಿಸೂಚನೆಯನ್ನು ಹೊರಡಿಸಲಾಗಿದೆ. ನೋಯ್ಡಾ ಜಿಲ್ಲೆಯಲ್ಲಿ ರೈತರು ತಮ್ಮ ಇಕೆವೈಸಿಯನ್ನು ಮಾರ್ಚ್ 25 ರೊಳಗೆ ಪೂರ್ಣಗೊಳಿಸಲು ವಿಫಲವಾದರೆ ಅವರು ಏಪ್ರಿಲ್‌ನಲ್ಲಿ ನೇರ ಲಾಭ ವರ್ಗಾವಣೆಗೆ ಅರ್ಹರಾಗಿರುವುದಿಲ್ಲ. ಆದರೆ ದೇಶದ ಉಳಿದ ಭಾಗಗಳ ರೈತರು 11ನೇ ಕಂತಿನ ಭಾಗವಾಗಿ ತಮ್ಮ ಬ್ಯಾಂಕ್ ಖಾತೆಗಳಲ್ಲಿ ರೂ. 2,000 ಪಡೆಯಲು ಮಾರ್ಚ್ 31ರ ಮೊದಲು ಪಿಎಂ ಕಿಸಾನ್ ಕೆವೈಸಿ ಪೂರ್ಣಗೊಳಿಸಬೇಕು.
ಇದಕ್ಕೂ ಮೊದಲು ಈ ವರ್ಷದ ಜನವರಿಯಲ್ಲಿ ಪಿಎಂ-ಕಿಸಾನ್ ಅಡಿ 10ನೇ ಕಂತಿನ ಆರ್ಥಿಕ ಪ್ರಯೋಜನವನ್ನು ಪಿಎಂ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದರು. ಇದರ ಅಡಿಯಲ್ಲಿ 10 ಕೋಟಿಗೂ ಹೆಚ್ಚು ಫಲಾನುಭವಿ ರೈತ ಕುಟುಂಬಗಳಿಗೆ ರೂ. 20,000 ಕೋಟಿಗಿಂತ ಹೆಚ್ಚು ವರ್ಗಾಯಿಸಲಾಯಿತು. ಕಾರ್ಯಕ್ರಮದ ಸಮಯದಲ್ಲಿ ಸುಮಾರು 351 ರೈತ ಉತ್ಪಾದಕ ಸಂಸ್ಥೆಗಳಿಗೆ (ಎಫ್‌ಪಿಒ) ರೂ. 14 ಕೋಟಿಗೂ ಹೆಚ್ಚು ಇಕ್ವಿಟಿ ಅನುದಾನವನ್ನು ಪ್ರಧಾನಿ ಬಿಡುಗಡೆ ಮಾಡಿದ್ದರು. ಇದು 1.24 ಲಕ್ಷಕ್ಕೂ ಹೆಚ್ಚು ರೈತರಿಗೆ ಪ್ರಯೋಜನವನ್ನು ನೀಡುತ್ತದೆ.
ಪಿಎಂ-ಕಿಸಾನ್ ಅಡಿಯಲ್ಲಿ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಸಂಬಂಧಿಸಿದ ವೆಚ್ಚಗಳನ್ನು ಮತ್ತು ದೇಶೀಯ ಅಗತ್ಯಗಳನ್ನು ನೋಡಿಕೊಳ್ಳಲು ಅನುಕೂಲವಾಗುವಂತೆ, ಹೆಚ್ಚಿನ ಆದಾಯದ ಸ್ತರಗಳಿಗೆ ಸಂಬಂಧಿಸಿದ ಕೆಲವರನ್ನು ಹೊರಗಿಡುವ ಮಾನದಂಡಗಳಿಗೆ ಒಳಪಟ್ಟು, ದೇಶದಾದ್ಯಂತ ಎಲ್ಲ ಭೂಹಿಡುವಳಿ ರೈತ ಕುಟುಂಬಗಳಿಗೆ ವಾರ್ಷಿಕ ರೂ. 6,000 ಆರ್ಥಿಕ ನೆರವು ನೀಡಲಾಗುತ್ತದೆ. ಈ ಮೊತ್ತವನ್ನು 4-ತಿಂಗಳಿಗೊಮ್ಮೆ ಎಂಬಂತೆ ಮೂರು ಕಂತುಗಳಲ್ಲಿ ತಲಾ ರೂ. 2000 ನೇರವಾಗಿ ರಾಜ್ಯ/UT ಸರ್ಕಾರಗಳು ಗುರುತಿಸಿದ ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ.
ಇ-ಕೆವೈಸಿ ಪ್ರಕ್ರಿಯೆಯನ್ನು ಹೇಗೆ ಪೂರ್ಣಗೊಳಿಸುವುದು ಎಂಬ ವಿವರ ಇಲ್ಲಿದೆ?
ಹಂತ 1 – PM-Kisanನ ಅಧಿಕೃತ ವೆಬ್‌ಸೈಟ್ www.pmkisan.gov.inಗೆ ಭೇಟಿ ನೀಡಿ.
ಹಂತ 2 – ಆಧಾರ್ ಆಧಾರಿತ ಜೋಡಣೆಗಾಗಿ ಫಾರ್ಮರ್ ಕಾರ್ನರ್‌ನಲ್ಲಿ eKYC ಕ್ಲಿಕ್ ಮಾಡಿ. ಫಾರ್ಮರ್ ಕಾರ್ನರ್ ವೆಬ್‌ಸೈಟ್‌ನ ಬಲಭಾಗದಲ್ಲಿದೆ.
ಹಂತ 3 – eKYC ಮೇಲೆ ಕ್ಲಿಕ್ ಮಾಡಿದ ನಂತರ, ನಿಮ್ಮನ್ನು ಹೊಸ ಪುಟಕ್ಕೆ ನಿರ್ದೇಶಿಸಲಾಗುತ್ತದೆ. ಆಧಾರ್ ಕಾರ್ಡ್ ಸಂಖ್ಯೆ, ಕ್ಯಾಪ್ಚಾ ಕೋಡ್ ನಮೂದಿಸಿ ಮತ್ತು ಹುಡುಕಾಟ ಕ್ಲಿಕ್ ಮಾಡಿ.
ಹಂತ 4 – ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಜೋಡಣೆ ಮಾಡಲಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಹಂತ 5 – OTP ಪಡೆಯಿರಿ ಮತ್ತು ಅದನ್ನು ನಮೂದಿಸಿ.
ಹಂತ 6 – ‘ಸಲ್ಲಿಸು’ ಕ್ಲಿಕ್ ಮಾಡಿ, KYC ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ.
ಇದನ್ನೂ ಓದಿ: PM Kisan Yojana: ಪಿಎಂ ಕಿಸಾನ್ ಯೋಜನೆ ಫಲಾನುಭವಿ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಹೇಗೆ? ಇಲ್ಲಿದೆ ವಿವರಣೆ