
ನೀವು ಬ್ಯಾಂಕ್ಗೆ ಹೋದಾಗ ಅಲ್ಲಿರುವ ಸಿಬ್ಬಂದಿ ನಿಮ್ಮ ಸಮಸ್ಯೆ ಕೇಳಲು ನಿರಾಸಕ್ತಿ ತೋರಬಹುದು, ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಸಿಡುಕಬಹುದು. ಅಥವಾ ಈಗ ಬೇಡ, ಊಟದ ನಂತರ ಬನ್ನಿ ಎನ್ನುವ ಮಾತು ಹೇಳಬಹುದು. ಅವರೇ ಗೊತ್ತುಪಡಿಸಿದ ಸಮಯಕ್ಕೆ ಹೋದಾಗ ಅವರು ಇಲ್ಲದೇ ಇರಬಹುದು. ಹಲವು ಮಂದಿಗೆ ಬ್ಯಾಂಕುಗಳಲ್ಲಿ ಇಂತಹ ಅನುಭವ ಆಗಿದ್ದಿರುತ್ತದೆ. ಆದರೆ, ಬ್ಯಾಂಕುಗಳ ಸಿಬ್ಬಂದಿ ಗ್ರಾಹಕರೊಂದಿಗೆ ಈ ರೀತಿಯೆಲ್ಲಾ ನಡೆದುಕೊಳ್ಳುವಂತಿಲ್ಲ. ಗ್ರಾಹಕರ ಹಿತ ರಕ್ಷಿಸಲು ಆರ್ಬಿಐ (RBI) ಕೆಲ ಕಠಿಣ ನಿಯಮಗಳನ್ನು ಹಾಕಿದೆ. ಗ್ರಾಹಕರಿಗೆ ಹೆಚ್ಚಿನ ಹಕ್ಕು ನೀಡಿದೆ. ಗ್ರಾಹಕರ ಸೇವೆಯಲ್ಲಿ ಬ್ಯಾಂಕ್ ನೌಕರರು ನಿರ್ಲಕ್ಷ್ಯ ತೋರಿದರೆ ಅಂಥವರ ಮೇಲೆ ತತ್ಕ್ಷಣವೇ ಕ್ರಮ ತೆಗೆದುಕೊಳ್ಳಬಹುದು.
ಒಬ್ಬ ಬ್ಯಾಂಕ್ ಉದ್ಯೋಗಿ ಕರ್ತವ್ಯದ ಸಮಯದಲ್ಲಿ ನಿಮ್ಮ ಕೆಲಸವನ್ನು ಮಾಡಲು ಹಿಂಜರಿಯುತ್ತಿದ್ದರೆ ಅಥವಾ ಅನಗತ್ಯವಾಗಿ ನಿಮ್ಮನ್ನು ಕಾಯುವಂತೆ ಮಾಡುತ್ತಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ಅವರ ವಿರುದ್ಧ ದೂರು ದಾಖಲಿಸುವ ಅವಕಾಶ ಇರುತ್ತದೆ. ಈ ಮೂಲಕ ಆ ಉದ್ಯೋಗಿಯ ವಿರುದ್ಧ ಕ್ರಮ ಜರುಗುವಂತೆ ಮಾಡಬಹುದು.
ಗ್ರಾಹಕರಿಗೆ ತಮ್ಮ ಹಕ್ಕುಗಳ ಬಗ್ಗೆ ಮಾಹಿತಿ ಕೊರತೆ ಇರುವುದರಿಂದ ಈ ರೀತಿ ಬ್ಯಾಂಕ್ ಕಚೇರಿಯಲ್ಲಿ ಉದ್ಯೋಗಿಗಳು ನಿರ್ಲಕ್ಷ್ಯತನ ತೋರಲು ಎಡೆ ಮಾಡಿಕೊಡಬಹುದು. ಬ್ಯಾಂಕ್ ಉದ್ಯೋಗಿ ಸರಿಯಾಗಿ ವರ್ತಿಸದಿದ್ದರೆ, ಗ್ರಾಹಕರು ನೇರವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಳಿ ದೂರನ್ನು ನೀಡಬುದು. ಬ್ಯಾಂಕಿಂಗ್ ಒಂಬುಡ್ಸ್‌ಮನ್‌ಗೆ ದೂರು ನೀಡುವುದು ಉತ್ತಮ. ಆಗ ನಿಮ್ಮ ಸಮಸ್ಯೆ ತಕ್ಷಣವೇ ಬಗೆಹರಿಯುತ್ತದೆ.
ಇದನ್ನೂ ಓದಿ: ಭಾರತದಲ್ಲಿ ಆನ್ಲೈನ್ ಶಾಪಿಂಗ್ ಮಾಡೋರು ನೂರರಲ್ಲಿ 25 ಕೂಡ ಇಲ್ಲವಾ? ಇಲ್ಲಿದೆ ಮೆಕಿನ್ಸೀ ವರದಿ
ಆದಾಗ್ಯೂ, ದೂರನ್ನು ನೇರವಾಗಿ RBI ಗೆ ಕೊಂಡೊಯ್ಯುವ ಮೊದಲು, ನೀವು ಬ್ಯಾಂಕ್ ಮ್ಯಾನೇಜರ್ ಅಥವಾ ನೋಡಲ್ ಅಧಿಕಾರಿಯನ್ನು ಸಂಪರ್ಕಿಸಿ ಬ್ಯಾಂಕ್ ಉದ್ಯೋಗಿ ತನ್ನ ಕೆಲಸ ಮಾಡಲು ವಿಳಂಬ ಮಾಡುತ್ತಿರುವ ಬಗ್ಗೆ ದೂರು ನೀಡಬಹುದು.
ಬ್ಯಾಂಕ್ ಗ್ರಾಹಕರು ಇಂತಹ ಸಮಸ್ಯೆಗಳ ಕುರಿತು ದೂರುಗಳನ್ನು ಕುಂದುಕೊರತೆ ಪರಿಹಾರ ಸಂಖ್ಯೆಯಲ್ಲಿ (Grievance Redressal) ನೋಂದಾಯಿಸಬಹುದು. ಬಹುತೇಕ ಪ್ರತಿಯೊಂದು ಬ್ಯಾಂಕ್‌ನಲ್ಲಿ ಕುಂದುಕೊರತೆ ಪರಿಹಾರ ವೇದಿಕೆ ಇದ್ದು, ಅದರ ಮೂಲಕ ಸ್ವೀಕರಿಸಿದ ದೂರುಗಳ ಮೇಲೆ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ. ನೀವು ಯಾವುದೇ ಬ್ಯಾಂಕಿನ ಗ್ರಾಹಕರಾಗಿದ್ದರೂ, ಆ ಬ್ಯಾಂಕಿನ ಕುಂದುಕೊರತೆ ಪರಿಹಾರ ಸಂಖ್ಯೆಯಲ್ಲಿ ಉದ್ಯೋಗಿಯ ಬಗ್ಗೆ ದೂರು ನೀಡಬಹುದು. ಇದಲ್ಲದೆ, ಬ್ಯಾಂಕಿನ ಟೋಲ್ ಫ್ರೀ ಸಂಖ್ಯೆಗೆ ಅಥವಾ ಬ್ಯಾಂಕಿನ ಪೋರ್ಟಲ್‌ನಲ್ಲಿ ಕರೆ ಮಾಡುವ ಮೂಲಕ ನೀವು ಆನ್‌ಲೈನ್‌ನಲ್ಲಿಯೂ ದೂರು ನೋಂದಾಯಿಸಬಹುದು.
ನಿರ್ಲಕ್ಷ್ಯತನ ತೋರುತ್ತಿರುವ ಉದ್ಯೋಗಿಯ ವಿರುದ್ಧ ನೀವು ಬ್ಯಾಂಕ್ ಮ್ಯಾನೇಜರ್, ಕಸ್ಟಮರ್ ಗ್ರೀವೆನ್ಸ್ ರೀಡ್ರೆಸಲ್ನಲ್ಲಿ ನೀವು ದೂರು ನೀಡಿದಾಗ್ಯೂ ಯಾವುದೇ ಕ್ರಮ ಜರುಗದಿದ್ದರೆ ನೀವು ನೇರವಾಗಿ ಬ್ಯಾಂಕ್ ಒಂಬುಡ್ಸ್‌ಮನ್‌ಗೆ ದೂರು ಒಯ್ಯುವ ಅವಕಾಶ ಇದೆ. ಸಂಬಂಧಪಟ್ಟ ಬ್ಯಾಂಕ್ನಿಂದ 30 ದಿನಗಳಲ್ಲಿ ಪರಿಹಾರ ಸಿಗದಿದ್ದರೆ ಆರ್ಬಿಐನ ಕಂಪ್ಲೇಂಟ್ ಮ್ಯಾನೇಜ್ಮೆಂಟ್ ಸಿಸ್ಟಂ ಅಥವಾ ಸಿಎಂಎಸ್ನಲ್ಲಿ ದೂರ ಸಲ್ಲಿಸಬಹುದು.
ಇದನ್ನೂ ಓದಿ: ಬ್ಯಾಂಕಲ್ಲಿ ಕ್ಲೇಮ್ ಆಗದ 67,000 ಕೋಟಿ ರೂ ಹಣ ಆರ್ಬಿಐನ ಡಿಇಎ ಫಂಡ್ಗೆ ವರ್ಗಾವಣೆ; ಗ್ರಾಹಕರಿಗೆ ಸಿಗಲ್ವಾ ಹಣ?
ದೂರು ಸಲ್ಲಿಸಲು, ನೀವು cms.rbi.org.in ವೆಬ್‌ಸೈಟ್‌ಗೆ ಲಾಗಿನ್ ಆಗಬೇಕು. ವೆಬ್ಸೈಟ್ನ ಮುಖ್ಯಪುಟದಲ್ಲಿ ನೀಡಲಾದ ಫೈಲ್ ಎ ಕಂಪ್ಲೇಂಟ್ ಆಯ್ಕೆಯನ್ನು ನೀವು ಕ್ಲಿಕ್ ಮಾಡಬೇಕು. ಇದಲ್ಲದೆ, CRPC@rbi.org.in ಗೆ ಇಮೇಲ್ ಕಳುಹಿಸುವ ಮೂಲಕ ಬ್ಯಾಂಕಿಂಗ್ ಒಂಬುಡ್ಸ್‌ಮನ್‌ಗೆ ದೂರು ಸಲ್ಲಿಸಬಹುದು. ಬ್ಯಾಂಕ್ ಗ್ರಾಹಕರ ದೂರುಗಳ ಪರಿಹಾರಕ್ಕಾಗಿ, RBI ಟೋಲ್ ಫ್ರೀ ಸಂಖ್ಯೆ 14448 ಅನ್ನು ಹೊಂದಿದ್ದು, ಸಮಸ್ಯೆಯನ್ನು ಪರಿಹರಿಸಲು ಇದನ್ನು ಬಳಸಬಹುದು. ಬ್ಯಾಂಕಿಂಗ್ ಒಂಬುಡ್ಸ್‌ಮನ್‌ನೊಂದಿಗೆ, ಗ್ರಾಹಕರು ಬ್ಯಾಂಕಿಂಗ್ ಸೇವೆಗಳಲ್ಲಿನ ನ್ಯೂನತೆಗಳ ಬಗ್ಗೆ ಮಾತ್ರವಲ್ಲದೆ ವಿಳಂಬವಾದ ವಹಿವಾಟುಗಳು, UPI ವಹಿವಾಟು ವೈಫಲ್ಯಗಳು ಮತ್ತು ಸಾಲ ಸಂಬಂಧಿತ ಸಮಸ್ಯೆಗಳ ಬಗ್ಗೆಯೂ ಸುಲಭವಾಗಿ ದೂರು ನೀಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ