ಬ್ಯಾಂಕಲ್ಲಿ ಕ್ಲೇಮ್ ಆಗದ 67,000 ಕೋಟಿ ರೂ ಹಣ ಆರ್ಬಿಐನ ಡಿಇಎ ಫಂಡ್ಗೆ ವರ್ಗಾವಣೆ; ಗ್ರಾಹಕರಿಗೆ ಸಿಗಲ್ವಾ ಹಣ?
How to claim money from dormant accounts: ಬ್ಯಾಂಕುಗಳಲ್ಲಿ ಕ್ಲೇಮ್ ಆಗದೇ ಉಳಿದಿರುವ ಗ್ರಾಹಕರ ಡೆಪಾಸಿಟ್ ಹಣವನ್ನು ಆರ್ಬಿಐನ ಡಿಇಎ ಫಂಡ್ಗೆ ರವಾನೆ ಮಾಡಲಾಗುತ್ತದೆ. ಈ ರೀತಿ 2025ರ ಜೂನ್ 30ರವರೆಗೆ 67,000 ಕೋಟಿ ರೂ ಹಣ ವರ್ಗಾವಣೆ ಆಗಿದೆ ಎಂದು ಸರ್ಕಾರದ ದತ್ತಾಂಶ ಹೇಳುತ್ತಿದೆ. ಸರ್ಕಾರಿ ಬ್ಯಾಂಕುಗಳಿಂದಲೇ 58,000 ಕೋಟಿಗೂ ಅಧಿಕ ಮೊತ್ತ ಈ ಫಂಡ್ಗೆ ವರ್ಗಾವಣೆ ಆಗಿದೆ.

ನವದೆಹಲಿ, ಜುಲೈ 28: ಬ್ಯಾಂಕುಗಳಲ್ಲಿ ಕ್ಲೇಮ್ ಆಗದೇ ಉಳಿದಿರುವ ಹಣ (Unclaimed deposit) ದೊಡ್ಡದಿದೆ. ಬೇರೆ ಬೇರೆ ಕಾರಣಗಳಿಗೆ ಗ್ರಾಹಕರು ಈ ಹಣವನ್ನು ಹಿಂಪಡೆದಿರುವುದಿಲ್ಲ. ಇವುಗಳಲ್ಲಿ 67,000 ಕೋಟಿ ರೂ ಮೊತ್ತದ ಡೆಪಾಸಿಟ್ಗಳನ್ನು ಆರ್ಬಿಐನ ಡಿಇಎ ಫಂಡ್ಗೆ (RBI‘s DEA fund) ರವಾನೆ ಮಾಡಲಾಗಿದೆ. ಇವತ್ತು ಸರ್ಕಾರವು ಸಂಸತ್ತಿಗೆ ನೀಡಿರುವ ಮಾಹಿತಿಯಿಂದ ಈ ಅಂಶ ಬೆಳಕಿಗೆ ಬಂದಿದೆ. ಈ ದತ್ತಾಂಶದ ಪ್ರಕಾರ ಜೂನ್ 30ರವರೆಗೆ ಭಾರತೀಯ ಬ್ಯಾಂಕುಗಳು 67,000 ಕೋಟಿ ರೂ ಮೊತ್ತದಷ್ಟಿರುವ ಅನ್ಕ್ಲೇಮ್ಡ್ ಡೆಪಾಸಿಟ್ಗಳನ್ನು ಡಿಇಎ ಫಂಡ್ಗೆ ಟ್ರಾನ್ಸ್ಫರ್ ಮಾಡಿವೆಯಂತೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಂದೇ ಬ್ಯಾಂಕು 19,329 ಕೋಟಿ ರೂ ಹಣವನ್ನು ವರ್ಗಾವಣೆ ಮಾಡಿದೆ. ಎಸ್ಬಿಐ ಸೇರಿದಂತೆ ಸರ್ಕಾರಿ ಬ್ಯಾಂಕುಗಳಿಂದ ಒಟ್ಟಾರೆ 58,330 ಕೋಟಿ ರೂ ರವಾನೆಯಾಗಿದೆ. ವರ್ಗಾವಣೆ ಆದ ಹಣದಲ್ಲಿ ಹೆಚ್ಚಿನವು ಸರ್ಕಾರಿ ಬ್ಯಾಂಕುಗಳಿಂದಲೇ ಹೋಗಿವೆ.
ಇದನ್ನೂ ಓದಿ: ಬೆಂಗಳೂರಿನ ಎದಿರಿಯಲ್ಎಕ್ಸ್ನಿಂದ ವಿಶ್ವದ ಮೊದಲ ಪೂರ್ಣ ರೀಯೂಸಬಲ್ ರಾಕೆಟ್; ಇಲಾನ್ ಮಸ್ಕ್ಗೂ ಸಾಧ್ಯವಾಗದ ಕೆಲಸ… ಇದು ರಿಯಲ್
ಏನಿದು ಕ್ಲೇಮ್ ಆಗದ ಹಣ?
ಆರ್ಬಿಐ ನಿಯಮಾವಳಿ ಪ್ರಕಾರ ಯಾವುದೇ ಬ್ಯಾಂಕಲ್ಲಿ ಹತ್ತು ವರ್ಷ ಕಾಲ ಆಪರೇಟ್ ಆಗದೇ ಉಳಿದಿರುವ ಅಕೌಂಟ್ಗಳಲ್ಲಿನ ಠೇವಣಿಗಳನ್ನು ಅನ್ಕ್ಲೇಮ್ಡ್ ಡೆಪಾಸಿಟ್ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಆರ್ಡಿ, ಎಫ್ಡಿ, ಸೇವಿಂಗ್ಸ್ ಡೆಪಾಸಿಟ್, ಕ್ಯಾಷ್ ಕ್ರೆಡಿಟ್ ಅಕೌಂಟ್, ಲೋನ್ ಅಕೌಂಟ್ ಇತ್ಯಾದಿ ಸೇರಿವೆ.
ಏನಿದು ಆರ್ಬಿಐ ಡಿಇಎ ಫಂಡ್?
ಡಿಇಎ ಎಂಬುದು ಡೆಪಾಸಿಟರ್ ಎಜುಕೇಶನ್ ಅಂಡ್ ಅವೇರ್ನೆಸ್ ಫಂಡ್. ಬ್ಯಾಂಕುಗಳಲ್ಲಿ ಕ್ಲೇಮ್ ಆಗದೇ ಉಳಿದಿರುವ ಹಣವನ್ನು ಗ್ರಾಹಕರು ಅಥವಾ ನಿರ್ದಿಷ್ಟ ನಾಮಿನಿಗಳು ಅಥವಾ ಅರ್ಹ ವಾರಸುದಾರರಿಗೆ ತಲುಪಿಸುವ ಗುರಿ ಆರ್ಬಿಐನದ್ದು. ಇದಕ್ಕಾಗಿ ಕೇಂದ್ರೀಕೃತ ಪ್ಲಾಟ್ಫಾರ್ಮ್ವೊಂದನ್ನು ಮಾಡಲು ನಿರ್ಧರಿಸಿರುವ ಆರ್ಬಿಐ ಡಿಇಎ ಎನ್ನುವ ಪ್ರತ್ಯೇಕ ಫಂಡ್ ಅನ್ನು ನಿರ್ಮಿಸಿದೆ. ಎಲ್ಲಾ ಬ್ಯಾಂಕುಗಳಲ್ಲಿ ಕ್ಲೇಮ್ ಆಗದ ಹಣವನ್ನು ಈ ಫಂಡ್ಗೆ ವರ್ಗಾವಣೆ ಮಾಡಲಾಗುತ್ತದೆ.
ಇದನ್ನೂ ಓದಿ: ಯುಪಿಐ ಆ್ಯಪ್ನಲ್ಲಿ ಪದೇಪದೇ ಬ್ಯಾಂಕ್ ಬ್ಯಾಲನ್ಸ್ ಚೆಕ್ ಮಾಡುವಿರಾ? ಮಿತಿಮೀರುವಂತಿಲ್ಲ; ಆ. 1ರಿಂದ ಹೊಸ ನಿಯಮ
ಡಿಇಎ ಫಂಡ್ನಲ್ಲಿರುವ ಹಣ ಏನಾಗುತ್ತದೆ?
ಆರ್ಬಿಐನ ಡಿಇಎ ಫಂಡ್ನಲ್ಲಿ ಇರುವ ಹಣ ಸುರಕ್ಷಿತವಾಗಿರುತ್ತದೆ. ಗ್ರಾಹಕರು ತಮ್ಮ ಹಣವನ್ನು ಕ್ಲೇಮ್ ಮಾಡಲು ಯಾವತ್ತಿಗೂ ಸಾಧ್ಯವಿರುತ್ತದೆ. ತಮ್ಮ ಅಕೌಂಟ್ ಇರುವ ಬ್ಯಾಂಕ್ಗೆ ಹೋಗಿ ಅಲ್ಲಿ ಗ್ರಾಹಕರಾಗಲೀ, ನಾಮಿನಿಗಳಾಗಲೀ ಹಣ ಕ್ಲೇಮ್ ಮಾಡಬಹುದು. ಬ್ಯಾಂಕುಗಳು ತತ್ಕ್ಷಣವೇ ಅಕೌಂಟ್ ಸೆಟಲ್ ಮಾಡಬೇಕು. ಇದರ ನಂತರ ಬ್ಯಾಂಕುಗಳು ಆರ್ಬಿಐನ ಡಿಇಎ ಫಂಡ್ನಿಂದ ಆ ಹಣವನ್ನು ಕ್ಲೇಮ್ ಮಾಡಿಕೊಳ್ಳಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




