ಟ್ರೆಂಡಿಂಗ್ನಲ್ಲಿದೆ ಎಚ್ಎಂಟಿ ಗಂಡಬೇರುಂಡ ವಾಚು; ಕನ್ನಡಿಗರ ಈ ಅಚ್ಚುಮೆಚ್ಚಿನ ಕೈಗಡಿಯಾರದ ವಿಶೇಷತೆ ಏನು ಗೊತ್ತಾ?
Kannadigas' nostalgia HMT Gandaberunda watches in the trending: ಗಂಡಬೇರುಂಡ ವಾಚುಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ನಲ್ಲಿವೆ. ಬಹಳಷ್ಟು ಕನ್ನಡಿಗರು ಈ ವಾಚುಗಳ ಬಗ್ಗೆ ಮಾತನಾಡುತ್ತಿದ್ದಾರೆ. ಎಚ್ಎಂಟಿ ತಯಾರಿಸುವ ಗಂಡಬೇರುಂಡ ವಾಚು ಕನ್ನಡಿಗರ ಮೆಚ್ಚಿನದ್ದಾಗಿದೆ. ಎಪ್ಪತ್ತರ ದಶಕದಲ್ಲಿ ತಯಾರಿಕೆಯಾಗತೊಡಗಿದ ಗಂಡಬೇರುಂಡ ವಾಚಿನ ಬಗ್ಗೆ ಮಾಹಿತಿ...

ಬೆಂಗಳೂರು, ಜುಲೈ 28: ಎಚ್ಎಂಟಿಯ ಗಂಡಬೇರುಂಡ ವಾಚುಗಳು (HMT Gandaberunda watch) ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿವೆ. ಹಲವು ಕನ್ನಡಿಗರು ಈ ವಾಚುಗಳ ಫೋಟೋ ಪೋಸ್ಟ್ ಮಾಡಿ ಗರ್ವ ಪಡುತ್ತಿದ್ದಾರೆ. ತಮ್ಮಲ್ಲಿರುವ ಗಂಡಬೇರುಂಡ ವಾಚುಗಳನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತಿದ್ದಾರೆ. ಅಂದಹಾಗೆ ಎಚ್ಎಂಟಿಯ ಗಂಡಬೇರುಂಡ ವಾಚುಗಳ ವಿಶೇಷತೆ ಏನು, ಕನ್ನಡಿಗರಿಗೆ ಈ ವಾಚು ಮೇಲಿನ ಪ್ರೀತಿಗೆ ಕಾರಣ ಏನು ಎನ್ನುವ ವಿವರ ಇಲ್ಲಿದೆ.
ಬೆಂಗಳೂರಿನ ಎಚ್ಎಂಟಿ ಕಂಪನಿ ಒಂದು ಕಾಲದಲ್ಲಿ ಕೈಗಡಿಯಾರ ತಯಾರಿಕೆಯಲ್ಲಿ ಭಾರತದ ನಂಬರ್ ಒನ್ ಎನಿಸಿತ್ತು. ಅದರ ವಾಚು ತುಸು ದುಬಾರಿಯಾದರೂ ಜನರಿಗೆ ಅದು ಪ್ರತಿಷ್ಠೆಯ ಸಂಕೇತ. ಎಪ್ಪತ್ತರ ದಶಕದಲ್ಲಿ ಎಚ್ಎಂಟಿ ಬಿಡುಗಡೆ ಮಾಡಿದ ವಾಚುಗಳಲ್ಲಿ ಗಂಡಬೇರುಂಡ ಬ್ರ್ಯಾಂಡ್ನದ್ದೂ ಒಂದು. ಹಲವು ವಿಶೇಷತೆಗಳು ಈ ಗಂಡಬೇರುಂಡ ವಾಚಿನಲ್ಲಿವೆ.
ಗಂಡಬೇರುಂಡ ವಾಚಿನ ವಿಶೇಷತೆಗಳು..
ಗಂಡಬೇರುಂಡ ಎಂಬುದು ಹಿಂದೂ ಪುರಾಣಗಳಲ್ಲಿ ಕೇಳಿಬರುವ ಎರಡು ಮುಖದ ಭಾರೀ ಗಾತ್ರದ ಪಕ್ಷಿ. ನರಸಿಂಹನ ಒಂದು ರೂಪ ಎಂದು ಪರಿಗಣಿಸಲಾಗುತ್ತದೆ. ಪುರಾಣದಲ್ಲಿ ಬಣ್ಣಿಸಿರುವ ಪ್ರಕಾರ ಗಂಡಬೇರುಂಡವು ಎರಡು ಆನೆಗಳನ್ನು ಹಿಡಿದಿಟ್ಟುಕೊಳ್ಳಬಲ್ಲಷ್ಟು ಶಕ್ತಿಶಾಲಿಯಂತೆ.
ಇದನ್ನೂ ಓದಿ: ಮನುಷ್ಯರ ಮಲ, ಮೂತ್ರ ಖರೀದಿಸುತ್ತಿದೆ ಮೈಕ್ರೋಸಾಫ್ಟ್; ಒಂದು ಟನ್ಗೆ 30 ಸಾವಿರ ರೂ; ಯಾಕೆ ಗೊತ್ತಾ?
ಹಿಂದಿನ ಅನೇಕ ಸಾಮ್ರಾಜ್ಯಗಳು ಗಂಡಬೇರುಂಡವನ್ನು ತಮ್ಮ ಲಾಂಛನವನ್ನಾಗಿ ಮಾಡಿಕೊಂಡಿದ್ದುವು. ಅದರಲ್ಲೂ ಕನ್ನಡಿಗ ರಾಜವಂಶಗಳಾದ ಚಾಳುಕ್ಯರು, ಕದಂಬರು, ವಿಜಯನಗರ, ಮೈಸೂರು ಒಡೆಯರರ ಸಾಮ್ರಾಜ್ಯಗಳಿಗೆ ಗಂಡಬೇರುಂಡವೇ ಲಾಂಛನವಾಗಿತ್ತು. ಈಗ ಕರ್ನಾಟಕ ರಾಜ್ಯದ ಲಾಂಛನದಲ್ಲೂ ಗಂಡಬೇರುಂಡವನ್ನು ಉಳಿಸಿಕೊಳ್ಳಲಾಗಿದೆ.
ಎಚ್ಎಂಟಿ ಸಂಸ್ಥೆಯ ಗಂಡಬೇರುಂಡ ವಾಚಿನಲ್ಲಿ ಹಲವು ವಿಶೇಷತೆಗಳಿವೆ. ಗಂಡಬೇರುಂಡ ಲಾಂಛನದ ಚಿತ್ರ ಇರುವುದು ಮಾತ್ರವಲ್ಲ, ಕನ್ನಡ ಅಂಕಿಗಳನ್ನು ಒಳಗೊಂಡಿದೆ. ಅದರಲ್ಲೂ ವೈನ್ ಬಣ್ಣದ ಗಂಡಬೇರುಂಡ ವಾಚುಗಳಿಗೆ ಆಗಲೇ ಬಹಳ ಡಿಮ್ಯಾಂಡ್ ಇತ್ತು. ಈಗ ವರ್ಷಕ್ಕೆ ಒಮ್ಮೆ ಎಚ್ಎಂಟಿ ಸಂಸ್ಥೆ ಸೀಮಿತ ಸಂಖ್ಯೆಯಲ್ಲಿ ಇಂಥ ವಾಚುಗಳನ್ನು ಬಿಡುಗಡೆ ಮಾಡುತ್ತದೆ. ಕೆಲವೇ ದಿನಗಳಲ್ಲಿ ಎಲ್ಲವೂ ಖಾಲಿಯಾಗುವಷ್ಟು ಬೇಡಿಕೆ ಇದಕ್ಕಿದೆ.
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹಲವು ವ್ಯಕ್ತಿಗಳು ತಾವು ಹೊಂದಿರುವ ಎಚ್ಎಂಟಿಯ ಗಂಡಬೇರುಂಡ ವಾಚುಗಳನ್ನು ಪ್ರದರ್ಶಿಸುತ್ತಿದ್ದಾರೆ. ಒಬ್ಬರಂತೂ, ಗಂಡಬೇರುಂಡ, ಜನತಾ ಮೊದಲಾದ ವಾಚುಗಳನ್ನು ಮತ್ತೆ ತಯಾರಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಗಂಡಬೇರುಂಡ ವಾಚಿನ ಬಗ್ಗೆ ಪೋಸ್ಟ್
HMT ಗಂಡಭೇರುಂಡ 🥰 pic.twitter.com/zRAnNOXkaU
— ರವಿ ಕೀರ್ತಿ ಗೌಡ (@ravikeerthi22) June 20, 2025
ಮತ್ತೊಂದು ಪೋಸ್ಟು
To all my kannadiga oomfs, Gandaberunda limited collection is back in Barton center MG road if anyone wants to buy. pic.twitter.com/QEBVIb16Ut
— ಕುಕ್ಕರಹಳ್ಳಿ ಕೆರೆ ಕೊಕ್ಕರೆ (@Sa_ha_na_Mg) June 19, 2025
ಇದನ್ನೂ ಓದಿ: ಜನಸಂಖ್ಯೆಗಿಂತ ಕಂಪನಿಗಳ ಸಂಖ್ಯೆಯೇ ಹೆಚ್ಚು; ಏರ್ಪೋರ್ಟ್ ಇಲ್ಲ; ಜನರು ಭಾರೀ ಶ್ರೀಮಂತರು; ಇದು ಲಿಕ್ಟನ್ಸ್ಟೈನ್ ದೇಶದ ಕಥೆ
ಗಂಡಬೇರುಂಡ ವಾಚು ಎಲ್ಲಿ ಸಿಗುತ್ತೆ?
ಎಚ್ಎಂಟಿ ತಯಾರಿಸುವ ಗಂಡಬೇರುಂಡ ವಾಚುಗಳು ಬೆಂಗಳೂರಿನಲ್ಲಿ ನಾಲ್ಕು ಕಡೆ ಸಿಗುತ್ತವೆ. ಎಂಜಿ ರಸ್ತೆಯಲ್ಲಿರುವ ಬಾರ್ಟಾನ್ ಸೆಂಟರ್, ಜಾಲಹಳ್ಳಿಯಲ್ಲಿರುವ ಎಬಿಡಿ ಶೋರೂಮ್, ಇದೇ ಜಾಲಹಳ್ಳಿಯಲ್ಲಿರುವ ಎಚ್ಎಂಟಿ ಮ್ಯೂಸಿಯಂ ಸೋವನಿರ್ ಶಾಪ್, ಹಾಗೂ ಮೇಖ್ರಿ ಸರ್ಕಲ್ನಲ್ಲಿರುವ ಎಚ್ಎಂಟಿ ಭವನ, ಈ ನಾಲ್ಕು ಕಡೆ ಗಂಡಬೇರುಂಡ ವಾಚುಗಳು ಲಭ್ಯ ಇರಬಹುದು.
ಸೀಮಿತ ಸಂಖ್ಯೆಯಲ್ಲಿ ಮಾತ್ರವೇ ಇವುಗಳನ್ನು ತಯಾರಿಸಲಾಗುವುದರಿಂದ ಬಹಳ ಬೇಗ ಮಾರಾಟವಾಗಿ ಹೋಗುತ್ತವೆ. ಎಚ್ಎಂಟಿ ಈ ವಾಚುಗಳನ್ನು ಬಿಡುಗಡೆ ಮಾಡಿದ ಕೂಡಲೇ ಹೋದರೆ ಲಭ್ಯ ಇರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:18 pm, Mon, 28 July 25




