PAN, Aadhaar: ನಿಮ್ಮ ಪ್ಯಾನ್ ಮತ್ತು ಆಧಾರ್ ಕಾರ್ಡ್ ದುರ್ಬಳಕೆ ಆಗದೇ ಸುರಕ್ಷಿತವಾಗಿರುವಂತೆ ಏನು ಮಾಡಬೇಕು?
How To Keep PAN and Aadhaar Safe?: ಬಹಳ ಅಗತ್ಯ ಮತ್ತು ಮಹತ್ವದ ದಾಖಲೆಗಳಾಗಿರುವ ಪ್ಯಾನ್ ಮತ್ತು ಆಧಾರ್ ಕಾರ್ಡ್ ದುಷ್ಕರ್ಮಿಗಳ ಕೈಗೆ ಸಿಕ್ಕು ದುರುಪಯೋಗವಾಗುವ ಸಾಧ್ಯತೆ ಇಲ್ಲದಿಲ್ಲ. ಹೀಗೇನಾದರೂ ಆದರೆ ಏನು ಮಾಡಬೇಕು, ದುರುಪಯೋಗ ಆಗದಂತೆ ತಡೆಯಲು ಏನು ಮಾಡಬೇಕು, ಈ ವಿವರ ಇಲ್ಲಿದೆ....
ಇವತ್ತಿನ ಕಾಲಘಟ್ಟದಲ್ಲಿ ಪ್ಯಾನ್ ಮತ್ತು ಆಧಾರ್ ಕಾರ್ಡ್ ಭಾರತದಲ್ಲಿ ಬೇಕಿರುವ ಎರಡು ಪ್ರಮುಖ ದಾಖಲೆಗಳು. ಇವುಗಳನ್ನು ದುರುಪಯೋಗಿಸಿಕೊಳ್ಳುತ್ತಿರುವ ಕೆಲವಾರು ಘಟನೆಗಳು ಅಲ್ಲಲ್ಲಿ ಬೆಳಕಿಗೆ ಬಂದಿವೆ. ಡಿಜಿಟಲ್ ಯುಗದಲ್ಲಿ ಇಂಥ ದುಷ್ಕಾರ್ಯಗಳು ತುಸು ಸುಲಭಗೊಂಡಿವೆ. ನಿಮ್ಮ ಆಧಾರ್ ನಂಬರ್ ಮತ್ತು ಪ್ಯಾನ್ ನಂಬರ್ (Aadhaar and PAN Card) ಬಳಸಿ ಕ್ರೆಡಿಟ್ ಕಾರ್ಡ್ ಪಡೆಯುವುದೋ ಇತ್ಯಾದಿ ಏನಾದರೂ ತಪ್ಪುಗಳು ಜರುಗಬಹುದು. ಎಂಎಸ್ ಧೋನಿ, ಶಿಲ್ಪಾ ಶೆಟ್ಟಿ, ಮಾಧುರಿ ದೀಕ್ಷಿತ್ ಮೊದಲಾದವರ ಪ್ಯಾನ್ ನಂಬರ್ ಅನ್ನು ಬಳಸಿಕೊಂಡು ದುಷ್ಕರ್ಮಿಗಳು ಕ್ರೆಡಿಟ್ ಕಾರ್ಡ್ ಪಡೆದ ಘಟನೆ ಇತ್ತೀಚೆಗೆ ಜನರನ್ನು ದಂಗುಬಡಿಸಿತ್ತು. ಈ ಹಿನ್ನೆಲೆಯಲ್ಲಿ ಪ್ಯಾನ್ ನಂಬರ್ ಮತ್ತು ಆಧಾರ್ ನಂಬರ್ ದುಷ್ಕರ್ಮಿಗಳ ಕೈಗೆ ಸಿಗದಂತೆ ಹೇಗೆ ಜಾಗ್ರತೆ ವಹಿಸಬೇಕು, ಏನು ಕ್ರಮ ಕೈಗೊಳ್ಳಬೇಕು ಎಂಬ ವಿವರ ಇಲ್ಲಿದೆ.
ನಿಮ್ಮ ಪ್ಯಾನ್ ಕಾರ್ಡ್ ದುರುಪಯೋಗಗೊಳ್ಳುತ್ತಿದ್ದರೆ ಹೇಗೆ ಕಂಡುಹಿಡಿಯುವುದು?
ನಿಮ್ಮ ಪ್ಯಾನ್ ಕಾರ್ಡ್ ಅನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆಯಾ ಇಲ್ಲವಾ ಎಂಬುದು ಗೊತ್ತಾಗಬೇಕಾದರೆ ಸಿಬಿಲ್ (CIBIL) ಮೊರೆ ಹೋಗಬಹುದು. ನೀವು ಆನ್ಲೈನ್ನಲ್ಲೇ ಸಿಬಿಲ್, ಪೇಟಿಎಂ, ಈಕ್ವಿಫ್ಯಾಕ್ಸ್, ಬ್ಯಾಂಕ್ ಬಜಾರ್ ಇತ್ಯಾದಿ ಕಡೆ ಕ್ರೆಡಿಟ್ ರಿಪೋರ್ಟ್ (Credit Report) ಪಡೆಯಬಹುದು. ಇದರಲ್ಲಿ ನಿಮ್ಮ ಪ್ಯಾನ್ ನಂಬರ್ ಹೆಸರಿನಲ್ಲಿ ಪಡೆಯಲಾಗಿರುವ ಎಲ್ಲಾ ಕ್ರೆಡಿಟ್ ಕಾರ್ಡ್ ಮತ್ತು ಲೋನ್ಗಳ ವಿವರ ಇರುತ್ತದೆ. ಇದರಲ್ಲಿ ನೀವು ಪಡೆಯದೇ ಇರುವ ಕಾರ್ಡ್ ಮತ್ತು ಸಾಲ ಇದ್ದರೆ ಕೂಡಲೇ ಅಧಿಕಾರಿಗಳ ಗಮನಕ್ಕೆ ತರಬೇಕು.
ಪ್ಯಾನ್ ನಂಬರ್ ದುರ್ಬಳಕೆ ಆಗಿದ್ದರೆ ಹೇಗೆ ದೂರು ಕೊಡುವುದು?
- ಮೊದಲಿಗೆ ಟಿನ್ ಎನ್ಎಸ್ಡಿಎಲ್ ಪೋರ್ಟಲ್ಗೆ ಭೇಟಿ ಕೊಡಿ
- ಅಲ್ಲಿ ಕಸ್ಟಮರ್ ಕೇರ್ ಸೆಕ್ಷನ್ನಲ್ಲಿ ಡ್ರಾಪ್ ಡೌನ್ ಮೆನು ತೆರೆಯಿರಿ.
- ಈ ಮೆನುನಿಂದ ಕಂಪ್ಲೇಂಟ್ಸ್ / ಕ್ವೀರೀಸ್ ಅನ್ನು ತೆರೆಯಿರಿ.
- ಈ ದೂರು ಅರ್ಜಿಯಲ್ಲಿ ಎಲ್ಲಾ ವಿವರ ತುಂಬಿಸಿ, ಕೊನೆಯಲ್ಲಿ ಕ್ಯಾಪ್ಚಾ ಕೋಡ್ ಹಾಕಿ ಸಬ್ಮಿಟ್ ಕ್ಲಿಕ್ ಮಾಡಿ
ಪ್ಯಾನ್ ಮತ್ತು ಆಧಾರ್ ನಂಬರ್ ದುರುಪಯೋಗಗೊಳ್ಳದಂತೆ ಹೇಗೆ ತಡೆಯುವುದು?
- ನಿಮ್ಮ ಪ್ಯಾನ್ ನಂಬರ್ ಮತ್ತು ಅಧಾರ್ ನಂಬರ್ ಅನ್ನು ಎಲ್ಲೆಡೆಯೂ ನೀಡಲು ಹೋಗಬೇಡಿ. ಪ್ಯಾನ್ ಮತ್ತು ಆಧಾರ್ ಕಾರ್ಡ್ ಬದಲು ಬೇರೆ ದಾಖಲೆಗಳನ್ನು ಕೊಡುವ ಅವಕಾಶ ಇದ್ದರೆ ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಇತ್ಯಾದಿ ದಾಖಲೆಗಳನ್ನು ಕೊಡಬಹುದು. ಇವನ್ನು ಅಷ್ಟು ದುರುಪಯೋಗಿಸಿಕೊಳ್ಳಲು ಆಗುವುದಿಲ್ಲ.
- ನೀವು ಅಧಿಕೃತ ಎನಿಸುವ ಕಂಪನಿ ಅಥವಾ ವ್ಯಕ್ತಿಗಳಿಗೆ ಮಾತ್ರ ಪ್ಯಾನ್ ನಂಬರ್ ಅಥವಾ ಆಧಾರ್ ನಂಬರ್ ನೀಡಿ. ನೀವು ಪ್ಯಾನ್ ಮತ್ತು ಆಧಾರ್ ಕಾರ್ಡ್ನ ಫೋಟೋಕಾಪಿ ನೀಡಿದರೂ ಅದಕ್ಕೆ ನಿಮ್ಮ ಸಹಿ ಮತ್ತು ದಿನಾಂಕವನ್ನು ಬರೆಯಲು ಮರೆಯದಿರಿ.
- ಸೋಷಿಯಲ್ ಮೀಡಿಯಾಗಳು ಸೇರಿದಂತೆ ಯಾವುದೇ ಆನ್ಲೈನ್ ಪೋರ್ಟಲ್ಗಳಲ್ಲಿ ನಿಮ್ಮ ಹೆಸರು, ಜನ್ಮದಿನ ಇತ್ಯಾದಿ ತಿಳಿಸಲು ಕೇಳಲಾಗುತ್ತದೆ. ಆದ್ದರಿಂದ ನಿಮ್ಮ ಪೂರ್ಣ ಹೆಸರು ಮತ್ತು ಜನ್ಮದಿನಾಂಕ ಬರೆಯುವುದನ್ನು ಸಾಧ್ಯವಾದಷ್ಟೂ ತಪ್ಪಿಸಿ.
- ಸರ್ಕಾರದಿಂದ ಕಡ್ಡಾಯ ಇದ್ದರೆ ಮಾತ್ರ ಬ್ಯಾಂಕ್ ಖಾತೆಗೆ ಆಧಾರ್ ನಂಬರ್ ಲಿಂಕ್ ಮಾಡಿ. ಸರ್ಕಾರ ಒಂದು ವೇಳೆ ಈ ಕಡ್ಡಾಯ ಕ್ರಮವನ್ನು ಹಿಂಪಡೆದುಕೊಂಡರೆ, ಕೂಡಲೇ ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ಅನ್ನು ಡೀಲಿಂಕ್ ಮಾಡಿ
- ಆಗಾಗ್ಗೆ ನಿಮ್ಮ ಕ್ರೆಡಿಟ್ ರಿಪೋರ್ಟ್ ಪಡೆದುಕೊಂಡು ಪರಿಶೀಲಿಸುತ್ತಿರಿ.
- ನಿಮ್ಮ ಫೋನ್ ಗ್ಯಾಲರಿಯಲ್ಲಿ ಪ್ಯಾನ್ ಮತ್ತು ಆಧಾರ್ ಕಾರ್ಡ್ ಫೋಟೋವನ್ನು ಇಟ್ಟುಕೊಳ್ಳದಿರಿ. ಒಂದು ವೇಳೆ ಮೊಬೈಲ್ ಕಳೆದುಹೋದರೆ ದುಷ್ಕರ್ಮಿಗಳು ಈ ನಂಬರ್ಗಳನ್ನು ದುರುಪಯೋಗಿಸಿಕೊಳ್ಳಬಹುದು.
ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:16 pm, Thu, 20 April 23