Dhingra Brothers: ಮಲ್ಯ ಒಡೆತನದ ಸಂಸ್ಥೆ ಖರೀದಿಸಿದ ಧಿಂಗ್ರಾ ಬ್ರದರ್ಸ್; 16 ಕೋಟಿ ಇದ್ದ ಕಂಪನಿ ಬ್ಯುಸಿನೆಸ್ ಈಗ 55,000 ಕೋಟಿ ರೂ

Berger Paints: ಒಂದು ಸಣ್ಣ ಅಂಗಡಿಯಿಂದ ವ್ಯವಹಾರ ಶುರು ಮಾಡಿದ ಧಿಂಗ್ರ ಸಹೋದರರು ಇವತ್ತು 55,000 ಕೋಟಿ ರೂಗೂ ಹೆಚ್ಚು ಮೌಲ್ಯದ ಕಂಪನಿಯ ಒಡೆಯರಾಗಿದ್ದಾರೆ. ವಿಜಯ್ ಮಲ್ಯ ಒಡೆತನದಲ್ಲಿದ್ದ ಕಂಪನಿಯನ್ನು ಖರೀದಿಸಿ ಯಾರೂ ಊಹಿಸಲಾಗದಷ್ಟು ಎತ್ತರಕ್ಕೆ ತಂದು ನಿಲ್ಲಿಸಿದ್ದಾರೆ. ಇದರ ಒಂದು ಸ್ಟೋರಿ...

Dhingra Brothers: ಮಲ್ಯ ಒಡೆತನದ ಸಂಸ್ಥೆ ಖರೀದಿಸಿದ ಧಿಂಗ್ರಾ ಬ್ರದರ್ಸ್; 16 ಕೋಟಿ ಇದ್ದ ಕಂಪನಿ ಬ್ಯುಸಿನೆಸ್ ಈಗ 55,000 ಕೋಟಿ ರೂ
ಧಿಂಗ್ರಾ ಬ್ರದರ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 20, 2023 | 3:15 PM

ನವದೆಹಲಿ: ಉದ್ಯಮ, ವ್ಯವಹಾರಗಳಲ್ಲಿ ಯಶಸ್ವಿಯಾಗುವುದು ಅಷ್ಟು ಸುಲಭವಲ್ಲ. ಅದೃಷ್ಟದ ಜೊತೆಗೆ ಕಠಿಣ ಪರಿಶ್ರಮ, ಮುಂದಾಲೋಚನೆ, ತಂತ್ರಜ್ಞಾನ ಅಳವಡಿಕೆ ಇತ್ಯಾದಿ ಅನೇಕ ಸಂಗತಿಗಳು ಈ ಯಶಸ್ಸಿನಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಈ ಯಶಸ್ಸಿನ ಕಥೆಗಳೇ ಯುವ ಸಮುದಾಯಕ್ಕೆ ಸ್ಫೂರ್ತಿಯಾಗುತ್ತವೆ. ಇಂಥ ಒಂದು ಸ್ಫೂರ್ತಿದಾಯಕ ಕಥೆ ಧಿಂಗ್ರಾ ಸಹೋದರರದ್ದು. ಒಂದು ಸಣ್ಣ ಅಂಗಡಿಯಿಂದ ವ್ಯವಹಾರ ಶುರು ಮಾಡಿದ ಇಬ್ಬರು ಸಹೋದರರು (Dhingra Brothers) ಇವತ್ತು 55,000 ಕೋಟಿ ರೂಗೂ ಹೆಚ್ಚು ಮೌಲ್ಯದ ಕಂಪನಿಯ ಒಡೆಯರಾಗಿದ್ದಾರೆ. ವಿಜಯ್ ಮಲ್ಯ ಒಡೆತನದಲ್ಲಿದ್ದ ಕಂಪನಿಯನ್ನು ಖರೀದಿಸಿ ಯಾರೂ ಊಹಿಸಲಾಗದಷ್ಟು ಎತ್ತರಕ್ಕೆ ತಂದು ನಿಲ್ಲಿಸಿದ್ದಾರೆ. ಇವರೇ ಕುಲದೀಪ್ ಸಿಂಗ್ ಧಿಂಗ್ರ ಮತ್ತು ಗುರಬಚನ್ ಸಿಂಗ್ ಧಿಂಗ್ರ. ಭಾರತದ ಪ್ರಮುಖ ಪೇಂಟ್ ಕಂಪನಿ ಬರ್ಜರ್ ಪೇಂಟ್ಸ್​ನ (Berger Paints) ಮಾಲೀಕರು ಇವರು.

16 ಕೋಟಿ ಇದ್ದ ಬರ್ಜರ್ ಪೇಂಟ್ಸ್ ಟರ್ನೋವರ್ ಈಗ 55,000 ಕೋಟಿ ರೂ

1923ರಲ್ಲಿ ಹ್ಯಾಡ್​ಫೀಲ್ಡ್ ಎಂಬ ಬ್ರಿಟನ್ ವ್ಯಕ್ತಿ ಕೋಲ್ಕತಾದಲ್ಲಿ ಆರಂಭಿಸಿದ ಕಂಪನಿ ಇದು. 1947ರಲ್ಲಿ ಬ್ರಿಟಿಷ್ ಪೇಂಟ್ಸ್ ಸಂಸ್ಥೆ ಇದನ್ನು ಖರೀದಿಸಿತು. 1969ರಲ್ಲಿ ಬರ್ಜರ್ ಜೆನ್ಸನ್ ನಿಕೋಲ್ಸನ್ ಎಂಬ ಬ್ರಿಟನ್ ಕಂಪನಿ ಇದನ್ನು ಖರೀದಿಸಿತು.

ಬರ್ಜರ್ ಎಂಬ ಬ್ರ್ಯಾಂಡ್ 18ನೇ ಶತಮಾನದಿಂದಲೇ ಜನಪ್ರಿಯವಾಗಿತ್ತು. ಲಿವಿಸ್ ಬರ್ಜರ್ ಸ್ಥಾಪಿಸಿದ ಬರ್ಜರ್ ಕಂಪನಿ 1969ರಲ್ಲಿ ಭಾರತಕ್ಕೆ ಅಡಿ ಇಟ್ಟಂತಾಯಿತು. ಆಗ ಇದರ ವಹಿವಾಟು ಬಹಳ ಕಡಿಮೆ ಇತ್ತು. 1973ರಲ್ಲಿ ಯುಬಿ ಗ್ರೂಪ್ ಈ ಬರ್ಜರ್ ಕಂಪನಿಯನ್ನು ಖರೀದಿಸಿತು. ಕೆಲವೇ ವರ್ಷಗಳಲ್ಲಿ ಪೇಂಟ್ ಮಾರಾಟ ವ್ಯವಹಾರ 16 ಕೋಟಿ ರೂಗೆ ಏರಿತು.

ಇದನ್ನೂ ಓದಿRentoMojo Hack: ಬೆಂಗಳೂರು ಮೂಲದ ರೆಂಟೋಮೋಜೋಗೆ ಹ್ಯಾಕರ್ಸ್ ದಾಳಿ; 1.5 ಲಕ್ಷ ಗ್ರಾಹಕರ ಬ್ಯಾಂಕ್ ಕಾರ್ಡ್, ಯುಪಿಐ ಮಾಹಿತಿ ಸೋರಿಕೆಯಾಗಿದೆಯಾ?

1991ರಲ್ಲಿ ಕುಲದೀಪ್ ಸಿಂಗ್ ಧಿಂಗ್ರ ಮತ್ತು ಗುರಬಚನ್ ಸಿಂಗ್ ಧಿಂಗ್ರ ಅವರು ಯುಬಿ ಗ್ರೂಪ್​ನಿಂದ ಬರ್ಜರ್ ಪೇಂಟ್ಸ್ ಕಂಪನಿಯನ್ನು ಖರೀದಿಸಿದರು. ಇವರ ಕಣ್ಗಾವಲಿನಲ್ಲಿ ಬರ್ಜರ್ ಪೇಂಟ್ಸ್ ಸರ್ವತೋಮುಖ ಬೆಳವಣಿಗೆ ಸಾಧಿಸಿತ್ತು. ಇದೀಗ ಬರ್ಜರ್ ಪೇಂಟ್ಸ್ ಭಾರತದ ಅತಿದೊಡ್ಡ ಪೇಂಟ್ ಕಂಪನಿಗಳಲ್ಲಿ ಒಂದಾಗಿದೆ.

ಅಜ್ಜನ ಪೇಂಟ್ ಅಂಗಡಿಯಿಂದ ಧಿಂಗ್ರ ಬ್ರದರ್ಸ್ ಬ್ಯುಸಿನೆಸ್ ಶುರು

ಕುಲದೀಪ್ ಸಿಂಗ್ ಧಿಂಗ್ರ ಮತ್ತು ಗುರಬಚನ್ ಸಿಂಗ್ ಧಿಂಗ್ರ ಪಂಜಾಬ್ ಮೂಲದವರು. ಇವರ ಅಜ್ಜ ಅಮೃತಸರದಲ್ಲಿ 1898ರಲ್ಲಿ ಪೇಂಟ್ ಅಂಗಡಿಯೊಂದನ್ನು ಇಟ್ಟಿದ್ದರು. ಈ ಇಬ್ಬರು ಸಹೋದರರು ದೆಹಲಿ ಯೂನಿವರ್ಸಿಟಿಯಲ್ಲಿ ಓದಿ ಬಳಿಕ ತಮ್ಮ ತಾತನ ಅಂಗಡಿಯಲ್ಲಿ ತೊಡಗಿಸಿಕೊಂಡರು. ಬಹಳ ಕ್ಷಿಪ್ರ ಗತಿಯಲ್ಲಿ ಪೇಂಟ್ ವ್ಯವಹಾರದಲ್ಲಿ ಎತ್ತರಕ್ಕೆ ಬೆಳೆಯತೊಡಗಿದರು. ಎಂಬತ್ತರ ದಶಕದಲ್ಲಿ ಸೋವಿಯತ್ ಯೂನಿಯನ್​ಗೆ ಅತಿ ಹೆಚ್ಚು ಪೇಂಟ್ ರಫ್ತು ಮಾಡುತ್ತಿದ್ದರು. ತಮ್ಮ ವ್ಯವಹಾರವನ್ನು ಹೆಚ್ಚಿಸುವ ಪ್ರಯತ್ನದ ಭಾಗವಾಗಿ ಕುಲದೀಪ್ ಸಿಂಗ್ ಧಿಂಗ್ರ ಅವರು ಬರ್ಜರ್ ಪೇಂಟ್ಸ್ ಕಂಪನಿಯನ್ನು ಖರೀದಿಸಿದರು. ತಮ್ಮೊಬ್ಬ ಸ್ನೇಹಿತರ ಮೂಲಕ ವಿಜಯ್ ಮಲ್ಯ ಅವರನ್ನು ಭೇಟಿಯಾಗಿ ಧಿಂಗ್ರ ಬ್ರದರ್ಸ್ ಡೀಲ್ ಕುದುರಿಸಿದರು.

ಇದನ್ನೂ ಓದಿShare Trading: ಷೇರುಪೇಟೆ ಸಹವಾಸ ಬೇಡ ಅಂತ ಬಿಟ್ಟವರ ಸಂಖ್ಯೆ 9 ತಿಂಗಳಲ್ಲಿ 53 ಲಕ್ಷ; ಷೇರುಗಳಿಗೆ ಹೂಡಿಕೆಯೂ ಕಡಿಮೆ; ಎಲ್ಲಿ ಹರಿದುಹೋಗುತ್ತಿದೆ ದುಡ್ಡು?

1991ರಲ್ಲಿ ವಿಜಯ್ ಮಲ್ಯರ ಯುಬಿ ಗ್ರೂಪ್ ಒಡೆತನದಲ್ಲಿದ್ದ ಬರ್ಜರ್ ಪೇಂಟ್ಸ್ ಇದೀಗ ಧಿಂಗ್ರ ಬ್ರದರ್ಸ್ ಸುಪರ್ದಿಯಲ್ಲಿ ಭಾರತದಲ್ಲಿ ಮಾತ್ರವಲ್ಲದೇ ರಷ್ಯಾ, ಪೋಲೆಂಡ್, ನೇಪಾಳ, ಬಾಂಗ್ಲಾದೇಶ ಸೇರಿದಂತೆ ಹಲವು ದೇಶಗಳ ಮಾರುಕಟ್ಟೆಗೆ ವಿಸ್ತರಿಸಿದೆ. ಕುಲದೀಪ್ ಸಿಂಗ್ ಧಿಂಗ್ರ ಬರ್ಜರ್ ಪೇಂಟ್ಸ್​ನ ಛೇರ್ಮನ್ ಆದರೆ, ಅವರ ಸಹೋದರ ಗುರಬಚನ್ ಸಿಂಗ್ ಧಿಂಗ್ರ ವೈಸ್ ಛೇರ್ಮನ್ ಆಗಿದ್ದಾರೆ. ಭಾರತದ ಅತಿ ಶ್ರೀಮಂತ ಕುಟುಂಬಗಳಲ್ಲಿ ಧಿಂಗ್ರ ಕುಟುಂಬವೂ ಇದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:13 pm, Thu, 20 April 23