RentoMojo Hack: ಬೆಂಗಳೂರು ಮೂಲದ ರೆಂಟೋಮೋಜೋಗೆ ಹ್ಯಾಕರ್ಸ್ ದಾಳಿ; 1.5 ಲಕ್ಷ ಗ್ರಾಹಕರ ಬ್ಯಾಂಕ್ ಕಾರ್ಡ್, ಯುಪಿಐ ಮಾಹಿತಿ ಸೋರಿಕೆಯಾಗಿದೆಯಾ?

Database of RentoMojo Attacked by Hackers: ಬೆಂಗಳೂರು, ಮುಂಬೈ, ಪುಣೆ ಮತ್ತು ದೆಹಲಿಯಲ್ಲಿ 1.5 ಗ್ರಾಹಕರನ್ನು ಹೊಂದಿರುವ ಆನ್​ಲೈನ್ ರೆಂಟಲ್ ಕಂಪನಿ ರೆಂಟೋಮೋಜೋದ ಒಂದು ಡಾಟಾಬೇಸ್ ಹ್ಯಾಕ್ ಆಗಿರುವ ಸಂಗತಿ ಬೆಳಕಿಗೆ ಬಂದಿದೆ. ಈ ಗ್ರಾಹಕರ ಹಣಕಾಸು ಮಾಹಿತಿಯ ಸೋರಿಕೆಯಾಗಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

RentoMojo Hack: ಬೆಂಗಳೂರು ಮೂಲದ ರೆಂಟೋಮೋಜೋಗೆ ಹ್ಯಾಕರ್ಸ್ ದಾಳಿ; 1.5 ಲಕ್ಷ ಗ್ರಾಹಕರ ಬ್ಯಾಂಕ್ ಕಾರ್ಡ್, ಯುಪಿಐ ಮಾಹಿತಿ ಸೋರಿಕೆಯಾಗಿದೆಯಾ?
ರೆಂಟೋಮೋಜೋ ಡಾಟಾಬೇಸ್​ನಲ್ಲಿ ಕಳ್ಳತನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 20, 2023 | 1:11 PM

ಬೆಂಗಳೂರು: ಬೈಕ್, ಪೀಠೋಕರಣ ಇತ್ಯಾದಿಯನ್ನು ಜನರಿಗೆ ಬಾಡಿಗೆಯ ಮೇಲೆ ಕೊಡುವ ಆನ್​ಲೈನ್ ರೆಂಟಲ್ ಕಂಪನಿ ರೆಂಟೋಮೋಜೋದಲ್ಲಿ (RentoMojo) ಡಾಟಾ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ಬೆಂಗಳೂರು ಮೂಲದ ರೆಂಟೋಮೋಜೋ ಸಂಸ್ಥೆಯೇ ಈ ಸಂಗತಿಯನ್ನು ಹೊರಗೆಡವಿದ್ದು, ತಾನು ಪ್ರಾಧಿಕಾರಗಳ ಗಮನಕ್ಕೆ ತಂದಿದ್ದು, ತನಿಖೆ ಕೂಡ ಆಗುತ್ತಿದೆ ಎಂದು ಹೇಳಿದೆ. 2014ರಲ್ಲಿ ಆರಂಭವಾದ ರೆಂಟೋಮೋಜೋ ಬೆಂಳೂರು, ಮುಂಬೈ, ದೆಹಲಿ ಮತ್ತು ಪುಣೆ ನಗರಗಳಲ್ಲಿ ರೆಂಟಲ್ ಸೇವೆ ಒದಗಿಸುತ್ತಿದೆ. ಇದಕ್ಕೆ ಒಂದೂವರೆ ಲಕ್ಷದಷ್ಟು ಜನರು ಸಬ್​ಸ್ಕ್ರೈಬರ್ ಆಗಿದ್ದಾರೆ. ಈಗ ರೆಂಟೋಮೋಜೋದಲ್ಲಿ ಡಾಟಾ ಕಳ್ಳತನ (Data Breach) ಆಗಿರುವುದು ಈ ಒಂದೂವರೆ ಲಕ್ಷ ಮಂದಿಗೆ ಆತಂಕ ತಂದಿದೆ. ಆದರೆ, ಕಂಪನಿಯು ತನ್ನ ಸಬ್​ಸ್ಕ್ರೈಬರ್​ಗಳೆಲ್ಲರಿಗೂ ಇಮೇಲ್ ಕಳುಹಿಸಿದ್ದು, ತೀರಾ ಸೂಕ್ಷ್ಮ ಮಾಹಿತಿಗಳು ದುಷ್ಕರ್ಮಿಗಳ ಕೈಗೆ ಸಿಗುವುದಿಲ್ಲ ಎಂದು ಭರವಸೆ ನೀಡಿದೆ ಎನ್ನಲಾಗಿದೆ.

‘ನಮ್ಮ ಒಂದು ಡಾಟಾಬೇಸ್​ನಲ್ಲಿ ಅನಧಿಕೃತವಾಗಿ ಯಾರೋ ಪ್ರವೇಶಿಸಿರುವುದನ್ನು ನಮ್ಮ ತಂಡ ಇತ್ತೀಚೆಗೆ ಗಮನಿಸಿದೆ. ನಮ್ಮ ಗ್ರಾಹಕರ ಮಾಹಿತಿಯನ್ನು ಅನಧಿಕೃತವಾಗಿ ಪಡೆಯಲು ಇವರಿಗೆ ಸಾಧ್ಯವಾಗಿರುವಂತೆ ತೋರುತ್ತಿದೆ. ಇದರಲ್ಲಿ ಕ್ಲೌಡ್ ಕಾನ್ಫಿಗರೇಶನ್​ನಲ್ಲಿರುವ ಲೋಪವನ್ನು ಬಳಸಿ ಖಾಸಗಿಯಾಗಿ ಗುರುತಿಸಬಲ್ಲ ಡಾಟಾ ಕದ್ದಿರುವುದೂ ಒಳಗೊಂಡಿದೆ’ ಎಂದು ರೆಂಟೋಮೋಜೋ ತನ್ನ ಇಮೇಲ್​ನಲ್ಲಿ ತಿಳಿಸಿದೆ.

ರೆಂಟೋಮೋಜೋ ಗ್ರಾಹಕರ ಬ್ಯಾಂಕ್ ಕಾರ್ಡ್, ಯುಪಿಐ ಮಾಹಿತಿ ಸುರಕ್ಷಿತ?

ಗ್ರಾಹಕರ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಯುಪಿಐ ಇತ್ಯಾದಿ ಹಣಕಾಸು ಸಾಧನಗಳ ಮಾಹಿತಿಯನ್ನು ಹ್ಯಾಕರ್​ಗಳು ಕದಿಯಲು ಆಗುವುದಿಲ್ಲ. ತನ್ನ ಆ್ಯಪ್ ಮತ್ತು ಪೋರ್ಟಲ್​ನ ಡಾಟಾಬೇಸ್​ನಲ್ಲಿ ಈ ಯಾವುದೇ ಮಾಹಿತಿಯನ್ನು ಸಂಗ್ರಹಿಸಲಾಗುವುದಿಲ್ಲ. ಹೀಗಾಗಿ, ಡಾಟಾಬೇಸ್ ಹ್ಯಾಕ್ ಮಾಡಿದವರಿಗೆ ಜನರ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಯುಪಿಐ ಮಾಹಿತಿ ಗೊತ್ತಾಗುವುದಿಲ್ಲ ಎಂದು ರೆಂಟೋಮೋಜೋ ಸ್ಪಷ್ಟಪಡಿಸಿದೆ.

ಇದನ್ನೂ ಓದಿAkshaya Tritiya: ಅಕ್ಷಯ ತೃತೀಯಕ್ಕೆ ಚಿನ್ನ, ಬೆಳ್ಳಿ ಹಬ್ಬ; ವಿವಿಧ ಅಂಗಡಿಗಳಲ್ಲಿ ಭರ್ಜರಿ ಡಿಸ್ಕೌಂಟ್, ಗೋಲ್ಡ್ ಕಾಯಿನ್ ಗಿಫ್ಟ್; ಇಲ್ಲಿದೆ ಡೀಟೇಲ್ಸ್

ರೆಂಟೋಮೋಜೋ ಗ್ರಾಹಕರನ್ನು ಬ್ಲ್ಯಾಕ್​ಮೇಲ್ ಮಾಡುತ್ತಿದ್ದಾರಾ ಹ್ಯಾಕರ್ಸ್?

ರೆಂಟೋಮೋಜೋದ ಕೆಲ ಗ್ರಾಹಕರು ಡಾಟಾ ಕಳ್ಳತನದ ಬಗ್ಗೆ ಆತಂಕ ವ್ಯಕ್ತಪಡಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ರಾಜಕುಮಾರ್ ಎಂಬ ವ್ಯಕ್ತಿ, ತನಗೆ ಹ್ಯಾಕರ್​ಗಳು ಬ್ಲ್ಯಾಕ್​ಮೇಲ್ ಮಾಡುತ್ತಿದ್ದಾರೆಂದು ಹೇಳಿಕೊಂಡಿದ್ದಾರೆ. ನನ್ನ ಖಾಸಗಿ ಮಾಹಿತಿ ಬಿಡುಗಡೆ ಮಾಡುವಂತೆ ಹ್ಯಾಕರ್ಸ್ ಬೆದರಿಸುತ್ತಿದ್ದಾರೆ ಎಂದು ಇವರು ಟ್ವೀಟ್ ಮಾಡಿದ್ದಾರೆ.

ರೋನಕ್ ಪಾಂಡ್ಯ ಎಂಬುವವರು, ಈ ಹ್ಯಾಕರ್ಸ್ ದಾಳಿಯಿಂದ ತನಗೆ ಯಾವುದೇ ರೀತಿಯ ನಷ್ಟವಾದರೂ ಅದನ್ನು ರೆಂಟೋಮೋಜೋ ಭರಿಸಬೇಕು. ತಮ್ಮ ಟ್ವೀಟ್ ಅನ್ನೇ ದೂರೆಂದು ಪರಿಗಣಿಸಬೇಕು ಎಂದು ಬರೆದಿದ್ದಾರೆ.

ಇದನ್ನೂ ಓದಿShare Trading: ಷೇರುಪೇಟೆ ಸಹವಾಸ ಬೇಡ ಅಂತ ಬಿಟ್ಟವರ ಸಂಖ್ಯೆ 9 ತಿಂಗಳಲ್ಲಿ 53 ಲಕ್ಷ; ಷೇರುಗಳಿಗೆ ಹೂಡಿಕೆಯೂ ಕಡಿಮೆ; ಎಲ್ಲಿ ಹರಿದುಹೋಗುತ್ತಿದೆ ದುಡ್ಡು?

ಗ್ರಾಹಕರ ದತ್ತಾಂಶ ಸುರಕ್ಷತೆಗೆ ರೆಂಟೋಮೋಜೋ ವಿವಿಧ ಕ್ರಮ

ತನ್ನ ಗ್ರಾಹಕರ ದತ್ತಾಂಶಗಳ ಸುರಕ್ಷತೆಗೆ ತಾನು ವಿವಿಧ ರೀತಿಯ ಕ್ರಮಗಳನ್ನು ಕೈಗೊಂಡಿರುವುದಾಗಿ ರೆಂಟೋಮೋಜೋ ಹೇಳಿದೆ. ಯಾವ್ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಮಾಹಿತಿ ಇಲ್ಲಿದೆ:

  • ಡಾಟಾಬೇಸ್​ನಲ್ಲಿರುವ ಎಲ್ಲಾ ಮಾಹಿತಿಯನ್ನೂ ಎನ್​ಕ್ರಿಪ್ಟ್ ಮಾಡಲಾಗಿದೆ.
  • ಇಂಟೆಲಿಜೆಂಟ್ ಥ್ರೆಟ್ ಡಿಟೆಕ್ಷನ್, ಸೆನ್ಸಿಟಿವ್ ಡಾಟಾ ಡಿಸ್ಕವರಿ ಇತ್ಯಾದಿ ಅತ್ಯಾಧುನಿಕ ಭದ್ರತಾ ವಿಧಾನಗಳ ಮೂಲಕ ಡಾಟಾಬೇಸ್ ವ್ಯವಸ್ಥೆ ಬಲಪಡಿಸಲಾಗಿದೆ.
  • ಹೆಚ್ಚುವರಿ ಸುರಕ್ಷತೆಯ ಎಳೆಯಾಗಿ ಮಲ್ಟಿ ಫ್ಯಾಕ್ಟರ್ ಅಥೆಂಟಿಕೆಸನ್ ವ್ಯವಸ್ಥೆಯ ಅಳವಡಿಕೆ
  • ಎಲ್ಲಾ ಅಕ್ಸೆಸ್ ಟೋಕನ್​ಗಳನ್ನು ರೊಟೇಟ್ ಮಾಡಲಾಗಿದೆ
  • ಎಲ್ಲಾ ಪಾಸ್​ವರ್ಡ್​ಗಳನ್ನು ಅಪ್​ಡೇಟ್ ಮಾಡಲಾಗಿದೆ.
  • ರೆಂಟೋಮೋಜೋದ ನೆಟ್​ವರ್ಕ್​ಗೆ ಎಂಡ್​ಪಾಯಿಂಟ್ ಡಿಟೆಕ್ಷನ್ ಅಂಡ್ ರೆಸ್ಪಾನ್ಸ್ (ಇಡಿಆರ್) ವ್ಯವಸ್ಥೆಯನ್ನು ಅಳವಡಿಸಲಾಗಿದೆ.
  • ಥರ್ಡ್ ಪಾರ್ಟಿ ಮತ್ತು ಓಪನ್ ಸೋರ್ಸ್ ಪ್ಲಗಿನ್​ಗಳನ್ನು ಮರುಪರಿಶೀಲಿಸಲಾಗಿದೆ.

ಗ್ರಾಹಕರ ಮಾಹಿತಿ ಸುರಕ್ಷತೆಗೆ ಮತ್ತು ಕಂಪನಿಯ ಡಾಟಾಬೇಸ್ ಸುರಕ್ಷತೆಗೆ ಇವಿಷ್ಟು ಕ್ರಮಗಳನ್ನು ಕೈಗೋಳ್ಳಲಾಗಿದೆ ಎಂದು ರೆಂಟೋಮೋಜೋ ಹೇಳಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ