ಮೊಟಕುಗೊಂಡ ಕನ್ನಡಿಗನ ಸಾಹಸ; ಕೂ ಆ್ಯಪ್ ಮುಚ್ಚಿದ ಅಪ್ರಮೇಯ ರಾಧಾಕೃಷ್ಣ; ಇಲ್ಲಿದೆ ಕಾರಣ

|

Updated on: Jul 03, 2024 | 2:42 PM

Koo App closes operations: ಅಪ್ರಮೇಯ ರಾಧಾಕೃಷ್ಣ 2020ರಲ್ಲಿ ಆರಂಭಿಸಿದ ಕೂ ಸೋಷಿಯಲ್ ಮೀಡಿಯಾ ಆ್ಯಪ್ ಇಂದು ಗತ ಇತಿಹಾಸ ಪುಟಕ್ಕೆ ಸೇರಿದೆ. ಇಂದಿನ ಎಕ್ಸ್ ಮತ್ತು ಅಂದಿನ ಟ್ವಿಟ್ಟರ್​ಗೆ ಪರ್ಯಾಯ ಸೋಷಿಯಲ್ ಮೀಡಿಯಾ ಆ್ಯಪ್ ಎಂದು ಪರಿಗಣಿತವಾಗಿದ್ದ ಕೂ ಅನ್ನು ಮುಚ್ಚಲಾಗಿದೆ. ಆ್ಯಪ್ ಅನ್ನು ಮುಂದುವರಿಸಿಕೊಂಡು ಹೋಗಲು ಬಂಡವಾಳ ಕೊರತೆ ಕಂಡಿದ್ದು ಅದನ್ನು ಮುಚ್ಚಲು ಕಾರಣ.

ಮೊಟಕುಗೊಂಡ ಕನ್ನಡಿಗನ ಸಾಹಸ; ಕೂ ಆ್ಯಪ್ ಮುಚ್ಚಿದ ಅಪ್ರಮೇಯ ರಾಧಾಕೃಷ್ಣ; ಇಲ್ಲಿದೆ ಕಾರಣ
ಕೂ
Follow us on

ಬೆಂಗಳೂರು, ಜುಲೈ 3: ಕನ್ನಡಿಗ ಅಪ್ರಮೇಯ ರಾಧಾಕೃಷ್ಣ ನಾಲ್ಕು ವರ್ಷದ ಹಿಂದೆ ಸ್ಥಾಪಿಸಿದ್ದ ಕೂ ಎಂಬ ಸೋಷಿಯಲ್ ಮೀಡಿಯಾ ಅಪ್ಲಿಕೇಶನ್ (Koo App) ಇದೀಗ ಮುಚ್ಚಿಹೋಗಿದೆ. ರಾಧಾಕೃಷ್ಣ (Aprameya Radhakrishna) ಇಂದು ತಮ್ಮ ಲಿಂಕ್ಡ್​ಇನ್ ಪೋಸ್ಟ್​ನಲ್ಲಿ ಈ ಬಗ್ಗೆ ಸುದೀರ್ಘವಾಗಿ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಕೂ ಅನ್ನು ಮಾರುವ ಅವರ ಸತತ ಪ್ರಯತ್ನಗಳು ಫಲಕೊಡದೇ ಹೋದ್ದರಿಂದ ಅಂತಿಮವಾಗಿ ವಿದಾಯ ಹೇಳಲಾಗಿದೆ. ಸೋಷಿಯಲ್ ಮೀಡಿಯಾ ತಾಣವನ್ನು ನಿರ್ವಹಿಸಲು ಬಹಳವೇ ವೆಚ್ಚವಾಗುತ್ತದೆ. ಹೆಚ್ಚು ದಿನ ಇದನ್ನು ಮುಂದುವರಿಸಲು ಆಗುವುದಿಲ್ಲ ಎಂದು ಅಪ್ರಮೇಯ ರಾಧಾಕೃಷ್ಣ ತಮ್ಮ ಬ್ಲಾಗ್​ನಲ್ಲಿ ಬರೆದಿದ್ದಾರೆ. ಇದರೊಂದಿಗೆ ಭಾರತದ ಏಕೈಕ ಸೋಷಿಯಲ್ ಮೀಡಿಯಾ ಆ್ಯಪ್ ಎಂಬ ಹೆಗ್ಗಳಿಕೆಯಲ್ಲಿದ್ದ ಕೂ ಧ್ವನಿ ನಿಂತಂತಾಗಿದೆ.

ಅಪ್ರಮೇಯ ರಾಧಾಕೃಷ್ಣ ಮತ್ತು ಮಯಂಕ್ ಬಿಡವಾಟ್ಕ ಎಂಬುವವರು 2020ರಲ್ಲಿ ಆರಂಭಿಸಿದ ಕೂ ಆ್ಯಪ್ ಅಂದಿನ ಟ್ವಿಟ್ಟರ್​ಗೆ ಪರ್ಯಾಯವೆಂಬಂತೆ ಬಿಂಬಿತವಾಗಿತ್ತು. ಆರಂಭದಲ್ಲೇ ಬಹಳಷ್ಟು ಜನಪ್ರಿಯತೆ ಕೂಡ ಗಳಿಸಿತ್ತು. ಕೂ ಬಿಡುಗಡೆ ಆಗಿ ಕೆಲವೇ ದಿನಗಳಲ್ಲಿ ಲಕ್ಷಾಂತರ ಜನರು ಆ್ಯಪ್ ಡೌನ್​ಲೋಡ್ ಮಾಡಿದ್ದರು. ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ಇದು ಲಭ್ಯ ಇದ್ದರಿಂದ ಬಹಳ ನಿರೀಕ್ಷೆ ಇತ್ತು.

ಇದನ್ನೂ ಓದಿ: ತಿಂಗಳಿಗೆ 35 ರೂ ಮಾತ್ರ; ಪೇಟಿಎಂ ಹೆಲ್ತ್ ಸಾಥಿ ಪ್ಲಾನ್​ನ ಪ್ರಯೋಜನ ತಿಳಿಯಿರಿ

ಆದರೆ, ಎಷ್ಟೇ ತಂತ್ರಜ್ಞಾನ ಬೆಂಬಲ ಇದ್ದರೂ ಸೋಷಿಯಲ್ ಮೀಡಿಯಾ ತಾಣವನ್ನು ಒಂದು ಹಂತಕ್ಕೆ ಕೊಂಡೊಯ್ಯಲು ಐದಾರು ವರ್ಷವಾದರೂ ಬೇಕಾಗುತ್ತದೆ. ಸ್ಥಾಪನೆಯಾದ ಎರಡು ವರ್ಷದಲ್ಲಿ ಲಾಭದ ನಿರೀಕ್ಷೆ ಮಾಡಲು ಆಗುವುದಿಲ್ಲ ಎಂದು ಅಪ್ರಮೇಯ ಅವರು ಹೇಳಿದ್ದಾರೆ.

ಕೂ ಅನ್ನು ಮುನ್ನಡೆಸಲು ಆಗುವುದಿಲ್ಲ ಎಂದು ಗೊತ್ತಾದ ಬಳಿಕ ಅಪ್ರಮೇಯ ಅವರು ಮಾರಲು ಯೋಜಿಸಿದ್ದರು. ಡೈಲಿಹಂಟ್ ಸೇರಿದಂತೆ ಹಲವು ದೊಡ್ಡ ಇಂಟರ್ನೆಟ್ ಕಂಪನಿಗಳು, ಕಾರ್ಪೊರೇಟ್ ಸಂಸ್ಥೆಗಳು, ಮಾಧ್ಯಮ ಸಂಸ್ಥೆಗಳ ಜೊತೆ ಮಾತುಕತೆ ನಡೆಸಿದ್ದರು. ಆದರೆ, ಸೋಷಿಯಲ್ ಮೀಡಿಯಾದಂಥ ಕಂಪನಿಯನ್ನು ಇಟ್ಟುಕೊಳ್ಳಲು ಯಾರೂ ಆಸಕ್ತಿ ತೋರಲಿಲ್ಲ. ಒಂದೆರಡು ಕಂಪನಿಗಳು ಕೊನೆಯ ಘಳಿಗೆಯಲ್ಲಿ ಮನಸು ಬದಲಾಯಿಸಿದವು. ಅಂತಿಮವಾಗಿ ತಾವು ಕೂ ಅನ್ನು ಖಾಯಂ ಆಗಿ ಮುಚ್ಚುವ ಕಠಿಣ ನಿರ್ಧಾರಕ್ಕೆ ಬರಬೇಕಾಯಿತು ಎಂದು ಹೇಳಿಕೊಂಡಿದ್ದಾರೆ ಅಪ್ರಮೇಯ ರಾಧಾಕೃಷ್ಣ.

ಇದನ್ನೂ ಓದಿ: ವಿಯೆಟ್ನಾಂ, ಚೀನಾ ರೀತಿ ಆಮದು ಸುಂಕ ಇಳಿಯಲಿ: ಬಜೆಟ್​ನಿಂದ ಎಲೆಕ್ಟ್ರಾನಿಕ್ ಉದ್ಯಮದ ನಿರೀಕ್ಷೆಗಳಿವು…

ಆದರೆ, ಕೂ ಸಾಹಸ ಬಗ್ಗೆ ಅಪ್ರಮೇಯ ಬಹಳ ಹೆಮ್ಮೆ ಹೊಂದಿದ್ದಾರೆ. ಕೂ ಬಹಳ ಉತ್ಕೃಷ್ಟವಾದ ಉತ್ಪನ್ನ. ಬಹಳ ಇಷ್ಟ ಪಟ್ಟು ಕಟ್ಟಿದ ಆ್ಯಪ್ ಅದು. ಭಾರತದಲ್ಲಿ ಯಾರಾದರೂ ಸೋಷಿಯಲ್ ಮೀಡಿಯಾ ಕಂಪನಿ ಆರಂಭಿಸುವ ಆಲೋಚನೆ ಇದ್ದರೆ ಖಂಡಿತವಾಗಿ ನನ್ನ ಅನುಭವದ ನೆರವು ಒದಗಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ