ನವದೆಹಲಿ, ಮಾರ್ಚ್ 28: ಎನ್ಬಿಎಫ್ಸಿ ಸಂಸ್ಥೆಯಾದ ಸೊನಾಟ ಫೈನಾನ್ಸ್ ಪ್ರೈ ಲಿ (Sonata Finance Pvt Ltd) ಅನ್ನು ಖರೀದಿಸಿರುವುದಾಗಿ ಕೋಟಕ್ ಮಹೀಂದ್ರ ಬ್ಯಾಂಕ್ ಹೇಳಿದೆ. 537 ಕೋಟಿ ರೂಗೆ ಈ ಖರೀದಿ ಆಗಿರುವುದು ತಿಳಿದುಬಂದಿದೆ. ಕೋಟಕ್ ಮಹೀಂದ್ರ ಬ್ಯಾಂಕ್ (Kotak Mahindra Bank) ತನ್ನ ರೆಗ್ಯುಲೇಟರಿ ಫೈಲಿಂಗ್ನಲ್ಲಿ ಈ ಬೆಳವಣಿಗೆಯ ಮಾಹಿತಿ ನೀಡಿದೆ. ಇದರೊಂದಿಗೆ ಸೊನಾಟ ಫೈನಾನ್ಸ್ ಪ್ರೈ ಲಿ ಸಂಸ್ಥೆ ಕೋಟಕ್ ಬ್ಯಾಂಕ್ನ ಅಂಗ ಸಂಸ್ಥೆಯಾಗಿದೆ. ಈ ಖರೀದಿಯು ಷೇರು ಮಾರುಕಟ್ಟೆಯಲ್ಲಿ ಕೋಟಕ್ ಮಹೀಂದ್ರಗೆ ಪುಷ್ಟಿ ಕೊಟ್ಟಿದೆ. ಹೆಚ್ಚೂಕಡಿಮೆ ಒಂದೂವರೆ ಪ್ರತಿಶತದಷ್ಟು ಷೇರುಬೆಲೆ ಏರಿದೆ. ಕೋಟಕ್ ಬ್ಯಾಂಕ್ ಷೇರುಬೆಲೆ ಇಂದು 1,800 ರೂ ಗಡಿ ದಾಟಿದೆ.
ಆರ್ಬಿಐನಲ್ಲಿ ನೊಂದಾಯಿತವಾಗಿರುವ ಬ್ಯಾಂಕೇತರ ಹಣಕಾಸು ಸಂಸ್ಥೆ ಎನಿಸಿದ ಸೊನಾಟ ಫೈನಾನ್ಸ್ ಲಿ ಸಂಸ್ಥೆ ನಿರ್ವಹಿಸುತ್ತಿರುವ ಹೂಡಿಕೆ ಮೊತ್ತ 2,620 ಕೋಟಿ ರೂ. ಇದು 10 ರಾಜ್ಯಗಳಲ್ಲಿ 549 ಶಾಖೆಗಳನ್ನು ಹೊಂದಿದೆ.
ಇದನ್ನೂ ಓದಿ: ಏಪ್ರಿಲ್ ತಿಂಗಳಲ್ಲಿ ಯುಗಾದಿ, ಈದ್ ಸೇರಿ ಬ್ಯಾಂಕುಗಳಿಗೆ ಒಟ್ಟು 14 ದಿನ ರಜೆ; ಕರ್ನಾಟಕದಲ್ಲಿ ಯಾವತ್ತಿದೆ ರಜೆ
ಕೋಟಕ್ ಮಹೀಂದ್ರ ಬ್ಯಾಂಕ್ ಈ ಹಿಂದೆ ಕೆಲವು ಕಂಪನಿಗಳನ್ನು ಸ್ವಾಧೀನಪಡಿಸಿಕೊಂಡಿದೆ. ಬಿಎಸ್ಎಸ್ ಮೈಕ್ರೋಫೈನಾನ್ಸ್ ಸಂಸ್ಥೆಯನ್ನು 2016ರ ಸೆಪ್ಟಂಬರ್ನಲ್ಲಿ 139 ಕೋಟಿ ರೂಗೆ ಖರೀದಿ ಮಾಡಿತ್ತು. ಅದು ದಕ್ಷಿಣ ಭಾರತದಲ್ಲಿ ಬೇರು ಆಳಕ್ಕಿಳಿಯಲು ಕೋಟಕ್ಗೆ ತುಸು ಅನುಕೂಲವಾಗಿತ್ತು. ಈಗ ಸೊನಾಟ ಫೈನಾನ್ಸ್ ಸಂಸ್ಥೆಯನ್ನು ಖರೀದಿಸಿರುವುದು ಕೋಟಕ್ಗೆ ಹಲವು ಲಾಭ ತಂದುಕೊಡುವ ನಿರೀಕ್ಷೆ ಇದೆ. ಉತ್ತರದ ಭಾಗಗಳಲ್ಲಿ ಸೊನಾಟ ಉಪಸ್ಥಿತಿ ಇದೆ. ಇಲ್ಲಿ ಕೋಟಕ್ ವ್ಯಾಪ್ತಿ ಇನ್ನಷ್ಟು ಗಾಢವಾಗಲಿದೆ.
ಕೋಟಕ್ ಮಹೀಂದ್ರ ಬ್ಯಾಂಕ್ ಸೊನಾಟವನ್ನು ಖರೀದಿಸಲು ಕಳೆದ ವರ್ಷ ಆರ್ಬಿಐ ಅನುಮತಿ ನೀಡಿತ್ತು. ದಿನೇ ದಿನೇ ಕೋಟಕ್ ಬ್ಯಾಂಕ್ ಪ್ರಬಲಗೊಳ್ಳುತ್ತಲೇ ಇದೆ. 2023ರ ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ಕ್ವಾರ್ಟರ್ನಲ್ಲಿ ಬರೋಬ್ಬರಿ 4,264.78 ಕೋಟಿ ರೂಗಳ ನಿವ್ವಳ ಲಾಭ ತೋರಿದೆ. ಅದರ ಒಟ್ಟು ಆದಾಯ 24 ಸಾವಿರ ಕೋಟಿ ರೂ ಗಡಿ ದಾಟಿದೆ.
ಇದನ್ನೂ ಓದಿ: ಜಾನ್ ಅಬ್ರಹಾಂ, ಗೌರಿ ಖಾನ್, ನಿಖಿಲ್ ಕಾಮತ್ ಮೊದಲಾದವರಿಂದ ಫಂಡಿಂಗ್ ಪಡೆದ ಸಬ್ಕೋ ಕಾಫಿ; ಏನದರ ವೈಶಿಷ್ಟ್ಯ
ಷೇರು ಮಾರುಕಟ್ಟೆಯಲ್ಲೂ ಕೋಟಕ್ ಬ್ಯಾಂಕ್ ದೀರ್ಘಾವಧಿಯಲ್ಲಿ ಮಲ್ಟಿಬ್ಯಾಗರ್ ಎನಿಸಿದೆ. 2001ರಲ್ಲಿ ಎರಡು ರೂ ಆಸುಪಾಸು ಇದ್ದ ಅದರ ಷೇರುಬೆಲೆ 2,064 ರೂವರೆಗೂ ಏರಿದೆ. 23 ವರ್ಷದಲ್ಲಿ ಶೇ. 75,000 ದಷ್ಟು ಮೌಲ್ಯ ಹೆಚ್ಚಳ ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ