ನವದೆಹಲಿ, ಆಗಸ್ಟ್ 9: ಕೆಪಿಐ ಗ್ರೀನ್ ಎನರ್ಜಿ ಲಿ ಸಂಸ್ಥೆ 2024ರ ಏಪ್ರಿಲ್ನಿಂದ ಜೂನ್ವರೆಗಿನ ಕ್ವಾರ್ಟರ್ನಲ್ಲಿ ಉತ್ತಮ ಆದಾಯ ಕಂಡ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಪಡೆದಿದೆ. ಕಳೆದ ಕೆಲ ದಿನಗಳಿಂದ ಅದರ ಷೇರುಬೆಲೆ ಸತತವಾಗಿ ಹೆಚ್ಚುತ್ತಿದೆ. ಕಳೆದ ಎರಡು ದಿನದಲ್ಲಿ ಸತತವಾಗಿ ಶೇ. 5ರ ಅಪ್ಪರ್ ಸರ್ಕಿಟ್ನಲ್ಲಿ ಟ್ರೇಡಿಂಗ್ ಆಗುತ್ತಿದೆ. ಜುಲೈ 26ರಂದು ಇದರ ಷೇರು ಬೆಲೆ 965 ರೂ ಇದ್ದದ್ದು ಇವತ್ತು ಶುಕ್ರವಾರ ದಿನಾಂತ್ಯದಲ್ಲಿ 1,064.90 ರೂಗೆ ಏರಿದೆ. ಎರಡು ವಾರದ ಅವಧಿಯಲ್ಲಿ ಒಂದು ಸಾವಿರ ರೂನಷ್ಟು ಷೇರುಬೆಲೆ ಹೆಚ್ಚಾಗಿದೆ.
ಏಪ್ರಿಲ್ನಿಂದ ಜೂನ್ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಕೆಪಿಐ ಗ್ರೀನ್ ಎನರ್ಜಿ ಸಂಸ್ಥೆ ನಿರೀಕ್ಷೆಮೀರಿದ ಆದಾಯ ಗಳಿಕೆ ಕಂಡಿದೆ. ಕಳೆದ ವರ್ಷದಕ್ಕೆ ಹೋಲಿಸಿದರೆ ಈ ಹಣಕಾಸು ವರ್ಷದ ಮೊದಲ ಕ್ವಾರ್ಟರ್ನಲ್ಲಿ ಅದರ ಆದಾಯದಲ್ಲಿ ಶೇ. 83ರಷ್ಟು ಹೆಚ್ಚಳ ಆಗಿದೆ.
ಇದನ್ನೂ ಓದಿ: ಮ್ಯೂಚುವಲ್ ಫಂಡ್ನಲ್ಲಿ ಒಟ್ಟಾರೆ ಹೂಡಿಕೆ ಕಡಿಮೆ ಆದರೂ ಎಸ್ಐಪಿಯಲ್ಲಿ ಶೇ. 10 ಹೆಚ್ಚಳ
2023ರ ಜೂನ್ ಅಂತ್ಯದ ಕ್ವಾರ್ಟರ್ನಲ್ಲಿ 191 ಕೋಟಿ ರೂ ಇದ್ದ ಅದರ ಆದಾಯ 2024ರ ಜೂನ್ ಅಂತ್ಯದ ಕ್ವಾರ್ಟರ್ನಲ್ಲಿ 350 ಕೋಟಿ ರೂಗೆ ಏರಿದೆ. ತೆರಿಗೆ ಕಳೆದ ನಂತದ ನಿವ್ವಳ ಆದಾಯ (ಪಿಎಟಿ) ದ್ವಿಗುಣಗೊಂಡು 66 ಕೋಟಿ ರೂ ಮುಟ್ಟಿದೆ.
ಕಾರ್ಯಾಚರಣೆ ಲಾಭ ಅಥವಾ ಆಪರೇಟಿಂಗ್ ಪ್ರಾಫಿಟ್ 71 ಕೋಟಿ ರೂನಿಂದ 132 ಕೋಟಿ ರೂಗೆ ಜಿಗಿತ ಕಂಡಿದೆ. ಈ ಉತ್ತಮ ಲಾಭದ ವರದಿ ಬೆನ್ನಲ್ಲೇ ಶೇ. 4ರಷ್ಟು ಮಧ್ಯಂತರ ಲಾಭಾಂಶವನ್ನು ಕಂಪನಿ ಘೋಷಿಸಿದೆ. ಆಗಸ್ಟ್ 21ರಂದು ಡಿವಿಡೆಂಡ್ ಹಂಚಿಕೆ ಮಾಡಲು ದಿನಾಂಕ ನಿಗದಿ ಮಾಡಲಾಗಿದೆ.
ಜೂನ್ ಅಂತ್ಯದ ಕ್ವಾರ್ಟರ್ನಲ್ಲಿ ಉತ್ತಮ ಲಾಭ ಬಂದ ಮಾತ್ರಕ್ಕೆ ಕೆಪಿಐ ಗ್ರೀನ್ ಎನರ್ಜಿ ಷೇರು ಬೆಲೆ ಹೆಚ್ಚಾಗಿದ್ದಲ್ಲ. ಕಳೆದ ಒಂದು ವರ್ಷದಿಂದ ಅದು ಅಕ್ಷರಶಃ ಮಲ್ಟಿಬ್ಯಾಗರ್ ಎನಿಸಿದೆ. 2019ರಲ್ಲಿ 80 ರೂಗೆ ಐಪಿಒದಲ್ಲಿ ಬೆಲೆ ಹೊಂದಿದ್ದ ಅದು ನಾಲ್ಕು ವರ್ಷದಲ್ಲಿ 11 ಪಟ್ಟು ಬೆಲೆ ಹೆಚ್ಚಳ ಕಂಡಿದೆ.
ಇದನ್ನೂ ಓದಿ: ನಿಷ್ಕ್ರಿಯ ಇಪಿಎಫ್ ಖಾತೆಗಳಿಗೆ ಹೊಸ ನಿಯಮ; ದುರ್ಬಳಕೆ ತಪ್ಪಿಸಲು ಈ ಕ್ರಮ
2023ರ ಅಕ್ಟೋಬರ್ ತಿಂಗಳಲ್ಲಿ ಅದರ ಷೇರುಬೆಲೆ 270 ರೂ ಆಸುಪಾಸಿನಲ್ಲಿ ಇತ್ತು. ಕೇವಲ ಹತ್ತು ತಿಂಗಳಲ್ಲಿ ಷೇರುಬೆಲೆ ನಾಲ್ಕು ಪಟ್ಟು ಹೆಚ್ಚಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ