AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Landomus: ಮಣಿಪಾಲ್ ಸೆಂಟರ್​ನಲ್ಲಿ ಇರದ ಲ್ಯಾಂಡೊಮಸ್ ಕಚೇರಿ; 36 ಲಕ್ಷ ಕೋಟಿ ರೂ. ಹೂಡಿಕೆ ಇದೆಂಥ ಕಥೆ ರೀ?

ಮೇ 24ರ ಬೆಳಗ್ಗೆ ತನಕ ಪರಚಯವೇ ಇರದಿದ್ದ ಕಂಪೆನಿಯೊಂದು ಭಾರತದಲ್ಲಿ 36 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವ ಜಾಹೀರಾತು ನೀಡಿ ಸುದ್ದಿ ಮಾಡಿದೆ. ಆ ಬಗ್ಗೆ ಇಂಟರೆಸ್ಟಿಂಗ್ ಡೀಟೇಲ್ಸ್.

Landomus: ಮಣಿಪಾಲ್ ಸೆಂಟರ್​ನಲ್ಲಿ ಇರದ ಲ್ಯಾಂಡೊಮಸ್ ಕಚೇರಿ; 36 ಲಕ್ಷ ಕೋಟಿ ರೂ. ಹೂಡಿಕೆ ಇದೆಂಥ ಕಥೆ ರೀ?
ಭಾರತದ ಬಾವುಟ
Srinivas Mata
|

Updated on:May 24, 2021 | 7:34 PM

Share

ಲ್ಯಾಂಡೊಮಸ್ ರಿಯಾಲ್ಟಿ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ (Landomus Realty Ventures Private Limited) ಅನ್ನೋ ಹೆಸರಿನ ಕಂಪೆನಿ ಮೇ 24ರ ಬೆಳಗ್ಗೆ ತನಕ ಅದೆಷ್ಟು ಮಂದಿಗೆ ಗೊತ್ತಿತ್ತೋ ಇಲ್ಲವೋ ಮಧ್ಯಾಹ್ನದ ಹೊತ್ತಿಗೆ ಭಯಂಕರ ಫೇಮಸ್ ಆಗಿಬಿಟ್ಟಿದೆ. ಸಂಜೆ 5.50ರ ಹೊತ್ತಿಗೆ ಗೂಗಲ್​ನಲ್ಲಿ ಸರ್ಚ್​ ಮಾಡಿದರೆ 270 ಫಲಿತಾಂಶವನ್ನು ತೋರಿಸುತ್ತಿದೆ. ಆ ಪೈಕಿ ಬಹುತೇಕ ಸುದ್ದಿಯಾಗಿ ಬಂದಿರುವುದರ ಫಲಿತಾಂಶವೇ. 5.10 ವರ್ಷದ ಹಳೆಯ, ಕೇವಲ 1 ಲಕ್ಷ ರೂಪಾಯಿ ಪೇಯ್ಡ್ ಅಪ್ ಕ್ಯಾಪಿಟಲ್ ಜತೆ ಶುರುವಾದ ಕಂಪೆನಿಯೊಂದು ಭಾರತದಲ್ಲಿ 36 ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ಘೋಷಣೆ ಮಾಡುತ್ತದೆ ಅಂದರೆ ಅಚ್ಚರಿ ಆಗಲ್ಲವಾ? ಈ ಕಂಪೆನಿಯ ಬಗ್ಗೆ ಕೆಲ ಮೂಲಭೂತ ಅಂಶಗಳನ್ನು ಗಮನಿಸುವಾಗ ಆಸಕ್ತಿಕರವಾದ ವಿಚಾರಗಳು ಗಮನ ಸೆಳೆಯುತ್ತವೆ.

Landomus Realty Ventures Private Limited ಎಂಬುದು ಅನ್​ಲಿಸ್ಟೆಡ್ ಸರ್ಕಾರೇತರ ಕಂಪೆನಿ. ಅಂದರೆ ಯಾವ ಷೇರು ಮಾರುಕಟ್ಟೆಯಲ್ಲಿ ವಹಿವಾಟನ್ನು ಕೂಡ ನಡೆಸಿಲ್ಲ. ಕರ್ನಾಟಕದ ಬೆಂಗಳೂರಿನಲ್ಲಿ ಕಂಪೆನಿ ಎಂದು ರಿಜಿಸ್ಟರ್ ಆಗಿದೆ. ಇದರ ನೋಂದಾಯಿತ ವಿಳಾಸ ಏನು ಗೊತ್ತಾ? S- 415; ನಾಲ್ಕನೇ ಅಂತಸ್ತು, ಮಣಿಪಾಲ್ ಸೆಂಟರ್; #47; ಡಿಕೆನ್ಸನ್ ರಸ್ತೆ; ಬೆಂಗಳೂರು. ಸದ್ಯಕ್ಕೆ ಕಂಪೆನಿ ಸಕ್ರಿಯವಾಗಿಯೇ ಇದೆ. 31-3-2018ರ ತನಕ ಅಂದರೆ ಹಣಕಾಸು ವರ್ಷ 2017-18ರ ತನಕ ವಾರ್ಷಿಕ ರಿಟರ್ನ್ಸ್ ಫೈಲ್ ಆಗಿದೆ.

ಈ ಕಂಪೆನಿಗೆ ಯಾವುದೇ ನಿರ್ದೇಶಕರು ಅಂತಿಲ್ಲ. ಅವರನ್ನೆಲ್ಲ ರಿಜಿಸ್ಟ್ರಾರ್ ಆಫ್ ಕಂಪೆನಿಯಿಂದ ಸೆಕ್ಷನ್ 164(2) ಅಥವಾ ಡಿಐಎನ್​ನಿಂದ ಅಮಾನ್ಯ ಮಾಡಲಾಗಿದೆ. ಅದಕ್ಕೆ ಕಾರಣ ಏನು ಅಂದರೆ DIR-3 KYC ಫಾರ್ಮ್ ಭರ್ತಿ ಮಾಡಿಲ್ಲ. ಈ ಕಂಪೆನಿಯು CIN U70100KA2015PTC081640 ಸಂಖ್ಯೆ ಅಡಿ ಕಾಣಲು ಸಿಗುತ್ತದೆ. ಇಲ್ಲಿಯ ತನಕ ಮೂವರು ನಿರ್ದೇಶಕರು ಮತ್ತು ಶೂನ್ಯ ಸಿಗ್ನೇಟರೀಸ್ ಈ ಕಂಪೆನಿ ಜತೆಗೆ ಗುರುತಿಸಿಕೊಂಡಿದ್ದಾರೆ.

ಆದರೆ, ಇಂಥ ಹಿನ್ನೆಲೆಯ ಕಂಪೆನಿಯೊಂದು ಒಂದು ದಿನ ಬೆಳ್ಳಂಬೆಳಗ್ಗೆ ಲಕ್ಷಾಂತರ ರೂಪಾಯಿ ಮೌಲ್ಯದ ಜಾಹೀರಾತು ನೀಡಿ, ಭಾರತದಲ್ಲಿ 36 ಲಕ್ಷ ಕೋಟಿ ರೂಪಾಯಿಯನ್ನು ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಇದು ಬರೀ ಘೋಷಣೆಯಲ್ಲ, ಪ್ರಧಾನಮಂತ್ರಿಗಳನ್ನು ಈ ಬಗ್ಗೆ ಮನವಿ ಕೂಡ ಮಾಡಲಾಗಿದೆ. ಈ ಕಂಪೆನಿಯು ತೋರಿಸಿಕೊಂಡಿರುವಂತೆ ಅದರ ಕಳೆದ ವರ್ಷದ ಆದಾಯವೇ 36 ಕೋಟಿ. ಅಂಥದ್ದೊಂದು ಕಂಪೆನಿ 36 ಲಕ್ಷ ಕೋಟಿ ಹೂಡುವುದಾಗಿ ಹೇಳಿದೆ. ಇನ್ನೂ ಆಸಕ್ತಿಕರ ಸಂಗತಿ ಏನೆಂದರೆ, ಮಣಿಪಾಲ್ ಸೆಂಟರ್​ನಲ್ಲಿ ಈ ಕಂಪೆನಿಯ ಆಫೀಸ್ ಇದೆಯಾ ಅಂತ ನೋಡಿದರೆ, ಉತ್ತರ “ಇಲ್ಲ” ಅಂತಲೇ ಸಿಗುತ್ತದೆ.

ಇಂಥದ್ದೊಂದು ದೊಡ್ಡ ಹೂಡಿಕೆ ಬಗ್ಗೆ ಘೋಷಣೆ ಮಾಡಿದ ಮೇಲೆ ಅಥವಾ ಅದಕ್ಕೂ ಮುಂಚೆ ಸರ್ಕಾರದ ಜತೆಗೆ ಈ ಕಂಪೆನಿಯಾಗಲೀ ಅಥವಾ ನಿರ್ದೇಶಕರಾಗಲೀ ಯಾವುದೇ ಮಾತುಕತೆ ನಡೆಸಿದಂತೆ ಕಾಣುವುದಿಲ್ಲ. ಆ ಜಾಹೀರಾತು ಪ್ರಕಟವಾದ ಮೇಲೆ ಸರ್ಕಾರದಿಂದಲೂ ಯಾವುದೇ ಅಭಿಪ್ರಾಯ ಹೊರಬಿದ್ದಿಲ್ಲ. ತಕ್ಷಣದ ಮಟ್ಟಿಗೆ ಇಲ್ಲಿರುವ ಮಾಹಿತಿಯ ಬೆನ್ನು ಬಿದ್ದು ಮಾಧ್ಯಮಗಳ ಹುಡುಕುತ್ತಿವೆ.

ಇದನ್ನೂ ಓದಿ: ವರ್ಷಕ್ಕೆ 36 ಕೋಟಿ ರೂ. ಆದಾಯ ಇರುವ ಕಂಪೆನಿ ಭಾರತದಲ್ಲಿ 36,000,000,000,000 ರೂಪಾಯಿ ಹೂಡಲಿದೆಯಂತೆ

(Landomus Realty Ventures ltd offered Rs 36 lakh crore through advertisement. Here is the background of company)

Published On - 7:05 pm, Mon, 24 May 21