ಈ ಹಿಂದಿನ ಅಸೆಸ್ಮೆಂಟ್ ವರ್ಷ, ಅಂದರೆ AY 2020-21 ಆದಾಯ ತೆರಿಗೆ ರಿಟರ್ನ್ಸ್ (ITR) ಇನ್ನೂ ದೃಢೀಕರಣ ಮಾಡಿಲ್ಲ ಅಂತಾದಲ್ಲಿ ಅದಕ್ಕೆ ಕೊನೆ ಅವಕಾಶವೊಂದಿದೆ. ಅಸೆಸ್ಮೆಂಟ್ ವರ್ಷ 2020-21ಕ್ಕೆ ಆದಾಯ ತೆರಿಗೆ ರಿಟರ್ನ್ ದೃಢೀಕರಣಕ್ಕೆ 2022ರ ಫೆಬ್ರವರಿ 28ನೇ ತಾರೀಕು ಕೊನೆ ದಿನವಾಗಿದೆ. ಕಳೆದ ವರ್ಷ ಫೈಲ್ ಮಾಡಿದ್ದರಲ್ಲಿ ದೃಢೀಕರಣಕ್ಕೆ ಬಾಕಿಯಿರುವ ಎಲ್ಲ ಆದಾಯ ತೆರಿಗೆ ರಿಟರ್ನ್ಸ್, ಒಂದು ಐಟಿಆರ್-V ಸಲ್ಲಿಸಿಲ್ಲ ಎಂಬ ಕಾರಣಕ್ಕೋ ಅಥವಾ ಇ- ವೆರಿಫಿಕೇಷನ್ ಆಗಿಲ್ಲ ಅಂತಲೋ ಹಾಗೇ ಉಳಿದುಕೊಂಡಿದ್ದಲ್ಲಿ ಫೆಬ್ರವರಿ 28, 2022ರೊಳಗೆ ಮಾಡಬಹುದು. ಡಿಸೆಂಬರ್ 28, 2021ರಂದು ಹೊರಡಿಸಿದ ಸುತ್ತೋಲೆಯಿಂದ ಇದು ಗೊತ್ತಾಗಿದೆ. ಇನ್ನೂ ಮುಂದುವರಿದು, ಒಂದು ಸಲ ಐಟಿಆರ್ ಖಚಿತಗೊಂಡಲ್ಲಿ ಆದಾಯ ತೆರಿಗೆ ಇಲಾಖೆಯು ಈ ತೆರಿಗೆ ರಿಟರ್ನ್ಸ್ ಅನ್ನು ಜೂನ್ 30, 2022ರೊಳಗೆ ಪೂರ್ಣಗೊಳಿಸುತ್ತದೆ.
ವೈಯಕ್ತಿಕ ತೆರಿಗೆ ಪಾವತಿದಾರರು ಫೈಲ್ ಮಾಡಿದ 120 ದಿನದೊಳಗೆ ಐಟಿಆರ್ ವ್ಯಾಲಿಡೇಟ್ ಮಾಡಬೇಕು ಎಂಬುದು ಆದಾಯ ತೆರಿಗೆ ನಿಯಮ. ಒಂದು ವೇಳೆ ವೇಳೆ ಐಟಿಆರ್ ದೃಢೀಕರಣ ಸಾಧ್ಯವಿಲ್ಲ ಅಂತಾದಲ್ಲಿ, ಅವು “ದೋಷಪೂರಿತ ರಿಟರ್ನ್” ಎಂದಾಗುತ್ತದೆ. ಅಂಥ ಐಟಿಆರ್ ದೃಢೀಕರಣ ಆಗುವ ತನಕ ತೆರಿಗೆ ಇಲಾಖೆಯು ಸ್ವೀಕರಿಸುವುದಿಲ್ಲ. ಆ ವರ್ಷ ತೆರಿಗೆ ರಿಟರ್ನ್ ಫೈಲ್ ಮಾಡಿಲ್ಲ ಅಂತಲೇ ಭಾವಿಸಲಾಗುತ್ತದೆ. ಆದಾಯ ತೆರಿಗೆ ಇತ್ತೀಚಿನ ಟ್ವೀಟ್ನಲ್ಲಿ, ಅಸೆಸ್ಮೆಂಟ್ ವರ್ಷ 2020-21 ವರ್ಷಕ್ಕೆ ಐಟಿಆರ್ ದೃಢೀಕರಣಕ್ಕೆ ಇರುವ ಕೊನೆ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ. ಒಂದು ವೇಳೆ ದೃಢೀಕರಣ ಆಗಲಿಲ್ಲ ಅಂದರೆ ಐಟಿಆರ್ ಫೈಲಿಂಗ್ ಅಪೂರ್ಣ. ಅಸೆಸ್ಮೆಂಟ್ ವರ್ಷ 2020-21 ದೃಢೀಕರಣಕ್ಕೆ ಫೆಬ್ರವರಿ 28, 2022 ಕೊನೆ ದಿನ ಎಂದು ಹೇಳಲಾಗಿದೆ.
ಐಟಿಆರ್ ದೃಢೀಕರಣ ಮಾಡುವುದು ಹೇಗೆ?
ಐಟಿಆರ್ ದೃಢೀಕರಣಕ್ಕೆ ಆರು ವಿವಿಧ ವಿಧಾನಗಳಿವೆ. ಅವುಗಳೆಂದರೆ:
– ಆಧಾರ್ ಒಟಿಪಿ ಬಳಸಿ,
– ನೆಟ್ ಬ್ಯಾಂಕಿಂಗ್ ಬಳಸಿ ಇ-ಫೈಲಿಂಗ್ ಖಾತೆಗೆ ಲಾಗ್ ಇನ್ ಆಗುವ ಮೂಲಕ,
– ಇವಿಸಿ ಆಧಾರಿತ ಬ್ಯಾಂಕ್ ಖಾತೆ ಸಂಖ್ಯೆಯನ್ನು ಬಳಸಿ,
– ಡಿಮ್ಯಾಟ್ ಖಾತೆ ಸಂಖ್ಯೆ ಆಧಾರಿತ ಇವಿಸಿಯನ್ನು ಬಳಸಿ,
– ಬ್ಯಾಂಕ್ ಎಟಿಎಂ ಆಧಾರಿತ ಇವಿಸಿ ಬಳಸಿ, ಮತ್ತು
– ಐಟಿಆರ್- V ಭೌತಿಕ ನಕಲಿಗೆ ಸಹಿ ಮಾಡಿ, ಬೆಂಗಳೂರಿನ ಸಿಪಿಸಿಗೆ ಕಳುಹಿಸಬಹುದು.
ಇದನ್ನೂ ಓದಿ: Income Tax Returns: ಆದಾಯ ತೆರಿಗೆ ಬಾರದಿದ್ದರೂ ಐಟಿಆರ್ ಫೈಲ್ ಮಾಡುವುದರಿಂದ ಸಿಗುವ 6 ಅನುಕೂಲಗಳಿವು