Recurring Deposit: ರೆಕರಿಂಗ್​ ಡೆಪಾಸಿಟ್​ ಮೇಲೆ ಉತ್ತಮ ಬಡ್ಡಿ ಸಿಗುವ ನಾಲ್ಕು ಖಾಸಗಿ ಬ್ಯಾಂಕ್​ಗಳಿವು

| Updated By: Srinivas Mata

Updated on: Sep 29, 2021 | 1:15 PM

ರೆಕರಿಂಗ್ ಡೆಪಾಸಿಟ್​ ಮೇಲೆ ಉತ್ತಮ ಬಡ್ಡಿ ದರ ನೀಡುವ ನಾಲ್ಕು ಖಾಸಗಿ ಬ್ಯಾಂಕ್​ಗಳ ಮಾಹಿತಿ ಇಲ್ಲಿದೆ. ವಿವಿಧ ಅವಧಿಗೆ ಸಾಮಾನ್ಯರಿಗೆ, ಹಿರಿಯ ನಾಗರಿಕರಿಗೆ ನೀಡುವ ರಿಟರ್ನ್ಸ್ ಎಷ್ಟು ಎಂಬ ಮಾಹಿತಿ ಇಲ್ಲಿದೆ.

Recurring Deposit: ರೆಕರಿಂಗ್​ ಡೆಪಾಸಿಟ್​ ಮೇಲೆ ಉತ್ತಮ ಬಡ್ಡಿ ಸಿಗುವ ನಾಲ್ಕು ಖಾಸಗಿ ಬ್ಯಾಂಕ್​ಗಳಿವು
ಸಾಂದರ್ಭಿಕ ಚಿತ್ರ
Follow us on

ರೆಕರಿಂಗ್​ ಡೆಪಾಸಿಟ್ (Recurring Deposit) ಅಥವಾ ಸಂಚಿತ ನಿಧಿ ಎಂಬುದು ಬಹಳ ಹೆಸರಾಂತ ಉಳಿತಾಯ ಇನ್​ಸ್ಟ್ರುಮೆಂಟ್. ಭವಿಷ್ಯದ ಗುರಿಯೊಂದಿಗೆ ದೊಡ್ಡ ಮೊತ್ತವನ್ನು ಉಳಿತಾಯ ಮಾಡಲು ಸಣ್ಣ ಹೂಡಿಕೆದಾರರಿಗೆ ಇರುವ ಉತ್ತಮ ಮಾರ್ಗ. ಈ ಹೂಡಿಕೆಯಲ್ಲಿ ಅಪಾಯ ಇಲ್ಲ. ಜತೆಗೆ ನಿಶ್ಚಿತ ರಿಟರ್ನ್ ಕೂಡ ಬರುತ್ತದೆ. ಇದರ ಮೂಲಕ ಸಣ್ಣ ಹೂಡಿಕೆದಾರರು ಭವಿಷ್ಯದ ಖರ್ಚನ್ನು ನಿಭಾಯಿಸಬಹುದು ಎಂಬ ಉದ್ದೇಶ ಇರಿಸಿಕೊಂಡಿರುತ್ತಾರೆ. ಇನ್ನು ಈ ರೆಕರಿಂಗ್ ಡೆಪಾಸಿಟ್​ಗೆ ತಿಂಗಳು ತಿಂಗಳು ಠೇವಣಿ ಮಾಡಬಹುದು. ಹಾಗೆ ಠೇವಣಿ ಇಡುತ್ತಾ ಹೋದಂತೆ ಆ ಅವಧಿಯ ಉದ್ದಕ್ಕೂ ಬಡ್ಡಿ ಸೇರ್ಪಡೆ ಆಗುತ್ತಾ ಹೋಗುತ್ತದೆ. ಯಾರಿಗೆ ಮ್ಯೂಚುವಲ್ ಫಂಡ್​ನಲ್ಲಿ ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್​ ಪ್ಲಾನ್ ಮೂಲಕ ಹೂಡಿಕೆ ಮಾಡುವುದು ಹಾಗೂ ​ಅಪಾಯ ತೆಗೆದುಕೊಳ್ಳುವುದು ಇಷ್ಟವಿರುವುದಿಲ್ಲವೋ ಅಂಥವರಿಗೆ ಈ ರೆಕರಿಂಗ್ ಡೆಪಾಸಿಟ್ ಸೂಕ್ತವಾಗುತ್ತದೆ. ಆರ್​.ಡಿ.ಯಲ್ಲಿ ರಿಟರ್ನ್ ಎಂಬುದು ಆಯಾ ಬ್ಯಾಂಕ್​ಗಳಲ್ಲಿ ನೀಡುವ ಬಡ್ಡಿ ದರದ ಮೇಲೆ ನಿರ್ಧಾರ ಆಗುತ್ತದೆ. ಹೆಚ್ಚಿನ ಬಡ್ಡಿ ದರ ಇರುವ ಕಡೆ ಆರ್​ಡಿಗೆ ಹೆಚ್ಚಿನ ರಿಟರ್ನ್ಸ್ ಸಿಗುತ್ತದೆ. ಆಕರ್ಷಕ ಬಡ್ಡಿ ದರ ನೀಡುವ ನಾಲ್ಕು ಖಾಸಗಿ ಬ್ಯಾಂಕ್​ಗಳ ವಿವರ ಇಲ್ಲಿದೆ:

ಯೆಸ್​ ಬ್ಯಾಂಕ್
6 ತಿಂಗಳಿಂದ 10 ವರ್ಷದ ಅವಧಿಗೆ ಯೆಸ್ ಬ್ಯಾಂಕ್​ನಲ್ಲಿ ಆರ್​ಡಿ ಖಾತೆ ತೆರೆಯಬಹುದು. ಶೇ 5ರಿಂದ ಶೇ 6.50 ತನಕ ಎಷ್ಟು ಅವಧಿಯದು ಎಂಬ ಆಧಾರದಲ್ಲಿ ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ 50 ಬಿಪಿಎಸ್​ನಿಂದ 75 ಬಿಪಿಎಸ್​ ಹೆಚ್ಚಿನ ಬಡ್ಡಿ ದರ ಸಿಗುತ್ತದೆ. 33 ತಿಂಗಳ ಅವಧಿವರೆಗೆ 50 ಬಿಪಿಎಸ್​ ಹೆಚ್ಚುವರಿ ಬಡ್ಡಿ ಸಿಗುತ್ತದೆ. 36 ತಿಂಗಳಿಂದ 10 ವರ್ಷದ ತನಕ ಹಿರಿಯ ನಾಗರಿಕರಿಗೆ 75 ಬಿಪಿಎಸ್​ ಹೆಚ್ಚಿನ ಬಡ್ಡಿ ಸಿಗುತ್ತದೆ (60 ವರ್ಷದೊಳಗಿನವರಿಗಿಂತ). ಕನಿಷ್ಠ 6 ತಿಂಗಳ ಅವಧಿಗೆ ಸಾಮಾನ್ಯರಿಗೆ ಶೇ 5ರ ವಾರ್ಷಿಕ ದರ, ಹಿರಿಯ ನಾಗರಿಕರಿಗೆ ಶೇ 5.50 ದರ ಸಿಗುತ್ತದೆ. 5 ವರ್ಷದಿಂದ 10 ವರ್ಷದ ತನಕದ ಅವಧಿಗೆ ಸಾಮಾನ್ಯರಿಗೆ ಶೇ 6.50 ಹಾಗೂ ಹಿರಿಯ ನಾಗರಿಕರಿಗೆ ಶೇ 7.25ರ ಬಡ್ಡಿ ಸಿಗುತ್ತದೆ.

ಆರ್​ಬಿಎಲ್​ ಬ್ಯಾಂಕ್
ಆರ್​ಬಿಎಲ್​ ಬ್ಯಾಂಕ್​ನಿಂದ 6 ತಿಂಗಳಿಂದ 10 ವರ್ಷದ ಅವಧಿಗೆ ಆರ್​.ಡಿ. ಖಾತೆ ತೆರೆಯಲಾಗುತ್ತದೆ. ಈ ಅವಧಿಗೆ ಶೇ 5.25ರಿಂದ ಶೇ 6.75ರ ತನಕ ಬಡ್ಡಿ ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ ಹೆಚ್ಚುವರಿಯಾಗಿ 50 ಬಿಪಿಎಸ್​ ಬಡ್ಡಿ ದರ ನೀಡುತ್ತದೆ. ಕನಿಷ್ಠ ತಿಂಗಳಿಗೆ 1000 ರೂಪಾಯಿ ಠೇವಣಿ ಮಾಡುವುದರೊಂದಿಗೆ ಆರ್​ಡಿ ಖಾತೆಯನ್ನು ತೆರೆಯಬಹುದು. ಸೆಪ್ಟೆಂಬರ್ 1, 2021ರಿಂದ ಅನ್ವಯ ಆಗುವಂತೆ ಬಡ್ಡಿ ದರವನ್ನು ಪರಿಷ್ಕರಣೆ ಮಾಡಲಾಗಿದೆ.

ಆಕ್ಸಿಸ್ ಬ್ಯಾಂಕ್
ಈ ಬ್ಯಾಂಕ್​ನಲ್ಲಿ ಖಾತೆದಾರರು ನೆಟ್​ ಬ್ಯಾಂಕಿಂಗ್​ ಮೂಲಕವಾಗಿ ಆನ್​ಲೈನ್​ನಲ್ಲಿ​ ಖಾತೆ ತೆರೆಯಬಹುದು. ತಿಂಗಳಿಗೆ ಕನಿಷ್ಠ 500 ರೂಪಾಯಿ ಮೊತ್ತದೊಂದಿಗೆ ಆರಂಭಿಸುವುದಕ್ಕೆ ಅವಕಾಶ ಇದೆ. ಇನ್ನು ಅವಧಿಯು 6 ತಿಂಗಳಿಂದ 10 ವರ್ಷದ ತನಕ ಇರುತ್ತದೆ. ಸೆಪ್ಟೆಂಬರ್ 23, 2021ರಿಂದ ಅನ್ವಯ ಆಗುವಂತೆ ಬಡ್ಡಿ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಮೊತ್ತ, ಅವಧಿಯ ಆಧಾರದಲ್ಲಿ ಕನಿಷ್ಠ ಶೇ 2.50ರಿಂದ ಆರಂಭವಾಗಿ ಗರಿಷ್ಠ ಶೇ 5.75 ತನಕ ಬಡ್ಡಿ ಸಿಗುತ್ತದೆ.

ಐಡಿಎಫ್​ಸಿ ಫಸ್ಟ್​ ಬ್ಯಾಂಕ್
ಈ ಬ್ಯಾಂಕ್​ನಲ್ಲಿ ತಿಂಗಳಿಗೆ ಕನಿಷ್ಠ 100 ರೂಪಾಯಿ ಕಟ್ಟುವುದರೊಂದಿಗೆ ಆರ್​ಡಿ ಖಾತೆ ತೆರೆಯಬಹುದು. ಒಂದು ತಿಂಗಳಿಗೆ ಗರಿಷ್ಠ 75 ಸಾವಿರ ರೂಪಾಯಿ ಠೇವಣಿ ಮಾಡಬಹುದು. 6 ತಿಂಗಳಿಂದ 10 ವರ್ಷದ ಅವಧಿ ತನಕ ಆರ್​.ಡಿ. ಮಾಡುವುದಕ್ಕೆ ಅನುವು ಮಾಡಿಕೊಡುತ್ತದೆ. ಬಡ್ಡಿ ದರವು ಶೇ 5ರಿಂದ ಶೇ 6ರಷ್ಟಿದೆ. ಹಿರಿಯ ನಾಗರಿಕರಿಗೆ ಹೆಚ್ಚುವರಿಯಾಗಿ 50 ಬೇಸಿಸ್ ಪಾಯಿಂಟ್ ಬಡ್ಡಿ ದರ ದೊರೆಯುತ್ತದೆ.

ಇದನ್ನೂ ಓದಿ: TDS: ಬ್ಯಾಂಕ್​ ಠೇವಣಿ ಮೇಲೆ ಬರುವ ಬಡ್ಡಿಗೆ ಪರಿಶಿಷ್ಟ ಪಂಗಡವರಿಗೆ ಟಿಡಿಎಸ್​ ಕಡಿತವಿಲ್ಲ; ಕೇಂದ್ರದ ಅಧಿಸೂಚನೆ