LIC IPO: ಎಲ್​ಐಸಿ ಐಪಿಒ ದರ, ದಿನಾಂಕ, ಪಾಲಿಸಿದಾರರ ರಿಯಾಯಿತಿ, ಕೋಟಾ ಮಾಹಿತಿ ಇಲ್ಲಿದೆ

LIC IPO: ಎಲ್​ಐಸಿ ಐಪಿಒ ದರ, ದಿನಾಂಕ, ಪಾಲಿಸಿದಾರರ ರಿಯಾಯಿತಿ, ಕೋಟಾ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ

ಎಲ್​ಐಸಿ ಐಪಿಒ ಗಾತ್ರ, ವಿತರಣೆ ದರ, ಪಾಲಿಸಿದಾರರಿಗೆ ರಿಯಾಯಿತಿ ಇತ್ಯಾದಿ ವಿವರಗಳು ಬಹಿರಂಗ ಆಗಿದೆ. ಈ ಬಗ್ಗೆ ಸರ್ಕಾರದಿಂದ ಬುಧವಾರ ಘೋಷಣೆ ಹೊರಬೀಳಲಿದೆ.

TV9kannada Web Team

| Edited By: Srinivas Mata

Apr 27, 2022 | 1:30 PM

ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದಿಂದ (LIC) ಎಲ್​ಐಸಿ ಐಪಿಒ ಆಫರ್ ಬೆಲೆ, ಪಾಲಿಸಿದಾರರು ಮತ್ತು ರೀಟೇಲ್ ಹೂಡಿಕೆದಾರರಿಗೆ ರಿಯಾಯಿತಿ ಇತ್ಯಾದಿ ಮಾಹಿತಿಯನ್ನು ಬುಧವಾರ ಘೋಷಣೆ ಮಾಡಲಾಗಿದೆ. ದರದ ಬ್ಯಾಂಡ್ ಪ್ರತಿ ಷೇರಿಗೆ 902ರಿಂದ 949 ಇದೆ ಎಂದು ಹೂಡಿಕೆ ಹಾಗೂ ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ ಕಾರ್ಯದರ್ಶಿ ತುಹೀನ್ ಕಾಂತ್ ಪಾಂಡೆ ತಿಳಿಸಿದ್ದಾರೆ. ಹಂಚಿಕೆಯ ಆಧಾರವು ಮೇ 12 ರಂದು ಇರುತ್ತದೆ ಮತ್ತು ಷೇರುಗಳನ್ನು ಮೇ 16 ರಂದು ಡಿಮ್ಯಾಟ್ ಖಾತೆಗಳಲ್ಲಿ ಜಮೆ ಮಾಡಲಾಗುತ್ತದೆ. ಕಂಪೆನಿಯು ಮೇ 17 ರಂದು ವಿನಿಮಯ ಕೇಂದ್ರಗಳಲ್ಲಿ ಲಿಸ್ಟ್ ಮಾಡಲು ಯೋಜಿಸಿದೆ. ಎಲ್​ಐಸಿ ಪಾಲಿಸಿದಾರರಾಗಿದ್ದಲ್ಲಿ ಪ್ರತಿ ಷೇರಿಗೆ 60 ರೂಪಾಯಿ ರಿಯಾಯಿತಿ ಸಿಗುತ್ತದೆ. ಇನ್ನು ರೀಟೇಲ್ ಹೂಡಿಕೆದಾರರು ಹಾಗೂ ಸಿಬ್ಬಂದಿಗೆ ಷೇರಿಗೆ 40 ರೂಪಾಯಿ ರಿಯಾಯಿತಿ ಸಿಗುತ್ತದೆ. ಎಲ್​ಐಸಿಗೆ 30 ಕೋಟಿ ಪಾಲಿಸಿದಾರರಿದ್ದು, ಹೊಸ ವ್ಯವಹಾರ ಪ್ರೀಮಿಯಂನಲ್ಲಿ ಶೇ 61ರಷ್ಟು ಮಾರುಕಟ್ಟೆ ಪಾಲನ್ನು, ಪಾಲಿಸಿಗಳ ಸಂಖ್ಯೆಯಲ್ಲಿ ಶೇ 71ರಷ್ಟನ್ನು ಹೊಂದಿದೆ. ಇನ್ಷೂರೆನ್ಸ್ ಉತ್ಪನ್ನಗಳ ವಿಚಾರಕ್ಕೆ ಬಂದಲ್ಲಿ ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ ಅತ್ಯಂತ ಹಳೆಯ ಹಾಗೂ ಅತಿ ನಂಬಿಕಸ್ತ ಬ್ರ್ಯಾಂಡ್ ಆಗಿದೆ.

ಇನ್ಷೂರೆನ್ಸ್ ಪ್ಲಾನ್​ಗಳಿಂದ ಮನಿಬ್ಯಾಕ್​ ಸ್ಕೀಮ್, ಎಂಡೋಮೆಂಟ್ ಪಾಲಿಸಿಗಳ ತನಕ ವಿವಿಧ ಶ್ರೇಣಿಯ ಉತ್ಪನ್ನಗಳನ್ನು ವಿವಿಧ ವಯಸ್ಸಿನ ಗುಂಪು, ಎಲ್ಲ ಬಗೆಯ ಗ್ರಾಹಕರಿಗೆ ಒದಗಿಸುತ್ತದೆ. ಸರ್ಕಾರಿ ಸ್ವಾಮ್ಯದ ಈ ಇನ್ಷೂರೆನ್ಸ್ ಕಂಪೆನಿ ಸಾರ್ವಜನಿಕ ಷೇರು ವಿತರಣೆಗೆ ಮುಂದಾಗಿದೆ. ಎಲ್​ಐಸಿಯ ಈ ಮೆಗಾ ಐಪಿಒ ಬಗ್ಗೆ ನಿಮಗೆ ಗೊತ್ತಿರಬೇಕಾದ ಮಾಹಿತಿಗಳು ಇಲ್ಲಿವೆ.

ಎಲ್ಐಸಿ ಐಪಿಒ ದಿನಾಂಕ ಎಲ್​ಐಸಿ ಐಪಿಒ ಮೇ 4ನೇ ತಾರೀಕು ಆರಂಭವಾಗಲಿದ್ದು, ಮೇ 9ಕ್ಕೆ ಮುಕ್ತಾಯ ಆಗಲಿದೆ.  ಎಲ್​ಐಸಿ ಐಪಿಒ ಆ್ಯಂಕರ್ ಮೇ 2ರಿಂದ ಆರಂಭಗೊಳ್ಳುತ್ತದೆ.

ಎಲ್​ಐಸಿ ಐಪಿಒ ದರ ಈ ಐಪಿಒ ದರದ ಬ್ಯಾಂಡ್ 902ರಿಂದ 949 ರೂಪಾಯಿ ದರ ನಿಗದಿ ಮಾಡಲಾಗುವುದು. ಪಾಲಿಸಿದಾರರಿಗೆ 60 ರೂಪಾಯಿ ಮತ್ತು ರೀಟೇಲ್ ಹೂಡಿಕೆದಾರರು ಹಾಗೂ ಎಲ್​ಐಸಿ ಸಿಬ್ಬಂದಿಗೆ 40 ರೂಪಾಯಿ ರಿಯಾಯಿತಿ ಸಿಗುತ್ತದೆ.

ಐಪಿಒ ಕೋಟಾ ಹೂಡಿಕೆಯನ್ನು ಉತ್ತೇಜಿಸುವ ಕಾರಣಕ್ಕೆ ಸರ್ಕಾರದಿಂದ ಇಶ್ಯೂ ಗಾತ್ರದ ಶೇ 10ರಷ್ಟನ್ನು ಪಾಲಿಸಿದಾರರಿಗೆ ಮೀಸಲಿರಿಸಲಾಗಿದೆ. ಉತ್ತಮ ಸಂಖ್ಯೆಯ ಷೇರುಗಳನ್ನು ಎಲ್​ಐಸಿ ಸಿಬ್ಬಂದಿಗೂ ಮೀಸಲಿಡಲಾಗಿದೆ.

ಬಾಕಿ ಉಳಿದ ಪ್ರಮಾಣದಲ್ಲಿ ಕ್ವಾಲಿಫೈಡ್ ಇನ್​ಸ್ಟಿಟ್ಯೂಷನಲ್ ಬೈಯರ್ಸ್​ಗೆ ಅರ್ಧದಷ್ಟನ್ನು ಮೀಸಲಿಡಲಾಗುವುದು. ಇದರಲ್ಲಿ ಶೇ 60ರಷ್ಟನ್ನು ವಿವೇಚನಾ ಆಧಾರದ ಮೇಲೆ ಆ್ಯಂಕರ್ ಹೂಡಿಕೆದಾರರಿಗೆ ಎತ್ತಿಡಲಾಗುವುದು. ಆ್ಯಂಕರ್​ ಹೂಡಿಕೆದಾರರಿಗೆ ಮೀಸಲಿಟ್ಟ ಭಾಗದಲ್ಲಿ ಮೂರನೇ ಒಂದು ಭಾಗವನ್ನು ದೇಶೀ ಮ್ಯೂಚುವಲ್ ಫಂಡ್​ಗಳಿಗೆ ಪಕ್ಕಕ್ಕೆ ಇಡಲಾಗಿದೆ. ಶೇ 15ರಷ್ಟನ್ನು ಸಾಂಸ್ಥಿಕೇತರ ಹೂಡಿಕೆದಾರರಿಗೆ ಎತ್ತಿಡಲಾಗಿದೆ. ಅದಾದ ಮೇಲೆ ಉಳಿಯುವ ಶೇ 35ರಷ್ಟು ರೀಟೇಲ್​ ಹೂಡಿಕೆದಾರರ ಪಾಲಿಗೆ ದೊರೆಯುತ್ತದೆ.

ಎಲ್​ಐಸಿ ಐಪಿಒ ಇಶ್ಯೂ ಗಾತ್ರ ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ ಮಂಡಳಿಯು ಈಚೆಗೆ ಐಪಿಒ ಗಾತ್ರವನ್ನು ಶೇ 5ರಿಂದ ಶೇ 3.5ಕ್ಕೆ ಇಳಿಸಲಾಗಿದೆ. ಸರ್ಕಾರದಿಂದ ಎಲ್​ಐಸಿಯಲ್ಲಿನ ಶೇ 3.5ರಷ್ಟು, ಅಂದರೆ 20,557 ಕೋಟಿ ರೂಪಾಯಿಯಷ್ಟನ್ನು ಮಾರಾಟಕ್ಕೆ ಇಡಲಿದೆ. ಅದು ಎಲ್​ಐಸಿಯಲ್ಲಿ 5.4 ಲಕ್ಷ ಕೋಟಿಗೆ ಮೌಲ್ಯಮಾಪನ ಮಾಡಿದೆ. ರಷ್ಯಾ- ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಮಾರುಕಟ್ಟೆಯ ಏರಿಳಿತದ ಕಾರಣಕ್ಕೆ ಸರ್ಕಾರ ಈ ನಿರ್ಧಾರ ಮಾಡಿದೆ.

ಕೇಂದ್ರ ಸರ್ಕಾರವು ಈ ಹಿಂದೆ 2022ರ ಮಾರ್ಚ್​ನಲ್ಲಿ ಎಲ್​ಐಸಿ ಐಪಿಒ ತರಬೇಕು ಎಂದಿತ್ತು. ತನ್ನ ಹೂಡಿಕೆ ಹಿಂತೆಗೆತದ ಭಾಗವಾಗಿ ಈ ನಿರ್ಧಾರ ಮಾಡಿತ್ತು. ಆದರೆ ರಷ್ಯಾ-ಉಕ್ರೇನ್ ಯುದ್ಧದ ನಕಾರಾತ್ಮಕ ಪರಿಣಾಮ ವಿಶ್ವದಾದ್ಯಂತದ ಷೇರು ಮಾರುಕಟ್ಟೆ ಮೇಲೆ ಬೀರಿದ್ದರಿಂದ ಯೋಜನೆ ಮುಂದಕ್ಕೆ ಹಾಕಿತು. ಜತೆಗೆ ಇಶ್ಯೂ ಗಾತ್ರವನ್ನು ಸಹ ಕಡಿತಗೊಳಿಸಿತು.

ಇದನ್ನೂ ಓದಿ: LIC IPO: ಎಲ್​ಐಸಿ ಐಪಿಒದಲ್ಲಿ ಭಾಗಿಯಾಗಬೇಕೆ? ನಿಮ್ಮ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

Follow us on

Related Stories

Most Read Stories

Click on your DTH Provider to Add TV9 Kannada