ಸಾಕಷ್ಟು ಸವಲತ್ತುಗಳಿರುವ ಇವತ್ತಿನ ಕಾಲದಲ್ಲಿ ಖರ್ಚು ಮಾಡಲು ಹೇರಳ ನೆಪಗಳಿವೆ. ಅಂತೆಯೇ, ಬಹುತೇಕ ಮಂದಿಗೆ ಸಾಲ ಅನಿವಾರ್ಯ ಆಗಿಹೋಗಿದೆ. ಒಮ್ಮೆ ಸಾಲದ ಸುಳಿಗೆ ಸಿಲುಕಿಬಿಟ್ಟರೆ ಅದರಿಂದ ಹೊರಬರುವುದು ಬಹಳ ಕಷ್ಟ. ಹಿಂದೆಲ್ಲಾ ಖಾಸಗಿ ಫೈನಾನ್ಷಿಯರ್ಗಳಲ್ಲಿ ಸಿಕ್ಕಾಪಟ್ಟೆ ಬಡ್ಡಿಗೆ ಸಾಲ ಪಡೆದು ಆಸ್ತಿಪಾಸ್ತಿ ಕಳೆದುಕೊಂಡ ಉದಾಹರಣೆ ಬಹಳ ಉಂಟು. ಈಗ ಬ್ಯಾಂಕುಗಳಲ್ಲಿ ಸುಲಭವಾಗಿ ಸಾಲ ಸಿಗುತ್ತದೆ. ಆದರೂ ಕೂಡ ಕಡಿಮೆ ಕ್ರೆಡಿಟ್ ಸ್ಕೋರ್ ಇತ್ಯಾದಿ ಬೇರೆ ಬೇರೆ ಕಾರಣಕ್ಕೆ ಬ್ಯಾಂಕುಗಳಲ್ಲಿ ಸಾಲ ಸಿಗದ ಜನರು ಆನ್ಲೈನ್ ಖದೀಮರ ಜಾಲಕ್ಕೆ (loan scam) ಸುಲಭವಾಗಿ ಬೀಳುತ್ತಾರೆ.
ಲೋನ್ ಆ್ಯಪ್ಗಳಲ್ಲಿ ಸುಲಭವಾಗಿ ಸಿಗುತ್ತದೆಂದು ಸಾಲ ಪಡೆದು ಬ್ಲ್ಯಾಕ್ಮೇಲ್ ಇತ್ಯಾದಿ ದೌರ್ಜನ್ಯಕ್ಕೆ ಒಳಗಾದ ಹಲವು ಪ್ರಕರಣಗಳು ನಿತ್ಯವೂ ಬೆಳಕಿಗೆ ಬರುತ್ತಲೇ ಇವೆ. ಈ ಆನ್ಲೈನ್ ವಂಚಕರು ಸಾಲ ಕೊಡುವುದು ನಿಜವೇ ಆದರೂ ವಿಪರೀತ ಬಡ್ಡಿದರ, ಪ್ರೋಸಸಿಂಗ್ ಫೀ ಇತ್ಯಾದಿ ವಿಧಿಸಿ ಹಿಂಸಿಸುವುದುಂಟು.
ಬ್ಯಾಂಕುಗಳಲ್ಲಿ ಸಾಲ ಪಡೆಯಲು ಯತ್ನಿಸಿ ವಿಫಲರಾದ ಮಂದಿ, ಅಥವಾ ತುರ್ತಾಗಿ ಹಣ ಬೇಕಿರುವ ಮಂದಿ ಸಾಮಾನ್ಯವಾಗಿ ಆನ್ಲೈನ್ ಲೋನ್ ಜಾಲಕ್ಕೆ ಬೀಳುತ್ತಾರೆ. ಇಮೇಲ್, ವಾಟ್ಸಾಪ್, ಟೆಲಿಗ್ರಾಮ್, ಎಸ್ಸೆಮ್ಮೆಸ್ ಹೀಗೆ ಬೇರೆ ಬೇರೆ ಪ್ಲಾಟ್ಫಾರ್ಮ್ಗಳಲ್ಲಿ ಸುಲಭವಾಗಿ ಲೋನ್ ಕೊಡಲಾಗುತ್ತದೆಂಬ ಮೆಸೇಜ್ ಕಳುಹಿಸಲಾಗುತ್ತದೆ. ಯಾವುದೇ ದಾಖಲೆ ಇಲ್ಲದೇ ಕೆಲವೇ ಕ್ಷಣಗಳಲ್ಲಿ ಲೋನ್ ಸ್ಯಾಂಕ್ಷನ್ ಆಗುತ್ತದೆ ಎಂಬ ಆಮಿಷ ಒಡ್ಡಲಾಗುತ್ತದೆ.
ಇದನ್ನೂ ಓದಿ: Bengaluru Airport: ಹೆಚ್ಚಿನ ಭಾರತೀಯ ವಿಮಾನ ನಿಲ್ದಾಣಗಳು ನಷ್ಟದಲ್ಲಿ; ಬೆಂಗಳೂರು ಏರ್ಪೋರ್ಟ್ ಅತಿಹೆಚ್ಚು ಲಾಭದಾಯಕ
ಈ ಮೆಸೇಜ್ನಲ್ಲಿರುವ ಲಿಂಕ್ ಕ್ಲಿಕ್ ಮಾಡಿದರೆ ಅನಧಿಕೃತ ಆ್ಯಪ್ ಡೌನ್ಲೋಡ್ ಆಗುತ್ತದೆ. ಅಥವಾ ಆನ್ಲೈನ್ ಫಾರ್ಮ್ ಪ್ರತ್ಯಕ್ಷವಾಗುತ್ತದೆ. ಆ ಆ್ಯಪ್ ಮೂಲಕ ನಿಮ್ಮ ಫೋನ್ನ ಎಲ್ಲಾ ವೈಯಕ್ತಿಕ ಮಾಹಿತಿಯು ಖದೀಮರಿಗೆ ದೊರಕಿಹೋಗುತ್ತದೆ.
ನಿಮಗೆ ತತ್ಕ್ಷಣಕ್ಕೆ ಸಾಲ ಸಿಗಬಹುದು. ಆದರೆ, ಬಡ್ಡಿದರ, ಪ್ರೋಸಸಿಂಗ್ ಫೀ ಇತ್ಯಾದಿ ಮಾಹಿತಿಯನ್ನು ಸರಿಯಾಗಿ ನೀಡುವುದಿಲ್ಲ. 1 ಲಕ್ಷ ರೂ ಸಾಲ ನೀಡಿದರೆ 20,000 ರೂನಷ್ಟು ಪ್ರೋಸಸಿಂಗ್ ಫೀ ಮುರಿದುಕೊಳ್ಳಬಹುದು. ಜೊತೆಗೆ ಬಡ್ಡಿದರ ತಿಂಗಳಿಗೆ ಶೇ. 10ಕ್ಕಿಂತಲೂ ಹೆಚ್ಚು ಇರಬಹುದು. ತಡವಾಗಿ ಕಟ್ಟಿದರೆ ಸಿಕ್ಕಾಪಟ್ಟೆ ದಂಡ ವಿಧಿಸಬಹುದು.
ಆನ್ಲೈನ್ ಆ್ಯಪ್ನವರು ಏನು ಮಾಡಿಯಾರು ಎಂದು ಸುಮ್ಮನಿರುವಂತಿಲ್ಲ. ನಿಮ್ಮ ಜುಟ್ಟು ಜನಿವಾರವನ್ನು ಅವರ ಕೈಗೆ ಕೊಟ್ಟಿರುತ್ತೀರಿ. ನಿಮ್ಮ ಮೊಬೈಲ್ನಲ್ಲಿರುವ ಫೋಟೋ ಮತ್ತಿತರ ವೈಯಕ್ತಿಕ ಮಾಹಿತಿ ಇಟ್ಟುಕೊಂಡು ನಿಮ್ಮನ್ನು ಬ್ಲ್ಯಾಕ್ಮೇಲ್ ಮಾಡುತ್ತಾರೆ. ನಿಮಗೆ ಫೋನ್ ಮಾಡಿ ಬೆದರಿಸುತ್ತಾರೆ. ರಿಕವರಿ ಏಜೆಂಟ್ಗಳು ನಿಮ್ಮ ಮನೆಬಾಗಿಲಿಗೆ ಬಂದು ಧಮಕಿ ಹಾಕುತ್ತಾರೆ.
ಇದನ್ನೂ ಓದಿ: ಶ್ರೀಲಂಕಾದಲ್ಲಿ ಅದಾನಿ ಗ್ರೂಪ್ಗೆ ಧನಸಹಾಯ ಕೊಡುವ ಮುನ್ನ ಹಿಂಡನ್ಬರ್ಗ್ ವರದಿ ಅವಲೋಕಿಸಿದ್ದ ಅಮೆರಿಕದ ಸರ್ಕಾರ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:50 pm, Tue, 5 December 23