Meta: ಮೊದಲ ಬಾರಿಗೆ ಪೂರ್ಣಾವಧಿ ಉದ್ಯೋಗದ ಆಫರ್ ರದ್ದುಗೊಳಿಸಿದ ಮೆಟಾ
ಇತ್ತೀಚೆಗಷ್ಟೇ ಉದ್ಯೋಗಿಗಳ ಸಾಮೂಹಿಕ ವಜಾ ನಿರ್ಧಾರ ಕೈಗೊಂಡಿದ್ದ ಮಾರ್ಕ್ ಝುಕರ್ಬರ್ಗ್ ಒಡೆತನದ ಮೆಟಾ ಇದೀಗ ಮೊದಲ ಬಾರಿಗೆ ಪೂರ್ಣಾವಧಿ ಉದ್ಯೋಗದ ಆಫರನ್ನೂ ರದ್ದುಗೊಳಿಸಿದೆ. ಜಾಗತಿಕ ಆರ್ಥಿಕ ಹಿಂಜರಿತ ಮತ್ತು ಕಠಿಣ ಪರಿಸ್ಥಿತಿ ಎದುರಿಸುತ್ತಿರುವುದರಿಂದ ಈ ಕ್ರಮ ಕೈಗೊಂಡಿರುವುದಾಗಿ ಕಂಪನಿ ಹೇಳಿದೆ.
ನವದೆಹಲಿ: ಇತ್ತೀಚೆಗಷ್ಟೇ ಉದ್ಯೋಗಿಗಳ ಸಾಮೂಹಿಕ ವಜಾ ನಿರ್ಧಾರ ಕೈಗೊಂಡಿದ್ದ ಮಾರ್ಕ್ ಝುಕರ್ಬರ್ಗ್ (Mark Zuckerberg) ಒಡೆತನದ ಮೆಟಾ (Meta) ಇದೀಗ ಮೊದಲ ಬಾರಿಗೆ ಪೂರ್ಣಾವಧಿ ಉದ್ಯೋಗದ ಆಫರನ್ನೂ ರದ್ದುಗೊಳಿಸಿದೆ. ಜಾಗತಿಕ ಆರ್ಥಿಕ ಹಿಂಜರಿತ (Global Recession) ಮತ್ತು ಕಠಿಣ ಪರಿಸ್ಥಿತಿ ಎದುರಿಸುತ್ತಿರುವುದರಿಂದ ಈ ಕ್ರಮ ಕೈಗೊಂಡಿರುವುದಾಗಿ ಕಂಪನಿ ಹೇಳಿದೆ. ಸದ್ಯದ ಪರಿಸ್ಥಿತಿಯಲ್ಲಿ ನೇಮಕಾತಿ ಅಗತ್ಯಗಳ ಬಗ್ಗೆ ನಾವು ಪರಾಮರ್ಶಿಸಬೇಕಾದ ಅನಿವಾರ್ಯತೆ ಎದುರಾಗಿದ್ದು, ಸಣ್ಣ ಸಂಖ್ಯೆಯ ಪೂರ್ಣಾವಧಿ ಉದ್ಯೋಗದ ಆಫರ್ಗಳನ್ನು ರದ್ದುಗೊಳಿಸಬೇಕಾಗಿ ಬಂದಿದೆ ಎಂದು ಮೆಟಾ ವಕ್ತಾರರು ಅಮೆರಿಕ ಮೂಲದ ಟೆಕ್ ವೆಬ್ಸೈಟ್ ‘ಟೆಕ್ಕ್ರಂಚ್’ಗೆ ತಿಳಿಸಿದ್ದಾರೆ.
2023ರಲ್ಲಿ ನೇಮಕಾತಿ ಹೊಂದಾಣಿಕೆ, ಆದ್ಯತೆ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ವಕ್ತಾರರು ತಿಳಿಸಿದ್ದಾರೆ. ಮೆಟಾದ 11,000 ಉದ್ಯೋಗಿಗಳನ್ನು ವಜಾಗೊಳಿಸುವ ಬಗ್ಗೆ 2022ರ ನವೆಂಬರ್ನಲ್ಲಿ ಮಾರ್ಕ್ ಝುಕರ್ಬರ್ಗ್ ಘೋಷಿಸಿದ್ದರು.
ಇದನ್ನೂ ಓದಿ: Meta: ಟಾಟಾ ಕ್ಲಿಕ್ ಮಾಜಿ ಸಿಇಒ ವಿಕಾಸ್ ಪುರೋಹಿತ್ಗೆ ಮೆಟಾ ಉನ್ನತ ಹುದ್ದೆ
ಮೆಟಾದ ಲಂಡನ್ ಕಚೇರಿಯಲ್ಲಿ ಸುಮಾರು 20 ಪೂರ್ಣಾವಧಿ ಉದ್ಯೋಗದ ಆಫರ್ ಅನ್ನು ಇತ್ತಿಚೆಗೆ ರದ್ದುಪಡಿಸಲಾಗಿತ್ತು ಎಂದು ಎಂಜಿನಿಯರ್, ಬರಹಗಾರ ಗಾರ್ಗ್ಲಿ ಒರೊಝ್ ಟ್ವೀಟ್ ಮಾಡಿದ್ದಾರೆ. 2023ರಲ್ಲಿ ಲಂಡನ್ ಕಚೇರಿಯಲ್ಲಿ ನಡೆಸಲು ಉದ್ದೇಶಿಸಿದ್ದ ಬೇಸಗೆ ಇಂಟರ್ನ್ಶಿಪ್ ಅನ್ನು ರದ್ದುಗೊಳಿಸುವುದಾಗಿ ಮೆಟಾ ಇತ್ತೀಚೆಗೆ ತಿಳಿಸಿತ್ತು. ಇಂಟರ್ನ್ಶಿಪ್ ಅನ್ನು 2023ರ ಜನವರಿಯಲ್ಲಿ ಆರಂಭಿಸಲು ಉದ್ದೇಶಿಸಲಾಗಿತ್ತು.
Just in: Meta has rescinded fulltime offers in London, as I confirmed with devs impacted. New grads with offers due to start in February have been taken back in bulk. I know of about 20 people so far.
This is the first time I’m aware that Meta is taking back signed, FTE offers.
— Gergely Orosz (@GergelyOrosz) January 9, 2023
ಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್, ಇನ್ಸ್ಟಾಗ್ರಾಮ್ ಹಾಗೂ ಮೆಸೆಂಜಿಂಗ್ ಆ್ಯಪ್ ವಾಟ್ಸ್ಆ್ಯಪ್ ವೇದಿಕೆಗಳನ್ನು ನಿರ್ವಹಿಸುವ ‘ಮೆಟಾ’ 11,000 ಉದ್ಯೋಗಿಗಳನ್ನು ವಜಾಗೊಳಿಸಲಿದೆ ಎಂದು ಮಾರ್ಕ್ ಝುಕರ್ಬರ್ಗ್ ನವೆಂಬರ್ನಲ್ಲಿ ಘೋಷಿಸಿದ್ದರು. ಜತೆಗೆ ಅನಿವಾರ್ಯವಾಗಿ ಕಠಿಣ ನಿರ್ಧಾರ ಕೈಗೊಂಡಿರುವುದಕ್ಕೆ ಉದ್ಯೋಗಿಗಳ ಬಳಿ ಕ್ಷಮೆಯಾಚಿಸಿದ್ದರು. ಮೆಟಾ ಕಂಪನಿಯ ಅಂಗಸಂಸ್ಥೆಗಳ ನೇಮಕಾತಿ ಪ್ರಕ್ರಿಯೆಗೆ ತಡೆ ಒಡ್ಡಿರುವುದು ಮುಂದುವರಿಯಲಿದೆ ಎಂದೂ ಅವರು ಹೇಳಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:51 pm, Thu, 12 January 23