World’s Most Expensive And Tasty Mango: ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣಿದು; ಕೇಜಿಗೆ ಎಷ್ಟು ಲಕ್ಷ?
ಇದು ವಿಶ್ವದ ಅತ್ಯಂತ ದುಬಾರಿ ಮಾವಿನಹಣ್ಣು. ಬೆಳೆಯುವುದು ಜಪಾನ್‌ನ ಮಿಯಾಝಾಕಿಯಲ್ಲಿ. ಬೆಲೆ ಎಷ್ಟು ಮತ್ತಿತರ ವಿವರಗಳು ಇಲ್ಲಿವೆ.
ಈ ತನಕ ನೀವು ತಿಂದಿರುವ ಮಾವಿನಹಣ್ಣೇ (Mango) ಅತ್ಯುತ್ತಮ ಅಂದುಕೊಂಡಿದ್ದೀರಾ? ನೀವು ತಿಂದಿರುವ ಮಾವಿನ ಹಣ್ಣಿನ ಬೆಲೆಯೇ ಪರಮ ದುಬಾರಿ ಎಂದು ಭಾವಿಸುತ್ತೀರಾ? ಈಗಲೇ ಈ ಎರಡು ಪ್ರಶ್ನೆಗೆ ಉತ್ತರ ಹೇಳಬೇಕಿಲ್ಲ. ಈ ಲೇಖನವನ್ನು ಓದಿದ ನಂತರ ತಿಳಿಸಿದರೂ ಆಯಿತು. ಏಕೆಂದರೆ ನಿಮಗೆ ಜಪಾನ್‌ನ ಮಿಯಾಜಾಕಿ ನಗರದಲ್ಲಿ ದೊರೆಯುವ ಹಣ್ಣಿನ ಬಗ್ಗೆ ತಿಳಿದಿರುವ ಸಾಧ್ಯತೆ ಕಡಿಮೆ. ಇಲ್ಲಿ ಸಿಗುವ ಮಾವಿನ ಹಣ್ಣು ನೀವು ಕಂಡಿರಬಹುದಾದಂತೆ ಹಳದಿ ಮತ್ತು ಕೆಂಪು ಬಣ್ಣದ್ದಲ್ಲ ಇವು. ಈ ಮಾವು ನೇರಳೆ ಬಣ್ಣದ್ದಾಗಿದೆ! ಭಾರತವು ಹಣ್ಣುಗಳ ನಾಡು ಎಂದು ಹೆಸರಾಗಿದ್ದರೂ ಉತ್ತರ ಪ್ರದೇಶವು ವರ್ಷಕ್ಕೆ ಅತಿ ಹೆಚ್ಚು ಮಾವಿನ ಹಣ್ಣುಗಳನ್ನು ಉತ್ಪಾದಿಸುತ್ತದೆ. ಶೇ 23.47ರಷ್ಟು ಪಾಲನ್ನು ಹೊಂದಿದೆ. ಅಂದಹಾಗೆ ಈ ನೇರಳೆ ಮಾವು ಇಲ್ಲಿಯವರೆಗೆ ಅತ್ಯಂತ ದುಬಾರಿ ತಳಿಯ ಮಾವಿನ ಹಣ್ಣಾಗಿದೆ. ಈ ಮಾವಿನ ಹಣ್ಣಿನ ಬೆಲೆಯನ್ನು ನೀವು ಊಹಿಸಲು ಕೂಡ ಸಾಧ್ಯವಿಲ್ಲ! ಆದರೂ ಒಂದು ಸಲ ಪ್ರಯತ್ನಿಸಲು ಬಯಸುತ್ತೀರಾ?
ಮಿಯಾಝಾಕಿ ಮಾವಿನ ಹಣ್ಣಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಕೇಜಿಗೆ ರೂ. 2.70 ಲಕ್ಷ ಬೆಲೆ ಇದೆ. ಮಿಯಾಝಾಕಿ ಮಾವನ್ನು ಮೂಲತಃ ಜಪಾನ್‌ನ ಕ್ಯುಶು ಪ್ರಾಂತ್ಯದ ಮಿಯಾಝಾಕಿ ನಗರದಲ್ಲಿ ಬೆಳೆಯಲಾಗುತ್ತದೆ. ಈ ತಳಿಯು ಅದರ ಹೆಸರನ್ನು ಮೂಲದ ನಗರದಿಂದ ಪಡೆದುಕೊಂಡಿದೆ. ಈ ಮಾವು ಸಾಮಾನ್ಯವಾಗಿ 350 ಗ್ರಾಂ ತೂಕವನ್ನು ಹೊಂದಿರುತ್ತದೆ ಮತ್ತು ಶೇ 15 ಅಥವಾ ಹೆಚ್ಚಿನ ಸಕ್ಕರೆ ಅಂಶವನ್ನು ಹೊಂದಿರುತ್ತದೆ. ಭಾರತ ಮತ್ತು ಆಗ್ನೇಯ ಏಷ್ಯಾದಲ್ಲಿ ಜನಪ್ರಿಯ ಆಗಿರುವ ಸಾಮಾನ್ಯ ಮಾವಿನ ತಳಿಗಳಿಗಿಂತ ಮಾವು ಅದರ ವಿಭಿನ್ನ ನೋಟ ಮತ್ತು ಬಣ್ಣಕ್ಕಾಗಿ ಜನಪ್ರಿಯವಾಗಿದೆ. ಹಣ್ಣು ಮಾಣಿಕ್ಯ ಬಣ್ಣದ್ದಾಗಿದೆ ಎಂದು ವರದಿಯಾಗಿದೆ. ಈ ಮಾವಿನಹಣ್ಣುಗಳನ್ನು “ಸೂರ್ಯನ ಮೊಟ್ಟೆ” (ಜಪಾನೀಸ್‌ನಲ್ಲಿ ತೈಯೊ-ನೋ-ತಮಾಗೊ) ಎಂದೂ ಕರೆಯಲಾಗುತ್ತದೆ.
ಮಿಯಾಝಾಕಿ ಮಾವು ಮಾಹಿತಿ
– ಜಪಾನ್‌ನ ಮಿಯಾಝಾಕಿ ಸ್ಥಳೀಯ ಉತ್ಪನ್ನಗಳು ಮತ್ತು ವ್ಯಾಪಾರ ಪ್ರಚಾರ ಕೇಂದ್ರದ ಪ್ರಕಾರ, ಈ ಮಾವುಗಳನ್ನು ಏಪ್ರಿಲ್ ಮತ್ತು ಆಗಸ್ಟ್ ಮಧ್ಯೆ ಗರಿಷ್ಠ ಸುಗ್ಗಿಯ ಸಮಯದಲ್ಲಿ ಬೆಳೆಯಲಾಗುತ್ತದೆ.
– ಜಪಾನಿನ ಮಾಧ್ಯಮ ವರದಿಗಳ ಪ್ರಕಾರ, ಮಿಯಾಝಾಕಿ ಮಾವಿನಹಣ್ಣು ವಿಶ್ವದಲ್ಲೇ ಅತ್ಯಂತ ದುಬಾರಿಯಾಗಿದೆ ಮತ್ತು ಕಳೆದ ವರ್ಷ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಕಿಲೋಗ್ರಾಂಗೆ ರೂ. 2.70 ಲಕ್ಷಕ್ಕೆ ಮಾರಾಟವಾಗಿದೆ.
– ಮಿಯಾಝಾಕಿ ಎಂಬುದು ಜಪಾನಿನ ವ್ಯಾಪಾರ ಪ್ರಚಾರ ಕೇಂದ್ರದ ಪ್ರಕಾರ, ಆಗ್ನೇಯ ಏಷ್ಯಾದಲ್ಲಿ ವ್ಯಾಪಕವಾಗಿ ಬೆಳೆಯುವ ಹಳದಿ “ಪೆಲಿಕನ್ ಮಾವಿ”ಗಿಂತ ಭಿನ್ನವಾಗಿರುವ “ಇರ್ವಿನ್” ಮಾವಿನ ಒಂದು ವಿಧವಾಗಿದೆ.
– ಮಿಯಾಝಾಕಿಯ ಮಾವಿನಹಣ್ಣುಗಳನ್ನು ಜಪಾನ್‌ನಾದ್ಯಂತ ಸಾಗಿಸಲಾಗುತ್ತದೆ ಮತ್ತು ಒಕಿನಾವಾ ನಂತರ ಜಪಾನ್‌ನಲ್ಲಿ ಅವುಗಳ ಉತ್ಪಾದನೆ ಪ್ರಮಾಣವು ಎರಡನೇ ಸ್ಥಾನದಲ್ಲಿದೆ.
– ಈ ಮಾವಿನಹಣ್ಣುಗಳು ಆ್ಯಂಟಿ ಆಕ್ಸಿಡಂಟ್ ಸಮೃದ್ಧವಾಗಿವೆ ಮತ್ತು ಬೀಟಾ-ಕ್ಯಾರೋಟಿನ್ ಮತ್ತು ಫೋಲಿಕ್ ಆಮ್ಲವನ್ನು ಹೊಂದಿರುತ್ತವೆ. ಇದು ದಣಿದ ಕಣ್ಣುಗಳ ಸಹಾಯದ ಅಗತ್ಯವಿರುವ ಜನರಿಗೆ ಉತ್ತಮವಾಗಿದೆ ಎಂದು ವ್ಯಾಪಾರ ಪ್ರಚಾರ ಕೇಂದ್ರ ತಿಳಿಸಿದೆ. ದೃಷ್ಟಿ ಕಡಿಮೆಯಾಗುವುದನ್ನು ತಡೆಯಲು ಸಹ ಇದು ಸಹಾಯ ಮಾಡುತ್ತದೆ.
-ಮಿಯಾಝಾಕಿ ಮಾವಿನಹಣ್ಣುಗಳು ದ್ವೀಪ ರಾಷ್ಟ್ರದಾದ್ಯಂತ ರಫ್ತು ಮಾಡುವ ಮೊದಲು ಕಟ್ಟುನಿಟ್ಟಾದ ತಪಾಸಣೆ ಮತ್ತು ಪರೀಕ್ಷೆಗೆ ಒಳಗಾಗುತ್ತವೆ. ಉತ್ತಮ ಗುಣಮಟ್ಟದ ಪರೀಕ್ಷೆಯನ್ನು ಉತ್ತೀರ್ಣವಾದವನ್ನು “ಸೂರ್ಯನ ಮೊಟ್ಟೆಗಳು” ಎಂದು ಕರೆಯಲಾಗುತ್ತದೆ.
-ಈ ಮಾವಿನಹಣ್ಣುಗಳು ಹೆಚ್ಚಾಗಿ ಕೆಂಪಾಗಿ ಫಳಫಳಿಸುತ್ತವೆ ಮತ್ತು ಅವುಗಳ ಆಕಾರವು ಡೈನೋಸರ್ ಮೊಟ್ಟೆಗಳಂತೆ ಕಾಣುತ್ತವೆ
– 1970ರ ದಶಕದ ಉತ್ತರಾರ್ಧದಲ್ಲಿ ಮತ್ತು 1980ರ ದಶಕದ ಆರಂಭದಲ್ಲಿ ಮಿಯಾಝಾಕಿಯಲ್ಲಿ ಮಾವಿನ ಹಣ್ಣಿನ ಉತ್ಪಾದನೆಯು ಪ್ರಾರಂಭವಾಯಿತು ಎಂದು ಸ್ಥಳೀಯ ಸುದ್ದಿ ವರದಿಗಳು ಹೇಳುತ್ತವೆ. ನಗರದ ಬೆಚ್ಚನೆಯ ವಾತಾವರಣ, ದೀರ್ಘಾವಧಿಯ ಸೂರ್ಯನ ಬೆಳಕು ಮತ್ತು ಹೇರಳವಾದ ಮಳೆಯು ಮಿಯಾಝಾಕಿಯ ರೈತರಿಗೆ ಮಾವು ಕೃಷಿಗೆ ಹೋಗಲು ಸಾಧ್ಯವಾಗಿಸಿತು ಎಂದು ವರದಿಗಳು ತಿಳಿಸಿವೆ. ಇದು ಈಗ ಇಲ್ಲಿ ಪ್ರಬಲ ಉತ್ಪನ್ನವಾಗಿದೆ.
ಭಾರತದಲ್ಲಿ ಮಾವುಗಳು
ಭಾರತದಲ್ಲಿ ಕಂಡುಬರುವ ಮಾವಿನಹಣ್ಣಿನ ತಳಿಗಳೆಂದರೆ ಬೈಂಗನ್‌ಪಲ್ಲಿ, ಹಿಮ್‌ಸಾಗರ್, ದಶೇರಿ, ಅಲ್ಫೊನ್ಸೊ, ಲಾಂಗ್ಡಾ, ಮಾಲ್ಡಾ ಮತ್ತು ಇತರವು. ಭಾರತವು ವಿಶ್ವಕ್ಕೆ ಮಾವಿನ ಹಣ್ಣನ್ನು ರಫ್ತು ಮಾಡುವ ಪ್ರಮುಖ ದೇಶವಾಗಿದೆ.
ಆದರೆ, ಮಿಯಾಝಾಕಿ ಪ್ರಭೇದವು ಜಪಾನ್‌ನ ಮಿಯಾಝಾಕಿ ಪಟ್ಟಣದಲ್ಲಿ ಮೊದಲು ಬೆಳೆಸಲಾದ ಅತ್ಯಂತ ದುಬಾರಿ ತಳಿಯಾಗಿದೆ. ಸದ್ಯಕ್ಕೆ, ಭಾರತ, ಬಾಂಗ್ಲಾದೇಶ, ಥಾಯ್ಲೆಂಡ್ ಮತ್ತು ಫಿಲಿಪೈನ್ಸ್ನಲ್ಲಿ ಈ ತಳಿಯನ್ನು ಬೆಳೆಸಲಾಗುತ್ತದೆ. ಮಧ್ಯಪ್ರದೇಶದ ಜಬಲ್‌ಪುರದಲ್ಲಿನ ದಂಪತಿಯ ತೋಟದಲ್ಲಿ ಈ ರೀತಿಯ ಮಾವಿನ ಎರಡು ಮರಗಳು ಈಗ ಬೆಳೆಯುತ್ತಿವೆ ಮತ್ತು ಭದ್ರತಾ ಸಿಬ್ಬಂದಿ ಹಾಗೂ ನಾಯಿಗಳ ಕಾವಲು ಇದಕ್ಕಿದೆ ಎಂದು ಮಾಧ್ಯಮ ವರದಿಗಳು ಹುಟ್ಟಿಕೊಂಡಿವೆ. ರೈಲಿನಲ್ಲಿದ್ದ ವ್ಯಕ್ತಿಯೊಬ್ಬರು ತಮಗೆ ಗಿಡದ ಸಸಿಯನ್ನು ನೀಡಿದ್ದರು ಎಂದು ದಂಪತಿ ಹೇಳುತ್ತಾರೆ.
ಇದನ್ನೂ ಓದಿ: ಇವು ಮಧುಮೇಹಿಗಳ ಮಾವಿನಹಣ್ಣುಗಳು..; ಮೂರು ವಿಧದ ಸಕ್ಕರೆ ರಹಿತ ಮಾವು ಪರಿಚಯಿಸಿದ ಪಾಕಿಸ್ತಾನ ಕೃಷಿ ತಜ್ಞ