ಗಿನ್ನಿಸ್ ರೆಕಾರ್ಡ್ ಸೇರಿತು ಮಾವಿನಹಣ್ಣು: ಈ ಹಣ್ಣಿನ ತೂಕ ಬರೋಬ್ಬರಿ 4.25 ಕೆಜಿ

ಇತ್ತೀಚಿನ ವರ್ಷಗಳಲ್ಲಿ ಜನ ದೊಡ್ಡ ಗಾತ್ರದ ಮಾವನ್ನು ಬಯಸುತ್ತಿದ್ದಾರೆ. ಅವರ ಬೇಡಿಕೆಯನ್ನು ಮನಗಂಡೇ ಮಾವು ಬೆಳೆಗಾರರು ದೊಡ್ಡ ಗಾತ್ರದ ಮಾವಿನ ತಳಿಯನ್ನು ಬೆಳೆಯುತ್ತಿದ್ದಾರೆ. ದೊಡ್ಡ ಮಾವು ಬೆಳೆಯುವದರಲ್ಲಿ ಪೈಪೋಟಿ ಸಹ ಆರಂಭವಾಗಿದೆ.

ಗಿನ್ನಿಸ್ ರೆಕಾರ್ಡ್ ಸೇರಿತು ಮಾವಿನಹಣ್ಣು: ಈ ಹಣ್ಣಿನ ತೂಕ ಬರೋಬ್ಬರಿ 4.25 ಕೆಜಿ
ತಾವು ಬೆಳೆದ ಬೃಹತ್ ಗಾತ್ರದ ಮಾವಿನೊಂದಿಗೆ ಕೊಲಂಬಿಯನ್ ರೈತರು
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 01, 2021 | 7:15 PM

ಮಾವನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ ಅನ್ನೋದು ನಮಗೆಲ್ಲ ಗೊತ್ತಿರುವ ವಿಷಯವೇ. ಭಾರತ ಮತ್ತು ಇತರ ಅನೇಕ ರಾಷ್ಟ್ರಗಳಲ್ಲಿ ಈ ರಾಜಾ ಹಣ್ಣಿನ ಸೀಸನ್ ಆರಂಭವಾಗಿದೆ. ಹಣ್ಣಿನ ಸವಿರುಚಿ, ಆಕಾರ, ಮಾರುಕಟ್ಟೆಯಲ್ಲಿ ದೊರೆಯುವ ಅದರ ವೆರೈಟಿಗಳು ಮುಂತಾದ ಸಂಗತಿಗಳು ಅದನ್ನು ರಾಜನ ಪಟ್ಟಕ್ಕೇರಿಸಿರಬಹುದು. ಅದನ್ನು ತಿನ್ನುವ ಬಗೆಯೂ ವೈವಿಧ್ಯಮಯ. ಕೊಯ್ದು ತಿನ್ನುವುದು, ಹಿಂಡಿ ತಿನ್ನವುದು, ಸೀಕರಣೆ ಮಾಡಿಕೊಂಡು ಚಪಾತಿ, ದೋಸೆ, ಹೋಳಿಗೆ ಜೊತೆ ತಿನ್ನುವುದು. ಮಾವಿನ ಹಣ್ಣಿನ ಸೀಸನ್ ಬೇಸಿಗೆ ರಜೆಯಲ್ಲಿ ಬರುವುದರಿಂದ ಮಕ್ಕಳಿಗೂ ಮಾವು ಅಂದರೆ ಬಲು ಪ್ರೀತಿ. ಒಂದು ಬುಟ್ಟಿ ಮಾವನ್ನು ಸಂಬಂಧಿಕರಿಗೆ, ಸ್ನೇಹಿತರಿಗೆ ಕಳಿಸುವುದು ಪ್ರೀತಿ ಮತ್ತು ಸ್ನೇಹದ ದ್ಯೋತಕ ಎಂದು ಪರಿಗಣಿಸಲಾಗುತ್ತದೆ. ಮಾವು ವಿವಿಧ ಸೈಜುಗಳಲ್ಲಿ ಮತ್ತು ತೂಕಗಳಲ್ಲಿ ಬರುತ್ತದೆ ಮತ್ತು ತೂಕ ಮಾವಿನತಳಿಯ ಮೇಲೆ ಆಧಾರವಾಗಿರುತ್ತದೆ. ಹಾಗಾದರೆ ನೀವು ಇದುವರೆಗೆ ನೋಡಿರಬಹುದಾದ ಇಲ್ಲವೇ ತಿಂದಿರಬಹುದಾದ ಅತಿ ದೊಡ್ಡ ಮಾವಿನ ತೂಕ ಎಷ್ಟಿದ್ದಿರಬಹುದು? ಊಹೆ ಮಾಡಿ.

ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಒಂದು ಕೆಜಿ ಮಾವು ಖರೀದಿಸಿದರೆ, ಮಧ್ಯಮ ಗಾತ್ರದ 5-6 ಮತ್ತು ದೊಡ್ಡ ಗಾತ್ರದ 2-3 ತೂಗುತ್ತವೆ, ಹೌದು ತಾನೆ? ಅಬ್ಬಬ್ಬಾ ಅಂದರೆ ಒಂದು ಕೆಜಿ ತೂಗಿರುವ ಮಾವನ್ನು ನೀವು ಖರೀದಿಸಿ ತಿಂದಿರಬಹುದು. ಇತ್ತೀಚಿನ ವರ್ಷಗಳಲ್ಲಿ ಜನ ದೊಡ್ಡ ಗಾತ್ರದ ಮಾವನ್ನು ಬಯಸುತ್ತಿದ್ದಾರೆ. ಅವರ ಬೇಡಿಕೆಯನ್ನು ಮನಗಂಡೇ ಮಾವು ಬೆಳೆಗಾರರು ದೊಡ್ಡ ಗಾತ್ರದ ಮಾವಿನ ತಳಿಯನ್ನು ಬೆಳೆಯುತ್ತಿದ್ದಾರೆ. ದೊಡ್ಡ ಮಾವು ಬೆಳೆಯುವದರಲ್ಲಿ ಪೈಪೋಟಿ ಸಹ ಆರಂಭವಾಗಿದೆ. ಕೊಲಂಬಿಯಾ ದೇಶದ ಇಬ್ಬರು ರೈತರು ಇದುವರೆಗಿನ ಅತಿದೊಡ್ಡ ಮಾವನ್ನು ಈ ವರ್ಷ ಬೆಳೆದು ಗಿನ್ನೆಸ್ ವಿಶ್ವ ದಾಖಲೆಗಳ ಪುಸ್ತಕದಲ್ಲಿ ದಾಖಲಾಗಿದ್ದಾರೆ.

ಅವರು ಬೆಳೆದಿರುವ ಮಾವಿನ ಹಣ್ಣಿನ ತೂಕ ಎಷ್ಟಿರಬಹುದೆಂದು ನೀವು ಊಹಿಸಬಲ್ಲಿರಾ? 4.25 ಕೆಜಿ!! ಹೌದು, ಜರ್ಮನ್ ಒರ್ಲ್ಯಾಂಡೊ ನೊವೊ ಬರೆರ ಮತ್ತು ರೀನಾ ಮರಿಯಾ ಮಾರೊಕುನ್ ಹೆಸರಿನ ರೈತರು ಬೃಹತ್ ಗಾತ್ರ ಮತ್ತು ಭಾರೀ ತೂಕದ ಮಾವು ಬೆಳೆದು ದಾಖಲೆ ನಿರ್ಮಿಸಿದ್ದಾರೆ. ಫಿಲಿಪ್ಪೈನ್ಸ್ ದೇಶದಲ್ಲಿ 2009 ರಲ್ಲಿ ಬೆಳೆದ 3.435 ತೂಕದ ಮಾವು ಇದುವರೆಗಿನ ಅತಿ ಹೆಚ್ಚು ತೂಕದ ಮಾವು ಅನಿಸಿಕೊಂಡಿತ್ತು ಎಂದು ಗಿನ್ನೆಸ್ ಬುಕ್ ಆಫ್​ ವರ್ಲ್ಡ್​ ರೆಕಾರ್ಡ್​ನ ವೆಬ್​ಸೈಟ್​ನಲ್ಲಿ ಹೇಳಲಾಗಿದೆ.

‘ಕೊಲಂಬಿಯಾದ ಜನ, ತಮ್ಮ ಜಮೀನುಗಳಲ್ಲಿ ಅಕ್ಕರೆಯಿಂದ ಉಳುಮೆ ಮಾಡಿ ಭಾರಿ ಗಾತ್ರದ ಹಣ್ಣುಗಳನ್ನು ಉತ್ಪಾದಿಸುವ ವಿನಮ್ರ ಮತ್ತು ಕಠಿಣ ಪರಿಶ್ರಮಿಗಳು ಎಂಬುದನ್ನು ವಿಶ್ವಕ್ಕೆ ತೋರಿಸುವುದು ನಮ್ಮ ಗುರಿಯಾಗಿತ್ತು’ ಎಂದು ಜರ್ಮನ್ ಹೇಳಿದ್ದಾರೆ. ಕೊವಿಡ್ ಪಿಡುಗು ಸೃಷ್ಟಿಸಿರುವ ಭೀತಿಯ ವಾತಾವರಣದಲ್ಲಿ ಇದು ಸಂತಸ ಮತ್ತು ನಿರೀಕ್ಷೆಯ ಸಂದೇಶವನ್ನು ಸಾರುತ್ತದೆ ಎಂದು ಅವರು ಹೇಳಿದ್ದಾರೆ. ತಮ್ಮ ಪ್ರಶಸ್ತಿಯನ್ನು ಗುಯಾಟಾ ಜನ ಮತ್ತು ತಮ್ಮ ತಂದೆತಾಯಿಗಳಿಂದ ಬಳವಳಿಯಾಗಿ ಪಡೆದಿರುವ ಪ್ರಕೃತಿಯೆಡೆಗಿನ ಪ್ರೀತಿಗೆ ಅವರು ಸಮರ್ಪಿಸಿದ್ದಾರೆ. ಏಷ್ಯನ್ ಪ್ರಾಂತ್ಯದ ಪ್ರಮುಖ ಬೆಳೆಯಾಗಿರುವ ಮಾವನ್ನು ಉಷ್ಣಾಂಶ ಜಾಸ್ತಿಯಿರುವ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಕೊಲಂಬಿಯಾದ ಗುಯಾಟಾದಲ್ಲಿ ಅದನ್ನು ಅಲ್ಪ ಪ್ರಮಾಣದಲ್ಲಿ ಅಂದರೆ, ಕುಟುಂಬದ ಬಳಕೆಗೆ ಬೇಕಾಗುವಷ್ಟು ಮಾತ್ರ ಬೆಳೆಯುತ್ತಾರಂತೆ.

ಗುಯಾಟಾ ಪ್ರಾಂತ್ಯಕ್ಕೆ ಇದು ಎರಡನೇ ಗಿನ್ನೆಸ್ ವಿಶ್ವದಾಖಲೆಯಾಗಿದೆ ಎಂದು ಜರ್ಮನ್ ಹೇಳುತ್ತಾರೆ. ಇದಕ್ಕೆ ಮೊದಲು 2014 ರಲ್ಲಿ ಅಲ್ಲಿಯ ಜನ 3,199 ಚದರ ಮೀಟರ್ ಅತಿ ಉದ್ದನೆಯ ಹೂಗಳ ಕಾರ್ಪೆಟ್​ ತಯಾರಿಸಿ ದಾಖಲೆ ಪುಸ್ತಕ ಸೇರಿದ್ದರು. ಜರ್ಮನ್ ಅವರ ಕುಟುಂಬವು ಈ ಸಂಭ್ರಮವನ್ನು ಅದೇ ಮಾವಿನಹಣ್ಣನ್ನು ತಿಂದು ಆಚರಿಸಿತು. ‘ಅದು ಬಹಳ ಸ್ವಾದಿಷ್ಟವಾಗಿತ್ತು ಮತ್ತು ಒಳಭಾಗದಲ್ಲಿ ಅರೋಗ್ಯಪೂರ್ಣವಾಗಿತ್ತು. ನಾವು ಅದರ ಪ್ರತಿಕೃತಿಯೊಂದನ್ನು ಮಾಡಿ ಮುನಿಸಿಪಾಲಿಟಿಗೆ ಡೊನೇಟ್​ ಮಾಡಿ ಅದನ್ನು ಇತಿಹಾಸವಾಗಿ ದಾಖಲಿಸುವಂತೆ ಹೇಳಿದ್ದೇವೆ’ ಎಂದು ಜರ್ಮನ್ ಹೇಳಿದ್ದಾರೆ.

ಇದನ್ನೂ ಓದಿ: ಮಾವಿನಹಣ್ಣು ಮಾರಾಟಕ್ಕೆ ಕೊರೊನಾ ಕಾಕದೃಷ್ಟಿ, ಬೆಳೆಗಾರ ಮಾರುವುದು ಹೇಗೆ?

ಇದನ್ನೂ ಓದಿ: 3 ಎಕರೆಯಲ್ಲಿ ವಿವಿಧ ತಳಿಯ ಮಾವು ಬೆಳೆದು ಕೃಷಿ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದ ಯಾದಗಿರಿ ರೈತ