ಮಂಗಳವಾರದ ನಂತರ ಆಸ್ಟ್ರೇಲಿಯಾ ನಾಗರಿಕರು ಭಾರತದಿಂದ ಬಂದರೆ ಐದು ವರ್ಷ ಜೈಲು ಗ್ಯಾರೆಂಟಿ!

ಮಂಗಳವಾರದ ನಂತರ ಆಸ್ಟ್ರೇಲಿಯಾದ ನಾಗರಿಕರು ಭಾರತದಿಂದ ನೇರವಾಗಿ ಬಂದರೆ ಅವರಿಗೆ ಶಿಕ್ಷೆ ಗ್ಯಾರೆಂಟಿ ಅಂತ ಹೇಳಿದೆ. ಈ ರೀತಿಯ ಕ್ರಮ ತೆಗೆದುಕೊಂಡಿರುವ ಮೊದಲ ದೇಶ ಆಸ್ಟ್ರೇಲಿಯಾದ ಈ ಕ್ರಮವನ್ನು ಅನೇಕರು ಟೀಕಿಸಿದ್ದಾರೆ.

  • TV9 Web Team
  • Published On - 13:37 PM, 1 May 2021
ಮಂಗಳವಾರದ ನಂತರ ಆಸ್ಟ್ರೇಲಿಯಾ ನಾಗರಿಕರು ಭಾರತದಿಂದ ಬಂದರೆ ಐದು ವರ್ಷ ಜೈಲು ಗ್ಯಾರೆಂಟಿ!
ಭಾರತದಿಂದ ಆಸ್ಟ್ರೇಲಿಯಾಕ್ಕೆ ಮಂಗಳವಾರದ ನಂತರ ತೆರಳಿದರೆ ಶಿಕ್ಷೆ

ಬೇರೆ ದೇಶದಲ್ಲಿರುವ ಆಸ್ಟ್ರೇಲಿಯಾದ ನಾಗರಿಕರು ದೇಶಕ್ಕೆ ಮರಳಲು ಯೋಜಿಸಿದ 14 ದಿನಗೊಳಗಾಗಿ ಭಾರತಕ್ಕೆ ಭೇಟಿ ನೀಡಿದ್ದಲ್ಲಿ ಅವರಿಗೆ ಸದ್ಯಕ್ಕೆ ದೇಶದ ಒಳಗೆ ಪ್ರವೇಶ ನಿಷೇಧಿಸಲಾಗಿದೆ. ಒಂದೊಮ್ಮೆ ಈ ಮಾರ್ಗಸೂಚಿಗೆ ವಿರೋಧವಾಗಿ ದೇಶದೊಳಗೆ ಬಂದರೆ ದಂಡ ಮತ್ತು ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಆಸ್ಟ್ರೇಲಿಯಾದ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾನೂನು ಸೋಮವಾರದಿಂದ ಜಾರಿಗೆ ಬರಲಿದೆ ಎಂದು ಆಸ್ಟ್ರೇಲಿಯಾ ಸರಕಾರ ಹೇಳಿದೆ.  ಶುಕ್ರವಾರ ತಡವಾಗಿ ಹೊರಡಿಸಲಾದ ತಾತ್ಕಾಲಿಕ ತುರ್ತು ನಿರ್ಣಯವು ಆಸ್ಟ್ರೇಲಿಯಾ ತನ್ನ ನಾಗರಿಕರು ಭಾರತದಿಂದ ಮನೆಗೆ ಮರಳುವುದನ್ನು ಕ್ರಿಮಿನಲ್ ಅಪರಾಧವಾಗಿ ಪರಿಗಣಿಸಲು ನಿರ್ಧರಿಸಿದೆ ಎಂದು ಎನ್​ಡಿಟಿವಿ ವರದಿ ಹೇಳಿದೆ.

ಕೊವಿಡ್ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆ ಹೆಚ್ಚಾಗಿ ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಿಂದ ಆಸ್ಟ್ರೇಲಿಯಾಕ್ಕೆ ಪ್ರಯಾಣಿಕರನ್ನು ತಡೆಯುವ ಕಠಿಣ ಕ್ರಮಗಳಲ್ಲಿ ಇದು ಕೂಡ ಒಂದು ಭಾಗವಾಗಿದೆ. ಈ ನಿರ್ಬಂಧಗಳು ಮೇ 3 ರಿಂದ ಜಾರಿಗೆ ಬರುತ್ತವೆ ಮತ್ತು ನಿಷೇಧವನ್ನು ಉಲ್ಲಂಘಿಸಿದರೆ ನಾಗರಿಕ ದಂಡ ಮತ್ತು ಐದು ವರ್ಷಗಳ ಜೈಲು ಶಿಕ್ಷೆ ಉಂಟಾಗುತ್ತದೆ ಎಂದು ಆರೋಗ್ಯ ಸಚಿವ ಗ್ರೆಗ್ ಹಂಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

“ಸರ್ಕಾರವು ಈ ನಿರ್ಧಾರಗಳನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ” ಎಂದು ಹಂಟ್ ಹೇಳಿದ್ದಾರೆ. “ಆದಾಗ್ಯೂ, ಆಸ್ಟ್ರೇಲಿಯಾದ ಸಾರ್ವಜನಿಕ ಆರೋಗ್ಯ ಮತ್ತು ಸಂಪರ್ಕತಡೆಯ ಮಾರ್ಗಸೂಚಿಯನ್ನು ಅನುಸರಿಸುವುದು ಮುಖ್ಯವಾಗಿದೆ ಮತ್ತು ಕೊವಿಡ್ ಪ್ರಕರಣಗಳ ಸಂಖ್ಯೆಯನ್ನು ನಿರ್ವಹಿಸಬಹುದಾದ ಮಟ್ಟಕ್ಕೆ ಇಳಿಸುವುದು ನಮ್ಮ ಗುರಿಯಾಗಿದೆ.” ಮೇ 15 ರಂದು ಸರ್ಕಾರ ನಿರ್ಬಂಧಗಳನ್ನು ಮರುಪರಿಶೀಲಿಸಲಿದೆ ಎಂದಿದ್ದಾರೆ.

ಭಾರತದ ಕೊರೊನಾ ವೈರಸ್ ಸಾವಿನ ಸಂಖ್ಯೆ ಈ ವಾರ 2,00,000 ದಾಟಿದೆ. ಮತ್ತು ರಾಜಕೀಯ ರ್ಯಾಲಿಗಳು ಮತ್ತು ಧಾರ್ಮಿಕ ಉತ್ಸವಗಳಂತಹ “ಸೂಪರ್-ಸ್ಪ್ರೆಡರ್” ಘಟನೆಗಳೊಂದಿಗೆ ತೀವ್ರವಾದ ಹೊಸ ತಳಿಗಳು ಸೇರಿಕೊಂಡಿರುವುದರಿಂದ ಕೊವಿಡ್ ಪ್ರಕರಣಗಳು 19 ಮಿಲಿಯನ್ ಹತ್ತಿರದಲ್ಲಿವೆ.

ಸರಕಾರದ ಕ್ರಮಕ್ಕೆ ಜನರ ಪ್ರತಿಕ್ರಿಯೆ ಏನು?
ಈ ನಡುವೆ ಭಾರತದಿಂದ ಹಿಂದಿರುಗಿದ ಆಸ್ಟ್ರೇಲಿಯನ್ನರನ್ನು “ಅಪರಾಧೀಕರಿಸುವ” ನಿರ್ಧಾರವು ಅತಿಯಾದ ಶಿಕ್ಷಾ ಕ್ರಮವಾಗಿದೆ ಎಂದು ಭಾರತೀಯ ಮೂಲದ ಆಸ್ಟ್ರೇಲಿಯಾದ ಶಸ್ತ್ರಚಿಕಿತ್ಸಕ ನೀಲಾ ಜಾನಕಿರಮಣನ್ ಹೇಳಿದ್ದಾರೆ. “ಭಾರತೀಯ-ಆಸ್ಟ್ರೇಲಿಯನ್ನರು ಇದನ್ನು ಜನಾಂಗೀಯ ನೀತಿಯಾಗಿ ನೋಡುತ್ತಿದ್ದಾರೆ ಏಕೆಂದರೆ ಯುಎಸ್, ಯುಕೆ ಮತ್ತು ಯುರೋಪಿನಂತಹ ಸೋಂಕಿನ ಅಲೆಗಳನ್ನು ಹೊಂದಿರುವ ಇತರ ದೇಶಗಳ ಜನರಿಗಿಂತ ನಮ್ಮನ್ನು ವಿಭಿನ್ನವಾಗಿ ಪರಿಗಣಿಸಲಾಗುತ್ತಿದೆ” ಎಂದಿದ್ದಾರೆ.

ಮಾನವ ಹಕ್ಕು ಸಂಸ್ಥೆಗಳು ನಿಷೇಧದ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಸರ್ಕಾರದ ಗಮನವು ಶಿಕ್ಷೆಯ ಮೇಲೆ ಅಲ್ಲ, ಅದರ ಸಂಪರ್ಕತಡೆಯನ್ನು ಸುಧಾರಿಸುವತ್ತ ಇರಬೇಕು ಎಂದು ಸೂಚಿಸುತ್ತದೆ. “ಇದು ಅತಿರೇಕದ ಪ್ರತಿಕ್ರಿಯೆಯಾಗಿದೆ. ಆಸ್ಟ್ರೇಲಿಯನ್ನರು ತಮ್ಮ ದೇಶಕ್ಕೆ ಮರಳುವ ಹಕ್ಕನ್ನು ಹೊಂದಿದ್ದಾರೆ” ಎಂದು ಹ್ಯೂಮನ್ ರೈಟ್ಸ್ ವಾಚ್‌ನ ಆಸ್ಟ್ರೇಲಿಯಾದ ನಿರ್ದೇಶಕ ಎಲೈನ್ ಪಿಯರ್ಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ಜೈಲು ಶಿಕ್ಷೆ ಬದಲು ಭಾರತದಿಂದ ಹಿಂದಿರುಗಿದ ಆಸ್ಟ್ರೇಲಿಯನ್ನರನ್ನು ಸುರಕ್ಷಿತವಾಗಿ ಕ್ವಾರಂಟೈನ್ ಮಾಡಿ ರೋಗ ತಡೆಗಟ್ಟುವ ಮಾರ್ಗಗಳನ್ನು ಸರ್ಕಾರ ಹುಡುಕಬೇಕು,” ಎಂದು ಅವರು ಹೇಳಿದ್ದಾರೆ.

ಆಸ್ಟ್ರೇಲಿಯಾ ಮಂಗಳವಾರ ಭಾರತದಿಂದ ನೇರ ವಿಮಾನಗಳನ್ನು ಮೇ ಮಧ್ಯದವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಆದಾಗ್ಯೂ, ಕ್ರಿಕೆಟಿಗರಾದ ಆಡಮ್ ಜಂಪಾ ಮತ್ತು ಕೇನ್ ರಿಚರ್ಡ್ಸನ್ ಸೇರಿದಂತೆ ಕೆಲವು ಆಸ್ಟ್ರೇಲಿಯನ್ನರು ದೋಹಾ ಮೂಲಕ ಸ್ವದೇಶಕ್ಕೆ ಮರಳಿದ್ದಾರೆ. ಆಸ್ಟ್ರೇಲಿಯಾದ ಈ ಕ್ರಮದಿಂದಾಗಿ, ಭಾರತದಲ್ಲಿ ಇರುವ 9,000 ಕ್ಕೂ ಹೆಚ್ಚು ಆಸ್ಟ್ರೇಲಿಯನ್ನರು ತ್ರಿಶಂಕು ಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:

Australia Beach: ಸಮುದ್ರಕ್ಕೆ ಈಜಲು ಹೋದವನಿಗೆ ಆಕ್ಟೋಪಸ್​ ಜಲಚರಿ ಹೊಡೆದದ್ದು ಈಗ ವೈರಲ್​

(Australia announces ban and punishment of jail for travellers coming from India into the country)