AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PAK vs BAN: 2 ಪಂದ್ಯಗಳು ರದ್ದು; ಪಾಕ್- ಬಾಂಗ್ಲಾ ಪರಿಷ್ಕೃತ ವೇಳಾಪಟ್ಟಿ ಪ್ರಕಟ

PAK vs BAN: ಬಾಂಗ್ಲಾದೇಶ ಕ್ರಿಕೆಟ್ ತಂಡವು ಟಿ20 ಮತ್ತು ಏಕದಿನ ಸರಣಿಗಾಗಿ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳುತ್ತಿದೆ. ಆದರೆ ಟಿ20 ಸರಣಿಯಲ್ಲಿ ಎರಡು ಪಂದ್ಯಗಳನ್ನು ರದ್ದುಗೊಳಿಸಲಾಗಿದೆ. ಈಗ ಮೂರು ಪಂದ್ಯಗಳು ಮಾತ್ರ ಲಾಹೋರ್‌ನಲ್ಲಿ ನಡೆಯಲಿವೆ. ಪಾಕಿಸ್ತಾನದಲ್ಲಿ ಭಾರತದ ವಾಯುದಾಳಿಯಿಂದ ಉಂಟಾದ ಹಾನಿಯಿಂದಾಗಿ ಪಂದ್ಯಗಳ ರದ್ದತಿಯಾಗಿದೆ ಎಂದು ಹೇಳಲಾಗುತ್ತಿದೆ.

PAK vs BAN: 2 ಪಂದ್ಯಗಳು ರದ್ದು; ಪಾಕ್- ಬಾಂಗ್ಲಾ ಪರಿಷ್ಕೃತ ವೇಳಾಪಟ್ಟಿ ಪ್ರಕಟ
Pak Vs Ban
ಪೃಥ್ವಿಶಂಕರ
|

Updated on:May 21, 2025 | 10:33 PM

Share

ಬಾಂಗ್ಲಾದೇಶ ತಂಡವು ಟಿ20 ಹಾಗೂ ಏಕದಿನ ಸರಣಿಗಾಗಿ ಪಾಕಿಸ್ತಾನ ಪ್ರವಾಸ (Bangladesh Tour of Pakistan) ಕೈಗೊಳ್ಳುತ್ತಿದೆ. ಈ ಮೊದಲು ನಿರ್ಧರಿಸಿದಂತೆ ಆತಿಥೇಯ ಪಾಕಿಸ್ತಾನ ತಂಡವು ಮೇ 28 ರಿಂದ ಬಾಂಗ್ಲಾದೇಶ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಬೇಕಿತ್ತು. ಆದರೆ ಈಗ ಈ ಸರಣಿಯ ಎರಡು ಪಂದ್ಯಗಳನ್ನು ರದ್ದುಪಡಿಸಲಾಗಿದೆ. ಅಂದರೆ ಟಿ20 ಸರಣಿಯು ಐದು ಪಂದ್ಯಗಳ ಬದಲು ಮೂರು ಪಂದ್ಯಗಳಾಗಿರುತ್ತದೆ. ಟಿ20 ಸರಣಿಯ ಮೂರೂ ಪಂದ್ಯಗಳು ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿವೆ.

ವಾಸ್ತವವಾಗಿ ರದ್ದಾದ ಎರಡು ಪಂದ್ಯಗಳು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಫೈಸಲಾಬಾದ್‌ನಲ್ಲಿ ನಡೆಯಬೇಕಿತ್ತು. ಆದರೆ ಪಾಕಿಸ್ತಾನದ ಹೀನ ಕೃತ್ಯದ ಪ್ರತೀಕಾರವಾಗಿ ಭಾರತೀಯ ವಾಯುಪಡೆಯು ಈ ಪ್ರಾಂತ್ಯದ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿತ್ತು. ಇದರಿಂದ ಅಲ್ಲಿ ಭಾರೀ ಹಾನಿ ಸಂಭವಿಸಿತ್ತು. ಈಗ ಅಲ್ಲಿ ನಡೆಯಬೇಕಿದ್ದ ಎರಡು ಟಿ20 ಪಂದ್ಯಗಳನ್ನು ರದ್ದುಗೊಳಿಸಲಾಗಿದೆ. ಪಿಸಿಬಿ ಈ ಎರಡು ಪಂದ್ಯಗಳನ್ನು ರದ್ದುಗೊಳಿಸಲು ಇದೇ ಕಾರಣವಾ ಎಂಬುದು ಸ್ಪಷ್ಟವಾಗಿಲ್ಲ. ಆದಾಗ್ಯೂ, ಈ ಎರಡು ಪಂದ್ಯಗಳನ್ನು ರದ್ದುಗೊಳಿಸಲು ಪಿಸಿಬಿ ಯಾವುದೇ ನಿರ್ದಿಷ್ಟ ಕಾರಣವನ್ನು ನೀಡಿಲ್ಲ.

ಪಾಕಿಸ್ತಾನ-ಬಾಂಗ್ಲಾದೇಶ ಸರಣಿ

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಿಡುಗಡೆ ಮಾಡಿರುವ ಹೊಸ ವೇಳಾಪಟ್ಟಿಯ ಪ್ರಕಾರ, ಎಲ್ಲಾ ಮೂರು ಟಿ20 ಪಂದ್ಯಗಳು ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಪಾಕಿಸ್ತಾನ ತಂಡವು ಸಲ್ಮಾನ್ ಅಲಿ ಅಘಾ ಅವರ ನಾಯಕತ್ವದಲ್ಲಿ ಆಡಲಿದ್ದು, ಎಲ್ಲರ ಕಣ್ಣುಗಳು ಅವರ ಹೊಸ ಕೋಚ್ ಮೈಕ್ ಹೆಸ್ಸನ್ ಮೇಲೆಯೂ ಇರುತ್ತವೆ. ಈ ಸರಣಿ ಬಾಂಗ್ಲಾದೇಶಕ್ಕೂ ಮುಖ್ಯವಾಗಿದೆ. ತಂಡವು ಹೊಸ ನಾಯಕ ಲಿಟ್ಟನ್ ದಾಸ್ ನಾಯಕತ್ವದಲ್ಲಿ ಆಡಲಿದೆ. ಬಾಂಗ್ಲಾದೇಶ ತಂಡ ಮೇ 25 ರಂದು ಪಾಕಿಸ್ತಾನ ತಲುಪಲಿದೆ. ಪ್ರಸ್ತುತ ಈ ತಂಡವು ಯುಎಇಯಲ್ಲಿ ಟಿ20 ಸರಣಿಯನ್ನು ಆಡುತ್ತಿದೆ.

IPL 2025: ಐಪಿಎಲ್‌ಗಾಗಿ ಪಾಕ್ ಸೂಪರ್ ಲೀಗ್​ ತೊರೆದಿದ್ದ ಆಟಗಾರ ಶೂನ್ಯಕ್ಕೆ ಔಟ್..!

ಟಿ20 ಸರಣಿ ವೇಳಾಪಟ್ಟಿ

ಮೊದಲ ಟಿ20 ಪಂದ್ಯ ಮೇ 28 ಬುಧವಾರ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡನೇ ಏಕದಿನ ಪಂದ್ಯ ಮೇ 30 ರಂದು ನಡೆಯಲಿದೆ. ಮೂರನೇ ಟಿ20 ಪಂದ್ಯ ಜೂನ್ 1 ರಂದು ನಡೆಯಲಿದೆ. ಈ ಟಿ20 ಸರಣಿಗೆ ತಂಡದ ಇಬ್ಬರು ಮಾಜಿ ನಾಯಕರಾದ ಬಾಬರ್ ಆಝಂ ಮತ್ತು ಮೊಹಮ್ಮದ್ ರಿಜ್ವಾನ್ ಆಯ್ಕೆಯಾಗಿಲ್ಲ.

ಪಾಕಿಸ್ತಾನ ಟಿ20 ತಂಡ: ಸಲ್ಮಾನ್ ಅಲಿ ಅಘಾ, ಶಾದಾಬ್ ಖಾನ್, ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಜ್, ಹುಸೇನ್ ತಲತ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್, ಮೊಹಮ್ಮದ್ ವಾಸಿಂ ಜೂನಿಯರ್, ಮೊಹಮ್ಮದ್ ಇರ್ಫಾನ್ ಖಾನ್, ನಸೀಮ್ ಶಾ, ಶಾಹಿಬ್​ಝಾದ ಫರ್ಹಾನ್, ಸೈಮ್ ಅಯ್ಯೂಬ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:30 pm, Wed, 21 May 25