- Kannada News Photo gallery Cricket photos Ireland's Paul Stirling Achieves 10,000 International Runs Milestone
IRE vs WI: ದಾಖಲೆ ನಿರ್ಮಿಸಿದ ಐರ್ಲೆಂಡ್ ನಾಯಕ ಪಾಲ್ ಸ್ಟಿರ್ಲಿಂಗ್
Paul Stirling: ಐರ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯಲ್ಲಿ, ಪಾಲ್ ಸ್ಟಿರ್ಲಿಂಗ್ ಅವರು ಅದ್ಭುತವಾದ 54 ರನ್‌ಗಳನ್ನು ಗಳಿಸಿ ಐರ್ಲೆಂಡ್‌ಗೆ ದೊಡ್ಡ ಮೊತ್ತವನ್ನು ಗಳಿಸಲು ಸಹಾಯ ಮಾಡಿದ್ದಾರೆ. ಇದರೊಂದಿಗೆ, ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ರನ್‌ಗಳ ಮೈಲಿಗಲ್ಲನ್ನು ತಲುಪಿದ ಮೊದಲ ಐರ್ಲೆಂಡ್ ಆಟಗಾರ ಎನಿಸಿಕೊಂಡಿದ್ದಾರೆ.
Updated on:May 21, 2025 | 8:49 PM

ಪ್ರಸ್ತುತ ಭಾರತದಲ್ಲಿ ಐಪಿಎಲ್ ನಡೆಯುತ್ತಿದ್ದರೆ, ಬೇರೆ ದೇಶಗಳು ಕೂಡ ಬೇರೆ ಬೇರೆ ಸರಣಿಗಳಲ್ಲಿ ನಿರತವಾಗಿವೆ. ಅದರಂತೆ ಐರ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ಶುರುವಾಗಿದೆ. ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ತಂಡ 303 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ.

ಐರ್ಲೆಂಡ್‌ನ ಈ ಅಮೋಘ ಪ್ರದರ್ಶನದಲ್ಲಿ ತಂಡದ ನಾಯಕ ಬ್ಯಾಟರ್ ಪಾಲ್ ಸ್ಟಿರ್ಲಿಂಗ್ ಪ್ರಮುಖ ಪಾತ್ರವಹಿಸಿದರು. ಪಾಲ್ ಸ್ಟಿರ್ಲಿಂಗ್ ಈ ಪಂದ್ಯದಲ್ಲಿ 64 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 2 ಸಿಕ್ಸರ್ಗಳ ಸಹಾಯದಿಂದ 54 ರನ್ ಬಾರಿಸಿದರು. ಈ ಮೂಲಕ ಐರ್ಲೆಂಡ್ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಐರ್ಲೆಂಡ್‌ನ ಯಾವುದೇ ಬ್ಯಾಟ್ಸ್‌ಮನ್ ಇದುವರೆಗೆ ಮಾಡದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಬಹಳ ವರ್ಷಗಳಿಂದ ಐರ್ಲೆಂಡ್ ಪರ ಆಡುತ್ತಿರುವ ಪಾಲ್ ಸ್ಟಿರ್ಲಿಂಗ್ ಈಗ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10 ಸಾವಿರ ರನ್‌ಗಳನ್ನು ಪೂರೈಸಿದ ಐರ್ಲೆಂಡ್‌ನ ಮೊದಲ ಮತ್ತು ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. 168 ಏಕದಿನ ಪಂದ್ಯಗಳಲ್ಲಿ 5979 ರನ್ ಗಳಿಸಿರುವ ಪಾಲ್ ಸ್ಟಿರ್ಲಿಂಗ್ ಏಕದಿನ ಕ್ರಿಕೆಟ್‌ನಲ್ಲಿ 14 ಶತಕ ಮತ್ತು 32 ಅರ್ಧಶತಕಗಳನ್ನು ಗಳಿಸಿದ್ದಾರೆ.

ನಾವು ಟಿ20 ಅಂತಾರಾಷ್ಟ್ರೀಯ ಬಗ್ಗೆ ಮಾತನಾಡಿದರೆ, ಇಲ್ಲಿಯವರೆಗೆ ಅವರು 150 ಪಂದ್ಯಗಳನ್ನು ಆಡುವ ಮೂಲಕ 3656 ರನ್ ಗಳಿಸಿದ್ದಾರೆ. ಇಲ್ಲಿ ಅವರ ಸರಾಸರಿ 26.88 ಆಗಿದ್ದು, ಅವರು 134.70 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ. ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ, ಗರಿಷ್ಠ ಸಂಖ್ಯೆಯ ಪಂದ್ಯಗಳನ್ನು ಆಡಿದ ಆಟಗಾರರ ಪಟ್ಟಿಯಲ್ಲಿ ಇವರ ಹೆಸರು ಇದೆ.

ಪಾಲ್ ಸ್ಟಿರ್ಲಿಂಗ್ ನಂತರ, ಐರ್ಲೆಂಡ್ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಆಂಡ್ರ್ಯೂ ಬಾಲ್ಬಿರ್ನಿ. ಅವರು ಇಲ್ಲಿಯವರೆಗೆ ಆರು ಸಾವಿರ ರನ್ ಕಲೆಹಾಕಿದ್ದಾರೆ. ಅಂದರೆ ಮೊದಲ ಮತ್ತು ಎರಡನೇ ಶ್ರೇಯಾಂಕದ ಬ್ಯಾಟ್ಸ್‌ಮನ್‌ಗಳ ನಡುವೆ ಸುಮಾರು ನಾಲ್ಕು ಸಾವಿರ ರನ್‌ಗಳ ದೊಡ್ಡ ಅಂತರವಿದೆ. ಈ ಸರಣಿಯಲ್ಲಿ ಪಾಲ್ ಸ್ಟಿರ್ಲಿಂಗ್ ತಮ್ಮ ಆರು ಸಾವಿರ ಏಕದಿನ ರನ್‌ಗಳನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ. ಇದು ಅವರಿಗೆ ವಿಶೇಷ ಮೈಲಿಗಲ್ಲು ಕೂಡ ಆಗಲಿದೆ.
Published On - 8:48 pm, Wed, 21 May 25
