
ನವದೆಹಲಿ, ಏಪ್ರಿಲ್ 10: ಅಮೆರಿಕ ಮತ್ತು ಚೀನಾ ನಡುವೆ ಟ್ಯಾರಿಫ್ ಸಮರ (China US Tariff war) ಮಿತಿಮೀರುತ್ತಿರುವುದು ಭಾರತೀಯರಿಗೆ ಪರೋಕ್ಷವಾಗಿ ಸಹಾಯವಾಗುವಂತಿದೆ. ಭಾರತದ ಎಲೆಕ್ಟ್ರಾನಿಕ್ಸ್ ಕಂಪನಿಗಳಿಗೆ ಚೀನಾದಿಂದ ಕಡಿಮೆ ಬೆಲೆಗೆ ಬಿಡಿಭಾಗಗಳು ಪೂರೈಕೆ ಆಗುತ್ತಿವೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ ಚೀನಾದ ಹಲವ ಎಲೆಕ್ಟ್ರಾನಿಕ್ ಬಿಡಿಭಾಗಗಳ ತಯಾರಕರು ಭಾರತೀಯ ಕಂಪನಿಗಳಿಗೆ ಶೇ. 5ರಷ್ಟು ರಿಯಾಯಿತಿ ನೀಡಲು ಆರಂಭಿಸಿದ್ದಾರೆ. ಈ ಭಾರತೀಯ ಕಂಪನಿಗಳು ತಮ್ಮ ಅಂತಿಮ ಉತ್ಪನ್ನದ ಬೆಲೆಯನ್ನು ಕಡಿಮೆಗೊಳಿಸುವ ಸಾಧ್ಯತೆ ಇದೆ. ಇದರಿಂದಾಗಿ ಮೊಬೈಲ್ ಫೋನ್, ಟವಿ ಹಾಗೂ ಇತರ ಗೃಹ ಉಪಕರಣಗಳ ಬೆಲೆ ತಗ್ಗುವ ಸಾಧ್ಯತೆ ದಟ್ಟವಾಗಿದೆ ಎಂದು ಈ ವರದಿಯಲ್ಲಿ ಅಂದಾಜಿಸಲಾಗಿದೆ.
ಅಮೆರಿಕ ಮತ್ತು ಚೀನಾದ ಮಧ್ಯೆ ಟ್ಯಾರಿಫ್ ಸಮರ ಅತಿರೇಕಕ್ಕೆ ಹೋಗುತ್ತಿದೆ. ಡೊನಾಲ್ಡ್ ಟ್ರಂಪ್ ಆರಂಭಿಸಿದ ಈ ಸುಂಕ ಸಮರ ಕೊನೆಗೆ ಎಲ್ಲಿಗೆ ಹೋಗಿ ಮುಟ್ಟುತ್ತದೋ ಸದ್ಯಕ್ಕೆ ಅಂದಾಜಿಸಲು ಆಗುವುದಿಲ್ಲ. ಅಮೆರಿಕದ ಸುಂಕ ಹೇರಿಕೆಗೆ ಪ್ರತಿಯಾಗಿ ಚೀನಾವೂ ಪ್ರತಿಸುಂಕ ಹಾಕಿದೆ. ಈ ಸುಂಕ ಹೇರಿಕೆ ಸರಣಿ ಮುಂದುವರಿದು ಈಗ ಅಮೆರಿಕ ಚೀನಾದ ಮೇಲೆ ಹಾಕಿರುವ ಆಮದು ಸುಂಕ ಶೇ. 125ಕ್ಕೆ ಏರಿಬಿಟ್ಟಿದೆ. ಇದಕ್ಕೆ ಪ್ರತಿಯಾಗಿ ಚೀನಾ ಸುಂಕ ಏರಿಸಿದರೆ ತಾನು ಇನ್ನೂ ಮುಂದುವರಿಯುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ವಿಶ್ವದ ಅತಿಮೌಲ್ಯಯುತ ಏರ್ಲೈನ್ಸ್ ಕಂಪನಿ ಎನಿಸಿದ ಭಾರತದ ಇಂಡಿಗೋ
ಈ ಅತಿರೇಕ ಸುಂಕ ಯುದ್ಧ ಭಾರತದ ಕೆಲ ಕಂಪನಿಗಳಿಗೆ ವರವಾಗಿ ಪರಿಣಮಿಸಿದೆ. ಅಮೆರಿಕಕ್ಕೆ ರಫ್ತು ಮಾಡಲಾಗದೆ ಚೀನಾದ ಎಲೆಕ್ಟ್ರಾನಿಕ್ ಕಂಪನಿಗಳ ಉತ್ಪನ್ನಗಳು ರಾಶಿ ರಾಶಿ ಉಳಿದುಹೋಗಿವೆ. ಇವುಗಳನ್ನು ಸಿಕ್ಕಷ್ಟು ಬೆಲೆಗೆ ಮಾರುವ ಪರಿಸ್ಥಿತಿ ಈ ಕಂಪನಿಗಳಿಗೆ ಬಂದಿದೆ. ಹೀಗಾಗಿ, ಭಾರತೀಯ ಸಂಸ್ಥೆಗಳಿಗೆ ಈ ಚೀನೀ ಕಂಪನಿಗಳು ರಿಯಾಯಿತಿ ದರದಲ್ಲಿ ತಮ್ಮ ಉತ್ಪನ್ನಗಳನ್ನು ಮಾರಲು ಮುಂದಾಗಿವೆ.
ಚೀನಾದಿಂದ ಕಡಿಮೆ ಬೆಲೆಗೆ ಬಿಡಿಭಾಗಗಳು ಸಿಕ್ಕ ಬಳಿಕ ಭಾರತೀಯ ಎಲೆಕ್ಟ್ರಾನಿಕ್ಸ್ ಕಂಪನಿಗಳ ಉತ್ಪಾದನಾ ವೆಚ್ಚ ಕಡಿಮೆಗೊಳ್ಳಲಿದೆ. ಈ ಉಳಿತಾಯದಲ್ಲಿ ಕೆಲ ಭಾಗವನ್ನು ಗ್ರಾಹಕರಿಗೆ ವರ್ಗಾಯಿಸಲು ಈ ಕಂಪನಿಗಳು ನಿರ್ಧರಿಸುವ ಸಾಧ್ಯತೆ ಇದೆ. ಹೀಗಾಗಿ, ಮೊಬೈಲ್ ಫೋನ್, ಲ್ಯಾಪ್ಟಾಪ್, ಫ್ರಿಡ್ಜ್, ಟಿವಿ ಇತ್ಯಾದಿ ಎಲೆಕ್ಟ್ರಾನಿಕ್ಸ್ ವಸ್ತುಗಳು ಮುಂದಿನ ದಿನಗಳಲ್ಲಿ ಭಾರತದಲ್ಲಿ ಅಗ್ಗದ ದರದಲ್ಲಿ ದೊರಕಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:27 pm, Thu, 10 April 25