
ನವದೆಹಲಿ, ಏಪ್ರಿಲ್ 23: ಜಾಗತಿಕ ಬ್ರೋಕರೇಜ್ ಸಂಸ್ಥೆಯಾದ ಬರ್ನ್‌ಸ್ಟೈನ್ (Bernstein), ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಮುಕ್ತ ಪತ್ರದಲ್ಲಿ ಭಾರತದ ಆರ್ಥಿಕತೆಯನ್ನು ಸುಧಾರಿಸಲು ಹಲವು ಕ್ರಾಂತಿಕಾರಿ ಮತ್ತು ದಿಟ್ಟ ಸಲಹೆಗಳನ್ನು ನೀಡಿದೆ. ಭಾರತವು ತನ್ನ ಇತ್ತೀಚಿನ ಆರ್ಥಿಕ ಸಾಧನೆಗಳ ಬಗ್ಗೆ ಅತಿಯಾದ ಆತ್ಮವಿಶ್ವಾಸ ಹೊಂದದೆ, ರಚನಾತ್ಮಕ ಸುಧಾರಣೆಗಳಿಗೆ ಮುಂದಾಗಬೇಕು ಎಂದು ಈ ಪತ್ರದಲ್ಲಿ ಎಚ್ಚರಿಸಲಾಗಿದೆ. ಭಾರತದ ಆರ್ಥಿಕ ಸಾಧನೆಗೆ ತೊಡಕಾಗಿರುವ ಕೆಲ ಅಂಶಗಳನ್ನೂ ಗುರುತಿಸಿ ಎತ್ತಿ ತೋರಿಸಿದೆ. ಅದರಲ್ಲೂ ಮುಖ್ಯವಾಗಿ ಉದ್ಯೋಗ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ಇರುವ ಸಮಸ್ಯೆಗಳನ್ನು ವಿವರಿಸಲಾಗಿದೆ. ವೇಣುಗೋಪಾಲ್ ಗಾರೆ ಮತ್ತು ಅನಿಖಿಲ್ ಅರೇಲಾ ಅವರು ಬರ್ನ್‌ಸ್ಟೈನ್ ಪರವಾಗಿ ಈ ಪತ್ರ ಸಿದ್ಧಪಡಿಸಿದ್ದಾರೆ.
ಬರ್ನ್‌ಸ್ಟೈನ್ ನೀಡಿದ ಅತ್ಯಂತ ಆಶ್ಚರ್ಯಕರ ಸಲಹೆಯೆಂದರೆ, ಮುಂದಿನ 5 ವರ್ಷಗಳಲ್ಲಿ ಭಾರತವು ಕೇವಲ 10 ರೂಪಾಯಿ ಮುಖಬೆಲೆಯ ನೋಟುಗಳನ್ನು ಮಾತ್ರ ಚಲಾವಣೆಯಲ್ಲಿ ಇಟ್ಟು, ಉಳಿದ ಎಲ್ಲಾ ಹೆಚ್ಚಿನ ಮುಖಬೆಲೆಯ ನೋಟುಗಳನ್ನು ಹಂತಹಂತವಾಗಿ ರದ್ದುಗೊಳಿಸಬೇಕು. ಇದರಿಂದ ಕಪ್ಪು ಹಣ ಮತ್ತು ಅನಧಿಕೃತ ನಗದು ವಹಿವಾಟುಗಳಿಗೆ ಕಡಿವಾಣ ಬೀಳುತ್ತದೆ. ಡಿಜಿಟಲ್ ಪಾವತಿಗಳು ಸಂಪೂರ್ಣವಾಗಿ ಚಲಾವಣೆಗೆ ಬರುತ್ತವೆ. ಆರ್ಥಿಕತೆಯಲ್ಲಿ ಪಾರದರ್ಶಕತೆ ಹೆಚ್ಚಾಗುತ್ತದೆ.
ಕೃತಕ ಬುದ್ಧಿಮತ್ತೆ (Generative AI) ಭಾರತದ ಸೇವಾ ವಲಯದ (Services Sector) ಉದ್ಯೋಗಗಳಿಗೆ ಕುತ್ತು ತರಬಹುದು. ಆದ್ದರಿಂದ, ಕಾರ್ಮಿಕರನ್ನು ಉತ್ಪಾದನಾ ವಲಯದಲ್ಲಿ ತೊಡಗಿಸಿಕೊಳ್ಳಲು ಹೆಚ್ಚಿನ ಸುಧಾರಣೆಗಳು ಬೇಕು.
ಭಾರತವು ತಂತ್ರಜ್ಞಾನದ ಕೇವಲ ‘ಬಳಕೆದಾರ’ನಾಗದೆ, ತಂತ್ರಜ್ಞಾನವನ್ನು ‘ಸೃಷ್ಟಿಸುವ’ ದೇಶವಾಗಬೇಕು. ಕೇವಲ ಡೇಟಾ ಸೆಂಟರ್‌ಗಳನ್ನು ನಿರ್ಮಿಸುವ ಬದಲು, ಸ್ವದೇಶಿ AI ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕು.
ಇದನ್ನೂ ಓದಿ: ಏಪ್ರಿಲ್‌ನಲ್ಲಿ ಭಾರತದ ಖಾಸಗಿ ವಲಯ ಭರ್ಜರಿ ಏರಿಕೆ: ಉತ್ಪಾದನಾ, ಸೇವಾ ವಲಯಗಳ PMI ವರದಿಯಲ್ಲಿ ಗಮನಾರ್ಹ ಸಂಗತಿಗಳು
ದೇಶದ ಶೇ. 45ರಷ್ಟು ಉದ್ಯೋಗಿಗಳು ಕೃಷಿಯಲ್ಲಿದ್ದರೂ, ಜಿಡಿಪಿಗೆ ಅವರ ಕೊಡುಗೆ ಕೇವಲ ಶೇ. 15ರಷ್ಟಿದೆ. ಸಾಲ ಮನ್ನಾದಂತಹ ತಾತ್ಕಾಲಿಕ ಕ್ರಮಗಳ ಬದಲು, ಕೃಷಿ ಕ್ಷೇತ್ರದಲ್ಲಿ ಆಳವಾದ ಸುಧಾರಣೆಗಳನ್ನು ತರಬೇಕು.
ಕಚ್ಚಾ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಎಲೆಕ್ಟ್ರಿಕ್ ವಾಹನಗಳಿಗೆ (EV) ಸಂಪೂರ್ಣವಾಗಿ ಬದಲಾಗುವ ಸ್ಪಷ್ಟ ಯೋಜನೆಯನ್ನು ರೂಪಿಸಬೇಕು.
ವಿಮಾನಯಾನಕ್ಕಿಂತ ಹೆಚ್ಚಾಗಿ ರೈಲ್ವೆ ಮತ್ತು ಸಮೂಹ ಸಾರಿಗೆಯ (Mass Transit) ಅಭಿವೃದ್ಧಿಗೆ ಒತ್ತು ನೀಡಬೇಕು.
ಭಾರತವು ತನ್ನ ಜಿಡಿಪಿಯ ಕೇವಲ ಶೇ. 0.7ರಷ್ಟನ್ನು ಸಂಶೋಧನೆ ಮತ್ತು ಅಭಿವೃದ್ಧಿಗೆ (Research & Development) ಬಳಸುತ್ತಿದೆ. ಇದನ್ನು ಹೆಚ್ಚಿಸದಿದ್ದರೆ ಜಾಗತಿಕ ಸ್ಪರ್ಧೆಯಲ್ಲಿ ಹಿಂದೆ ಬೀಳುವ ಅಪಾಯವಿದೆ.
ಇದನ್ನೂ ಓದಿ: ವಾಟ್ಸಾಪ್ನಲ್ಲಿ ಪ್ರೀಪೇಡ್ ಮೊಬೈಲ್ ರೀಚಾರ್ಜ್; ಬಂದಿದೆ ಹೊಸ ಫೀಚರ್
“ಭಾರತದ ಬಳಿ ಬಂಡವಾಳ, ಪ್ರತಿಭೆ ಅಥವಾ ಮಹತ್ವಾಕಾಂಕ್ಷೆಯ ಕೊರತೆಯಿಲ್ಲ. ಆದರೆ ಕಠಿಣ ನಿರ್ಧಾರಗಳನ್ನು ಮುಂದೂಡುವ ಬದಲು ಈಗಲೇ ತೆಗೆದುಕೊಳ್ಳುವ ಮನಸ್ಸು ಬೇಕು. ಸುಧಾರಣೆಗಳ ಕಿಟಕಿ ಈಗ ತೆರೆದಿದೆ, ಆದರೆ ಅದು ಬೇಗನೆ ಮುಚ್ಚಬಹುದು” ಎಂದು ಈ ವರದಿಯಲ್ಲಿ ಹೇಳಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ