ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ ನ್ಯಾಯಾಂಗ ಬಂಧನ ಅವಧಿ 14 ದಿನ ವಿಸ್ತರಣೆ
Naresh Goyal Judicial Custody: ಮನಿ ಲಾಂಡರಿಂಗ್ ಕೇಸ್ನಲ್ಲಿ ಆರೋಪ ಎದುರಿಸುತ್ತಿರುವ ಜೆಟ್ ಏರ್ವೇಸ್ ಸಂಸ್ಥೆಯ ಸಂಸ್ಥಾಪಕ ನರೇಶ್ ಗೋಯಲ್ ಅವರ ಜುಡಿಶಿಯಲ್ ಕಸ್ಟಡಿ ಅವಧಿಯನ್ನು 14 ದಿನಗಳ ಕಾಲ ವಿಸ್ತರಿಸಿ ಮುಂಬೈ ಕೋರ್ಟ್ ಆದೇಶಿಸಿದೆ. ಜಾರಿ ನಿರ್ದೇಶನಾಲಯವು ನರೇಶ್ ಗೋಯಲ್ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ. ಕೆನರಾ ಬ್ಯಾಂಕ್ ದಾಖಲಿಸಿದ 538 ಕೋಟಿ ರೂ ಮೊತ್ತದ ಪ್ರಕರಣ ಇದಾಗಿದೆ.
ಮುಂಬೈ, ಸೆಪ್ಟೆಂಬರ್ 14: ಹಣ ಅಕ್ರಮ ವರ್ಗಾವಣೆ (Money Laundering) ಆರೋಪದ ಪ್ರಕರಣದಲ್ಲಿ ಬಂಧಿತರಾಗಿದ್ದ ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ (Naresh Goyal) ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಇನ್ನಷ್ಟು 14 ದಿನಗಳ ಕಾಲ ವಿಸ್ತರಿಸಲಾಗಿದೆ. ಇಂದು (ಸೆ. 14) ಅವರ ಕಸ್ಟಡಿ ಅವಧಿ ಮುಗಿಯಬೇಕಿತ್ತು. ನಿನ್ನೆ ಮುಂಬೈ ಕೋರ್ಟ್ವೊಂದಕ್ಕೆ ಗೋಯಲ್ ಅವರನ್ನು ಹಾಜರುಪಡಿಸಿದ ಜಾರಿ ನಿರ್ದೇಶನಾಲಯ, ಕಸ್ಟಡಿ ಅವಧಿಯನ್ನು ವಿಸ್ತರಿಸಬೇಕೆಂದು ಕೋರಿತು. ಇದಕ್ಕೆ ನ್ಯಾಯಾಲಯ ಸಮ್ಮತಿಸಿದೆ. 74 ವರ್ಷದ ನರೇಶ್ ಗೋಯಲ್ ಅವರು ಸೆಪ್ಟೆಂಬರ್ 28ರವರೆಗೂ ಜುಡಿಷಿಯಲ್ ಕಸ್ಟಡಿಯಲ್ಲಿ ಮುಂದುವರಿಯಲಿದ್ದಾರೆ.
ಏನಿದು ಜೆಟ್ ಏರ್ವೇಸ್ ವಿರುದ್ಧದ ಪ್ರಕರಣ?
ತಮ್ಮ ಬ್ಯಾಂಕ್ನಿಂದ ವಿವಿಧ ಅವಧಿಯಲ್ಲಿ, ವಿವಿಧ ಕಾರಣಗಳಿಗೆ ಪಡೆದಿದ್ದ 848.86 ಕೋಟಿ ರೂ ಮೊತ್ತದ ಸಾಲದಲ್ಲಿ 538.62 ಕೋಟಿ ರೂ ಹಣವನ್ನು ಜೆಟ್ ಏರ್ವೇಸ್ ಮರುಪಾವತಿಸದೇ ಬಾಕಿ ಉಳಿಸಿದೆ ಎಂದು ಕೆನರಾ ಬ್ಯಾಂಕ್ ದೂರು ನೀಡಿತ್ತು. ಆ ಸಂಬಂಧ ಎಫ್ಐಆರ್ ದಾಖಲಾಗಿತ್ತು.
ಇದನ್ನೂ ಓದಿ: ಭಾರತದ ಐಎಂಇಇಸಿ ಕಾರಿಡಾರ್ ಅದೆಷ್ಟು ಐತಿಹಾಸಿಕ ಗೊತ್ತಾ? ಇತಿಹಾಸಕಾರ ವಿಲಿಯಂ ಹೇಳೋದಿದು
ಕೆನರಾ ಬ್ಯಾಂಕ್ ಸಂಸ್ಥೆ ಇದೇ ವೇಳೆ ಜೆಟ್ ಏರ್ವೇಸ್ನ ಲೆಕ್ಕಪತ್ರಗಳನ್ನು ಪರಿಶೀಲಿಸಿದಾಗ ಅನುಮಾನಾಸ್ಪದ ಎನಿಸುವ ವಹಿವಾಟುಗಳು ಕಂಡುಬಂದಿದ್ದವು. ವೃತ್ತಿಪರ ಮತ್ತು ಕನ್ಸಲ್ಟೆನ್ಸಿ ಸೇವೆಗಳಿಗೆಂದು ಜೆಟ್ ಏರ್ವೇಸ್ ಸಂಸ್ಥೆ 1,152.62 ಕೋಟಿ ರೂ ಪಾವತಿ ಮಾಡಿತ್ತು. ಇದರಲ್ಲಿ 197.57 ಕೋಟಿ ರೂ ಮೊತ್ತದ ವಹಿವಾಟುಗಳು ಸಂಸಯಾಸ್ಪದ ಎನಿಸಿವೆ. ಇನ್ವಾಯ್ಸ್ನಲ್ಲಿರುವ ಸರ್ವಿಸ್ಗೆ ಸಂಬಂಧವೇ ಇಲ್ಲದ ಸಂಸ್ಥೆಗಳಿಗೆ 420 ಕೋಟಿ ರೂ ಹಣ ಪಾವತಿ ಮಾಡಲಾಗಿದೆ ಎಂಬುದು ಕೆನರಾ ಬ್ಯಾಂಕ್ನ ಆರೋಪ.
ಮೊದಲಿಗೆ ಸಿಬಿಐ ಈ ಪ್ರಕರಣ ದಾಖಸಿತು. ಬಳಿಕ ಜಾರಿ ನಿರ್ದೇಶನಾಲಯವು ಪಿಎಂಎಲ್ಎ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದೆ. ಈ ಸಂಬಂಧ ಸಂಸ್ಥಾಪಕ ನರೇಶ್ ಗೋಯಲ್ ಅವರನ್ನು ಬಂಧಿಸಿ ಕಸ್ಟಡಿಗೆ ಪಡೆದಿದೆ.
ಇದನ್ನೂ ಓದಿ: ಅಮೆರಿಕಕ್ಕೆ ಪೆಟ್ರೋಲ್ ಕಾಟ; ಆಗಸ್ಟ್ನಲ್ಲಿ ಹಣದುಬ್ಬರ ಏರಿಕೆ; ಭಾರತ ಸೇರಿದಂತೆ ಜಾಗತಿಕವಾಗಿ ಏನು ಪರಿಣಾಮ?
ಬ್ಯಾಂಕ್ನಿಂದ ಪಡೆದ ಸಾಲವನ್ನು ನಿಗದಿತ ಉದ್ದೇಶಕ್ಕೆ ಬಳಸದೇ ಅಕ್ರಮವಾಗಿ ಸಾಗಿಸಿ ವಿದೇಶೀ ಖಾತೆಗಳಲ್ಲಿ ಇಡಲಾಗಿದೆ. ಈ ಅಕ್ರಮ ಹಣವನ್ನು ನೋಡಿಕೊಳ್ಳಲು ಯುಎಇ ದೇಶದಲ್ಲಿ ಒಬ್ಬ ವ್ಯಕ್ತಿ ಇದ್ದಾರೆ ಎಂದೂ ಜಾರಿ ನಿರ್ದೇಶನಾಲಯ ಮುಂಬೈನ ನ್ಯಾಯಾಲಯಕ್ಕೆ ತಿಳಿಸಿದರೆಂದು ಹೇಳಲಾಗುತ್ತಿದೆ. ಇಡಿ ಅಧಿಕಾರಿಗಳ ವಾದವನ್ನು ಪುರಸ್ಕರಿಸಿದ ಕೋರ್ಟ್, ನರೇಶ್ ಗೋಯಲ್ ಅವರನ್ನು ಇನ್ನಷ್ಟು 14 ದಿನಗಳ ಕಾಲ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ