ವಿಶ್ವದಾದ್ಯಂತ 10 ಕೋಟಿಗೂ ಹೆಚ್ಚು ಮಂದಿ ತಮ್ಮ ಮನೆಗಳಿಂದ ಚದುರಿ ಹೋಗಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ (UNCHR) ಸೋಮವಾರ ಹೇಳಿದೆ. ಹಿಂಸೆ, ಬಿಕ್ಕಟ್ಟು, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಕಿರುಕುಳ ಮೊದಲಾದ ಕಾರಣಗಳಿಗೆ ತಮ್ಮ ಸ್ಥಳಗಳನ್ನು ತೊರೆದಿದ್ದಾರೆ ಎಂದು ಡೇಟಾ ತೋರಿಸಿದೆ. ಉಕ್ರೇನ್ನಲ್ಲಿನ ಯುದ್ಧವು (Russia- Ukraine War) ಹತ್ತಾರು ಲಕ್ಷ ಮಂದಿ ತಮ್ಮ ಮನೆಗಳನ್ನು ಬಿಡುವಂತೆ ಮಾಡಿದೆ. ಇಥಿಯೋಪಿಯಾ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಅಂಶಗಳು ಸಹ ಸೇರಿಕೊಂಡು ಸಂಖ್ಯೆ ಹೆಚ್ಚಾಗಲು ಕಾರಣವಾಗಿವೆ. “ಇದೊಂದು ದಾಖಲೆ, ಹಿಂದೆಂದೂ ಆಗಿರಲಿಲ್ಲ,” ಎಂದು ನಿರಾಶ್ರಿತರ ವಿಭಾಗಕ್ಕೆ ವಿಶ್ವಸಂಸ್ಥೆಯ ಹೈ ಕಮಿಷರ್ ಫಿಲಿಪ್ಪೊ ಗ್ರಾಂಡಿ ಪತ್ರಕರ್ತರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದೊಂದು ಎಚ್ಚರಿಕೆಯ ಕರೆ. ವಿನಾಶಕಾರಿ ಬಿಕ್ಕಟ್ಟು ತಡೆದು, ಬಗೆಹರಿಸಿ, ಕಿರುಕುಳವನ್ನು ಕೊನೆಗೊಳಿಸಿ, ಅಮಾಯಕ ಜನರು ತಮ್ಮ ಮನೆಗಳನ್ನು ಬಿಡುವುದಕ್ಕೆ ಕಾರಣವಾಗಿರುವ ಸಮಸ್ಯೆಗಳನ್ನು ನಿವಾರಿಸಬೇಕಿದೆ ಎಂದಿದ್ದಾರೆ.
ಯುಎನ್ಎಚ್ಸಿಆರ್ ಡೇಟಾದಲ್ಲಿ ನಿರಾಶ್ರಿತರು, ಆಶ್ರಯ ಕೋರಿದವರು ಮತ್ತು ತಮ್ಮದೇ ದೇಶದಲ್ಲಿ ನೆಲೆ ಕಳೆದುಕೊಂಡವರು ಒಳಗೊಂಡಿದ್ದಾರೆ. ವಿಶ್ವ ಸಂಸ್ಥೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಈ ಯುಎನ್ಎಚ್ಸಿಆರ್ ಕಳೆದ ವಾರ ಹೇಳಿರುವ ಪ್ರಕಾರ, ಕಳೆದ ವರ್ಷದ ಕೊನೆ ಹೊತ್ತಿಗೆ ತಮ್ಮದೇ ದೇಶದಲ್ಲಿ ನೆಲೆ ಕಳೆದುಕೊಂಡವರ ಪ್ರಮಾಣವು ದಾಖಲೆಯ ಸಂಖ್ಯೆಯಾದ 6 ಕೋಟಿಗೆ ತಲುಪಿದೆ.
ಇದನ್ನೂ ಓದಿ: ಉಕ್ರೇನ್ ಮೇಲಿನ ರಷ್ಯಾ ದಾಳಿ ಪಕ್ಕಾ ಪ್ಲಾನ್ನಂತೆ ನಡೀತಿದೆ: ಅಂದು ಸಿರಿಯಾದಲ್ಲಿಯೂ ಇದೆಲ್ಲಾ ಆಗಿತ್ತು
ಈ ರೀತಿ ನೆಲೆ ಕಳೆದುಕೊಳ್ಳುವುದಕ್ಕೆ ಕಾರಣ ಏನು ಎಂಬುದನ್ನು ಕಂಡುಕೊಂಡು, ಅದು ಸರಿಪಡಿಸುವುದಕ್ಕೆ ಪ್ರಯತ್ನಿಸಬೇಕು ಎಂದು ಒತ್ತಾಯಿಸಿರುವ ಅವರು, ಮಾನವೀಯ ಅನುದಾನ ಎಂಬುದು ಈ ಸನ್ನಿವೇಶಕ್ಕೆ ಬಹಳ ಸೂಕ್ತವಾದದ್ದು ಎಂದಿದ್ದಾರೆ. “ಈಗಿನ ಟ್ರೆಂಡ್ ಅನ್ನು ಉಲ್ಟಾ ಮಾಡಬೇಕಿದ್ದಲ್ಲಿ ಅದಕ್ಕಿರುವ ಉತ್ತರ ಅಂದರೆ ಶಾಂತಿ ಮತ್ತು ಸ್ಥಿರತೆ. ಆಗಷ್ಟೇ ಜನರು ತಮ್ಮ ಮನೆಗಳಲ್ಲಿ ಅಪಾಯಕಾರಿ ಸ್ಥಿತಿಯ ಮಧ್ಯೆ ಸಿಲುಕುವುದಿಲ್ಲ. ಅಥವಾ ಅಪಾಯಕಾರಿ ಹೋರಾಟಗಳಲ್ಲಿ ನಲುಗಿ, ಮನೆ ತೊರೆಯುವಂತಾಗುವುದಿಲ್ಲ,” ಎಂದಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:36 pm, Mon, 23 May 22