
ನವದೆಹಲಿ, ಜೂನ್ 3: ಭಾರತದ ಪ್ರಖ್ಯಾತ ಟಯರ್ ತಯಾರಕ ಕಂಪನಿಯಾದ ಎಂಆರ್ಎಫ್ ಈಗ ಭಾರತದ ಅತಿಹೆಚ್ಚು ಬೆಲೆಯ ಷೇರುಗಳ ಪಟ್ಟಿಯಲ್ಲಿ (most expensive stocks) ಮತ್ತೆ ಅಗ್ರಸ್ಥಾನಕ್ಕೇರಿದೆ. ಕಳೆದ ವರ್ಷ ಎಲ್ಸಿಡ್ ಇನ್ವೆಸ್ಟ್ಮೆಂಟ್ಸ್ ಎನ್ನುವ ಸಂಸ್ಥೆಯ ಷೇರುಬೆಲೆ ದಿಢೀರ್ ಹೆಚ್ಚಳವಾಗಿ, ನಂಬರ್ ಒನ್ ಸ್ಥಾನಕ್ಕೇರಿತ್ತು. ಹಲವು ವರ್ಷಗಳಿಂದ ಅಗ್ರಸ್ಥಾನದಲ್ಲಿದ್ದ ಎಂಆರ್ಎಫ್ ಎರಡನೇ ಸ್ಥಾನಕ್ಕಿಳಿಯಬೇಕಾಯಿತು. ಎಲ್ಸಿಡ್ ಇನ್ವೆಸ್ಟ್ಮೆಂಟ್ಸ್ ಷೇರು ಬೆಲೆ ದಾಖಲೆಯ 3.32 ಲಕ್ಷ ರೂಗೆ ಏರಿತ್ತು. ಈಗ ಅದು ಶೇ. 60ರಷ್ಟು ಮೌಲ್ಯ ಕಳೆದುಕೊಂಡು 1,29,899 ರೂಗೆ ಇಳಿದಿದೆ.
ಇದೇ ವೇಳೆ, ಎಂಆರ್ಎಫ್ ಷೇರು ಬೆಲೆ ಒಂದು ಹಂತದಲ್ಲಿ 1,02,124 ರೂಗೆ ಕುಸಿದಿತ್ತು. ಈಗ ಷೇರುಬೆಲೆ ಗಣನೀಯವಾಗಿ ಏರಿಕೆ ಆಗಿದ್ದು 1,38,539 ರೂ ಆಗಿದೆ. ಇದರೊಂದಿಗೆ ಎಲ್ಸಿಡ್ ಇನ್ವೆಸ್ಟ್ಮೆಂಟ್ಸ್ ಷೇರಿಗಿಂತ ಎಂಆರ್ಎಫ್ ಷೇರಿನ ಬೆಲೆ ಹೆಚ್ಚಾಗಿದೆ.
ಇದನ್ನೂ ಓದಿ: ಇನ್ಫೋಸಿಸ್ ಮೂರ್ತಿಯವರ 18 ತಿಂಗಳ ಮೊಮ್ಮಗುವಿಗೆ 6.5 ಕೋಟಿ ರೂ ಡಿವಿಡೆಂಡ್; ಏಕಾಗ್ರನ ಒಟ್ಟು ಷೇರುಗಳ ಮೌಲ್ಯ ಎಷ್ಟು ಗೊತ್ತಾ?
ಎಲ್ಸಿಡ್ ಇನ್ವೆಸ್ಟ್ಮೆಂಟ್ಸ್ ಸಂಸ್ಥೆಯ ಷೇರು ಬೆಲೆ ವರ್ಷದ ಹಿಂದೆ 3 ರೂ ಆಸುಪಾಸಿನಲ್ಲಿ ಗಿರಕಿ ಹೊಡೆಯುತ್ತಿತ್ತು. ಒಂದು ಷೇರಿನ ನಿಜವಾದ ಮೌರುಕಟ್ಟೆ ಮೌಲ್ಯ ತಪ್ಪಾಗಿದೆ ಎಂದಾಗ ನಿಜ ಮೌಲ್ಯ ಗುರುತಿಸಲು ಷೇರು ವಿನಿಮಯ ಕೇಂದ್ರದಲ್ಲಿ ವಿಶೇಷ ಕಾಲ್ ಆಕ್ಷನ್ ನಡೆಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಎಲ್ಸಿಡ್ ಷೇರುಬೆಲೆ 3.53 ರೂನಿಂದ 2,36,250 ರೂಗೆ ಜಂಪ್ ಆಗಿತ್ತು. ಅದು 2024ರ ಅಕ್ಟೋಬರ್ನಲ್ಲಿ ಆಗಿದ್ದು. ಆಗ ಅದು ಭಾರತದ ಅತಿಹೆಚ್ಚು ಬೆಲೆಯ ಷೇರು ಎನ್ನುವ ದಾಖಲೆಯನ್ನು ಸ್ಥಾಪಿಸಿತು.
ಈಗಲೂ ಆ ದಾಖಲೆ ಎಲ್ಸಿಡ್ ಇನ್ವೆಸ್ಟ್ಮೆಂಟ್ಸ್ ಹೆಸರಿನಲ್ಲಿ ಇದೆಯಾದರೂ, ಸದ್ಯಕ್ಕೆ ಅತಿ ಹೆಚ್ಚು ಬೆಲೆಯ ಷೇರು ಎಂಆರ್ಎಫ್ನದ್ದಾಗಿದೆ.
ಇಲ್ಲಿ ಪ್ರಾಪರ್ಟಿ ಷೇರ್ ಇನ್ವೆಸ್ಟ್ಮೆಂಟ್ ಟ್ರಸ್ಟ್ ಆರ್ಇಐಟಿ ಪ್ಲಾಟ್ಫಾರ್ಮ್ ಕೂಡ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿದೆ. ಇದರ ಒಂದು ಯುನಿಟ್ ಬೆಲೆ 10 ಲಕ್ಷ ರೂ ಇದೆ. ಇದನ್ನು ಪರಿಗಣಿಸಿದರೆ ಇದು ಅತಿದುಬಾರಿ ಷೇರು ಎನಿಸುತ್ತದೆ. ಆದರೆ, ಇದು ರಿಯಲ್ ಎಸ್ಟೇಟ್ ಇನ್ವೆಸ್ಟ್ಮೆಂಟ್ ಟ್ರಸ್ಟ್ ಆದ್ದರಿಂದ ಈಕ್ವಿಟಿ ಷೇರೆಂದು ಪರಿಗಣಿತವಾಗುವುದಿಲ್ಲ.
ಇದನ್ನೂ ಓದಿ: ಅಮೆರಿಕದ ಈಗಿನ ಆರ್ಥಿಕ ಮಟ್ಟ ತಲುಪಲು ಭಾರತಕ್ಕೆ ಇನ್ನೆಷ್ಟು ವರ್ಷ ಬೇಕು?: ಅಮಿತಾಭ್ ಕಾಂತ್ ಉತ್ತರ ಇದು
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ