ಗ್ರಾಮೀಣ ಕುಟುಂಬಗಳ ಆದಾಯ ಮತ್ತು ಉಳಿತಾಯ ಐದು ವರ್ಷದಲ್ಲಿ ಎಷ್ಟು ಬದಲಾಗಿದೆ? ಇಲ್ಲಿದೆ ನಬಾರ್ಡ್ ಸಮೀಕ್ಷೆ ವಿವರ

|

Updated on: Oct 14, 2024 | 1:34 PM

NABARD National Rural Household survey: ನಬಾರ್ಡ್​ನ ಗ್ರಾಮೀಣ ಭಾಗದ ಸಮೀಕ್ಷೆಯ ವರದಿ ಪ್ರಕಟವಾಗಿದ್ದು, 2016-17ರಿಂದ 2021-22ರವರೆಗೆ ಐದು ವರ್ಷದಲ್ಲಿ ಅಲ್ಲಿಯ ಕುಟುಂಬಗಳ ಸರಾಸರಿ ಆದಾಯ, ಖರ್ಚು ಮತ್ತು ಉಳಿತಾಯದಲ್ಲಿ ಎಷ್ಟು ಬದಲಾವಣೆ ಆಗಿದೆ ಎಂಬಿತ್ಯಾದಿ ಅಂಶಗಳು ಬೆಳಕಿಗೆ ಬಂದಿವೆ. ಗ್ರಾಮೀಣ ಭಾಗದ ಜನರ ಪ್ರಮುಖ ಆದಾಯಗಳೇನು, ಸರ್ಕಾರದ ವತಿಯಿಂದ ಸಿಗುವ ಸೌಲಭ್ಯಗಳೇನು ಇವೆಲ್ಲವನ್ನೂ ಈ ಸಮೀಕ್ಷೆ ಹೊರತಂದಿದೆ.

ಗ್ರಾಮೀಣ ಕುಟುಂಬಗಳ ಆದಾಯ ಮತ್ತು ಉಳಿತಾಯ ಐದು ವರ್ಷದಲ್ಲಿ ಎಷ್ಟು ಬದಲಾಗಿದೆ? ಇಲ್ಲಿದೆ ನಬಾರ್ಡ್ ಸಮೀಕ್ಷೆ ವಿವರ
ಕೃಷಿಕ
Follow us on

ನವದೆಹಲಿ, ಅಕ್ಟೋಬರ್ 14: ದೇಶದ ಗ್ರಾಮೀಣ ಭಾಗದಲ್ಲಿ ಜನರ ಆದಾಯ ಗಣನೀಯವಾಗಿ ಹೆಚ್ಚುತ್ತಿರುವುದು ಸಮೀಕ್ಷಾ ವರದಿಯೊಂದರಿಂದ ತಿಳಿದುಬಂದಿದೆ. ನಬಾರ್ಡ್​ನ ಅಖಿಲ ಭಾರತ ಗ್ರಾಮೀಣ ಹಣಕಾಸು ಒಳಗೊಳ್ಳುವಿಕೆ ಸಮೀಕ್ಷೆ (ಎನ್​ಎಎಫ್​ಐಎಸ್) ಪ್ರಕಾರ ಕಳೆದ ಐದು ವರ್ಷದಲ್ಲಿ ಗ್ರಾಮೀಣ ಕುಟುಂಬಗಳ ಸರಾಸರಿ ಮಾಸಿಕ ಆದಾಯದಲ್ಲಿ ಶೇ. 58ರಷ್ಟು ಹೆಚ್ಚಳವಾಗಿದೆ. ಶೇ. 9.5ರ ಸಿಎಜಿಆರ್ ದರದಲ್ಲಿ ಆದಾಯ ಬೆಳೆದಿದೆ. 2016-17ರಲ್ಲಿ ಗ್ರಾಮೀಣ ಭಾಗದ ಒಂದು ಕುಟುಂಬದ ಸರಾಸರಿ ಮಾಸಿಕ ಆದಾಯ 8,059 ರೂ ಇತ್ತು. 2021-22ರಲ್ಲಿ ಇದು 12,698 ರೂಗೆ ಏರಿದೆ ಎಂದು ಈ ಸಮೀಕ್ಷೆಯ ಅಂಶಗಳನ್ನು ಉಲ್ಲೇಖಿಸಿ ಹಣಕಾಸು ಸಚಿವಾಲಯ ಹೇಳಿದೆ.

ಕುತೂಹಲದ ಸಂಗತಿ ಎಂದರೆ ಗ್ರಾಮೀಣ ಭಾಗದಲ್ಲಿ ಕೃಷಿ ಕಸುಬು ಮಾಡುವ ಕುಟುಂಬದ ಆದಾಯವು ಇತರಿಗಿಂತ ತುಸು ಹೆಚ್ಚಿದೆ. ಕೃಷಿ ಮಾಡುವ ಕುಟುಂಬಗಳ ಸರಾಸರಿ ಮಾಸಿಕ ಆದಾಯ 13,661 ರೂ ಇದೆ. ಕೃಷಿಯೇತರ ಆದಾಯ ಇರುವ ಗ್ರಾಮೀಣ ಭಾಗದ ಕುಟುಂಬಗಳ ಸರಾಸರಿ ಮಾಸಿಕ ಆದಾಯ 11,438 ರೂ ಇದೆ.

ಗ್ರಾಮೀಣದವರಿಗೆ ಆದಾಯ ಮೂಲ ಎಲ್ಲೆಲ್ಲಿಂದ?

ಕೃಷಿಕ ಕುಟುಂಬಗಳಲ್ಲಿ, ಕೃಷಿಯಿಂದ ಬರುವ ಆದಾಯ ಮೂರನೇ ಒಂದು ಭಾಗದಷ್ಟಾಗುತ್ತದೆ. ಸರ್ಕಾರೀ ಅಥವಾ ಖಾಸಗಿ ಸೇವೆಗಳಿಂದ ಶೇ. 25ರಷ್ಟು ಆದಾಯ ಬರುತ್ತಿದೆ. ಕೂಲಿಯಿಂದ ಶೇ. 15, ಇತರ ಉದ್ದಿಮೆ ಮೂಲಕ ಶೇ. 15ರಷ್ಟು ಆದಾಯವು ಗ್ರಾಮೀಣ ಕುಟುಂಬಗಳಿಗೆ ಹೋಗುತ್ತಿದೆ. ಆದರೆ, ಗ್ರಾಮೀಣ ಭಾಗದ ಒಟ್ಟಾರೆ ಆದಾಯದಲ್ಲಿ ಶೇ. 37ರಷ್ಟು ಮೊತ್ತವು ಸಂಬಳ ನೀಡುವ ಉದ್ಯೋಗಗಳಿಂದ ಬರುತ್ತಿದೆ ಎಂದು ಈ ಸಮೀಕ್ಷೆಯ ಅಂಶಗಳು ಹೇಳುತ್ತಿವೆ.

ಇದನ್ನೂ ಓದಿ: ಪಿಎಂ ಇಂಟರ್ನ್​ಶಿಪ್ ಸ್ಕೀಮ್​ಗೆ ಭರ್ಜರಿ ಸ್ಪಂದನೆ; ಒಂದೇ ದಿನ ಒಂದೂವರೆ ಲಕ್ಷಕ್ಕೂ ಹೆಚ್ಚು ಮಂದಿ ನೊಂದಣಿ

ಗ್ರಾಮೀಣ ಭಾಗದವರ ವೆಚ್ಚವೂ ಹೆಚ್ಚು…

ಗ್ರಾಮೀಣ ಭಾಗದ ಕುಟುಂಬಗಳ ಆದಾಯವು ಐದು ವರ್ಷದಲ್ಲಿ ಶೇ. 58ರಷ್ಟು ಹೆಚ್ಚಳವಾಗಿದೆಯಾದರೂ, ಅವುಗಳ ವೆಚ್ಚ ಎರಡು ಪಟ್ಟು ಹೆಚ್ಚಾಗಿದೆ. 2016-17ರಲ್ಲಿ ಸರಾಸರಿ ಮಾಸಿಕ ವೆಚ್ಚ 6,646 ರೂ ಮಾತ್ರವೇ ಇತ್ತು. ಇದು 2021-22ರಲ್ಲಿ 11,262 ರೂಗೆ ಏರಿಕೆ ಆಗಿದೆ. ಗೋವಾ ಮತ್ತು ಜಮ್ಮು-ಕಾಶ್ಮೀರದಲ್ಲಿ ಇದು 17,000 ರೂನಷ್ಟು ಅಧಿಕ ಮಟ್ಟದಲ್ಲಿದೆ.

ಖರ್ಚು ಹೆಚ್ಚು, ಉಳಿತಾಯ ಕಡಿಮೆ

ಆದಾಯಕ್ಕಿಂತ ಖರ್ಚು ಹೆಚ್ಚಾಗಿರುವುದರಿಂದ ಗ್ರಾಮೀಣ ಭಾಗದ ಕುಟುಂಬಗಳ ಹಣ ಉಳಿತಾಯ ಕಷ್ಟವಾಗಿದೆ. ಐದು ವರ್ಷದಲ್ಲಿ ಉಳಿತಾಯ ಅಲ್ಪ ಹೆಚ್ಚಳ ಕಂಡಿದೆ. 9,104 ರೂ ಇದ್ದ ವಾರ್ಷಿಕ ಉಳಿತಾಯವು ಐದು ವರ್ಷದ ಬಳಿಕ 13,209 ರೂಗೆ ಏರಿದೆ. ಕೃಷಿ ಕಸುಬು ಮಾಡುವ ಕುಟುಂಬಗಳು ಹೆಚ್ಚು ಹಣ ಉಳಿತಾಯ ತೋರಿವೆ.

ಇದನ್ನೂ ಓದಿ: ಭಾರತದಿಂದ ಹೊಸ ಮೈಲಿಗಲ್ಲು; 200 ಗಿಗಾವ್ಯಾಟ್ ಗಡಿದಾಟಿದ ಮರುಬಳಕೆ ಇಂಧನ ಸಾಮರ್ಥ್ಯ

ಗ್ರಾಮೀಣ ಭಾಗದವರಿಗೆ ಬಲ ಒದಗಿಸಿರುವ ಯೋಜನೆಗಳು…

  • ಗ್ರಾಮೀಣ ಭಾಗದ ಶೇ. 44ರಷ್ಟು ಕುಟುಂಬಗಳ ಬಳಿ ಕಿಸಾನ್ ಕ್ರೆಡಿಟ್ ಕಾರ್ಡ್ ಇದೆ.
  • ಇನ್ಷೂರೆನ್ಸ್ ಸೌಲಭ್ಯ ಹೊಂದಿರುವ ಕುಟುಂಬಗಳ ಪ್ರಮಾಣ ಐದು ವರ್ಷದಲ್ಲಿ ಶೇ. 25.5ರಿಂದ ಶೇ. 80.30ಗೆ ಏರಿದೆ.
  • ವೃದ್ಧಾಪ್ಯ, ವಿಧವಾ ಇತ್ಯಾದಿ ಒಂದಿಲ್ಲೊಂದು ರೀತಿಯ ಪಿಂಚಣಿ ಪಡೆಯುತ್ತಿರುವ ಕುಟುಂಬದ ಸಂಖ್ಯೆ ಶೇ. 18.9ರಿಂದ ಶೇ. 23.5ಕ್ಕೆ ಹೆಚ್ಚಾಗಿದೆ.
  • ಉತ್ತಮ ಹಣಕಾಸು ಸಾಕ್ಷರತೆ ಹೊಂದಿರುವ ಗ್ರಾಮೀಣ ಕುಟುಂಬಗಳ ಸಂಖ್ಯೆ ಶೇ. 33.9ರಿಂದ ಶೇ. 51.3ಕ್ಕೆ ಏರಿದೆ.

ನಬಾರ್ಡ್ ಸಂಸ್ಥೆ ವತಿಯಿಂದ ನಡೆದ ಈ ಗ್ರಾಮೀಣ ಸಮೀಕ್ಷೆಯ ವ್ಯಾಪ್ತಿಯಲ್ಲಿ ದೇಶದ ವಿವಿಧ ಭಾಗದಲ್ಲಿನ ಒಂದು ಲಕ್ಷ ಕುಟುಂಬಗಳಿವೆ. ಕೋವಿಡ್ ನಂತರದ ವಿವಿಧ ಆರ್ಥಿಕ ಮತ್ತು ಹಣಕಾಸು ಸ್ತರಗಳಲ್ಲಿನ ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ