ನವದೆಹಲಿ, ಜೂನ್ 5: ಲೋಕಸಭಾ ಚುನಾವಣೆಯ ಫಲಿತಾಂಶ ಬಂದಾಯಿತು. ಎನ್ಡಿಎ 3.0 ಸರ್ಕಾರ ರಚನೆ ಆಗುವುದು ಬಹುತೇಕ ಖಚಿತವಾಗಿದೆ. ಹೊಸ ಸರ್ಕಾರ ರಚನೆ ಇದೇ ಎಂಟರಂದು ಆಗುವ ಸಾಧ್ಯತೆ ಇದೆ. ಕಳೆದ ಕೆಲ ವರ್ಷಗಳಿಂದ ಹುಲುಸಾಗಿ ಬೆಳೆದಿರುವ ರಿಯಲ್ ಎಸ್ಟೇಟ್ ಉದ್ಯಮ (real estate sector) ಈಗ ಹೊಸ ಸರ್ಕಾರದಿಂದ ಇನ್ನಷ್ಟು ಪುಷ್ಟಿ ಪಡೆಯಲು ಅಪೇಕ್ಷಿಸುತ್ತಿದೆ. ಉದ್ಯಮವನ್ನು ಇನ್ನಷ್ಟು ಬಲಪಡಿಸಬಲ್ಲ ಕೆಲ ಕ್ರಮಗಳಿಗೆ ಮನವಿ ಮಾಡಲಾಗುತ್ತಿದೆ. ಆದಾಯ ತೆರಿಗೆ, ಜಿಎಸ್ಟಿ ತೆರಿಗೆ, ಇಎಂಐ ಇತ್ಯಾದಿಯಲ್ಲಿ ಬದಲಾವಣೆ ತರಬಹುದು ಎನ್ನುವ ಸಲಹೆಯನ್ನು ಉದ್ಯಮಿಗಳು ನೀಡಿದ್ದಾರೆ.
ಬ್ಯಾಂಕ್ನಲ್ಲಿ ಗೃಹ ಸಾಲಕ್ಕೆ ಬಡ್ಡಿದರ ಅಧಿಕ ಮಟ್ಟದಲ್ಲಿದೆ. ಪರಿಣಾಮವಾಗಿ ಇಎಂಐ ಹೊರೆ ಮಧ್ಯಮವರ್ಗದ ಗ್ರಾಹಕರಿಗೆ ಹೆಚ್ಚಾಗಿದೆ. ಕೋವಿಡ್ಗೆ ಮುನ್ನ ಶೇ. 6.25ರಷ್ಟಿದ್ದ ಗೃಹಸಾಲ ದರ ಈಗ ಶೇ. 8.75ರ ಆಸುಪಾಸಿನಲ್ಲಿ ಇದೆ. ಗೃಹಸಾಲದ ಮೊದಲ 20 ಲಕ್ಷ ರೂ ಮೊತ್ತಕ್ಕೆ ಮೊದಲ ಐದು ವರ್ಷದಲ್ಲಿ ಶೇ. 5ರಷ್ಟು ಮಾತ್ರ ಬಡ್ಡಿ ವಿಧಿಸುವುದು ಸೂಕ್ತ ಎನ್ನುವ ಸಲಹೆಯನ್ನು NAREDCO ಅಧ್ಯಕ್ಷ ಜಿ ಹರಿಬಾಬು ನೀಡಿದ್ದಾರೆ.
ಇದನ್ನೂ ಓದಿ: ಪರ್ಸನಲ್ ಲೋನ್ ಅನ್ನು ಮುಂಗಡವಾಗಿ ತೀರಿಸಬೇಕೆ? ಈ ಅಂಶಗಳು ತಿಳಿದಿರಲಿ
ರಿಯಲ್ ಎಸ್ಟೇಟ್ ವಲಯವನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗಲು ಅಗತ್ಯವಾದ ನೀತಿ ಸುಧಾರಣೆಗಳನ್ನು ತರಬೇಕು. ಸುಸ್ಥಿರ ಕಟ್ಟಡ ನಿರ್ಮಾಣ ಕ್ರಮ ಅನುಸರಿಸುವ ಬಿಲ್ಡರ್ಗಳಿಗೆ ಹಣಕಾಸು ಉತ್ತೇಜಕ, ತೆರಿಗೆ ರಿಯಾಯಿತಿ ಇತ್ಯಾದಿಯನ್ನು ಕೊಟ್ಟು ಪ್ರೇರೇಪಿಸಬಹುದು ಎಂದು ಹರಿಬಾರು ಅಭಿಪ್ರಾಯಪಟ್ಟಿದ್ದಾರೆ.
ಗೃಹಸಾಲಗಳಿಗೆ ಸರ್ಕಾರ ನೀಡುತ್ತಿರುವ ಟ್ಯಕ್ಸ್ ಡಿಡಕ್ಷನ್ಸ್ ಪ್ರಮಾಣ ಸಾಲದು. ರಿಯಲ್ ಎಸ್ಟೇಟ್ ಬೆಲೆ ಬಹಳ ಹೆಚ್ಚಾಗಿದೆ. ಆದ್ದರಿಂದ ಗೃಹಸಾಲಗಳಿಗೆ ಹೆಚ್ಚಿನ ತೆರಿಗೆ ರಿಯಾಯಿತಿ ಕಲ್ಪಿಸಬೇಕು ಎಂದು ಪ್ರಾಪ್ಈಕ್ವಿಟಿ ಎಂಬ ಸಂಸ್ಥೆಯ ಸಿಇಒ ಮತ್ತು ಎಂಡಿ ಸಮೀರ್ ಜಸುಜಾ ಕೋರಿಕೊಂಡಿದ್ದಾರೆ.
ಇದನ್ನೂ ಓದಿ: ಚೆಕ್ ಲೀಫ್, ಪಾಸ್ಬುಕ್ ಫೋಟೋ ಲಗತ್ತಿಸುವ ಅಗತ್ಯವಿಲ್ಲ; ಸರಳವಾಗಲಿದೆ ಪಿಎಫ್ ಹಣಕ್ಕೆ ಕ್ಲೇಮ್ ಪ್ರಕ್ರಿಯೆ
ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹಾಕಲಾಗುತ್ತಿರುವ ಜಿಎಸ್ಟಿ ತೆರಿಗೆಯ ಪ್ರಮಾಣವನ್ನು ಕಡಿಮೆಗೊಳಿಸಬೇಕು ಎನ್ನುವ ಬೇಡಿಕೆಯೂ ಇದೆ. ಈ ನಿಟ್ಟಿನಲ್ಲಿ ಜಿಎಸ್ಟಿ ಕೌನ್ಸಿಲ್ನ ಮನವೊಪ್ಪಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಸಿಗ್ನೇಚರ್ ಗ್ಲೋಬಲ್ ಸಂಸ್ಥೆಯ ಛೇರ್ಮನ್ ಪ್ರದೀಪ್ ಅಗರ್ವಾಲ್ ಸಲಹೆ ನೀಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ