ಷೇರುಪೇಟೆ ಸಂಚಲನ: ಪಿಎಸ್ಯು ಸೆಕ್ಟರ್ ಬಿಟ್ಟು ಎಫ್ಎಂಸಿಜಿಯತ್ತ ಹರಿಯುತ್ತಿದೆ ಹೂಡಿಕೆದಾರರ ಹಣ
Stock Market Updates, which stocks are rising and falling: 2024ರ ಲೋಕಸಭಾ ಚುನಾವಣೆಯ ಫಲಿತಾಂಶ ಮಾರುಕಟ್ಟೆಯನ್ನು ಅಕ್ಷರಶಃ ಗಡಗಡ ನಡುಗಿಸಿದೆ. ನಿನ್ನೆ ಹೂಡಿಕೆದಾರರ 31 ಲಕ್ಷ ಕೋಟಿ ರೂ ಹಣ ನಷ್ಟವಾಗಿತ್ತು. ಇವತ್ತೂ ಕೂಡ ಕುಸಿತ ಕಾಣುತ್ತಿದೆ, ಆದರೆ, ನಿನ್ನೆಯಷ್ಟು ಅಲ್ಲ. ಅಧಿಕ ಬಂಡವಾಳ ವೆಚ್ಚ ಬೇಡುವ ಕ್ಷೇತ್ರಗಳು, ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಷೇರುಗಳನ್ನು ಮಾರಿ ಕೈತೊಳೆದುಕೊಳ್ಳುತ್ತಿದ್ದಾರೆ ಹೂಡಿಕೆದಾರರು. ಅದಕ್ಕೆ ಬದಲಾಗಿ ಎಫ್ಎಂಸಿಜಿ ಸೆಕ್ಟರ್ನ ಕಂಪನಿಗಳತ್ತ ಹಣದ ಹರಿವು ಆಗುತ್ತಿದೆ.
ನವದೆಹಲಿ, ಜೂನ್ 5: ನಿನ್ನೆ ಚುನಾವಣಾ ಫಲಿತಾಂಶ (Lok Sabha Election Results 2024) ಘೋಷಣೆಯಾದ ದಿನ ರಕ್ತದೋಕುಳಿಯಲ್ಲಿ ಮಿಂದೆದಿದ್ದ ಷೇರು ಮಾರುಕಟ್ಟೆ (stock market) ಇಂದು ಬುಧವಾರ ಉತ್ತಮ ಆರಂಭ ಪಡೆಯಿತಾದರೂ ಬಳಿಕ ಅದೇ ಸೆಲ್ ಔಟ್ ನಡೆಯುತ್ತಿದೆ. ಹೆಚ್ಚಿನ ಷೇರುಗಳು ನಷ್ಟ ತರುತ್ತಿವೆ. ಸೆನ್ಸೆಕ್ಸ್, ನಿಫ್ಟಿ50 ಇತ್ಯಾದಿ ಹೆಚ್ಚಿನ ಸೂಚ್ಯಂಕಗಳು ಕುಸಿತ ಕಂಡಿವೆ. ನಿನ್ನೆ ಒಂದೇ ದಿನ 30 ಲಕ್ಷ ಕೋಟಿ ರೂನಷ್ಟು ನಷ್ಟವನ್ನು ಹೂಡಿಕೆದಾರರು ಅನುಭವಿಸಿದ್ದರು. ಇವತ್ತೂ ಕೂಡ ಒಂದಷ್ಟು ಹಾನಿ ಸಂಭವಿಸುವ ಸಾಧ್ಯತೆ ಇದೆ. ಪಿಎಸ್ಯು ಅಥವಾ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಷೇರುಗಳು ಹೆಚ್ಚು ಆಘಾತಕ್ಕೊಳಗಾಗಿವೆ. ಎಕ್ಸಿಟ್ ಪೋಲ್ ಫಲಿತಾಂಶ ಬಂದ ಮೊನ್ನೆ ಸೋಮವಾರದವರೆಗೂ ಎದೆಯುಬ್ಬಿಸುತ್ತಿದ್ದ ಅದಾನಿ ಗ್ರೂಪ್ ಸ್ಟಾಕ್ಗಳು ಮತ್ತೆ ನೆಲಕಚ್ಚುತ್ತಿವೆ. ಹೊಸ ಆಸೆಯಲ್ಲಿ ಅದಾನಿ ಷೇರು ಕೊಂಡವರಿಗೆ ಮತ್ತೆ ಆಘಾತವಾಗಿದೆ.
ಇವತ್ತು ಕುಸಿತ ಕಾಣುತ್ತಿರುವ ಪ್ರಮುಖ ಷೇರುಗಳು
- ಬಿಪಿಸಿಎಲ್: ಶೇ. 5ರಷ್ಟು ಕುಸಿತ
- ಎಲ್ ಅಂಡ್ ಟಿ: ಶೇ. 5
- ಪವರ್ ಗ್ರಿಡ್ ಕಾರ್ಪೊರೇಶನ್: ಶೇ. 4.19
- ಎನ್ಟಿಪಿಸಿ: ಶೇ. 3.15
- ಗ್ರಾಸಿಮ್ ಇಂಡಸ್ಟ್ರೀಸ್: ಶೇ. 2.77
- ಅದಾನಿ ಎಂಟರ್ಪ್ರೈಸಸ್: ಶೇ 2.25
- ಅದಾನಿ ಪೋರ್ಟ್ಸ್: ಶೇ 1.77
- ಎಸ್ಬಿಐ: ಶೇ. 1.63
- ಕೋಲ್ ಇಂಡಿಯಾ: ಶೇ. 1.72
- ಎಕ್ಸಿಸ್ ಬ್ಯಾಂಕ್: ಶೇ. 0.53
ಇದನ್ನೂ ಓದಿ: ಒಂಬತ್ತಲ್ಲ, 38 ಲಕ್ಷ ಕೋಟಿ ರೂ ನಷ್ಟ ಕಂಡ ಷೇರುಪೇಟೆ; ಮಾರುಕಟ್ಟೆ ನಡುಗಿದ ನಾಲ್ಕು ಸಂದರ್ಭಗಳಿವು
ಇಂದು ಬೇಡಿಕೆ ಪಡೆದಿರುವ ಪ್ರಮುಖ ಷೇರುಗಳು
- ಹಿಂದೂಸ್ತಾನ್ ಯುನಿಲಿವರ್: ಶೇ. 7.14ರಷ್ಟು ಹೆಚ್ಚಳ
- ಬ್ರಿಟಾನಿಯಾ: ಶೇ. 6.60
- ಹೀರೋ ಮೋಟೋಕಾರ್ಪ್: ಶೇ. 5.93
- ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್: ಶೇ. 5.80
- ನೆಸ್ಲೆ: ಶೇ. 4.76
- ಏಷ್ಯನ್ ಪೇಂಟ್ಸ್: ಶೇ. 4.82
- ಐಟಿಸಿ: ಶೇ. 3.48
- ಡಿವಿಸ್ ಲ್ಯಾಬ್ಸ್: ಶೇ. 3.19
- ಬಜಾಜ್ ಆಟೊ: ಶೇ. 3.26
- ಮಾರುತಿ ಸುಜುಕಿ: ಶೇ. 2.92
ಹೂಡಿಕೆದಾರರ ಚಿತ್ತ ಎತ್ತ ಸಾಗುತ್ತಿದೆ…?
ಪಬ್ಲಿಕ್ ಸೆಕ್ಟರ್ ಯೂನಿಟ್ಸ್ ಅಥವಾ ಸರ್ಕಾರಿ ಉದ್ದಿಮೆಗಳಿಂದ ಹೂಡಿಕೆದಾರರು ದೂರ ಉಳಿಯಲು ನಿರ್ಧರಿಸಿದ್ದಂತಿದೆ. ನಿನ್ನೆ ಕೂಡ ಈ ವಲಯದ ಷೇರುಗಳಿಗೆ ಹೊಡೆತ ಬಿದ್ದಿತ್ತು. ಇವತ್ತೂ ಅದೇ ಟ್ರೆಂಡ್ ಇದೆ. ದೊಡ್ಡ ದೊಡ್ಡ ಯೋಜನೆಗಳನ್ನು ಹೊಂದಿರುವ ಅದಾನಿ ಗ್ರೂಪ್ ಕಂಪನಿಗಳ ಷೇರಿಗೂ ಸಂಚಕಾರ ಇದೆ. ಇನ್ಫ್ರಾಸ್ಟ್ರಕ್ಚರ್ ವಲಯದ ಎಲ್ ಅಂಡ್ ಟಿ ಮೊದಲಾದ ಷೇರುಗಳಿಗೂ ಹೊಡೆತ ಬೀಳುತ್ತಿದೆ.
ಇದನ್ನೂ ಓದಿ: ಇದು ಪಕ್ಕಾ ಬಿಸಿನೆಸ್; ಬೆಳಗಿನ ಮೊದಲ 5 ನಿಮಿಷದಲ್ಲಿ ಷೇರುಪೇಟೆ ಪ್ರಪಾತಕ್ಕೆ ಬೀಳಲು ಏನು ಕಾರಣ?
ಸದಾ ಕಾಲ ಬಿಸಿನೆಸ್ ಹೊಂದಿರಬಲ್ಲುದಾದ ಎಫ್ಎಂಸಿಜಿ ವಲಯದ ಕಂಪನಿಗಳ ಷೇರುಗಳಿಗೆ ಉತ್ತಮ ಬೇಡಿಕೆ ಶುರುವಾಗಿದೆ. ವಾಹನ ಕಂಪನಿಗಳ ಷೇರೂ ಲಾಭ ತರುತ್ತಿವೆ. ಅಂತೆಯೇ, ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್, ಬ್ರಿಟಾನಿಯಾ, ನೆಸ್ಲೆ, ಐಟಸಿ, ಹಿಂದೂಸ್ತಾನ್ ಯುನಿಲಿವರ್ ಮೊದಲಾದ ಎಫ್ಎಂಸಿಜಿ ಕಂಪನಿಗಳ ಷೇರುಗಳ ಮೇಲೆ ಹೂಡಿಕೆದಾರರ ಹಣ ಹರಿದುಹೋಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ