ಒಂದೇ ದಿನ ಅತಿಹೆಚ್ಚು ಷೇರು ವಹಿವಾಟು; ಭಾರತದ ಎನ್ಎಸ್ಇ ಹೊಸ ವಿಶ್ವದಾಖಲೆ
National Stock Exchange world record in transactions: ಭಾರತದ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಜೂನ್ 5ರಂದು ಭರ್ಜರಿ ಷೇರು ವಹಿವಾಟು ನಡೆದಿದೆ. ಒಂದೇ ದಿನದಲ್ಲಿ ಬರೋಬ್ಬರಿ 1,971 ಕೋಟಿ ಆರ್ಡರ್ಗಳು ಬುಕ್ ಆಗಿವೆ. ಈ ಪೈಕಿ 28.55 ಕೋಟಿ ಟ್ರೇಡ್ಗಳಾಗಿವೆ ಎಂದು ಎನ್ಎಸ್ಇ ಸಿಇಒ ಆಶೀಶ್ ಚೌಹಾಣ್ ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಇದು ವಿಶ್ವದಾಖಲೆ ಎಂದೂ ಅವರು ತಿಳಿಸಿದ್ದಾರೆ. ಜೂನ್ 4ರಂದು ಗಣನೀಯ ಪ್ರಮಾಣದಲ್ಲಿ ನಷ್ಟ ಮಾಡಿಕೊಂಡಿದ್ದ ಹೂಡಿಕೆದಾರರಿಗೆ ಜೂನ್ 5ರಂದು ಒಂದಷ್ಟು ಸಮಾಧಾನ ಸಿಕ್ಕಿದೆ.
ನವದೆಹಲಿ, ಜೂನ್ 5: ಭಾರತದ ಷೇರು ಮಾರುಕಟ್ಟೆ (stock market) ಕಳೆದ ಕೆಲ ದಿನಗಳಿಂದ ಭರ್ಜರಿ ವಹಿವಾಟು ಕಾಣುತ್ತಿದೆ. ನಿನ್ನೆ ಲೋಕಸಭಾ ಚುನಾವಣೆಯ ಫಲಿತಾಂಶ (Lok Sabha elections 2024) ಪ್ರಕಟವಾದ ದಿನದಂದು ಸಾಕಷ್ಟು ಜನರು ಷೇರುಗಳನ್ನು ಆಫ್ಲೋಡ್ ಮಾಡಿ ಹೋಗಿದ್ದರು. ಇವತ್ತು ಬೇರೆ ಬೇರೆ ವಲಯದ ಷೇರುಗಳಿಗೆ ಹೂಡಿಕೆ ಹರಿದುಬರುತ್ತಿದೆ. ಇಂದು ಬುಧವಾರ ಭಾರೀ ಸಂಖ್ಯೆಯಲ್ಲಿ ಷೇರು ವಹಿವಾಟು ನಡೆದಿರುವುದು ತಿಳಿದುಬಂದಿದೆ. ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ (NSE) ಹೊಸ ವಿಶ್ವದಾಖಲೆಯೇ ಆಗಿದೆ ಎಂದು ಎನ್ಎಸ್ಇ ಸಿಇಒ ಹೇಳಿದ್ದಾರೆ. ಜೂನ್ 5, ಬುಧವಾರದಂದು ಮಾರುಕಟ್ಟೆ ಅವಧಿಯಲ್ಲಿ 28.55 ಕೋಟಿ ಟ್ರಾನ್ಸಾಕ್ಷನ್ಗಳಾಗಿವೆ ಎಂದು ಸಿಇಒ ಆಶೀಶ್ ಚೌಹಾಣ್ ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
‘ಜೂನ್ 5ರಂದು ಬೆಳಗ್ಗೆ 9:15ರಿಂದ 3:30ರವರೆಗೆ ಆರು ಗಂಟೆ 15 ನಿಮಿಷ ಕಾಲದಲ್ಲಿ ಎನ್ಎಸ್ಇ ವಿಶ್ವದಾಖಲೆಯ ಸಂಖ್ಯೆಯಲ್ಲಿ ವಹಿವಾಟುಗಳನ್ನು ನಿರ್ವಹಿಸಿದೆ. ಒಂದು ದಿನದಲ್ಲಿ 1,971 ಕೋಟಿ ಆರ್ಡರ್ಗಳು, ಮತ್ತು 28.55 ಕೋಟಿ ಟ್ರೇಡ್ಗಳನ್ನು ನಿರ್ವಹಣೆ ಮಾಡಲಾಗಿದೆ,’ ಎಂದು ಎನ್ಎಸ್ಇ ಸಿಇಒ ತಿಳಿಸಿದ್ದಾರೆ.
@nseindia handled the highest ever – world record – number of transactions in a single day today on June 5,2024 in a 6 hours and 15 minutes (915 am to 330 pm) single trading day-
1971 crore (19.71 billion) orders per day
28.55 crore (280.55 million) trades per day
— Ashish Chauhan (@ashishchauhan) June 5, 2024
ಇದನ್ನೂ ಓದಿ: ಐಪಿಒದಲ್ಲಿ ಷೇರು ಖರೀದಿಸಿ ಲಿಸ್ಟಿಂಗ್ನಲ್ಲಿ ಮಾರಿದಾಗ ಎಷ್ಟು ತೆರಿಗೆ ಕಟ್ಟಬೇಕು?
ಆರ್ಡರ್ಗೂ ಟ್ರೇಡ್ಗೂ ಏನು ವ್ಯತ್ಯಾಸ?
ಇಲ್ಲಿ ಆರ್ಡರ್ ಬುಕ್ ಮಾಡುವುದು ಎಂದರೆ ಷೇರು ಮಾರುವವರು ನಿರ್ದಿಷ್ಟ ಷೇರುಗಳನ್ನು ಮಾರಾಟಕ್ಕಿಡುತ್ತಾರೆ. ಇದು ಆರ್ಡರ್ ಸಲ್ಲಿಕೆ ಮಾಡಿದಂತೆ. ಈ ಷೇರುಗಳನ್ನು ಯಾರಾದರೂ ಖರೀದಿಸಿದರೆ ಆಗ ಅದು ಟ್ರೇಡ್ ಆದಂತೆ. ಅಲ್ಲಿಗೆ ಒಂದು ವಹಿವಾಟು ಮುಗಿದಂತೆ. ಈ ರೀತಿ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಇಂದು ಜೂನ್ 5ರಂದು ಬರೋಬ್ಬರಿ 28.55 ಕೋಟಿಯಷ್ಟು ವಹಿವಾಟುಗಳಾಗಿರುವುದು ಆಶೀಶ್ ಅವರ ಎಕ್ಸ್ ಪೋಸ್ಟ್ನಿಂದ ತಿಳಿದು ಬರುತ್ತದೆ. ಆದರೆ, ಈ 28 ಕೋಟಿ ವಹಿವಾಟಿನಲ್ಲಿ ಎಷ್ಟು ಮೊತ್ತದ ಹಣದ ವಿನಿಮಯ ಆಯಿತು ಎಂಬ ಮಾಹಿತಿ ಗೊತ್ತಾಗಿಲ್ಲ.
ಆದರೆ, ನಿನ್ನೆ ಜೂನ್ 4ರಂದು ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ 30 ಲಕ್ಷ ಕೋಟಿ ರೂಗೂ ಹೆಚ್ಚು ಹಣ ನಷ್ಟವಾಗಿತ್ತು. ಇವತ್ತು ಸುಮಾರು 10-15 ಲಕ್ಷ ಕೋಟಿ ರೂನಷ್ಟು ಲಾಭ ಮಾಡಿಕೊಂಡಿದ್ದಾರೆ ಹೂಡಿಕೆದಾರರು.
ಇದನ್ನೂ ಓದಿ: ಚಂದ್ರಬಾಬು ನಾಯ್ಡು ಈ ಹೇಳಿಕೆ ಕೊಟ್ಟ ಬಳಿಕ ಷೇರು ಮಾರುಕಟ್ಟೆ ಮತ್ತೆ ಹಸಿರು ಬಣ್ಣಕ್ಕೆ
ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಎರಡರಲ್ಲೂ ಹೇರಳವಾಗಿ ವಹಿವಾಟುಗಳಾಗುತ್ತಿವೆ. ನಿನ್ನೆಯಿಂದ ಸಾರ್ವಜನಿಕ ವಲಯದ ಉದ್ದಿಮೆಗಳ ಷೇರುಗಳನ್ನು ಸಿಕ್ಕಂತೆ ಮಾರಲಾಗುತ್ತಿದೆ. ಇವತ್ತೂ ಕೂಡ ಪಿಎಸ್ಯು ಸ್ಟಾಕ್ಗಳಿಗೆ ದಯನೀಯ ಸ್ಥಿತಿ ಮುಂದುವರಿದಿತ್ತು. ಆದರೆ, ಎಫ್ಎಂಸಿಜಿ ಮತ್ತು ವಾಹನ ಸಂಸ್ಥೆಗಳ ಷೇರುಗಳತ್ತ ಹೂಡಿಕೆದಾರರ ಹಣ ಹರಿದುಹೋಗುತ್ತಿರುವುದು ಗಮನಾರ್ಹ ಎನಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ