NPS withdrawal rules: ಎನ್​ಪಿಎಸ್ ಹಿಂಪಡೆಯುವಿಕೆಗೆ ಹೊಸ ನಿಯಮ; ಏನೇನು ದಾಖಲೆ ನೀಡಬೇಕೆಂಬ ಮಾಹಿತಿ ಇಲ್ಲಿದೆ

ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ ಹಣ ಹಿಂಪಡೆಯುವಿಕೆಗೆ ಸಂಬಂಧಿಸಿದ ಹೊಸ ನಿಯಮ ಇಂದಿನಿಂದ (ಏಪ್ರಿಲ್ 1) ಜಾರಿಯಾಗಿದೆ.

NPS withdrawal rules: ಎನ್​ಪಿಎಸ್ ಹಿಂಪಡೆಯುವಿಕೆಗೆ ಹೊಸ ನಿಯಮ; ಏನೇನು ದಾಖಲೆ ನೀಡಬೇಕೆಂಬ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ

Updated on: Apr 01, 2023 | 6:58 PM

ಮುಖ್ಯಾಂಶಗಳು

  • ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ ಹಣ ಹಿಂಪಡೆಯುವಿಕೆಗೆ ಸಂಬಂಧಿಸಿದ ಹೊಸ ನಿಯಮ ಇಂದಿನಿಂದ (ಏಪ್ರಿಲ್ 1) ಜಾರಿ
  • ಎನ್​​ಪಿಎಸ್ ಹಣ ವಾಪಸ್ ಪಡೆಯಲು ಕೆಲವೊಂದು ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ.
  • ಪ್ರಸ್ತುತ ದೇಶದಲ್ಲಿ ಎನ್​ಪಿಎಸ್​ಗೆ 60 ವರ್ಷ ವಯಸ್ಸು ಮೇಲ್ಪಟ್ಟ 5,67,116 ಫಲಾನುಭವಿಗಳಿದ್ದಾರೆ.

ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ (NPS) ಹಣ ಹಿಂಪಡೆಯುವಿಕೆಗೆ ಸಂಬಂಧಿಸಿದ ಹೊಸ ನಿಯಮ ಇಂದಿನಿಂದ (ಏಪ್ರಿಲ್ 1) ಜಾರಿಯಾಗಿದೆ. ಎನ್​​ಪಿಎಸ್ ಹಣ ವಾಪಸ್ ಪಡೆಯಲು ಕೆಲವೊಂದು ದಾಖಲೆಗಳನ್ನು ಸೆಂಟ್ರಲ್ ರೆಕಾರ್ಡ್ ಕೀಪಿಂಗ್ ಏಜೆನ್ಸಿಗೆ (CRA) ಸಲ್ಲಿಸುವುದನ್ನು ಪಿಂಚಣಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಕಡ್ಡಾಯಗೊಳಿಸಿದೆ. ಎನ್​ಪಿಎಸ್​​ನಿಂದ ಹಣ ಹಿಂಪಡೆಯಲು ಹೊಸ ನಿಯಮಗಳು ನಿರ್ಗಮಿಸುವ ಚಂದಾದಾರರಿಗೆ ವರ್ಷಾಶನ ಪಾವತಿಗಳನ್ನು ವೇಗವಾಗಿಸುವುದರ ಜತೆಗೆ ಸರಳಗೊಳಿಸುತ್ತದೆ. ಚಂದಾದಾರರ ಹಿತದೃಷ್ಟಿಯಿಂದ ಮತ್ತು ವರ್ಷಾಶನ ಆದಾಯದ ಸಕಾಲಿಕ ಪಾವತಿಯೊಂದಿಗೆ ಅವರಿಗೆ ಮಾಡಿಕೊಡುವುದಕ್ಕಾಗಿ ಕೆಲವು ದಾಖಲೆಗಳನ್ನು ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿರುತ್ತದೆ ಎಂದು PFRDA ತಿಳಿಸಿದೆ.

ಯಾವೆಲ್ಲ ದಾಖಲೆಗಳನ್ನು ಅಪ್​ಲೋಡ್ ಮಾಡಬೇಕು?

  • ಎನ್​ಪಿಎಸ್ ಎಕ್ಸಿಟ್ / ವಿತ್​ಡ್ರಾವಲ್ ಫಾರ್ಮ್
  • ಗುರುತಿನ ಚೀಟಿ ಮತ್ತು ವಿಳಾಸಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಿತ್​ಡ್ರಾವಲ್ ಫಾರ್ಮ್ ಜತೆ ನೀಡುವುದು ಅಗತ್ಯ
  • ಬ್ಯಾಂಕ್ ಖಾತೆಗೆ ಸಂಬಂಧಿಸಿದ ದಾಖಲೆ
  • ಶಾಶ್ವತ ನಿವೃತ್ತಿ ಖಾತೆ ಸಂಖ್ಯೆಯ ಕಾರ್ಡ್​ನ (PRAN) ಪ್ರತಿ

ಎನ್​ಪಿಎಸ್​ಗೆ 5,67,116 ಫಲಾನುಭವಿಗಳು

ಪ್ರಸ್ತುತ ದೇಶದಲ್ಲಿ ಎನ್​ಪಿಎಸ್​ಗೆ 60 ವರ್ಷ ವಯಸ್ಸು ಮೇಲ್ಪಟ್ಟ 5,67,116 ಫಲಾನುಭವಿಗಳಿದ್ದಾರೆ ಎಂಬುದು PFRDA ದಾಖಲೆಗಳಿಂದ ತಿಳಿದುಬಂದಿದೆ. ಹಳೆಯ ಪಿಂಚಣಿ ಯೋಜನೆಯಡಿ, ಸರ್ಕಾರಿ ನೌಕರರು ನಿವೃತ್ತಿಯ ನಂತರ ಮಾಸಿಕ ಪಿಂಚಣಿಗೆ ಅರ್ಹನಾಗಿರುತ್ತಾರೆ. ಮಾಸಿಕ ಪಿಂಚಣಿಯು ಸಾಮಾನ್ಯವಾಗಿ ವ್ಯಕ್ತಿಯು ನಿವೃತ್ತಿ ಹೊಂದುವ ಸಂದರ್ಭದ ವೇತನದ ಮೊತ್ತದ ಅರ್ಧದಷ್ಟು ಆಗಿರುತ್ತದೆ. ಆದರೆ, ಹೊಸ ಪಿಂಚಣಿ ಯೋಜನೆಯಡಿ ನೌಕರರು ಉದ್ಯೋಗದ ಅವಧಿಯಲ್ಲಿ ತಮ್ಮ ಸಂಬಳದ ಒಂದು ಭಾಗವನ್ನು ಪಿಂಚಣಿ ನಿಧಿಗೆ ಕೊಡುಗೆ ನೀಡುತ್ತಾರೆ. ಅದರ ಆಧಾರದ ಮೇಲೆ, ಅವರು ನಿವೃತ್ತಿಯ ಮೇಲೆ ಒಂದು ಬಾರಿಯ ಒಟ್ಟು ಮೊತ್ತಕ್ಕೆ ಅರ್ಹರಾಗಿರುತ್ತಾರೆ.

ಇದನ್ನೂ ಓದಿ: Income Tax Rules: ಗಮನಿಸಿ, ಇಂದಿನಿಂದ ಬದಲಾಗಿವೆ ಆದಾಯ ತೆರಿಗೆಗೆ ಸಂಬಂಧಿಸಿದ ಈ ಹತ್ತು ನಿಯಮಗಳು

ಹಳೆಯ ಪಿಂಚಣಿ ಯೋಜನೆಯನ್ನು ಡಿಸೆಂಬರ್ 2003ರಲ್ಲಿ ಸ್ಥಗಿತಗೊಳಿಸಲಾಗಿತ್ತು. ಹೊಸ ಪಿಂಚಣಿ ಯೋಜನೆಯು 2004 ರ ಏಪ್ರಿಲ್ 1ರಿಂದ ಜಾರಿಗೆ ಬಂದಿತ್ತು.

ಹಳೆ ಪಿಂಚಣಿ vs ಎನ್​ಪಿಎಸ್

ಹಳೆಯ ಪಿಂಚಣಿ ಯೋಜನೆಯಡಿಯಲ್ಲಿ ನೌಕರರು ನಿವೃತ್ತಿಯ ಸಂದರ್ಭದಲ್ಲಿ ಹೊಂದಿದ್ದ ಮೂಲ ವೇತನದ ಶೇಕಡಾ 50ರಷ್ಟು ಮತ್ತು ಇದರ ಜತೆಗೆ ತುಟ್ಟಿಭತ್ಯೆ ಅಥವಾ ಸೇವಾ ಅವಧಿಯ ಕೊನೆಯ 10 ತಿಂಗಳ ಸರಾಸರಿ ಗಳಿಕೆ, ಈ ಎರಡರಲ್ಲಿ ಯಾವುದು ಹೆಚ್ಚೋ ಅದನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ಯೋಜನೆಗೆ ಮಾನ್ಯರಾಗಲು ನೌಕರರು ಕನಿಷ್ಠ 10 ವರ್ಷ ಸೇವೆ ಸಲ್ಲಿಸಿರಬೇಕು. ಹಳೆ ಪಿಂಚಣಿ ಯೋಜನೆಯಲ್ಲಿ ಉದ್ಯೋಗಿಗಳು ಪಿಂಚಣಿಗೆ ಕೊಡುಗೆ ನೀಡಬೇಕಾಗಿಲ್ಲ. ಇದು ಸರ್ಕಾರಿ ಉದ್ಯೋಗಿಗಳಿಗೆ ಬಹುದೊಡ್ಡ ಪ್ರಯೋಜನ ಮಾಡಿಕೊಟ್ಟಿದ್ದಲ್ಲದೆ, ನಿವೃತ್ತಿಯ ಬಳಿಕ ಕುಟುಂಬಕ್ಕೆ ಪಿಂಚಣಿಯ ಖಾತರಿ ದೊರೆಯುತ್ತಿತ್ತು. ಒಂದು ವೇಳೆ ನಿವೃತ್ತ ನೌಕರರು ಮೃತಪಟ್ಟರೂ ಅವರ ಅವಲಂಬಿತರಿಗೆ ಪಿಂಚಣಿ ಮುಂದುವರಿಯುತ್ತದೆ. ಆದರೆ, ಸರ್ಕಾರದ ಬೊಕ್ಕಸಕ್ಕೆ ಮಾತ್ರ ಈ ಯೋಜನೆ ಹೊರೆಯಾಗಿ ಪರಿಣಮಿಸಿತ್ತು. ಹೀಗಾಗಿ ಬಹುತೇಕ ಎಲ್ಲ ರಾಜ್ಯ ಸರ್ಕಾರಗಳೂ ಎನ್​ಪಿಎಸ್ ಜಾರಿಗೊಳಿಸಿದ್ದವು. ಇದು ರಾಷ್ಟ್ರೀಯ ಅಥವಾ ಹೊಸ ಪಿಂಚಣಿ ಯೋಜನೆಯಾಗಿದ್ದು, ಪಿಂಚಣಿ ಮತ್ತು ಹೂಡಿಕೆಗಳ ಸಂಯೋಜನೆಯಾಗಿದೆ.

ಒಪಿಎಸ್ ಮತ್ತು ಎನ್​ಪಿಎಸ್ ನಡುವಣ ವ್ಯತ್ಯಾಸ ಮತ್ತು ಸಮಗ್ರ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us