21000 ಕೋಟಿ ಮೊತ್ತದ ಬ್ಯಾಂಕ್ ವಂಚನೆ ಪ್ರಕರಣಗಳು ಪೆಂಡಿಂಗ್​, ತನಿಖೆ ನಡೆಸಲು ಸಿಬಿಐಗೆ ಅನುಮತಿ ನೀಡುತ್ತಿಲ್ಲ ಆ 9 ರಾಜ್ಯಗಳು!

| Updated By: ಸಾಧು ಶ್ರೀನಾಥ್​

Updated on: Mar 26, 2022 | 6:37 PM

Bank Fraud: ಪಂಜಾಬ್ ರಾಜ್ಯದಲ್ಲಿ 12 ಪ್ರಕರಣಗಳ ಸಿಬಿಐ ತನಿಖೆ ಬಾಕಿ ಇದ್ದು, 298 ಕೋಟಿ ರೂಪಾಯಿ ಬ್ಯಾಂಕ್ ವಂಚನೆಗೆ ಸಂಬಂಧಿಸಿದ ಪ್ರಕರಣಗಳಾಗಿವೆ. ಇನ್ನು ಛತ್ತೀಸ್ ಗಡ ರಾಜ್ಯದಲ್ಲಿ 8 ಪ್ರಕರಣಗಳಲ್ಲಿ 157 ಕೋಟಿ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣದ ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿಲ್ಲ. ಪಶ್ಚಿಮ ಬಂಗಾಳದಲ್ಲಿ 6 ಪ್ರಕರಣಗಳ 293 ಕೋಟಿ ರೂಪಾಯಿ ಹಾಗೂ ರಾಜಸ್ಥಾನದಲ್ಲಿ 12 ಕೋಟಿ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣದ ಸಿಬಿಐ ತನಿಖೆಗೆ ರಾಜ್ಯ ಸರ್ಕಾರಗಳು ಒಪ್ಪಿಗೆ ನೀಡಿಲ್ಲ.

21000 ಕೋಟಿ ಮೊತ್ತದ ಬ್ಯಾಂಕ್ ವಂಚನೆ ಪ್ರಕರಣಗಳು ಪೆಂಡಿಂಗ್​, ತನಿಖೆ ನಡೆಸಲು ಸಿಬಿಐಗೆ ಅನುಮತಿ ನೀಡುತ್ತಿಲ್ಲ ಆ 9 ರಾಜ್ಯಗಳು!
ಪೆಂಡಿಂಗ್​ ಇವೆ 21 ಸಾವಿರ ಕೋಟಿ ರೂ ಮೊತ್ತದ ಬ್ಯಾಂಕ್ ವಂಚನೆ ಪ್ರಕರಣಗಳು! ತನಿಖೆ ನಡೆಸಲು ಸಿಬಿಐಗೆ ಅನುಮತಿ ನೀಡದ ಆ 9 ರಾಜ್ಯಗಳು!
Follow us on

ದೇಶದಲ್ಲಿ ಬಿಜೆಪಿಯೇತರ 9 ರಾಜ್ಯ ಸರ್ಕಾರಗಳು ತಮ್ಮ ರಾಜ್ಯಗಳ ವ್ಯಾಪ್ತಿಯಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನೇ ಹಿಂತೆಗೆದುಕೊಂಡಿವೆ. ಆದರೂ, 9 ರಾಜ್ಯಗಳಲ್ಲಿ ಸುಮಾರು 21 ಸಾವಿರ ಕೋಟಿ ರೂಪಾಯಿ ಮೊತ್ತದ ಬ್ಯಾಂಕ್ ವಂಚನೆ ಪ್ರಕರಣಗಳ (Bank Fraud) ಸಿಬಿಐ ತನಿಖೆಗೆ ಒಪ್ಪಿಗೆ ನೀಡಿಲ್ಲ. ಆದರೆ, ಪ್ರಕರಣವಾರು 101 ಪ್ರಕರಣಗಳ ತನಿಖೆ ನಡೆಸಲು ಮಾತ್ರ ಒಪ್ಪಿಗೆ ನೀಡಿವೆ. ದೇಶದಲ್ಲಿ ಬಿಜೆಪಿಯೇತರ ಪಕ್ಷಗಳ ಆಳ್ವಿಕೆಯ 9 ರಾಜ್ಯಗಳಲ್ಲಿ ಸಿಬಿಐ ತನಿಖೆಗೆ (CBI) ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂತೆಗೆದುಕೊಳ್ಳಲಾಗಿದೆ. 2015 ರಿಂದ 2022ರ ಅವಧಿಯಲ್ಲಿ 9 ರಾಜ್ಯಗಳು ಸಿಬಿಐ ತನಿಖೆಗೆ ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂತೆಗೆದುಕೊಂಡಿವೆ. ಈಗ ಪ್ರಕರಣವಾರು ಒಪ್ಪಿಗೆಯನ್ನು ಈ ರಾಜ್ಯ ಸರ್ಕಾರಗಳು ನೀಡುತ್ತಿವೆ. ಈ ಬಗ್ಗೆ ಮಾಹಿತಿಯನ್ನು ಇಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ನೀಡಿದೆ. ಮಿಜೋರಾಂ ರಾಜ್ಯವು 2015ರಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂತೆಗೆದುಕೊಂಡಿದ್ದರೆ, 2018ರ ನವಂಬರ್ ನಲ್ಲಿ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರವು ಸಿಬಿಐ ತನಿಖೆಗೆ ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂತೆಗೆದುಕೊಂಡಿದೆ. ಛತ್ತೀಸ್ ಗಡ, ರಾಜಸ್ಥಾನ, ಮಹಾರಾಷ್ಟ್ರ, ಕೇರಳ, ಜಾರ್ಖಂಡ್, ಪಂಜಾಬ್, ಮೇಘಾಲಯ ರಾಜ್ಯಗಳು ಸಿಬಿಐ ತನಿಖೆಗೆ ನೀಡಿದ್ದ ಒಪ್ಪಿಗೆಯನ್ನು ಹಿಂತೆಗೆದುಕೊಂಡಿವೆ (non BJP government).

ಆದರೆ ಈ 9 ರಾಜ್ಯಗಳು 2019ರಿಂದ 2022ರವರೆಗೆ 101 ಪ್ರಕರಣಗಳಲ್ಲಿ ಸಿಬಿಐ ತನಿಖೆ ನಡೆಸಲು ಒಪ್ಪಿಗೆ ನೀಡಿವೆ. ಮಿಜೋರಾಂ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಯಾವುದೇ ಪ್ರಕರಣದ ಸಿಬಿಐ ತನಿಖೆಗೆ ಒಪ್ಪಿಗೆ ನೀಡಿಲ್ಲ. ರಾಜಸ್ಥಾನ ರಾಜ್ಯ ಸರ್ಕಾರ 9 ಪ್ರಕರಣಗಳು, ಮಹಾರಾಷ್ಟ್ರ ರಾಜ್ಯ ಸರ್ಕಾರ 52 ಪ್ರಕರಣಗಳ ಸಿಬಿಐ ತನಿಖೆಗೆ ಒಪ್ಪಿಗೆ ನೀಡಿದೆ. ಪಂಜಾಬ್ ರಾಜ್ಯ ಸರ್ಕಾರ 27 ಪ್ರಕರಣಗಳ ಸಿಬಿಐ ತನಿಖೆಗೆ ಒಪ್ಪಿಗೆ ನೀಡಿದ್ದರೇ, ಜಾರ್ಖಂಡ್ 8, ಕೇರಳ 4 ಪ್ರಕರಣಗಳ ಸಿಬಿಐ ತನಿಖೆಗೆ ಒಪ್ಪಿಗೆ ನೀಡಿದೆ. ಛತ್ತೀಸ್ ಗಡ 1 ಪ್ರಕರಣದ ಸಿಬಿಐ ತನಿಖೆಗೆ ಒಪ್ಪಿಗೆ ನೀಡಿದೆ. ಕೇಂದ್ರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸಚಿವ ಜೀತೇಂದರ್ ಸಿಂಗ್ ಈ ಬಗ್ಗೆ ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದಾರೆ. ಮೇಘಾಲಯದಲ್ಲಿ ಬಿಜೆಪಿಯ ಮಿತ್ರಪಕ್ಷವೇ ಅಧಿಕಾರದಲ್ಲಿದೆ. ಆದರೂ, ಸಿಬಿಐ ತನಿಖೆಗೆ ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂತೆಗೆದುಕೊಳ್ಳಲಾಗಿದೆ.

21 ಸಾವಿರ ಕೋಟಿ ರೂ ಪ್ರಕರಣದ ಸಿಬಿಐ ತನಿಖೆಗೆ ಒಪ್ಪಿಗೆ ಇಲ್ಲ
ಕಳೆದ ಮೂರು ವರ್ಷಗಳಲ್ಲಿ ಬಿಜೆಪಿಯೇತರ ಆಡಳಿತವಿರುವ ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಛತ್ತೀಸ್‌ಗಢ ಸೇರಿದಂತೆ ಐದು ಬಿಜೆಪಿಯೇತರ ರಾಜ್ಯಗಳ ಒಪ್ಪಿಗೆ ಪಡೆಯದೇ, ಕೇಂದ್ರೀಯ ತನಿಖಾ ದಳ ಅರ್ಥಾತ್ ಸಿಬಿಐಗೆ 21,000 ಕೋಟಿ ರೂ.ಗಳ ಬ್ಯಾಂಕ್ ವಂಚನೆ ಪ್ರಕರಣಗಳ ತನಿಖೆಯನ್ನು ಪ್ರಾರಂಭಿಸಲು ಸಾಧ್ಯವಾಗಿಲ್ಲ. ಗುರುವಾರ ಕೇಂದ್ರ ಸರ್ಕಾರ ರಾಜ್ಯಸಭೆಗೆ ಈ ಬಗ್ಗೆ ಲಿಖಿತ ಉತ್ತರ ನೀಡಿದೆ. 21,074 ಕೋಟಿ ರೂಪಾಯಿ ಮೊತ್ತದ ಬ್ಯಾಂಕ್ ವಂಚನೆಗಳನ್ನು ಒಳಗೊಂಡ ಒಟ್ಟು 128 ಮನವಿಗಳು 2019 ರಿಂದ 2022 ಫೆಬ್ರವರಿ 28 ರವರೆಗೆ ರಾಜ್ಯ ಸರ್ಕಾರಗಳ ಬಳಿ ಪೆಂಡಿಂಗ್ ಇವೆ.

ರಾಜ್ಯ ಸರ್ಕಾರಗಳು ತಮ್ಮ ರಾಜ್ಯಗಳ ವ್ಯಾಪ್ತಿಯಲ್ಲಿ ಸಿಬಿಐ ತನಿಖೆಗೆ ಒಪ್ಪಿಗೆ ನೀಡದೇ, ಸಿಬಿಐ ಈ ರಾಜ್ಯಗಳಲ್ಲಿ ಹಣಕಾಸು ವಂಚನೆ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ಸಾಧ್ಯವಿಲ್ಲ. ದೆಹಲಿ ಪೊಲೀಸ್ ಎಸ್ಟಾಬ್ಲಿಸಮೆಂಟ್ ಕಾಯಿದೆಯ ಪ್ರಕಾರ, ಸಿಬಿಐ ತನಿಖಾ ಸಂಸ್ಥೆಯು ಯಾವುದೇ ರಾಜ್ಯದಲ್ಲಿ ಯಾವುದೇ ಪ್ರಕರಣದ ತನಿಖೆ ನಡೆಸಬೇಕಾದರೂ, ಸಂಬಂಧಪಟ್ಟ ರಾಜ್ಯ ಸರ್ಕಾರದ ಒಪ್ಪಿಗೆ ಬೇಕು. ಕಾನೂನು ಸುವ್ಯವಸ್ಥೆ ರಾಜ್ಯ ಸರ್ಕಾರಗಳಿಗೆ ಸಂಬಂಧಪಟ್ಟ ವಿಚಾರ. ಹೀಗಾಗಿ ಯಾವುದೇ ಕೊಲೆ, ಹಣಕಾಸು ವಂಚನೆ, ಭ್ರಷ್ಟಾಚಾರ ಸೇರಿದಂತೆ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರಗಳ ಒಪ್ಪಿಗೆಯನ್ನು ಸಿಬಿಐ ಪಡೆದಿರಬೇಕು. ಮೊದಲೆಲ್ಲಾ ಸಿಬಿಐ ತನಿಖೆಗೆ ರಾಜ್ಯ ಸರ್ಕಾರಗಳು ಸಾಮಾನ್ಯ ಒಪ್ಪಿಗೆ ನೀಡಿರುತ್ತಿದ್ದವು. ಆದರೇ, ಈಗ ಕೇಂದ್ರದ ತನಿಖಾ ಸಂಸ್ಥೆ ಸಿಬಿಐ ಅನ್ನು ರಾಜ್ಯ ಸರ್ಕಾರಗಳ ವಿರುದ್ಧ ದುರ್ಬಳಕೆ ಮಾಡಿಕೊಳ್ಳಲಾಗುತ್ತೆ ಎಂಬ ಭಯದ ಕಾರಣದಿಂದ ವಿರೋಧ ಪಕ್ಷಗಳ ರಾಜ್ಯ ಸರ್ಕಾರಗಳು ಸಿಬಿಐ ತನಿಖೆಗೆ ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನೇ ಹಿಂತೆಗೆದುಕೊಳ್ಳುತ್ತಿವೆ.

ಇನ್ನೂ ಈಗ ಹಣಕಾಸು ವಂಚನೆಯ ಪ್ರಕರಣಗಳ ತನಿಖೆಗೆ ರಾಜ್ಯ ಸರ್ಕಾರಗಳ ಒಪ್ಪಿಗೆ ಇಲ್ಲದೇ ಇರುವ ಪ್ರಕರಣಗಳನ್ನು ನೋಡುವುದಾದರೇ, ಮಹಾರಾಷ್ಟ್ರ ಸರ್ಕಾರವೊಂದೇ 20,312 ಕೋಟಿ ರೂಪಾಯಿ ಮೊತ್ತದ 101 ಬ್ಯಾಂಕ್ ವಂಚನೆ ಪ್ರಕರಣಗಳ ಸಿಬಿಐ ತನಿಖೆಗೆ ಒಪ್ಪಿಗೆ ನೀಡಿಲ್ಲ. ದೇಶದ ವಾಣಿಜ್ಯ ರಾಜಧಾನಿ ಇರುವ ಮಹಾರಾಷ್ಟ್ರ ರಾಜ್ಯದಲ್ಲೇ ಹೆಚ್ಚಿನ ಮೊತ್ತದ ಬ್ಯಾಂಕ್ ವಂಚನೆ ಪ್ರಕರಣಗಳಿದ್ದು, ಸಿಬಿಐ ತನಿಖೆಗೆ ಮಹಾರಾಷ್ಟ್ರದ ಮಹಾ ವಿಕಾಸ್ ಅಗಾಡಿ ಸಮ್ಮಿಶ್ರ ಸರ್ಕಾರ ಒಪ್ಪಿಗೆಯನ್ನೇ ನೀಡಿಲ್ಲ. ಹೀಗಾಗಿ ಈ ಪ್ರಕರಣಗಳ ಬಗ್ಗೆ ಈಗ ಸಿಬಿಐ ತನಿಖೆ ನಡೆಸಲು ಸಾಧ್ಯವಿಲ್ಲವಾಗಿದೆ.

ಪಂಜಾಬ್ ರಾಜ್ಯದಲ್ಲಿ 12 ಪ್ರಕರಣಗಳ ಸಿಬಿಐ ತನಿಖೆ ಬಾಕಿ ಇದ್ದು, 298 ಕೋಟಿ ರೂಪಾಯಿ ಬ್ಯಾಂಕ್ ವಂಚನೆಗೆ ಸಂಬಂಧಿಸಿದ ಪ್ರಕರಣಗಳಾಗಿವೆ. ಇನ್ನು ಛತ್ತೀಸ್ ಗಡ ರಾಜ್ಯದಲ್ಲಿ 8 ಪ್ರಕರಣಗಳಲ್ಲಿ 157 ಕೋಟಿ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣದ ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿಲ್ಲ. ಪಶ್ಚಿಮ ಬಂಗಾಳದಲ್ಲಿ 6 ಪ್ರಕರಣಗಳ 293 ಕೋಟಿ ರೂಪಾಯಿ ಹಾಗೂ ರಾಜಸ್ಥಾನದಲ್ಲಿ 12 ಕೋಟಿ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣದ ಸಿಬಿಐ ತನಿಖೆಗೆ ರಾಜ್ಯ ಸರ್ಕಾರಗಳು ಒಪ್ಪಿಗೆ ನೀಡಿಲ್ಲ.

ಮಹಾರಾಷ್ಟ್ರದ 132, ಪಂಜಾಬ್‌ನಿಂದ 16, ಛತ್ತೀಸ್‌ಗಢದಿಂದ 8, ಜಾರ್ಖಂಡ್‌ನಿಂದ 7, ಪಶ್ಚಿಮ ಬಂಗಾಳದಿಂದ 6 ಮತ್ತು ಕೇರಳ ಮತ್ತು ರಾಜಸ್ಥಾನದಿಂದ ತಲಾ ಎರಡು ಸೇರಿದಂತೆ ಒಟ್ಟು 173 ಮನವಿಗಳು ಸಿಬಿಐ ತನಿಖೆಗಾಗಿ ಈ ರಾಜ್ಯಗಳಲ್ಲಿ ಬಾಕಿ ಉಳಿದಿವೆ. ಈ ಒಂಬತ್ತು ರಾಜ್ಯಗಳ 101 ಪ್ರಕರಣಗಳ ಸಿಬಿಐ ತನಿಖೆಗೆ ಅನುಮತಿಗಳನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದರಲ್ಲಿ ಮಹಾರಾಷ್ಟ್ರದಿಂದ 52, ಪಂಜಾಬ್‌ನಿಂದ 27, ರಾಜಸ್ಥಾನದಿಂದ 9, ಜಾರ್ಖಂಡ್‌ನಿಂದ ಎಂಟು, ಕೇರಳದಿಂದ ನಾಲ್ಕು ಮತ್ತು ಛತ್ತೀಸ್‌ಗಢದಿಂದ ಒಂದು ಪ್ರಕರಣದ ಸಿಬಿಐ ತನಿಖೆಗೆ ಅನುಮತಿ ನೀಡಲಾಗಿದೆ ಎಂದು ಉತ್ತರದಲ್ಲಿ ಕೇಂದ್ರ ಸರ್ಕಾರ ತಿಳಿಸಿದೆ.

Published On - 5:59 pm, Thu, 24 March 22