RBI MPC Meet: ಜೂನ್ 6, ಶುಕ್ರವಾರ ಆರ್ಬಿಐ ಎಂಪಿಸಿ ನಿರ್ಣಯ ಪ್ರಕಟ; ಬಡ್ಡಿದರ ಕಡಿತ ನಿಶ್ಚಿತ; ಆದ್ರೆ ಎಷ್ಟೆಂಬುದು ಪ್ರಶ್ನೆ
RBI MPC meeting decisions on June 6th: ಭಾರತೀಯ ರಿಸರ್ವ್ ಬ್ಯಾಂಕ್ನ ಎಂಪಿಸಿ ಸಭೆ ನಿನ್ನೆಯಿಂದ ನಡೆಯುತ್ತಿದ್ದು, ಜೂನ್ 6ರಂದು ಸಭೆಯ ನಿರ್ಧಾರಗಳನ್ನು ಆರ್ಬಿಐ ಗವರ್ನರ್ ಪ್ರಕಟಿಸಲಿದ್ದಾರೆ. ಆರ್ಥಿಕ ಬೆಳವಣಿಗೆ ತುಸು ಮಂದಗೊಂಡಿರುವುದು ರಿಪೋ ದರ ಕಡಿತದ ನಿರ್ಧಾರಕ್ಕೆ ಎಡೆ ಮಾಡಿಕೊಡಬಹುದು. ಹಣದುಬ್ಬರ ನಿಯಂತ್ರಣದಲ್ಲಿರುವುದರಿಂದ ಆರ್ಬಿಐ ರಿಪೋ ದರ ಕಡಿತದ ರಿಸ್ಕ್ ತೆಗೆದುಕೊಳ್ಳಲು ಮುಂದಾಗಬಹುದು.

ನವದೆಹಲಿ, ಜೂನ್ 5: ಭಾರತೀಯ ರಿಸರ್ವ್ ಬ್ಯಾಂಕ್ನ ಹಣಕಾಸು ನೀತಿ ಸಮಿತಿಯ ಸಭೆ ನಾಳೆ ರಿಪೋ ದರವನ್ನು ಗಣನೀಯವಾಗಿ ಕಡಿತಗೊಳಿಸುವ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ನಿನ್ನೆ ಬುಧವಾರ ಎಂಪಿಸಿ ಸಭೆ (RBI MPC meeting) ಆರಂಭವಾಗಿದ್ದು, ನಾಳೆ ಶುಕ್ರವಾರ ಸಭೆಯ ನಿರ್ಧಾರಗಳನ್ನು ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ (Sanjay Malhotra) ಪ್ರಕಟಿಸಲಿದ್ದಾರೆ. ವಿವಿಧ ತಜ್ಞರು ಮಾಡಿರುವ ಅಂದಾಜು ಪ್ರಕಾರ ರಿಪೋ ದರವನ್ನು 25ರಿಂದ 75 ಮೂಲಾಂಕಗಳವರೆಗೆ ಕಡಿತಗೊಳಿಸುವ ನಿರೀಕ್ಷೆ ಇದೆ.
ಸದ್ಯ ರಿಪೋ ದರ ಶೇ. 6ರಷ್ಟಿದೆ. ಜೂನ್ 6ರಂದು ಇದನ್ನು ಕಡಿಮೆಗೊಳಿಸುವುದು ನಿಶ್ಚಿತವಾಗಿದೆ. ಆದರೆ, ಎಷ್ಟು ಎಂಬುದು ಪ್ರಶ್ನೆಯಾಗಿದೆ. ಕನಿಷ್ಠ 25 ಮೂಲಾಂಕಗಳಷ್ಟಾದರೂ ದರ ಕಡಿತಕ್ಕೆ ಆರ್ಬಿಐ ಕೈ ಹಾಕಬಹುದು ಎನ್ನಲಾಗಿದೆ. ಹೆಚ್ಚಿನ ತಜ್ಞರು 50 ಮೂಲಾಂಕಗಳಷ್ಟು ಬಡ್ಡಿಕಡಿತ ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಮತ್ತೆ ಕೆಲವರು 75 ಮೂಲಾಂಕಗಳಷ್ಟು ದರ ಕಡಿಮೆ ಮಾಡಿದರೆ ಅಚ್ಚರಿ ಇಲ್ಲ ಎನುತ್ತಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ತಯಾರಾಗಲಿದೆ ರಫೇಲ್ ಯುದ್ಧವಿಮಾನದ ಫ್ಯೂಸಲಾಜ್; ಡಸೋ ಏವಿಯೇಶನ್ ಜೊತೆ ಟಾಟಾ ಗ್ರೂಪ್ ಒಪ್ಪಂದ
ಎಸ್ಬಿಐ ರಿಸರ್ಚ್ನ ಆರ್ಥಿಕ ತಜ್ಞರು ರಿಪೋದರ 50 ಮೂಲಾಂಕಗಳಷ್ಟು ಕಡಿಮೆ ಆಗಬಹುದು ಎಂದಿದ್ದಾರೆ. ಇದಾದರೆ ಶೇ. 6ರಷ್ಟಿರುವ ರಿಪೋ ದರ ಶೇ. 5.50ಕ್ಕೆ ಇಳಿಯಬಹುದು.
ಮಾರ್ಗನ್ ಸ್ಟಾನ್ಲೀ ಸಂಸ್ಥೆ ಈ ವರ್ಷಾಂತ್ಯದೊಳಗೆ 100 ಮೂಲಾಂಕಗಳಷ್ಟು ರಿಪೋ ದರ ಕಡಿತ ಆಗುವ ಸಾಧ್ಯತೆಯನ್ನು ಹೇಳಿದೆ. ಜೂನ್ ತಿಂಗಳಲ್ಲಿ (ಈ ಬಾರಿ) 50 ಮೂಲಾಂಕಗಳು ಕಡಿಮೆಗೊಳಿಸಲಾಗುತ್ತದೆ. ನಂತರದ ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳಲ್ಲೂ ತಲಾ 25 ಮೂಲಾಂಕಗಳಷ್ಟು ದರ ಕಡಿತ ಇರಬಹುದು ಎಂದು ಹೇಳಿದೆ.
ಇದನ್ನೂ ಓದಿ: ವಿರಳ ಭೂಖನಿಜದೊಂದಿಗೆ ಚೀನಾ ಆಟ; ಇಡೀ ವಿಶ್ವಕ್ಕೆ ಸಂಕಟ; ಭಾರತದಿಂದ ಪರ್ಯಾಯ ಮಾರ್ಗ ಹುಡುಕಾಟ
ದೊಡ್ಡ ಕತ್ತರಿಗೆ ಕಾಲ ಪ್ರಶಸ್ತ…
ಭಾರತದಲ್ಲಿ ಒಂದೆಡೆ ಸದ್ಯ ಹಣದುಬ್ಬರ ಸಂಪೂರ್ಣ ನಿಯಂತ್ರಣದಲ್ಲಿದೆ. ಇನ್ನೊಂದೆಡೆ ಜಿಡಿಪಿ ಬೆಳವಣಿಗೆ ದರ ಮಂದಗೊಂಡಿದೆ. ಆರ್ಥಿಕತೆಗೆ ಚುರುಕು ಬರಲು ಬಡ್ಡಿದರ ಇಳಿಕೆ ಮುಖ್ಯವಾಗುತ್ತದೆ. ರಿಪೋ ದರ ಇಳಿಕೆಯಿಂದ ಆರ್ಥಿಕ ವ್ಯವಸ್ಥೆಯಲ್ಲಿ ಹಣದ ಹರಿವು ಹೆಚ್ಚುತ್ತದೆ. ಅನುಭೋಗ ಹೆಚ್ಚುತ್ತದೆ. ಇದು ಜಿಡಿಪಿ ಶೇಖರಣೆಗೆ ಸಹಕಾರಿಯಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ