ನವದೆಹಲಿ, ನವೆಂಬರ್ 12: ಮುಂದಿನ ಹಣಕಾಸು ವರ್ಷಕ್ಕೆ ಬಜೆಟ್ ರೂಪಿಸಲು ನಿರತವಾಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಡಿಸೆಂಬರ್ 21 ಮತ್ತು 22ರಂದು ಎರಡು ಪ್ರಮುಖ ಸಭೆಗಳನ್ನು ನಡೆಸಲಿದ್ದಾರೆ. ಬಜೆಟ್ ಪೂರ್ವಭಾವಿ ಸಮಾಲೋಚನೆಗಳ ಸಭೆ ಹಾಗೂ ಜಿಎಸ್ಟಿ ಮಂಡಳಿಯೊಂದಿಗೆ ಸಭೆ ಆ ಎರಡು ದಿನಗಳಲ್ಲಿ ನಡೆಯಲಿವೆ. ಬಜೆಟ್ ಪೂರ್ವಭಾವಿ ಸಭೆಯಲ್ಲಿ ವಿವಿಧ ರಾಜ್ಯಗಳ ಹಣಕಾಸು ಸಚಿವರು ಪಾಲ್ಗೊಳ್ಳಲಿದ್ದಾರೆ. ಆ ಸಭೆಯಲ್ಲಿ ಸಚಿವರುಗಳು ತಂತಮ್ಮ ರಾಜ್ಯಗಳ ಆದ್ಯತೆ ಮತ್ತು ತಮ್ಮ ಶಿಫಾರಸುಗಳನ್ನು ಪ್ರಸ್ತುತಪಡಿಸುವ ನಿರೀಕ್ಷೆ ಇದೆ. ರಾಜಸ್ಥಾನದ ಜೋಧಪುರ್ ಅಥವಾ ಜೈಸಲ್ಮೇರ್ ನಗರದಲ್ಲಿ ಈ ಎರಡು ಸಭೆಗಳು ನಡೆಯಬಹುದು.
ಡಿಸೆಂಬರ್ 21 ಅಥವಾ 22ರಂದು ನಡೆಯಲಿರುವ ಜಿಎಸ್ಟಿ ಕೌನ್ಸಿಲ್ ಸಭೆ 55ನೆಯದ್ದಾಗರುತ್ತದೆ. ಜಿಎಸ್ಟಿ ದರಗಳ ಪರಿಷ್ಕರಣೆ ಕಾರ್ಯ ಈ ಸಭೆಯಲ್ಲಿ ಮುಂದುವರಿಯಲಿದೆ. ಹೆಲ್ತ್ ಇನ್ಷೂರೆನ್ಸ್, ಲೈಫ್ ಇನ್ಷೂರೆನ್ಸ್ ಸೇರದಂತೆ ಹಲವು ವಸ್ತು ಮತ್ತು ಸೇವೆಗಳಿಗೆ ಜಿಎಸ್ಟಿ ದರವನ್ನು ಪರಿಷ್ಕರಿಸುವ ಸಂಬಂಧ 55ನೇ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಚರ್ಚೆ ನಡೆಯಬಹುದು. ನಿರ್ಧಾರವನ್ನೂ ತೆಗೆದುಕೊಳ್ಳಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ: ಸೆಮಿಕಂಡಕ್ಟರ್ ಸೆಕ್ಟರ್ನಲ್ಲಿ ಒಂದೆರಡು ವರ್ಷದಲ್ಲಿ ಸೃಷ್ಟಿಯಾಗಲಿವೆ 10 ಲಕ್ಷ ಉದ್ಯೋಗ
ಹೆಲ್ತ್ ಇನ್ಷೂರೆನ್ಸ್ ಮತ್ತು ಲೈಫ್ ಇನ್ಷೂರೆನ್ಸ್ ಜಿಎಸ್ಟಿ ದರವನ್ನು ಅವಲೋಕಿಸಲು ರೂಪಿಸಲಾದ ಸಚಿವರ ಮಂಡಳಿ (ಜಿಒಎಂ) ಕಳೆದ ತಿಂಗಳು ಸಭೆ ನಡೆಸಿತ್ತು. ಟರ್ಮ್ ಲೈಫ್ ಇನ್ಷೂರೆನ್ಸ್ ಪಾಲಿಸಿ ಮತ್ತು ಹಿರಿಯ ನಾಗರಿಕರ ಹೆಲ್ತ್ ಇನ್ಷೂರೆನ್ಸ್ ಪಾಲಿಸಿಗಳ ಪ್ರೀಮಿಯಮ್ ಹಣವನ್ನು ಜಿಎಸ್ಟಿ ವ್ಯಾಪ್ತಿಯಿಂದ ಹೊರಗಿಡಬೇಕು ಎನ್ನುವ ಸಲಹೆಗೆ ಆ ಸಭೆಯಲ್ಲಿ ಸಹಮತ ಸಿಕ್ಕಿತ್ತು. ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಜಿಒಎಂನ ಅನಿಸಿಕೆಗಳು ಚರ್ಚೆಗೆ ಬರುವ ಸಾಧ್ಯತೆ ಇದೆ.
ಹಾಗೆಯೇ, 5 ಲಕ್ಷ ರೂವರೆಗಿನ ಕವರೇಜ್ ಇರುವ ಯಾವುದೇ ಹೆಲ್ತ್ ಇನ್ಷೂರೆನ್ಸ್ ಪಾಲಿಸಿಯ ಪ್ರೀಮಿಯಮ್ ಪಾವತಿಗೂ ಜಿಎಸ್ಟಿಯಿಂದ ವಿನಾಯಿತಿ ಕೊಡಬೇಕು ಎನ್ನುವ ಪ್ರಸ್ತಾಪ ಇದೆ. ಇದೂ ಕೂಡ ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾಪವಾಗಬಹುದು.
ಹಿಂದಿನ ಜಿಎಸ್ಟಿ ಕೌನ್ಸಿಲ್ ಸಭೆ (54ನೆಯದ್ದು) ನಡೆದದ್ದು ಸೆಪ್ಟೆಂಬರ್ 9ರಂದು. ಇನ್ಷೂರೆನ್ಸ್ ಪಾಲಿಸಿಗಳ ಪ್ರೀಮಿಯಮ್ ಹಣದ ಮೇಲೆ ವಿಧಿಸಲಾಗುತ್ತಿರುವ ಜಿಎಸ್ಟಿಯನ್ನು ತೆಗೆದುಹಾಕಬೇಕೋ, ದರ ಕಡಿಮೆ ಮಾಡಬೇಕೋ ಎಂಬುದನ್ನು ಅವಲೋಕಿಸುವಂತೆ ಗ್ರೂಪ್ ಆಫ್ ಮಿನಿಸ್ಟರ್ಸ್ಗೆ ಸೂಚಿಸಿತ್ತು.
ಇದನ್ನೂ ಓದಿ: ಷೇರುಗಳಲ್ಲಿ ಹೂಡಿಕೆ; 10 ವರ್ಷದಲ್ಲಿ ಭಾರತೀಯ ವ್ಯಕ್ತಿಗಳು ಗಳಿಸಿದ ಲಾಭ 84 ಲಕ್ಷ ಕೋಟಿ ರೂ
ಸದ್ಯ ಇನ್ಷೂರೆನ್ಸ್ ಪ್ರೀಮಿಯಮ್ ಮೇಲೆ ಶೇ. 18ರಷ್ಟು ಜಿಎಸ್ಟಿ ವಿಧಿಸಲಾಗುತ್ತಿದೆ. ಇದಕ್ಕೆ ಜಿಎಸ್ಟಿ ಇರಬಾರದು ಎನ್ನುವಂತಹ ಒತ್ತಾಯ ಸರ್ಕಾರದೊಳಗಿನಿಂದಲೂ ಕೇಳಿಬರುತ್ತಿದೆ. ಇದೇ ಕಾರಣಕ್ಕೆ ಸಚಿವರ ಗುಂಪನ್ನು ರಚಿಸಿ ಅವಲೋಕಿಸುವ ಪ್ರಯತ್ನವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ