
ವಿಜಯವಾಡ, ಮೇ 30: ಎಚ್ಎಎಲ್ ನಡೆಸುತ್ತಿರುವ ಕೆಲ ಪ್ರಾಜೆಕ್ಟ್ಗಳನ್ನು ಆಂಧ್ರಕ್ಕೆ ವರ್ಗಾಯಿಸಿಕೊಳ್ಳಲು ಯತ್ನಿಸಲಾಗುತ್ತಿದೆ ಎಂದು ಕರ್ನಾಟಕ ಸರ್ಕಾರ ಎತ್ತಿರುವ ತಗಾದೆಯನ್ನು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು (N Chandrababu Naidu) ತಳ್ಳಿಹಾಕಿದ್ದಾರೆ. ಎಚ್ಎಎಲ್ನ ಎಎಂಸಿಎ ಮತ್ತು ಎಲ್ಸಿಎ ತಯಾರಿಕಾ ಘಟಕಗಳನ್ನು (HAL AMCA and LCA projects) ಆಂಧ್ರಕ್ಕೆ ವರ್ಗಾಯಿಸುವ ಯಾವ ಪ್ರಸ್ತಾಪವೂ ತನ್ನ ಮುಂದಿಲ್ಲ. ತನಗೆ ಆ ಉದ್ದೇಶವೂ ಇಲ್ಲ. ಕರ್ನಾಟಕದಿಂದಲ್ಲ, ಯಾವ ರಾಜ್ಯಗಳಿಂದಲೂ ಉದ್ಯಮಗಳನ್ನು ಸೆಳೆಯುವ ಆಲೋಚನೆ ಇಲ್ಲ ಎಂದು ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಸ್ಪಷ್ಟಪಡಿಸಿದ್ದಾರೆ.
ಆಂಂಧ್ರದ ಕಡಪ ಜಿಲ್ಲೆಯಲ್ಲಿ ನಡೆದ ಮಹಾನಾಡು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈ ವಿಚಾರದ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಹಾಗೆಯೇ, ಇವತ್ತಿನ ಎನ್ಡಿಟಿವಿ ಸಂದರ್ಶನದಲ್ಲೂ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಿಂದ ಎಚ್ಎಎಲ್ ಯೋಜನೆಗಳನ್ನು ಕಸಿಯಲು ಯತ್ನಿಸುತ್ತಿದ್ದಾರಾ ಚಂದ್ರಬಾಬು ನಾಯ್ಡು?
‘ಆಂಧ್ರಪ್ರದೇಶಕ್ಕೆ ಡಿಫೆನ್ಸ್ ಮ್ಯಾನುಫ್ಯಾಕ್ಚರಿಂಗ್ ಅನ್ನು ತರುವುದು ನನ್ನ ಗುರಿ. ಇದು ಕರ್ನಾಟಕದ ಕೆಲ ನಾಯಕರಿಗೆ ಕಳವಳ ತಂದಿರಬಹುದು. ನನ್ನ ಇಡೀ ರಾಜಕೀಯ ವೃತ್ತಿಜೀವನದಲ್ಲಿ ಯಾವತ್ತೂ ಕೂಡ ಯಾರದ್ದೋ ಯೋಜನೆಯನ್ನು ಕಿತ್ತುಕೊಳ್ಳಲು ಯತ್ನಿಸಿಲ್ಲ. ನಾನು ಅಭಿವೃದ್ಧಿಪರ ಇದ್ದೇನೆ ಎಂದರೆ ಅದರರ್ಥ ಇನ್ನೊಂದು ರಾಜ್ಯಕ್ಕೆ ನಷ್ಟ ತಂದು ಬೆಳೆವಣಿಗೆ ಹೊಂದುವ ಇರಾದೆ ನನಗಿಲ್ಲ,’ ಎಂದು ಕಡಪದಲ್ಲಿ ನಾಯ್ಡು ಹೇಳಿದ್ಧಾರೆ.
ಕರ್ನಾಟಕದ ಗಡಿ ಭಾಗದಲ್ಲಿರುವ ಆಂಧ್ರದ ಅನಂತಪುರ ಜಿಲ್ಲೆಯ ಲೇಪಾಕ್ಷಿ-ಮಡಕಸಿರ ಪ್ರದೇಶದಲ್ಲಿ (Lepakshi Madakasira region) ಚಂದ್ರಬಾಬು ನಾಯ್ಡು ಅವರು ಎಚ್ಎಎಲ್ ಪ್ರಾಜೆಕ್ಟ್ಗಳಿಗೆ 10,000 ಎಕರೆ ಜಾಗ ಕೊಡಲು ಮುಂದಾಗಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿತ್ತು. ಕರ್ನಾಟಕ ಸರ್ಕಾರದ ಸಚಿವ ಎಂಬಿ ಪಾಟೀಲ್ ಅವರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ, ಕೇಂದ್ರ ಸರಕಾರದ ಬಳಿ ನಿಯೋಗ ಕಳುಹಿಸಿ ಆಕ್ಷೇಪಣೆ ಸಲ್ಲಿಸುವುದಾಗಿ ಹೇಳಿದ್ದರು.
ಎಚ್ಎಎಲ್ ಪ್ರಾಜೆಕ್ಟ್ಗಳನ್ನು ಸೆಳೆಯುವ ಉದ್ದೇಶ ಇಲ್ಲ ಎಂದು ಇದೀಗ ಸ್ಪಷ್ಟಪಡಿಸಿರುವ ಆಂಧ್ರ ಮುಖ್ಯಮಂತ್ರಿಗಳು, ಲೇಪಾಕ್ಷಿ-ಮಡಕಸಿರಾ ಪ್ರದೇಶದಲ್ಲಿ ದೊಡ್ಡ ಉದ್ಯಮಗಳನ್ನು ನೆಲೆಗೊಳಿಸುವ ಉದ್ದೇಶ ಇರುವುದನ್ನು ಖಾತ್ರಿಪಡಿಸಿದ್ದಾರೆ.
ಇದನ್ನೂ ಓದಿ: ವಿಶ್ವದ ಅತಿದೊಡ್ಡ ಏರ್ಕ್ರಾಫ್ಟ್ ಕಂಪನಿ ಏರ್ಬಸ್ನ ಎಚ್125 ಹೆಲಿಕಾಪ್ಟರ್ ಘಟಕ ಕರ್ನಾಟಕಕ್ಕೆ
ಎನ್ಡಿಟಿವಿ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಲೇಪಾಕ್ಷಿ- ಮಡಕಸಿರಾ ಪ್ರದೇಶವನ್ನು ಪ್ರಮುಖ ಏರೋಸ್ಪೇಸ್ ಮತ್ತು ಡಿಫೆನ್ಸ್ ಉದ್ಯಮಗಳ ಕೇಂದ್ರವನ್ನಾಗಿ ಮಾಡುವ ಉದ್ದೇಶ ಇದೆ. ಭಾರತದಲ್ಲಿ ವಿಮಾನ ತಯಾರಿಕೆಗೆ ಬಹಳ ಬೇಡಿಕೆ ಬರುತ್ತಿದೆ. ಡಿಫೆನ್ಸ್ ಉದ್ಯಮವೂ ಸಾಕಷ್ಟು ಬೆಳೆಯುತ್ತದೆ. ಈಗ ಬಹಳಷ್ಟು ಕಂಪನಿಗಳು ರಾಕೆಟ್, ಸೆಟಿಲೈಟ್ಗಳನ್ನು ಕಡಿಮೆ ಬೆಲೆ ತಯಾರಿಸಬಲ್ಲುವು. ಆಂಧ್ರದಲ್ಲಿ ಇಂಥ ಉದ್ಯಮಗಳನ್ನು ನೆಲೆಗೊಳಿಸುವ ಗುರಿ ಹೊಂದಿದ್ದೇನೆ’ ಎಂದಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ