ನೋಯಲ್ ಟಾಟಾ ಮತ್ತು ಛೇರ್ಮನ್ ಸ್ಥಾನದ ಮಧ್ಯೆ ಅಡ್ಡಗೋಡೆಯಾದ ನಿಯಮ

|

Updated on: Oct 25, 2024 | 4:48 PM

Rule that prevents Noel Tata from becoming Tata Sons Chairman: ರತನ್ ಟಾಟಾ ನಿಧನದ ಬಳಿಕ ನೋಯಲ್ ಟಾಟಾ ಅವರು ಟಾಟಾ ಟ್ರಸ್ಟ್ಸ್​ನ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಅದರ ಮೂಲಕ ಅವರಿಗೆ ಟಾಟಾ ಗ್ರೂಪ್​ನ ಚುಕ್ಕಾಣಿ ಸಿಕ್ಕಿದೆ. ಇಡೀ ಗ್ರೂಪ್ ಅನ್ನು ಟಾಟಾ ಟ್ರಸ್ಟ್ಸ್ ನಿಯಂತ್ರಿಸುವ ಅಧಿಕಾರ ಹೊಂದಿದೆ. ಆದರೂ ಕೂಡ ನೋಯಲ್ ಟಾಟಾ ಅವರು ಟಾಟಾ ಸನ್ಸ್​ನ ಛೇರ್ಮನ್ ಆಗಲು ಸದ್ಯಕ್ಕೆ ಸಾಧ್ಯವಾಗುವುದಿಲ್ಲ.

ನೋಯಲ್ ಟಾಟಾ ಮತ್ತು ಛೇರ್ಮನ್ ಸ್ಥಾನದ ಮಧ್ಯೆ ಅಡ್ಡಗೋಡೆಯಾದ ನಿಯಮ
ನೋಯಲ್ ಟಾಟಾ
Follow us on

ಮುಂಬೈ, ಅಕ್ಟೋಬರ್ 25: ಟಾಟಾ ಎನ್ನುವ ಬಹಳ ಸಂಕೀರ್ಣ ಕುಟುಂಬ ಮತ್ತು ಉದ್ಯಮ ಸಾಮ್ರಾಜ್ಯದಲ್ಲಿ ಸದ್ಯ ಪವರ್ ಸೆಂಟರ್​ನಲ್ಲಿ ಕೂತಿರುವುದು ನೋಯಲ್ ಟಾಟಾ. ರತನ್ ಟಾಟಾ ಬಳಿಕ ಟಾಟಾ ಗ್ರೂಪ್​ಗೆ ನೋಯಲ್ ಅವರೇ ವಾರಸುದಾರರಾಗಿದ್ದಾರೆ. ಟಾಟಾ ಟ್ರಸ್ಟ್​ಗಳಿಗೆ ನೋಯಲ್ ಅವರೇ ಛೇರ್ಮನ್ ಆಗಿದ್ದಾರೆ. ಆದರೆ, ಟಾಟಾದ ಬಿಸಿನೆಸ್ ನಿಯಂತ್ರಿಸುವುದು ಟಾಟಾ ಸನ್ಸ್ ಸಂಸ್ಥೆ. ಟಾಟಾ ಸನ್ಸ್​ನ ನಿಯಂತ್ರಣ ಟಾಟಾ ಟ್ರಸ್ಟ್​ ಕೈಯಲ್ಲಿದೆ. ಆದರೂ ಕೂಡ ನೋಯಲ್ ಟಾಟಾ ಅವರು ಟಾಟಾ ಸನ್ಸ್ ಛೇರ್ಮನ್ ಆಗಲು ಸದ್ಯಕ್ಕೆ ಸಾಧ್ಯವಿಲ್ಲ. ಎರಡು ವರ್ಷದ ಹಿಂದೆ ಟಾಟಾ ಸನ್ಸ್ ಸಂವಿಧಾನದಲ್ಲಿ ಮಾಡಲಾದ ಕೆಲ ನಿಯಮ ಬದಲಾವಣೆಗಳು ಇದಕ್ಕೆ ಕಾರಣ ಎನ್ನಲಾಗಿದೆ.

ಏನದು ಹೊಸ ಟಾಟಾ ನಿಯಮ?

ಎರಡು ವರ್ಷದ ಹಿಂದೆ ಟಾಟಾ ಗ್ರೂಪ್ ಹೊಸ ನೀತಿ ಜಾರಿಗೊಳಿಸಿತು. ಟಾಟಾ ಸಂಸ್ಥೆಗಳ ಮಧ್ಯೆ ಹಿತಾಸಕ್ತಿ ಸಂಘರ್ಷವಾಗದಂತೆ ನಿಯಂತ್ರಿಸಲು ಟಾಟಾ ಸನ್ಸ್ ಸಂಸ್ಥೆಯ ಕಾನೂನುಗಳಲ್ಲಿ ಒಂದಷ್ಟು ಬದಲಾವಣೆ ಮಾಡಲಾಯಿತು. ಅದರ ಪ್ರಕಾರ, ಒಬ್ಬರೇ ವ್ಯಕ್ತಿ ಏಕಕಾಲದಲ್ಲಿ ಟಾಟಾ ಟ್ರಸ್ಟ್ಸ್ ಮತ್ತು ಟಾಟಾ ಸನ್ಸ್ ಛೇರ್ಮನ್ ಆಗುವಂತಿಲ್ಲ.

ರತನ್ ಟಾಟಾ ಅವರು 2016ರಲ್ಲಿ ಟಾಟಾ ಸನ್ಸ್ ಛೇರ್ಮನ್ ಸ್ಥಾನದಿಂದ ಇಳಿಯುವ ಮುನ್ನ ಎರಡೂ ಸಂಸ್ಥೆಗಳಿಗೆ ಛೇರ್ಮನ್ ಆಗಿದ್ದರು. ಅದಾದ ಬಳಿಕ ಎರಡಕ್ಕೂ ಒಬ್ಬ ವ್ಯಕ್ತಿಯೇ ಮುಖ್ಯಸ್ಥರಾಗಿದ್ದಿಲ್ಲ. ಸದ್ಯ ಟಾಟಾ ಸನ್ಸ್ ಛೇರ್ಮನ್ ಸ್ಥಾನದಲ್ಲಿ ಎನ್ ಚಂದ್ರಶೇಖರನ್ ಇದ್ದಾರೆ. ಕುತೂಹಲ ಎಂದರೆ ಟಾಟಾ ಕುಟುಂಬದ ಹೊರಗಿನ ವ್ಯಕ್ತಿಯೊಬ್ಬರು ಆ ಸ್ಥಾನ ಅಲಂಕರಿಸಿರುವುದು ಇದೇ ಮೊದಲು.

ಇದನ್ನೂ ಓದಿ: ಬೆಂಗಳೂರು ಬಿಟ್ಟು ಆಂಧ್ರಕ್ಕೆ ಬನ್ನಿ ಎಂದ ಸಚಿವರ ಕರೆಗೆ ಸಿಲಿಕಾನ್ ಸಿಟಿ ಉದ್ಯಮಿಗಳ ರಿಯಾಕ್ಷನ್ ಹೀಗಿತ್ತು..!

ನೋಯಲ್ ಟಾಟಾಗೆ ಸತತ ನಿರಾಸೆಯಾ?

ರತನ್ ಟಾಟಾ ಅವರ ತಂದೆ ನವಲ್ ಟಾಟಾ ಅವರ ಎರಡನೇ ಪತ್ನಿಯ ಮಗ ಈ ನೋಯಲ್ ಟಾಟಾ. ನವಲ್ ಟಾಟಾ ಮೊದಲು ಸೋನೂ ಎಂಬಾಕೆಯನ್ನು ಮದುವೆಯಾಗಿದ್ದರು. ಅವರಿಗೆ ಹುಟ್ಟಿದವರು ರತನ್ ಮತ್ತು ಜಿಮ್ಮಿ ಟಾಟಾ. ಸೋನೂಗೆ ಡಿವೋರ್ಸ್ ಕೊಟ್ಟ ಬಳಿಕ ನವಲ್ ಅವರು ಸಿಮೋನ್​ರನ್ನು ಮದುವೆಯಾದರು. ಅವರಿಗೆ ಹುಟ್ಟಿದವರು ನೋಯಲ್ ಟಾಟಾ.

ಪಲ್ಲೂನ್​ಜಿ ಮಿಸ್ಟ್ರಿ ಅವರ ಮಗಳು ಆಲೂ ಮಿಸ್ಟ್ರಿ ಅವರನ್ನು ನೋಯಲ್ ಮದುವೆಯಾಗಿದ್ದಾರೆ. ಈ ಆಲೂ ಮಿಸ್ಟ್ರಿ ಅವರ ಸಹೋದರನೇ ಸೈರಸ್ ಮಿಸ್ತ್ರಿ. ರತನ್ ಟಾಟಾ ಅವರು ಟಾಟಾ ಸನ್ಸ್ ಛೇರ್ಮನ್ ಸ್ಥಾನದಿಂದ ಇಳಿದಾಗ ಎಲ್ಲರೂ ಕೂಡ ನೋಯಲ್ ಅವರಿಗೆ ಆ ಸ್ಥಾನ ಕೊಡಬಹುದು ಎಂದು ನಿರೀಕ್ಷಿಸಿದ್ದರು. ಆದರೆ, ಹಾಗಾಗಲಿಲ್ಲ.

ನೋಯಲ್ ಅವರ ಬಾಮೈದನಾದ ಸೈರಸ್ ಮಿಸ್ಟ್ರಿ ಅವರನ್ನು ಟಾಟಾ ಸನ್ಸ್ ಛೇರ್ಮನ್ ಆಗಿ ಮಾಡಲಾಯಿತು. ಅದಾದ ನಾಟಕೀಯ ಬೆಳವಣಿಗೆಯಲ್ಲಿ ಸೈರಸ್ ಮಿಸ್ಟ್ರಿ ಅವರನ್ನು ಛೇರ್ಮನ್ ಸ್ಥಾನದಿಂದ ತೆಗೆಯಲಾಯಿತು. ಆಗಲೂ ಕೂಡ ನೋಯಲ್ ಹೆಸರು ಆ ಸ್ಥಾನಕ್ಕೆ ಕೇಳಿಬಂದಿತ್ತು. ಅಚ್ಚರಿಯ ನಿರ್ಧಾರದಲ್ಲಿ ಕುಟುಂಬದ ಹೊರಗಿನ ವ್ಯಕ್ತಿಯಾದ ಚಂದ್ರಶೇಖರನ್ ಅವರನ್ನು ಟಾಟಾ ಸನ್ಸ್ ಛೇರ್ಮನ್ ಆಗಿ ಮಾಡಲಾಯಿತು.

ಇದನ್ನೂ ಓದಿ: Fact Check: ರತನ್ ಟಾಟಾ ಸಮಾಧಿ ಬಳಿ ಕಣ್ಣೀರು ಸುರಿಸುತ್ತಿರುವ ನಾಯಿ: ವೈರಲ್ ವಿಡಿಯೋದ ನಿಜಾಂಶ ಏನು?

2019ರಲ್ಲಿ ನೋಯಲ್ ಟಾಟಾ ಅವರನ್ನು ಸರ್ ರತನ್ ಟಾಟಾ ಟ್ರಸ್ಟ್​ನ ಟ್ರಸ್ಟಿ ಆಗಿ ಮಾಡಲಾಯಿತು. ಆಗಲೂ ನೋಯಲ್ ಬಗ್ಗೆ ನಿರೀಕ್ಷೆಗಳೆದ್ದವು. 2022ರಲ್ಲಿ ಟಾಟಾ ಗ್ರೂಪ್​ನ ಇನ್ನೊಂದು ಪ್ರಮುಖ ಟ್ರಸ್ಟ್ ಆದ ಸರ್ ದೊರಾಬ್​ಜಿ ಟಾಟಾ ಟ್ರಸ್ಟ್​ಗೆ ನೋಯಲ್ ಟ್ರಸ್ಟೀ ಆದರು. ಈಗ ಎರಡೂ ಟ್ರಸ್ಟ್​ಗಳಿಗೂ ನೋಯಲ್ ಟಾಟಾ ಛೇರ್ಮನ್ ಆಗಿದ್ದಾರೆ.

ಟಾಟಾ ಗ್ರೂಪ್​ನ ಸಂಪೂರ್ಣ ನಿಯಂತ್ರಣ ಟಾಟಾ ಟ್ರಸ್ಟ್​ಗೆ ಇದೆ. ಇದು ಟಾಟಾ ಗ್ರೂಪ್​ನ ಪವರ್ ಸೆಂಟರ್ ಆದರೂ ರಿಯಲ್ ಪವರ್ ಇರುವುದು ಟಾಟಾ ಸನ್ಸ್​ನಲ್ಲಿ. ಟಾಟಾ ಗ್ರೂಪ್​ನ ಮೇಲೆ ಒಬ್ಬನೇ ವ್ಯಕ್ತಿ ಏಕಸ್ವಾಮ್ಯ ಸಾಧಿಸಬಾರದು ಎಂಬ ಉದ್ದೇಶದಿಂದಲೋ ಏನೋ ಟಾಟಾ ಸನ್ಸ್​ನ ಕಾನೂನಿನಲ್ಲಿ 2022ರಲ್ಲಿ ಬದಲಾವಣೆ ಮಾಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ