MS Dhoni: ಬೆಂಗಳೂರಿನಲ್ಲಿ ಗ್ಲೋಬಲ್ ಸ್ಕೂಲ್ ಸೇರಿದಂತೆ ಎಂಎಸ್ ಧೋನಿ ಬಿಸಿನೆಸ್ ಸಾಮ್ರಾಜ್ಯ ಎಷ್ಟಿದೆ ನೋಡಿ..!
MS Dhoni business empire details in Kannada: ಎಂಎಸ್ ಧೋನಿ ಭಾರತೀಯ ಕ್ರಿಕೆಟ್ನ ದಂತಕಥೆಗಳಲ್ಲಿ ಒಬ್ಬರು. ಅವರ ನಾಯಕತ್ವ ಬೆರಗು ಮೂಡಿಸುವಂಥದ್ದು. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿ ಕೆಲ ವರ್ಷಗಳೇ ಆದರೂ ಈಗಲೂ ಜನಪ್ರಿಯತೆ ಕುಂದಿಲ್ಲ. ಕ್ರಿಕೆಟ್ ಆಟದ ಸಂಭಾವನೆ, ಜಾಹೀರಾತು ಇತ್ಯಾದಿಗಳಿಂದ ಈಗಲೂ ವರ್ಷಕ್ಕೆ ಹಲವು ಕೋಟಿ ರೂ ಆದಾಯ ಗಳಿಸುತ್ತಾರೆ. ಬೆಂಗಳೂರಿನಲ್ಲಿ ಗ್ಲೋಬಲ್ ಸ್ಕೂಲ್ ಸೇರಿದಂತೆ ಹಲವು ಬಿಸಿನೆಸ್ ಮತ್ತು ಯೋಜನೆಗಳನ್ನು ಅವರು ನಡೆಸುತ್ತಿದ್ದಾರೆ. ಅವರ ಆಸ್ತಿ ಮೌಲ್ಯ 1,040 ಕೋಟಿ ಇರಬಹುದು ಎಂದು ಅಂದಾಜಿಸಲಾಗಿದೆ.
ಮಹೇಂದ್ರ ಸಿಂಗ್ ಧೋನಿ ಭಾರತದ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಜನಪ್ರಿಯ ಆಟಗಾರರಲ್ಲಿ ಮತ್ತು ದಂತಕಥೆಗಳಲ್ಲಿ ಒಬ್ಬರು. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿ ಮೂರು ವರ್ಷವಾದರೂ ಐಪಿಎಲ್ನಲ್ಲಿ ಈಗಲೂ ಸ್ಟಾರ್ ಎನಿಸಿದ್ದಾರೆ. 42 ವರ್ಷ ವಯಸ್ಸಾದರೂ ಅವರ ಕ್ಷಮತೆ, ನೈಪುಣ್ಯತೆ ಕುಂದಿದಂತೆ ತೋರುತ್ತಿಲ್ಲ. ಅವರು ಮೈದಾನಕ್ಕೆ ಬ್ಯಾಟ್ ಹಿಡಿದು ಬಂದರೆ ಗ್ಯಾಲರಿಯಲ್ಲಿ ಪ್ರೇಕ್ಷಕರ ಉತ್ಸಾಹ ಪುಟಿದೇಳುತ್ತದೆ. ಟೀಮ್ ಇಂಡಿಯಾ ಕ್ಯಾಪ್ಟನ್ ಆಗಿದ್ದಾಗ ಎಂಎಸ್ ಧೋನಿ (Mahendra Singh Dhoni) ಅವರ ನಾಯಕತ್ವದ ಪರಿ ಎಲ್ಲರನ್ನೂ ಸೆಳೆದಿತ್ತು. ವಿಕೆಟ್ ಕೀಪಿಂಗ್, ಕ್ಯಾಪ್ಟನ್ಸಿ ಮತ್ತು ಬ್ಯಾಟಿಂಗ್ ಈ ಮೂರೂ ವಿಭಾಗದಲ್ಲಿ ಮೈದಾನದೊಳಗೆ ಅವರ ಚಾಣಾಕ್ಯತೆ, ದಿಟ್ಟತೆ ಇತ್ತು. ಈಗಲೂ ಸಿಎಸ್ಕೆಗೆ ಅವರೇ ಪರೋಕ್ಷ ನಾಯಕ. ಅಷ್ಟರಮಟ್ಟಿಗೆ ಅವರು ತಂಡವನ್ನು ಆವರಿಸುತ್ತಾರೆ.
ಅನೇಕ ಕ್ರಿಕೆಟಿಗರಂತೆ ಎಂಎಸ್ ಧೋನಿ ಕೂಡ ಆಟ ಆಡಾಡುತ್ತಲೇ ಪರ್ಯಾಯವಾಗಿ ಬಿಸಿನೆಸ್ಗಳನ್ನೂ ಬೆಳೆಸಿದ್ದಾರೆ. 35 ವರ್ಷದ ಬಳಿಕ ಆಟಗಾರರು ನಿವೃತ್ತರಾಗುವ ಸಾಧ್ಯತೆ ಹೆಚ್ಚಿರುವುದರಿಂದ ಕ್ರಿಕೆಟ್ನಿಂದ ಬಂದ ದುಡಿಮೆ ಹಣದಿಂದ ಬೇರೆ ಬಿಸಿನೆಸ್ ಆರಂಭಿಸಲು ಬಳಸುತ್ತಾರೆ, ಹೂಡಿಕೆ ಮಾಡುತ್ತಾರೆ. ಧೋನಿ ಕೂಡ ವಿವಿಧ ಉದ್ದಿಮೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲಿಯೂ ಸಾಕಷ್ಟು ಯಶಸ್ಸು ಕಂಡಿದ್ದಾರೆ.
ಬೆಂಗಳೂರಿನಲ್ಲಿ ಇವರು ಎಂಎಸ್ ಧೋನಿ ಗ್ಲೋಬಲ್ ಸ್ಕೂಲ್ ಅನ್ನು ನಡೆಸುತ್ತಿದ್ದಾರೆ. ಸಿಬಿಎಸ್ಇ ಪಠ್ಯಕ್ರಮದ ಈ ಶಾಲೆಯು ಎಚ್ಎಸ್ಆರ್ ಲೇಔಟ್ನ ಕೂಡ್ಲು ಗೇಟ್ ಬಳಿ ಇದೆ. ತಮ್ಮ ಹುಟ್ಟೂರು ರಾಂಚಿಯಲ್ಲಿ ಹೋಟೆಲ್ ಮಹಿ ರೆಸಿಡೆನ್ಸಿ ಸ್ಥಾಪಿಸಿದ್ದಾರೆ. ಒಯೋ, ಮೇಕ್ ಮೈ ಟ್ರಿಪ್ ಮೊದಲಾದ ಪ್ಲಾಟ್ಫಾರ್ಮ್ಗಳಲ್ಲಿ ಇವರ ಹೋಟೆಲ್ ಲಿಸ್ಟ್ ಆಗಿದೆ.
ಕ್ರಿಕೆಟ್ ಮಾತ್ರವಲ್ಲ ಇತರೆ ಕ್ರೀಡೆಗಳಲ್ಲೂ ಮಹಿ ಆಸಕ್ತಿ ಇದೆ. ಐಎಸ್ಎಲ್ನಲ್ಲಿ ಚೆನ್ನೈಯಿನ್ ಫುಟ್ಬಾಲ್ ಕ್ಲಬ್ ತಂಡ, ರಾಂಚಿ ಹಾಕಿ ಕ್ಲಬ್ ತಂಡ, ಅಂತಾರಾಷ್ಟ್ರೀಯ ಮೋಟಾರ್ ಸ್ಪೋರ್ಟ್ಸ್ ತಂಡ, ಸ್ಪೋರ್ಟ್ಸ್ಫಿಟ್ ಎಂಬ ಜಿಮ್, 7ಇಂಕ್ ಬ್ರಿವ್ಸ್ ಎಂಬ ಬೆವರೇಜ್ ಕಂಪನಿ, ಸೆವನ್ ಸ್ಪೋರ್ಟ್ಸ್ ಎಂಬ ಕ್ಲೋತಿಂಗ್ ಬ್ರ್ಯಾಂಡ್ ಹೀಗೆ ಹಲವು ವ್ಯವಹಾರಗಳಲ್ಲಿ ಧೋನಿ ತೊಡಗಿಸಿಕೊಂಡಿದ್ದಾರೆ. ರಿಯಲ್ ಎಸ್ಟೇಟ್ನಲ್ಲಿ ಅವರ ಹೂಡಿಕೆಗಳಿವೆ. ಕಾರ್24 ಎಂಬ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ.
ಐಪಿಎಲ್ನಲ್ಲಿ ಒಂದು ವರ್ಷದಲ್ಲಿ ಅವರ ಸಂಭಾವನೆ 12 ಕೋಟಿ ರೂ ಇದೆ. ಇದರ ಜೊತೆಗೆ ಮ್ಯಾಚ್ ಫೀ ಪ್ರತ್ಯೇಕ ಇರುತ್ತದೆ. ಸೋಷಿಯಲ್ ಮೀಡಿಯಾ ಎಂಡೋರ್ಸ್ಮೆಂಟ್ಗಳಿಂದ ಕೋಟಿಗೂ ಹೆಚ್ಚು ಆದಾಯ ಮಾಡುತ್ತಾರೆ. ಪ್ರತೀ ಬ್ರ್ಯಾಂಡ್ ಎಂಡೋರ್ಸ್ಮೆಂಟ್ಗಳಿಂದ 6 ಕೋಟಿ ರೂವರೆಗೆ ಸಂಭಾವನೆ ಪಡೆಯುತ್ತಾರೆ.
ಇದನ್ನೂ ಓದಿ: IPL 2024: ಕಿಂಗ್ ಕೊಹ್ಲಿಯ ವಿಶೇಷ ದಾಖಲೆ ಸರಿಗಟ್ಟಿದ ಎಂಎಸ್ ಧೋನಿ
ಕ್ರಿಕೆಟ್ ಸಂಭಾವನೆ, ಬಿಸಿನೆಸ್ ಇತ್ಯಾದಿ ಎಲ್ಲಾ ಆದಾಯ ಸೇರಿಸಿದರೆ ಮಹೇಂದ್ರ ಸಿಂಗ್ ಧೋನಿ ಅವರ ಆಸ್ತಿ ಮೌಲ್ಯ ಇವತ್ತು 1,000 ಕೋಟಿ ರೂ ಗಡಿ ದಾಟಿ ಹೋಗುತ್ತದೆ. ಅತ್ಯಂತ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರೆನಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:50 pm, Mon, 15 April 24