ಜೆನ್ಸೆನ್ ಸಂಪತ್ತಿಗೆ ಡಬಲ್ ಹೊಡೆತ; ಎಐ ಶಾಕ್ ಜೊತೆಗೆ ಈಗ ಲೈಂಗಿಕ ಹಗರಣದ ಆಘಾತ; ಟಾಪ್-10 ಪಟ್ಟಿಯಿಂದ ಹೊರಕ್ಕೆ

ಎನ್‌ವಿಡಿಯಾ ಮುಖ್ಯಸ್ಥ ಜೆನ್ಸನ್ ಹುವಾಂಗ್ ತಮ್ಮ ಮೇಲಿನ ವೈಯಕ್ತಿಕ ಸಂಬಂಧದ ಆರೋಪಗಳ ತಪ್ಪೊಪ್ಪಿಗೆ ಬೆನ್ನಲ್ಲೇ ಬಿಲಿಯನ್‌ಗಟ್ಟಲೆ ಸಂಪತ್ತನ್ನು ಕಳೆದುಕೊಂಡಿದ್ದಾರೆ. ಬ್ಲೂಮ್​ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್​ನ ವಿಶ್ವದ ಅಗ್ರ 10 ಶ್ರೀಮಂತರ ಪಟ್ಟಿಯಿಂದ ಹೊರಬಿದ್ದು 12ನೇ ಸ್ಥಾನಕ್ಕೆ ಕುಸಿದಿದ್ದಾರೆ. ಫೋರ್ಬ್ಸ್ ಪಟ್ಟಿಯಲ್ಲೂ ಅವರು 8ರಿಂದ 10ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಜೆನ್ಸೆನ್ ಸಂಪತ್ತಿಗೆ ಡಬಲ್ ಹೊಡೆತ; ಎಐ ಶಾಕ್ ಜೊತೆಗೆ ಈಗ ಲೈಂಗಿಕ ಹಗರಣದ ಆಘಾತ; ಟಾಪ್-10 ಪಟ್ಟಿಯಿಂದ ಹೊರಕ್ಕೆ
ಜೆನ್ಸೆನ್ ಹುವಾಂಗ್
Image Credit source: AP

Updated on: Nov 10, 2026 | 12:21 PM

ನವದೆಹಲಿ, ನವೆಂಬರ್ 10: ವಿಶ್ವದ ಅತಿದೊಡ್ಡ ಎಐ ಚಿಪ್ ತಯಾರಕ ಸಂಸ್ಥೆಯಾದ ಎನ್‌ವಿಡಿಯಾ (Nvidia) ಸಿಇಒ ಜೆನ್ಸನ್ ಹುವಾಂಗ್ ಅವರು ಚೀನಾದ ಗೂಢಚಾರಿ ಶಂಕಿತಳೊಬ್ಬಳೊಂದಿಗೆ ಸಂಬಂಧ ಹೊಂದಿರುವ ವಿಚಾರ ಬೆಳಕಿಗೆ ಬರುತ್ತಲೇ ಜಾಗತಿಕ ತಂತ್ರಜ್ಞಾನ ಮತ್ತು ಆರ್ಥಿಕ ವಲಯದಲ್ಲಿ ತಲ್ಲಣ ಮೂಡಿದೆ. ಈ ಲೈಂಗಿಕ ಹಗರಣ ಮತ್ತು ವೈಯಕ್ತಿಕ ವಿವಾದದ ಪರಿಣಾಮವಾಗಿ ಕಂಪನಿಯ ಷೇರುಗಳು ಹಾಗೂ ಮಾರುಕಟ್ಟೆ ಮೌಲ್ಯದ ಮೇಲೆ ತೀವ್ರ ಪರಿಣಾಮ ಬೀರಿದ್ದು, ಜೆನ್ಸನ್ ಹುವಾಂಗ್ ಅವರು ಬಿಲಿಯನ್‌ಗಟ್ಟಲೆ ಡಾಲರ್ ಸಂಪತ್ತನ್ನು ಕಳೆದುಕೊಂಡು ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಿಂದ ಕೆಳಗೆ ಜಾರಿದ್ದಾರೆ.

ಎನ್​ವಿಡಿಯಾ ಕಂಪನಿಯಲ್ಲಿ ಜೆನ್ಸೆನ್ ಹುವಾಂಗ್ ಶೇ. 3.5ಕ್ಕೂ ಅಧಿಕ ಷೇರುಗಳನ್ನು ಹೊಂದಿದ್ದಾರೆ. ಕಂಪನಿಯ ಅತಿದೊಡ್ಡ ವೈಯಕ್ತಿಕ ಷೇರುದಾರ ಎನಿಸಿದ್ದಾರೆ. ಎಐ ಕ್ಷೇತ್ರದ ಷೇರುಗಳು ಜಾಗತಿಕವಾಗಿ ಪತನಗೊಳ್ಳುತ್ತಿದೆ. ಇದರಿಂದ ಎನ್​ವಿಡಿಯಾ ಶೇರುಬೆಲೆಯೂ ಕೆಲವಾರು ದಿನಗಳಿಂದ ಕುಸಿಯುತ್ತಿದೆ. ಇದರ ಬೆನ್ನಲ್ಲೇ ನಿನ್ನೆ ಜೆನ್ಸೆನ್ ಹುವಾಂಗ್ ಅವರ ವೈಯಕ್ತಿಕ ಜೀವನದ ಘಟನೆಗಳು ವಿವಾದಗೊಂಡಿವೆ. ಇದರಿಂದಲೂ ಎನ್​ವಿಡಿಯಾ ಶೇರುಬೆಲೆ ಕುಸಿಯುತ್ತಿದೆ.

Loading...

ಇದನ್ನೂ ಓದಿ: ಇದು ಹಾಲಿವುಡ್ ಸ್ಪೈ ಥ್ರಿಲ್ಲರ್​ನಂಥ ಕಥೆ; ಅಮೆರಿಕದ ಕಾರ್ಪೊರೇಟ್ ದಂತಕಥೆಯ ಬೆನ್ನಿಗೆ ಅಂಟಿದ ಚೀನೀ ಗೂಢಚಾರಿಣಿ

ಬ್ಲೂಮ್​ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಜೆನ್ಸೆನ್ ಹುವಾಂಗ್ ಅವರ ವೈಯಕ್ತಿಕ ಆಸ್ತಿಮೌಲ್ಯ 6.47 ಬಿಲಿಯನ್ ಡಾಲರ್ ಕುಸಿದಿದೆ. ಈ ವರ್ಷ 15 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿ ಕಳೆದುಕೊಂಡಿದ್ದಾರೆ. ಈ ಪಟ್ಟಿ ಪ್ರಕಾರ ಅವರ ಆಸ್ತಿಮೌಲ್ಯ 148 ಬಿಲಿಯನ್ ಡಾಲರ್ ಇದೆ. ಜಗತ್ತಿನ ಅತಿ ಶ್ರೀಮಂತರ ಟಾಪ್-10 ಪಟ್ಟಿಯಿಂದ ಹೊರಬಿದ್ದು 12ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಇನ್ನು, ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲೂ ಜೆನ್ಸೆನ್ ಎರಡು ಸ್ಥಾನ ಕೆಳಗಿಳಿದಿದ್ದಾರೆ. ಫೋರ್ಬ್ಸ್ ಪಟ್ಟಿ ಪ್ರಕಾರ ಜೆನ್ಸೆನ್ ಅವರ ಆಸ್ತಿಮೌಲ್ಯ 154 ಬಿಲಿಯನ್ ಡಾಲರ್​ಗೆ ಇಳಿದಿದೆ. ಅವರ ಸ್ಥಾನ 8ರಿಂದ 10ಕ್ಕೆ ಇಳಿದಿದೆ.

ಇದನ್ನೂ ಓದಿ: ನಿಮ್ಮ ಆಲೋಚನಾ ಶಕ್ತಿಯನ್ನು ಎಐಗೆ ಒಪ್ಪಿಸಬೇಡಿ: ಯುವಜನರಿಗೆ ಮಾಜಿ ಐಎಂಎಫ್ ಅಧಿಕಾರಿ ಗೀತಾ ಗೋಪಿನಾಥ್ ಸಲಹೆ

ಏನಿದು ಜೆನ್ಸೆನ್ ಹುವಾಂಗ್ ಲೈಂಗಿಕ ಹಗರಣ?

ಎನ್​ವಿಡಿಯಾ ಸಿಇಒ ಆಗಿರುವ ಜೆನ್ಸೆನ್ ಹುವಾಂಗ್ ಅವರು ತಾನು ಮಹಿಳೆಯೊಬ್ಬಳ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಎನ್​ವಿಡಿಯಾದ ಗ್ರಾಹಕ ಸಂಸ್ಥೆಗಳಲ್ಲಿ ಒಂದಾದ ಮೆಗಾಸ್ಪೀಡ್​ನ ಮಾಲಕಿಯಾದ ಅಲೈಸ್ ಹುವಾಂಗ್ ಅವರೊಂದಿಗೆ ಜೆನ್ಸೆನ್ ಸಂಬಂಧ ಇಟ್ಟುಕೊಂಡಿರುವ ಶಂಕೆ ಇದೆ. ಈಕೆ ಚೀನಾದ ಏಜೆಂಟ್ ಎಂಬುದು ಅಮೆರಿಕದ ಎಫ್​ಬಿಐಗೆ ಇರುವ ಶಂಕೆ.

ಈ ಬೆಳವಣಿಗೆಯ ಗಂಭೀರತೆಯನ್ನು ಪರಿಗಣಿಸಿ ಎನ್‌ವಿಡಿಯಾ ಕಂಪನಿಯ ಮಂಡಳಿಯು ಆಂತರಿಕ ತನಿಖೆಗೆ ಆದೇಶಿಸಿದ್ದು, ಕಂಪನಿಯ ವ್ಯವಹಾರಗಳ ಮೇಲೆ ಇದರ ಪ್ರಭಾವದ ಕುರಿತು ಪರಿಶೀಲನೆ ನಡೆಯುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us