Ola electric scooter: ಓಲಾ ಎಲೆಕ್ಟ್ರಿಕ್ ಸ್ಕೂಟರ್​ಗಳ ಡೆಲಿವರಿ ಇಂದಿನಿಂದ ಶುರು

| Updated By: Srinivas Mata

Updated on: Dec 15, 2021 | 11:09 AM

ಓಲಾ ಎಲೆಕ್ಟ್ರಿಕ್ ಸ್ಕೂಟರ್​ಗಳ ಡೆಲಿವರಿ ಡಿಸೆಂಬರ್ 15ರ ಬುಧವಾರದಂದು ಆರಂಭಿಸಲಿದೆ. ಆ ಬಗ್ಗೆ ಮುಖ್ಯವಾದ ಮಾಹಿತಿ ಈ ಲೇಖನದಲ್ಲಿದೆ.

Ola electric scooter: ಓಲಾ ಎಲೆಕ್ಟ್ರಿಕ್ ಸ್ಕೂಟರ್​ಗಳ ಡೆಲಿವರಿ ಇಂದಿನಿಂದ ಶುರು
ಪ್ರಾತಿನಿಧಿಕ ಚಿತ್ರ
Follow us on

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅಂತೂ ರಸ್ತೆಗೆ ಇಳಿಯಲಿದೆ. ಡಿಸೆಂಬರ್ 15ನೇ ತಾರೀಕಿನಿಂದ ಓಲಾ S1 ಮತ್ತು ಓಲಾ S1 ಪ್ರೊ ಡೆಲಿವರಿ ಆರಂಭಿಸಲಿದೆ. ಅಂದ ಹಾಗೆ ಆರಂಭದಲ್ಲಿ ಇದನ್ನು ಅಕ್ಟೋಬರ್​ ತಿಂಗಳಲ್ಲೇ ಯೋಜಿಸಲಾಗಿತ್ತು. ಆದರೆ ಹತ್ತಿರ ಹತ್ತಿರ ಎರಡು ತಿಂಗಳ ವಿಳಂಬದ ನಂತರ ಈಗ ಡೆಲಿವರಿ ಆರಂಭಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಚಿಪ್​ಸೆಟ್​ಗಳು ಮತ್ತು ಎಲೆಕ್ಟ್ರಾನಿಕ್ ಭಾಗಗಳ ಕೊರತೆಯ ಕಾರಣಕ್ಕೆ ಆರಂಭದಲ್ಲಿ ಅಂದುಕೊಂಡಂತೆ ಅಕ್ಟೋಬರ್​ನಲ್ಲಿ ಡೆಲಿವರಿ ಆರಂಭಿಸುವುದಕ್ಕೆ ಸಾಧ್ಯವಾಗಲಿಲ್ಲ ಎಂದು ಕಂಪೆನಿ ಹೇಳಿಕೊಂಡಿತ್ತು. ಆದರೆ ಸೆಪ್ಟೆಂಬರ್ ತಿಂಗಳಲ್ಲಿ ಎರಡು ದಿನಗಳಲ್ಲಿ 1100 ಕೋಟಿ ರೂಪಾಯಿ ಮೌಲ್ಯದ ಎಲೆಕ್ಟ್ರಿಕ್ ಸ್ಕೂಟರ್​ಗಳ ಮಾರಾಟ ಆಗಿತ್ತು. ಅಕ್ಟೋಬರ್ 25ರಿಂದ ನವೆಂಬರ್ 25ರ ಮಧ್ಯ ಡೆಲಿವರಿ ಶುರು ಆಗುವ ನಿರೀಕ್ಷೆ ಇತ್ತು. ಆದರೆ ಆ ಸಮಯದಲ್ಲಿ ಆಗಲಿಲ್ಲ. ಇದು ಇನ್ನಷ್ಟು ಮುಂದಕ್ಕೆ ಹೋಗಬಹುದು, ಡಿಸೆಂಬರ್ 15ರಿಂದ 30ರ ಮಧ್ಯ ಆಗಬಹುದು ಎಂದು ನವೆಂಬರ್ 21ರಂದು ಮಾಹಿತಿ ನೀಡಲಾಗಿತ್ತು.

ಓಲಾ ಎಲೆಕ್ಟ್ರಿಕ್​ ಸಿಇಒ ಭವಿಷ್ ಅಗರ್​ವಾಲ್ ಟ್ವಿಟರ್​ನಲ್ಲಿ ವಿಡಿಯೋವೊಂದನ್ನು ಪೋಸ್ಟ್​ ಮಾಡಿ, ಅದಕ್ಕೆ “Gaddi nikal chuki” ಎಂದು ಶೀರ್ಷಿಕೆ ನೀಡಿದ್ದರು. ಆ ವಿಡಿಯೋ ಮೂಲಕವಾಗಿ ಎಲೆಕ್ಟ್ರಿಕ್ ಸ್ಕೂಟರ್​ಗಳ ಮೊದಲ ಬ್ಯಾಚ್ ಉತ್ಪಾದನಾ ಘಟಕದಿಂದ ಹೊರಬಂದಿದ್ದು, ದೇಶದಾದ್ಯಂತ ವಿವಿಧ ಸ್ಥಳಗಳಿಗೆ ತೆರಳಿದೆ ಎಂಬುದನ್ನು ತಿಳಿಸಿತ್ತು. ಇದರ ಜತೆಗೆ ಬೆಂಗಳೂರಿನಲ್ಲಿ ಮೊದಲ 50 ಗ್ರಾಹಕರಿಗೆ ವಿಶೇಷ ಡೆಲಿವರಿ ಕಾರ್ಯಕ್ರಮ ಆಯೋಜಿಸಲು ಯೋಜನೆ ರೂಪಿಸಿತ್ತು.

ಎಲೆಕ್ಟ್ರಿಕ್ ಸ್ಕೂಟರ್​ಗಳು ಭಾರತದಲ್ಲಿ ಆಗಸ್ಟ್​ 15ರಂದು ಅನಾವರಣಗೊಂಡಿತು. ಓಲಾ S1 ಮತ್ತು ಓಲಾ S1 ಪ್ರೊ ಸ್ಕೂಟರ್​ಗಳಿಗೆ ಎಕ್ಸ್​- ಶೋ ರೂಮ್ ಬೆಲೆ ಎಂದು ಕ್ರಮವಾಗಿ ರೂ. 99,999 ಮತ್ತು ರೂ. 1,29,999 ನಿಗದಿ ಮಾಡಲಾಯಿತು. ಸ್ಕೂಟರ್​ಗಳನ್ನು ಡೆಲಿವರಿ ಮಾಡಬೇಕಾದ ಪ್ರಮುಖ ಕಾಲ ಘಟ್ಟದಲ್ಲೂ ಹೂಡಿಕೆದಾರರ ಮೂಲಕವಾಗಿ ರೂ. 398.3 ಕೋಟಿ ರೂಪಾಯಿಯನ್ನು ಸಂಗ್ರಹಿಸಲು ಸಾಧ್ಯವಾಯಿತು. ಸಂಸ್ಥೆಯು ತಲಾ 1.07 ಕೋಟಿ ರೂಪಾಯಿಯ ಒಟ್ಟು 371 ಷೇರುಗಳನ್ನು ವಿತರಣೆ ಮಾಡಿತು.

ಟೆಮಾಸೆಕ್ 185 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರೆ, ಎಡೆಲ್‌ವೀಸ್ 111.6 ಕೋಟಿ ಮತ್ತು ಐಐಎಫ್‌ಎಲ್ 74 ಕೋಟಿ ರೂಪಾಯಿ, ಬಾಲಿವುಡ್​ನ ಫರ್ಹಾನ್ ಅಖ್ತರ್, ರಿತೇಶ್ ಸಿಧ್ವಾನಿ, ಜೋಯಾ ಅಖ್ತರ್, ಅಮೃತಾ ಅರೋರಾ ಲಡಾಕ್ ಮತ್ತು ಅವರ ಪತಿ ಶಕೀಲ್ ಲಡಾಕ್ (ಅಜಾರಾ ಸಲಹೆಗಾರರು)ಗೆ ಸಹ ಕಂಪೆನಿಯ ಷೇರುಗಳನ್ನು ಹಂಚಿಕೆ ಮಾಡಲಾಗಿದೆ.

ಇದನ್ನೂ ಓದಿ: ಕೇವಲ ಎರಡು ದಿನಗಳಲ್ಲಿ ರೂ. 1,100 ಕೋಟಿಗಳ ವ್ಯವಹಾರ ನಡೆಸಿದ ಓಲಾ ಇಲೆಕ್ಟ್ರಿಕ್ ಸ್ಕೂಟರ್​​ಗಳು!