
ಬೆಂಗಳೂರು, ಮೇ 19: ಸಾಕಷ್ಟು ವಿವಾದಗಳಿಗೆ ಕಾರಣವಾಗುವ ಒಲಾ ಸಂಸ್ಥೆ ಈಗ ಮತ್ತೊಂದು ವಿವಾದಕ್ಕೆ ಸಿಲುಕುವಂತೆ ತೋರುತ್ತಿದೆ. ಒಲಾದ ಎಐ ಅಂಗವಾದ ಕೃತ್ರಿಮ್ನಲ್ಲಿ (Ola Krutrim AI) ಕೆಲಸ ಮಾಡುತ್ತಿದ್ದ ಎಂಜಿನಿಯರ್ವೊಬ್ಬರು ಮೇ 8ರಂದು ಅತ್ಮಹತ್ಯೆ ಮಾಡಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ರೆಡ್ಡಿಟ್ ಎನ್ನುವ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟವಾದ ಒಂದು ಪೋಸ್ಟ್ನಿಂದ ಈ ಘಟನೆ ಬೆಳಕಿಗೆ ಬಂದಿದೆ. ನಿಖಿಲ್ ಸೋಮವಂಶಿ (Nikhil Somwanshi) ಎಂಬುವವರು ಆತ್ಮಹತ್ಯೆ ಮಾಡಿಕೊಂಡ ಉದ್ಯೋಗಿ ಎನ್ನಲಾಗಿದೆ.
ನಿಖಿಲ್ ಸೋಮವಂಶಿ ಅವರು ಇತ್ತೀಚೆಗಷ್ಟೇ ಬೆಂಗಳೂರಿನ ಐಐಎಸ್ಸಿಯಿಂದ ಪದವಿ ಪಡೆದಿದ್ದರು. ಹತ್ತು ತಿಂಗಳ ಹಿಂದಷ್ಟೇ ಓಲಾ ಕೃತ್ತಿಮ್ ಎನ್ನುವ ಎಐ ಕಂಪನಿಗೆ ಸೇರಿದ್ದರು. ಈಗ ದಿಢೀರ್ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಂಪನಿಯೊಳಗಿದ್ದ ಕೆಟ್ಟ ಕೆಲಸದ ವಾತಾವರಣ ಹಾಗೂ ಕೆಲಸದ ಒತ್ತಡ ಎನ್ನುವ ಆರೋಪ ಕೇಳಿಬಂದಿದೆ.
ಫೈನಾನ್ಷಿಯಲ್ ಎಕ್ಸ್ಪ್ರೆಸ್ನಲ್ಲಿ ಈ ಬಗ್ಗೆ ವರದಿಯಾಗಿದ್ದು, ಒಲಾ ಕೃತ್ರಿಮ್ ಕಂಪನಿಯ ಮಾಜಿ ಉದ್ಯೋಗಿಯೊಬ್ಬರ ಹೇಳಿಕೆಯನ್ನೂ ಉಲ್ಲೇಖಿಸಲಾಗಿದೆ. ನಿಖಿಲ್ ಅವರು ಸಾಯುವ ಎರಡು ವಾರದ ಮುಂಚೆಯೇ ಆಫೀಸ್ಗೆ ಹೋಗುವುದನ್ನು ನಿಲ್ಲಿಸಿದ್ದರು. ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ಆ ವ್ಯಕ್ತಿ ಹೇಳಿದ್ದಾಗಿ ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: 6,200 ಕೋಟಿ ರೂ ಸಾಲ ಅಕ್ರಮ ಪ್ರಕರಣ, ಯುಕೋ ಬ್ಯಾಂಕ್ ಮಾಜಿ ಮುಖ್ಯಸ್ಥರ ಬಂಧನ; ಮೇ 21ರವರೆಗೆ ಇಡಿ ಕಸ್ಟಡಿಗೆ
ನಿಖಿಲ್ ಸೋಮವಂಶಿ ಅವರು ಸಾವನ್ನಪ್ಪಿರುವುದನ್ನು ಕಂಪನಿಯೂ ಖಚಿತಪಡಿಸಿದೆ. ಆದರೆ, ನಿಖಿಲ್ ಸಾವಿನಿಂದ ಬಹಳ ಬೇಸರವಾಗಿದೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾಗಿ ವರದಿಯಲ್ಲಿ ಬರೆಯಲಾಗಿದೆ.
Suicide due to work pressure at the OLA, the worst place to work
byu/Kirigawakazuto inindianstartups
ನಿಖಿಲ್ ಸೋಮವಂಶಿ ಆತ್ಮಹತ್ಯೆ ಮಾಡಿಕೊಂಡ ವೇಳೆ ಅವರು ರಜೆಯಲ್ಲಿ ಇದ್ದರು. ಏಪ್ರಿಲ್ 17ರಂದು ಅವರು ಹೆಚ್ಚಿನ ವಿಶ್ರಾಂತಿ ಬಯಸಿ ರಜೆಯನ್ನು ವಿಸ್ತರಿಸಿಕೊಂಡಿದ್ದರು ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ.
ನಿಖಿಲ್ ಸೋಮವಂಶಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಬ್ರಿಲಿಯಂಟ್ ವಿದ್ಯಾರ್ಥಿಯಾಗಿದ್ದರು. ಬೆಂಗಳೂರಿನಲ್ಲಿ ಒಲಾ ಕೃತ್ರಿಮ್ನಲ್ಲಿ ಕೆಲಸಕ್ಕೆ ಸೇರಿದ ಬಳಿಕ ಒಂದು ಪ್ರಮುಖ ಪ್ರಾಜೆಕ್ಟ್ಗೆ ಅವರೇ ಲೀಡ್ ಆಗಿದ್ದರು. ಅಮೆರಿಕದಲ್ಲಿದ್ದ ರಾಜ್ಕಿರಣ್ ಎಂಬ ಹಿರಿಯ ಮ್ಯಾನೇಜರ್ ಅವರು ಸಿಕ್ಕಾಪಟ್ಟೆ ಕಿರಿಕಿರಿ ಮಾಡುತ್ತಿದ್ದರು ಎಂದು ರೆಡ್ಡಿಟ್ ಪೋಸ್ಟ್ನಲ್ಲಿ ಆರೋಪಿಸಲಾಗಿದೆ.
ರಾಜಕಿರಣ್ ಅವರಿಗೆ ಜನರನ್ನು ಸಂಭಾಳಿಸುವ ಕೌಶಲ್ಯ ಇಲ್ಲ. ಉದ್ಯೋಗಿಗಳನ್ನು ನಿಂದಿಸುತ್ತಾರೆ. ಟೀಮ್ ಮೀಟಿಂಗ್ನಲ್ಲಿ ಕಿರಿಚಾಡುತ್ತಾರೆ. ತಮ್ಮ ಮೇಲಿನ ಒತ್ತಡವನ್ನು ಅವರು ಕಿರಿಯ ಉದ್ಯೋಗಿಗಳ ಮೇಲೆ ತೋರಿಸುತ್ತಾರೆ ಎಂದು ಈ ಸೋಷಿಯಲ್ ಮೀಡಿಯಾ ಪೋಸ್ಟ್ನಲ್ಲಿ ಬರೆಯಲಾಗಿದೆ.
ಇದನ್ನೂ ಓದಿ: ಭಾರತದ ಫಾರ್ಮಾ ಸೆಕ್ಟರ್ ಆದಾಯ ಶೇ. 7.8 ಬೆಳೆಯುವ ಸಾಧ್ಯತೆ: ಫಿಚ್ ಗ್ರೂಪ್ ಅಂದಾಜು
ನಿಖಿಲ್ ಸೋಮವಂಶಿ ಅವರು ನಿರ್ವಹಿಸುತ್ತಿದ್ದ ಪ್ರಾಜೆಕ್ಟ್ನಲ್ಲಿ ಅವರೂ ಸೇರಿ ಮೂವರು ಇದ್ದರು. ಇತರ ಇಬ್ಬರು ಕೆಲಸ ಬಿಟ್ಟು ಹೋದ್ದರಿಂದ ಸೋಮವಂಶಿ ಒಬ್ಬರ ಮೇಲೇ ಎಲ್ಲಾ ಕೆಲಸದ ಹೊರೆ ಬಿದ್ದಿತ್ತು. ಹೆಚ್ಚುವರಿ ಕೆಲಸಗಳನ್ನೆಲ್ಲವನ್ನೂ ಅವರೇ ಮಾಡಬೇಕಿತ್ತು. ಜೊತೆಗೆ, ಮ್ಯಾನೇಜರ್ನ ಕಾಟ ಬೇರೆ. ಇದು ಅವರನ್ನು ಮಾನಸಿಕವಾಗಿ ಕುಗ್ಗಿಸಿತ್ತು ಎಂದು ಆರೋಪಿಸಲಾಗಿದೆ.
ಆದರೆ, ಈ ಘಟನೆ ಬಗ್ಗೆ ರೆಡ್ಡಿಟ್ ಪೋಸ್ಟ್ ಮತ್ತು ಫೈನಾನ್ಷಿಯಲ್ ಎಕ್ಸ್ಪ್ರೆಸ್ ವರದಿ ಬಿಟ್ಟರೆ ಬೇರೆಲ್ಲೂ ಮಾಹಿತಿ ಇಲ್ಲ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆಯಾ ಗೊತ್ತಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:05 pm, Mon, 19 May 25