Forgery: 6,200 ಕೋಟಿ ರೂ ಸಾಲ ಅಕ್ರಮ ಪ್ರಕರಣ, ಯುಕೋ ಬ್ಯಾಂಕ್ ಮಾಜಿ ಮುಖ್ಯಸ್ಥರ ಬಂಧನ; ಮೇ 21ರವರೆಗೆ ಇಡಿ ಕಸ್ಟಡಿಗೆ
Former UCO bank chairman Subodh Kumar Goel arrested by ED: ಕಾನ್ಕ್ಯಾಸ್ಟ್ ಸ್ಟೀಲ್ ಕಂಪನಿಯ 6,200 ಕೋಟಿ ರೂ ಅಕ್ರಮ ಸಾಲ ಆರೋಪದ ಪ್ರಕರಣದಲ್ಲಿ ಯುಕೋ ಬ್ಯಾಂಕ್ ಮಾಜಿ ಛೇರ್ಮನ್ ಸುಬೋಧ್ ಕುಮಾರ್ ಗೋಯಲ್ ಅವರನ್ನು ಬಂಧಿಸಲಾಗಿದೆ. ದೆಹಲಿಯಲ್ಲಿರುವ ಅವರ ನಿವಾಸದಲ್ಲಿ ಇಡಿ ಅಧಿಕಾರಿಗಳು ಮೇ 16ರಂದು ಬಂಧಿಸಿದ್ದಾರೆ. ನ್ಯಾಯಾಲಯವು ಅವರನ್ನು ಮೇ 21ರವರೆಗೆ ಇಡಿ ಕಸ್ಟಡಿಗೆ ಒಪ್ಪಿಸಿದೆ. ಈ ಪ್ರಕರಣ ಹಾಗೂ ಯುಕೋ ಬ್ಯಾಂಕ್ನ ಪಾತ್ರ ಇತ್ಯಾದಿ ವಿವರ ಇಲ್ಲಿದೆ...

ನವದೆಹಲಿ, ಮೇ 19: ಯುಕೋ ಬ್ಯಾಂಕ್ನ ಮಾಜಿ ಛೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಸುಬೋಧ್ ಕುಮಾರ್ ಗೋಯಲ್ ಅವರನ್ನು ಬಂಧಿಸಲಾಗಿದೆ. ಕಾನ್ಕ್ಯಾಸ್ಟ್ ಸ್ಟೀಲ್ ಕಂಪನಿಯ (CSPL- Concast Steel and Power Ltd) 6,200 ಕೋಟಿ ರೂ ಬ್ಯಾಂಕ್ ಸಾಲ ವಂಚನೆ (Bank loan fraud) ಪ್ರಕರಣದಲ್ಲಿ ಸುಬೋಧ್ ವಿರುದ್ಧ ಮನಿ ಲಾಂಡರಿಂಗ್ (ಅಕ್ರಮ ಹಣ ವರ್ಗಾವಣೆ) ಆರೋಪ ಇದೆ. ಜಾರಿ ನಿರ್ದೇಶನಾಲಯ (ED- Enforcement Directorate) ಕಳೆದ ಶುಕ್ರವಾರ (ಮೇ 16) ಸುಬೋಧ್ ಅವರನ್ನು ಅವರ ದೆಹಲಿ ನಿವಾಸದಲ್ಲಿ ಬಂಧಿಸಿದೆ.
ಸುಬೋಧ್ ಕುಮಾರ್ ಗೋಯಲ್ ಅವರನ್ನು ಮೇ 17, ಶನಿವಾರದಂದು ವಿಶೇಷ ಪಿಎಂಎಲ್ಎ ಕೋರ್ಟ್ ಮುಂದೆ ಹಾಜರುಪಡಿಸಲಾಯಿತು. ಮೇ 21, ಬುಧವಾರದವರೆಗೂ ಅವರನ್ನು ಇಡಿ ಕಸ್ಟಡಿಗೆ ಒಪ್ಪಿಸಿ ಕೋರ್ಟ್ ಆದೇಶಿಸಿತು.
ಇದನ್ನೂ ಓದಿ: ಪಾಶ್ಚಿಮಾತ್ಯ ದೇಶಗಳನ್ನು ರಿಮೋಟ್ ಕಂಟ್ರೋಲ್ನಿಂದ ಅಲುಗಾಡಿಸಲಿದೆಯಾ ಚೀನಾ? ಇಲ್ಲಿದೆ ಸೋಲಾರ್ ಕಿಲ್ ಸ್ವಿಚ್ ತಂತ್ರ
ಏನಿದು 6,200 ಕೋಟಿ ರೂ ಬ್ಯಾಂಕ್ ಲೋನ್ ಹಗರಣ?
ಕೋಲ್ಕತಾ ಮೂಲದ ಕಾನ್ಕ್ಯಾಸ್ಟ್ ಸ್ಟೀಲ್ ಅಂಡ್ ಪವರ್ ಲಿಮಿಟೆಡ್ (ಸಿಎಸ್ಪಿಎಲ್) ಸಂಸ್ಥೆ ಈ ಹಗರಣದ ಮೂಲವಾಗಿದೆ. ಎಸ್ಬಿಐ ಸೇರಿದಂತೆ 11 ಸರ್ಕಾರಿ ಬ್ಯಾಂಕುಗಳಿಂದ ಅಕ್ರಮವಾಗಿ ಸಾಲ ಪಡೆದು ವಂಚಿಸಿದೆ. ಸುಳ್ಳು ಸ್ಟಾಕ್ ಸ್ಟೇಟ್ಮೆಂಟ್, ಬ್ಯಾಲೆನ್ಸ್ ಶೀಟ್ಗಳನ್ನು ತೋರಿಸಿ ಬ್ಯಾಂಕುಗಳಿಂದ ಲೆಟರ್ ಆಫ್ ಕ್ರೆಡಿಟ್ ಸೌಲಭ್ಯಗಳನ್ನು ಪಡೆದಿತ್ತು. ಇದರ ಮಾಲೀಕ ಸಂಜಯ್ ಕುಮಾರ್ ಸುರೇಕಾ ಅವರು ತಮ್ಮ ಸಂಬಂಧಿಕರು, ಉದ್ಯೋಗಿಗಳು, ಆಪ್ತರ ಹೆಸರಿನ ಮೇಲೆ ಶೆಲ್ ಕಂಪನಿಗಳನ್ನು ಸೃಷ್ಟಿಸಿ, ಬ್ಯಾಂಕ್ ಸಾಲಗಳನ್ನು ಅಕ್ರಮವಾಗಿ ಹೊರಗೆ ಸಾಗಿಸಿದ್ದರು.
ಸಿಎಸ್ಪಿಎಲ್ ಒಟ್ಟಾರೆ 6,200 ಕೋಟಿ ರೂ ಮೊತ್ತದ ಸಾಲವನ್ನು ಬ್ಯಾಂಕುಗಳಿಗೆ ಮರುಪಾವತಿಸಲು ವಿಫಲವಾಗಿತ್ತು. 2016ರಲ್ಲಿ ಆ ಸಾಲವನ್ನು ಬ್ಯಾಂಕುಗಳು ಎನ್ಪಿಎ ಎಂದು ಘೋಷಿಸಿದವು. ನಂತರ ನಡೆದ ಸಿಬಿಐ ಮತ್ತು ಇಡಿ ತನಿಖೆಯಲ್ಲಿ ಸಿಎಸ್ಪಿಎಲ್ನ ಮಾಲೀಕರ ಅಕ್ರಮ ಚಟುವಟಿಕೆ ಬೆಳಕಿಗೆ ಬಂದಿತ್ತು.
ಇದನ್ನೂ ಓದಿ: ಕೋರ್ಟ್ನಲ್ಲಿ ಕೇಸ್ ನಡೆಸಲೂ ದುಡ್ಡಿಲ್ಲ: ಬೈಜೂಸ್ ಸಂಸ್ಥಾಪಕರ ಅಳಲು; ದೇಶಕ್ಕಾಗಿ ಮತ್ತೆ ಕಂಪನಿ ಕಟ್ಟುವ ಛಲ
ಯುಕೋ ಬ್ಯಾಂಕ್ನ ಮಾಜಿ ಛೇರ್ಮನ್ ವಿರುದ್ಧ ಇರುವ ಆರೋಪವೇನು?
ಕಾನ್ಕ್ಯಾಸ್ಟ್ ಸ್ಟೀಲ್ ಕಂಪನಿಗೆ ಯುಕೋ ಬ್ಯಾಂಕ್ 1,400 ಕೋಟಿ ರೂ ಸಾಲ ನೀಡಿತ್ತು. ಸಿಎಸ್ಪಿಎಲ್ನ ಅಕ್ರಮ ಲೆಟರ್ ಆಫ್ ಕ್ರೆಡಿಟ್ ವಿಚಾರ ಅಂದಿನ ಯುಕೋ ಬ್ಯಾಂಕ್ ಛೇರ್ಮನ್ ಆಗಿದ್ದ ಸುಬೋಧ್ ಕುಮಾರ್ ಗೋಯಲ್ಗೆ ತಿಳಿದಿತ್ತು. ಆದರೂ ಕೂಡ ಕೋಲ್ಕತಾ ಮೂಲದ ಕಂಪನಿಗೆ ಸಾಲ ಕೊಡಲಾಗಿತ್ತು. ಈ ಅಕ್ರಮ ವ್ಯವಹಾರದಲ್ಲಿ ಸುಬೋಧ್ ಗೋಯಲ್ಗೆ ವೈಯಕ್ತಿಕವಾಗಿ ಹಣ ಸಂದಾಯವಾಗಿದೆ ಎಂಬುದು ಆರೋಪ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:31 pm, Mon, 19 May 25








